ಉಡಿಯಕ್ಕಿ

Author : ವಿನಯಾ ಒಕ್ಕುಂದ

Pages 212

₹ 200.00




Year of Publication: 2018
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113

Synopsys

ತಮ್ಮ ಅನುಭವ ಸನ್ನಿವೇಶಗಳೊಂದಿಗೆ ಅಂಕಣ ಬರಹಗಳನ್ನು ನೀಡಿರುವ ವಿನಯಾ ಅವರ ಈ ಕೃತಿಯಲ್ಲಿ ಬದುಕು, ಬವಣೆ, ಸಂಕಟ, ವಿಷಾದ, ಸಂತೋಷಗಳೆಲ್ಲವನ್ನೂ ಒಳಗಣ್ಣಿನಿಂದ ಕಾಣುವ ಸಮಾಜ, ಸಮುದಾಯದ ತುಡಿತವನ್ನು ಗಮನಿಸಬಹುದು. ಹೆಣ್ಣಿನ ಸಂವೇದನೆಯ, ಬದುಕು ಕಟ್ಟಿಕೊಳ್ಳುವ ಚಿತ್ರಗಳನ್ನೂ ಇಲ್ಲಿ ಸೂಕ್ಷ್ಮವಾಗಿ ನೀಡಿದ್ದಾರೆ. ಬದುಕಿನ ಹೋರಾಟ, ಶೈಕ್ಷಣಿಕ ವೃತ್ತಿಧರ್ಮದಿಂದ ಕೂಡಿದ ಲೇಖಕಿಯ ಅನುಭವ ಕಥನವೆಲ್ಲವೂ ಈ ಅಂಕಣ ಬರಹಗಳಲ್ಲಿವೆ.

About the Author

ವಿನಯಾ ಒಕ್ಕುಂದ
(24 October 1968)

ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...

READ MORE

Reviews

ಅನುಭವ ನಿಷ್ಠ ಅಂಕಣ ಬರಹಗಳು

ಬರವಣಿಗೆಯ ಕಾಯಕ ನಮಗರಿವಿಲ್ಲದಂತೆಯೇ ಮಾರುಕಟ್ಟೆಯ ಸರಕಿನ ಮಟ್ಟಿಗೆ ಇಳಿದಿರುವ ಈ ದಿನಮಾನಗಳಲ್ಲಿ ಅಂಕಣ-ಪಂಕಣಗಳು ಸೃಜನಶೀಲ ಲೇಖಕ-ಲೇಖಕಿಯರನ್ನು ಬಲಿ ತೆಗೆದುಕೊಳ್ಳುತ್ತಿವೆಯೇನೋ ಎಂಬ ಅನುಮಾನ ಸಹಜ.  ಏಕೆಂದರೆ, ಕಾಲ ಮಿತಿಯಲ್ಲಿ ತಯಾರಿಸಿ ಒದಗಿಸಬೇಕಾದ ಅನಿವಾರ್ಯತೆ-ಪತ್ರಕರ್ತರು ಸೋರಿ' ಹುಡುಕುವಂತೆ-ಲೇಖಕರೂ ಯಾವ

ವಿಷಯದ ಬಗ್ಗೆ ಬರೆಯಲಿ, ಹೇಗೆ ಬರೆಯಲಿ, ಯಾವ ವಿಷಯ ಆರಿಸಿಕೊಳ್ಳಲಿ? ಎಂಬ ಗೊಂದಲದಲ್ಲಿ ಸಿಲುಕಿ ಬರವಣಿಗೆಯ ಸಂತೋಷವೇ ಲೇಖಕನಿಗೆ ಇಲ್ಲದಂತಾಗಿ ಸಮಯಕ್ಕೆ ಸರಿಯಾಗಿ ಏನನ್ನಾದರೂ ಬರೆದುಕೊಡುವುದೇ ದೊಡ್ಡ ಸಾಹಸವೆನ್ನುವಂತಾಗಿದೆ. ಇಷ್ಟಾದರೂ, ಅಪರೂಪಕ್ಕೆ ಒಳನೋಟಗಳಿರುವ ಬದುಕಿನ ಬವಣೆ-ಸಂಕಟ-ವಿಷಾದ ಸಂತೋಷಗಳನ್ನು ಮುನ್ನೆಲೆಗೆ ತರುವಂತೆ ಬರೆಯುವ ಲೇಖಕ-ಲೇಖಕಿಯರು ಇಲ್ಲ ಎನ್ನುವಂತಿಲ್ಲ. ಅಂತಹ ಲೇಖಕಿಯರಲ್ಲಿ ವಿನಯಾ ಕೂಡ ಒಬ್ಬರು. ಇವರ ಇತ್ತೀಚಿನ ಅಂಕಣ ಬರಹಗಳ ಸಂಕಲನ 'ಉಡಿಯಕ್ಕಿ'. ಅದರ ಹೆಸರಿನಿಂದಲೂ ಅದು ಜತನದಿಂದ ಸೆರಗಲ್ಲಿ ಕಟ್ಟಿಕೊಂಡಿರುವ ಜೀವದ್ರವ್ಯದಿಂದಲೂ ಗಮನಾರ್ಹವಾದದ್ದು.

ಈ ಸಂಗ್ರಹ ಅವರು ಸತತವಾಗಿ ಎರಡು ವರ್ಷಗಳವರೆಗೆ ಲ್ಲಿ 'ಕನ್ನಡ ಪ್ರಭ' ಪತ್ರಿಕೆಯಲ್ಲಿ  ಬರೆದ ೪೪ ಬರಹಗಳನ್ನು ಒಳಗೊಂಡಿದೆ. ಶೈಕಣಿಕ ಪರಿಸರ, ತಾನು ಒಡನಾಡಿದ ವಿದ್ಯಾರ್ಥಿ ಸಮುದಾಯದ ಆಶೋತ್ತರ-ಆತಂಕಲ್ಲಿ ಗೊಂದಲ-ಕೀಳರಿಮೆ, ತನ್ನ ಸುತ್ತಣದ ಪರಿಸರದಲ್ಲಿರುವ ಮತೀಯ ದ್ವೇಷದ ಸ ನಂಜು-ಅಪಾಯಗಳ ಕುರಿತು ವಿನಯಾ ಅಪಾರ ಕಳಕಳಿಯಿಂದ ಇಲ್ಲಿ ಪದೇ ಪದೇ ಚರ್ಚಿಸುತ್ತಾರೆ.  ತಮಗೆ ಒದಗಿಬಂದಿರುವ ಚಿಕ್ಕ ಅವಕಾಶಗಳನ್ನೇ ಮೆಟ್ಟಿಲಾಗಿ ಉಪಯೋಗಿಸಕೊಂಡು ಬದುಕಿನಲ್ಲಿ ಅರ್ಥ ಕಂಡುಕೊಳ್ಳುವ ಹೆಣ್ಣು ಮಕ್ಕಳ ವ್ಯಕ್ತಿ ಚಿತ್ರಗಳೂ ಇಲ್ಲಿವೆ. ಮಾರುಕಟ್ಟೆ ಸಂಸ್ಕೃತಿ, ಕೋಮುವಾದ, ಮನುಷ್ಯನ ಒಟ್ಟಾರೆ ಸಮಾಜ-ಸಮುದಾಯದ ವಿವೇಕವನ್ನು ವಿನಾಶಕ್ಕೆ ಒಯ್ಯುತ್ತಿರುವ ಈ ತಲ್ಲಣಗಳೂ ಇಲ್ಲಿ ಕಾಣಸಿಗುತ್ತವೆ.

ವಿನಯಾ ಕವಿಯೂ ಆಗಿರುವುದರಿಂದ ಯಥೇಚ್ಛವಾಗಿ ಕನ್ನಡ ಕವಿತೆಗಳ ಸಾಲುಗಳನ್ನೂ, ನುಡಿಗಟ್ಟು-ಗಾದೆಗಳನ್ನು ತಮ್ಮ ಬರಹಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. 'ಆಡಿಕೊಳ್ಳುಬ್ಯಾಡಿ ಬಡವರ ಬದುಕ', 'ಹೆಣ್ಣು ಮಗುವಿಗೆ ನೆಮ್ಮದಿಯ ನಿದ್ದೆಯೂ ಇಲ್ಲದ ಊರಲ್ಲಿ', ;ನಿಂತಿರಬಹುದು ನೀಚು ಬಾಗಿಲಾಚೆಗೆ ಬೆಳಕಿನಕೋಲಂತೆ' ಮುಂತಾದ ಬರಹಗಳು ಪ್ರತ್ಯಕ್ಷ ಅನುಭವಗಳ, ಮಾತುಕತೆಗಳ ಒರೆಗಲ್ಲಿಗೆ ಹಚ್ಚಿಯೇ ಬರೆಯುವ ವಿನಯಾ ಅವರ ಬರವಣಿಗೆಯ ಬದ್ಧತೆ, ಪ್ರಾಮಾಣಿಕತೆಗಳಿಗೆ ಮಾತ್ರವಲ್ಲದೆ ಇವುಗಳಿಂದ ಹುಟ್ಟುವ ಬರಹಗಳ ತೀವ್ರತೆಗೂ ಸಾಕ್ಷಿಯಂತಿವೆ. ವಿನಯಾ ಅವರು ಲೇಖಕಿ ಮಾತ್ರವಲ್ಲದೆ, ಅಧ್ಯಾಪಕಿ ಮತ್ತು ಹೋರಾಟಗಾರ್ತಿಯೂ ಆಗಿರುವುದರಿಂದ ಅವರ ಬರಹಗಳ ಈ ಗುಣಗಳು, ವಿಶೇಷ ಮೆಚ್ಚುಗೆಗೆ ಪಾತ್ರವಾಗುತ್ತವೆ.

ಆದರೆ, ವಿನಯಾ ಅವರ ಕಥೆ, ಕವನ, ವಿಮರ್ಶೆ ಮತ್ತು ಅಂಕಣ ಬರಹಗಳನ್ನು ಬಹು ಕಾಲದಿಂದ ಗಮನಿಸುತ್ತಾ ಬಂದಿರುವ ನನಗೆ ಇತ್ತೀಚೆಗೆ ಅವರ ಬರಹಗಳಲ್ಲಿ ವಿಚಾರಗಳ ಪುನರಾವರ್ತನೆ, ಅಭಿವ್ಯಕ್ತಿ ಕ್ರಮದ ಏಕತಾನತೆ ಮತ್ತು ಕೆಲವೆಡೆ ತಾರ್ಕಿಕ ವೈಚಾರಿಕತೆಯ ಅತಿ ಭಾರಗಳು ಕಾಣಿಸಿಕೊಳ್ಳುತ್ತಿದೆ ಎನ್ನಿಸುತ್ತಿದೆ. ಬಹುಶಃ ಬರಹದ ಆಯಾಸದ ಸೂಚನೆಗಳಿವು ಮತ್ತು ಲೇಖಕಿಯೊಬ್ಬಳು ಹೋರಾಟಗಾರ್ತಿಯೂ ಆದಾಗ ಎದುರಿಸಬೇಕಾಗಿ ಬರುವ ಸವಾಲುಗಳು ಕೂಡ. ವ್ಯಕ್ತಿತ್ವದ ಈ ಎರಡೂ ಮಗ್ಗಲುಗಳನ್ನು ತಮ್ಮೊಳಗಿನ ಸೃಜನಶೀಲತೆಯ ಹದ ತಪ್ಪದಂತೆ ಹೇಗೆ ಸುರಿದೂಗಿಸಿಕೊಂಡು ಹೋಗಬೇಕೆಂಬುದನ್ನು ಸ್ವತಃ ವಿನಯಾ ಅವರೇ ತೀರ್ಮಾನಿಸಬೇಕಿದೆ.

-ಸವಿತಾ ನಾಗಭೂಷಣ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಜೂನ್ - 2019)

Related Books