ಹಿರಿಯ ತಲೆಮಾರಿನವರ ಜೊತೆಗೆ ಕಿರಿಯ ತಲೆಮಾರಿನ ಕತೆಗಾರರು ಕತೆ ಹುಟ್ಟುವ ಕುರಿತು ಚಿಂತನಾತ್ಮಕ ಲೇಖನಗಳನ್ನು ಬರೆದ ಕೃತಿಯೇ ’ಕತೆ ಹುಟ್ಟುವ ಪರಿ’. ಈ ಸಂಕಲನದಲ್ಲಿ 62 ಕತೆಗಾರ-ಕತೆಗಾರ್ತಿಯರು ಬರೆದಿದ್ದಾರೆ. ಕತೆ ಬರೆಯುವ ಹೊಸ ಪೀಳಿಗೆಗೆ ಈ ಬರಹಗಳು ಉತ್ತಮ ಮಾರ್ಗದರ್ಶಿಯಾಗಬಹುದು.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...
READ MORE(ಹೊಸತು, ಜುಲೈ 2015, ಪುಸ್ತಕದ ಪರಿಚಯ)
ಕಥೆಗೆ ಲೋಕಾನುಭವಗಳು ಬೇಕು. ಈ ಲೋಕಾನುಭವಗಳ ಒಡಲಿನಿಂದ ಹುಟ್ಟುವ ವಸ್ತು ಬೇಕು. ಈ ವಸ್ತುವನ್ನು ಕಥೆಯ ರೂಪದಲ್ಲಿ ಹೆಣೆಯಲು ಪಾತ್ರ, ಸನ್ನಿವೇಶಗಳು ಬೇಕು. ಇವೆಲ್ಲವುಗಳನ್ನು ಬಳಸಿ ಆಕಾರ ನೀಡಲು ತಾತ್ವಿಕ ನಿಲುವು ಬೇಕು. ಕಥೆಗಾರನಲ್ಲಿ ಈ ತಾತ್ವಿಕತೆ ರೂಪುಗೊಳ್ಳುವುದಕ್ಕೆ ಕುಟುಂಬ, ವ್ಯಕ್ತಿ, ಸಮಾಜ, ಚಳುವಳಿ – ಇವೆಲ್ಲವೂ ಕಾರಣವಾಗುತ್ತವೆ. ತನ್ನ ಅನುಭವಗಳನ್ನು ನುಡಿಯಲ್ಲಿ ಮರುರೂಪಿಸಿಕೊಳ್ಳಲು ಕಥೆಗಾರನ ಕಲ್ಪನೆ ವಿಶಿಷ್ಟವಾಗಿರಬೇಕು. ಕಥೆಗಾರನಿಗೆ ಈ ಕಲ್ಪನೆ ದೊಡ್ಡವರ ಕಥೆಯಲ್ಲಿ ಹೊಸ ಲೋಕವೊಂದನ್ನು ಕಾಣಿಸಲು ಈ ಕಲ್ಪನೆಯಿಂದ ಮಾತ್ರ ಸಾಧ್ಯ. ಇದರೊಂದಿಗೆ, ಕಥೆ ಕಟ್ಟುವಾಗ ಕಥೆಗಾರನಿಗೆ ಇರಬೇಕಾದದ್ದು ಸಂಯಮ ಮತ್ತು ತನ್ಮಯತೆ. ಈ ಮಾತುಗಳಿಗೆ ಪೂರಕವಾಗಿ ಡಾ| ಅಮರೇಶ ನುಗಡೋಣಿಯವರು ಸಂಪಾದಿಸಿರುವ 'ಕಥೆ ಹುಟ್ಟುವ ಪರಿ' ಎಂಬ ಕೃತಿಯಲ್ಲಿ ದಶಕಗಳಿಂದ ಕಥಾ ರಚನೆಯಲ್ಲಿ ತೊಡಗಿರುವ ಕನ್ನಡದ ಅರವತ್ತೂರು ಕಥೆಗಾರರು, ಕಥೆ ಹುಟ್ಟುವ ಪರಿಯ ಬಗ್ಗೆ ತಮ್ಮ ಲೇಖನಗಳಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿ ಹದಿನೇಳು ಕಥೆಗಾರ್ತಿಯರೂ ಸಹ ಕಥೆಯ ಕುರಿತಾದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕಥೆ ಕುರಿತಾದ ಕಥೆಗಾರನ ಅನುಭವಗಳನ್ನು ಬೇರೆ ಬೇರೆ ಪರಿಸರದಲ್ಲಿರುವ ಕಥೆಗಾರರಿಂದ ಲೇಖನಗಳ ರೂಪದಲ್ಲಿ ಬರೆಸಿ, ಅವುಗಳನ್ನು ಒಟ್ಟಾಗಿಸಿ ಹೀಗೆ ಕೃತಿಯ ರೂಪದಲ್ಲಿ ತಂದಿರುವುದು ಕನ್ನಡದ ಕಥಾ ಸಾಹಿತ್ಯ ಪ್ರಕಾರದಲ್ಲಿ ಮೊದಲ ಪ್ರಯತ್ನ. ಇದುವರೆಗೂ ಆಂಗ್ಲ ಭಾಷಾ ಕಥಾ ಸಾಹಿತ್ಯ ಪ್ರಕಾರದಲ್ಲಿ ರೂಢಿಯಲ್ಲಿದ್ದ ಇಂಥ ಪ್ರಯತ್ನವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಮಾಡಿರುವ ಹೆಸರಾಂತ ಕಥೆಗಾರ ಡಾ| ಅಮರೇಶ ನುಗಡೋಣಿ ಮತ್ತು ಕೃತಿಯನ್ನು ಪ್ರಕಾಶಿಸಿದ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಪ್ರಯತ್ನ ಸ್ತುತ್ಯರ್ಹ.