‘ನನಗೂ ಲವ್ವಾಗಿದೆ’ ಕೃತಿಯು ಕೆ. ಗಣೇಶ ಕೋಡೂರು ಅವರ ಲೇಖನಗಳ ಸಂಕಲನ. ಬದುಕೆಂದ ಮೇಲೆ ಲವ್ವಾಗಲೆಬೇಕು ಎನ್ನುವ ಮುಖ್ಯ ಶೀರ್ಷಿಕೆಯಡಿ ಒಂದು ಸುದೀರ್ಘ ಪ್ರಬಂಧ ಮೂಡಿಬಂದಿದೆ. ಉಪಶೀರ್ಷಿಕೆಗಳಿಂದ ಕೂಡಿದ ಈ ಕೃತಿಯು, ಬದುಕಿಗೆ ಎಲ್ಲವೂ ಇದೆ. ಆದರೆ, ಏನೆಂದರೆ ಏನೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಬದುಕು ಅಲೆಯುವುದು ಸಹಜ. ‘ಹೇಗಾದರೂ ಸರಿ ಒಂದೇ ಒಂದು ಲವ್ವಾದರೆ ಸಾಕ್’ ಎಂದು ಹಂಬಲಿಸಿ ಪ್ರೀತಿಯನ್ನು ಹೊತ್ತು ತರುವ ಜೀವಕ್ಕಾಗಿ ಹುಡುಕಾಡುತ್ತಿರುತ್ತದೆ ಮನಸ್ಸು ಎಂದು ಇಲ್ಲಿ ಲೇಖಕ ವಿವರಿಸುತ್ತಾರೆ.
ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಹುಟ್ಟಿದ್ದೇವೆ, ಹುಟ್ಟಿದ ನಂತರ ಇನ್ನೂ ಬದುಕಿದ್ದೇವೆ. ಬದುಕಿರುವ ನಮಗೊಂದು ಹೃದಯವಿದೆ, ಮನಸ್ಸಿದೆ. ಒಂದಿಷ್ಟು ಭಾವನೆಗಳಿವೆ, ಕನಸುಗಳಿವೆ. ಬದುಕಿನಲ್ಲಿ ಬೇಜಾನ್ ಆಸೆಗಳಿವೆ ಎಂದೆಲ್ಲ ಅಂದುಕೊಂಡಿರುವ ಎಲ್ಲರಿಗೂ ಈ ಬದುಕಿನ ಒಂದಲ್ಲ ಒಂದು ದಿನ ಪ್ರೀತಿ ಎನ್ನುವುದು ಆಗಲೇಬೇಕು. ಹೀಗೆ ಲವ್ ಆಗುತ್ತದಲ್ಲ ಆಗ ‘ನನಗೂ ಲವ್ವಾಗಿದೆ..’ ಎಂದು ನೀವು ನಿಮ್ಮ ಬದುಕಿನೊಂದಿಗೆ ಬೆರೆತುಕೊಂಡವರಿಗೋ ಅಥವಾ ಅಂತಹವರ್‍ಯಾರೂ ಇಲ್ಲದೇ ಒಂಟಿಯಾಗಿದ್ದರೆ ನಿಮಗೆ ನೀವೇ ಹೇಳಿಕೊಂಡಿರುತ್ತೀರಲ್ಲ ಅಂತಹ ನಿಮ್ಮದೇ ಬದುಕಿನ ಪುಟಗಳು ಈ ಪುಸ್ತಕವಾಗಿ ರೂಪುಗೊಂಡಿದೆ’ ಎಂದು ವಿಶ್ಲೇಷಿತವಾಗಿದೆ.