ಸಂಜೆ ವಿಹಾರ

Author : ಮೊಹಮ್ಮದ್ ಅಜರುದ್ದೀನ್

₹ 160.00




Year of Publication: 2022
Published by: ಗಾಯತ್ರಿ ಎಂಟರ್ ಪ್ರೈಸಸ್, ಮೈಸೂರು
Address: #285/F, 5th West Cross, Uttaaradhimutt Road, Mysuru

Synopsys

ಮೊಹಮ್ಮದ್ ಅಜರುದ್ದೀನ್ ಮಂಡ್ಯ ಜಿಲ್ಲೆಯ ಯುವ ಬರಹಗಾರ. ಈಗಾಗಲೇ "ಅಕ್ಕಿ-ಚುಕ್ಕಿ", "ನಿಸರ್ಗ ನಾದ" ಮತ್ತು "ಹೆಬ್ಬೊಳಲು" ಎಂಬ ಮೂರು ಕೃತಿಗಳ ಮೂಲಕ ಓದುಗರ ಮನಗೆದ್ದಿರುವ ಅಜರುದ್ದೀನ್ ಅವರು ತಮ್ಮ ನಾಲ್ಕನೇ ಕೃತಿ 'ಸಂಜೆ ವಿಹಾರ'ವನ್ನು  ಕೈಗಿತ್ತಿದ್ದಾರೆ. ಹದಿನೈದು ವೈವಿಧ್ಯಮಯ ಲೇಖನಗಳ ಸಂಕಲನ ಕೃತಿ 'ಸಂಜೆ ವಿಹಾರ' ಲೇಖಕರ ಆಸಕ್ತಿಯ ವಿಷಯಗಳು ಹಾಗೂ ಅಧ್ಯಯನದ ಪರಿಧಿಯನ್ನು ನಮಗೆ ವಿವರಿಸಿದೆ. 

About the Author

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ. ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು. ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ ...

READ MORE

Reviews

 

ಮೊಹಮ್ಮದ್ ಅಜರುದ್ದೀನ್ ಮಂಡ್ಯ ಜಿಲ್ಲೆಯ ಹೆಮ್ಮೆಯ ಭರವಸೆಯ ಯುವ ಬರಹಗಾರ. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಮೇರು ಸಾಹಿತಿಗಳನ್ನು ಕಾಣೆಕೆಯಾಗಿ ನೀಡಿರುವ ಮಂಡ್ಯ ಜಿಕ್ಕೆಯ ಕೆ,ಆರ್.ಪೇಟೆ ತಾಲ್ಲೂಕು ಇದೀಗ ಮೊಹಮ್ಮದ್ ಅಜರುದ್ದೀನ್ ಅಂತಹ ಭರವಸೆಯ ಲೇಖಕರನ್ನು ಸೃಷ್ಟಿಸಿ ತನ್ನ ಪರಂಪರೆಯನ್ನು ಮುಂದುವರಿಸಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಎಂಬ ಗ್ರಾಮ ಎ.ಎನ್.ಮೂರ್ತಿರಾವ್, ಅಕ್ಕಿಹೆಬ್ಬಾಳು ರಾಮಣ್ಣ, ಆನಂದ್, ಅ.ರಾ.ಮಿತ್ರ, ಅ.ನಾ.ಸುಬ್ಬರಾಯರು. ಎ.ಎಸ್.ಮೂರ್ತಿ (ಆಕಾಶವಾಣಿ ಈರಣ್ಣ), ಅಕ್ಕಿಹೆಬ್ಬಾಳು ಲಕ್ಷ್ಮನರಸಿಂಹಯ್ಯ, ಅ.ನಾ.ಶ್ರೀನಿವಾಸ್ ಅಯ್ಯಂಗಾರ್, ಕೃ.ನ.ಮೂರ್ತಿ, ಶಶಿಧರ್ ಭಾರಿಘಾಟ್ ಮೊದಾಲಾದ ಸಾಹಿತ್ಯ ಲೋಕದ ದ್ರುವತಾರೆಗಳನ್ನು ಕನ್ನಡಕ್ಕೆ ನೀಡಿದೆ. ಮೊಹಮ್ಮದ್ ಅಜರುದ್ದೀನ್ ಅದರಂತಹ ಅನೇಕ ಯುವ ಬರಹಗಾರರು ಇದೀಗ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶ ಮಾಡಿ ಪಾರಂಪರಿಕ ಕೀರ್ತಿಯನ್ನು ಮುಂದುವರಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಶೀಮತಿ ಸಮೀನಾ ಖಾನಂ, ಶ್ರೀ ಅಬ್ದುಲ್ ಸತ್ತಾರ್ ಸತ್ತಾರ್ ಪುಣ್ಯ ದಂಪತಿಗಳ ಸುಪುತ್ರರಾದ ಮೊಹಮ್ಮದ್ ಅಜರುದ್ದೀನ್ ಅವರು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ "ಅಕ್ಕಿ-ಚುಕ್ಕಿ", "ನಿಸರ್ಗ ನಾದ" ಮತ್ತು "ಹೆಬ್ಬೊಳಲು" ಎಂಬ ಮೂರು ಕೃತಿಗಳ ಮೂಲಕ ತಮ್ಮ ಸಾಹಿತ್ಯಿಕ ಧೀಶಕ್ತಿಯನ್ನು ತೋರಿ, ಓದುಗರ ಮನಗೆದ್ದಿರುವ ಅಜರುದ್ದೀನ್ ಅವರು ತಮ್ಮ ನಾಲ್ಕನೇ ಕೃತಿ ಕುಸುಮ 'ಸಂಜೆ ವಿಹಾರ'ವನ್ನು ನಮ್ಮ ಕೈಗಿತ್ತಿದ್ದಾರೆ. ರಾಜ್ಯದ ಮತ್ತು ಜಿಲ್ಲೆಯ ಅನೇಕ ಪತ್ರಿಕೆಗಳಲ್ಲಿ ಇರುವ ಲೇಖನಗಳು ಪ್ರಕಟವಾಗಿ ಸಶಕ್ತವಾಗಿ ಪರಿಚಯಿಸಿದೆ. ಇದೀಗ ಹದಿನೈದು ವೈವಿಧ್ಯಮಯ ಲೇಖನಗಳ ಸಂಕಲನ ಕೃತಿ 'ಸಂಜೆ ವಿಹಾರ' ಲೇಖಕರ ಆಸಕ್ತಿಯ ವಿಷಯಗಳು ಹಾಗೂ ಅಧ್ಯಯನದ ಪರಿಧಿಯನ್ನು ನಮಗೆ ವಿವರಿಸಿದೆ. ರಸಋಷಿ, ಕೊರೋನ, ಪರಿಸರ, ತಂತ್ರಜ್ಞಾನ, ನವಂಬರ್ ಕನ್ನಡಿಗರು, ಸರ್ಕಾರಿ ಶಾಲೆ, ಯೋಧ ಮತ್ತು ರೈತ, ಹಿಂದೂ ಹಾಗೂ ಇಸ್ಲಾಂ ಧರ್ಮದ ಹಬ್ಬಗಳು, ಗಣರಾಜೋತ್ಸವ, ಮೈಸೂರು ದಸರಾ, ಯೋಗಾಶಾಸ್ತ-ಇವುಗಳಿಗೆ ಸಂಬಧಿಸಿದ ದೃಶ್ಯ ಲೇಖನಗಳು ಈ ಸಂಕಲನದಲ್ಲಿವೆ.

ಮೊಹಮ್ಮದ್ ಅಜರುದ್ದೀನ್ ಅವರು ಇಪ್ಪತ್ಮೂರರ ಹರಯದ ಉತ್ಸಾಹಿ ತರುಣರು. ಅವರ ಸಾಹಿತ್ಯಾಸಕ್ತಿ ಪ್ರಶಂಸನಾರ್ಹವಾದುದು. ಕನ್ನಡವೆಂದರೆ ಮೂಗು ಮುರಿಯದ ಇಂದಿನ ಯುವ ಜನಾಂಗದ ಮಧ್ಯೆ ಇಂಜಿನಿಯರಿಂಗ್ ವಿದ್ಯಾರ್ಥಿ ಅಜರುದ್ದೀನ್ ಅವರ ಕನ್ನಡಪ್ರೇಮ ಮನನೀಯ. ಇವರು ಕಿಂದರಿಜೋಗಿಯಾಗಿ ತಮ್ಮಂತಹ ನೂರಾರು ಸಂಖ್ಯೆಯ ಯುವಜನತೆಯನ್ನು ತಮ್ಮೊಡನೆ ಸಾಹಿತ್ಯ ಲೋಕದಲ್ಲಿ ಹೆಜ್ಜೆಯಾಕಲು ಮುಖ್ಯ ಪ್ರೇರಕ ಶಕ್ತಿಯಾಗಲಿ ಎಂದಾಶಿಸುವೆ. ಸಾಮ ರ್ಥ್ಯವಿದೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ. ಜಿಲ್ಲೆಯ ಕನ್ನಡಪರ ಸಂಘಟನೆಗಳು ಇಂತಹ ಉದಯೋನ್ಮುಖ ಬರಹಗಾರರಿಗೆ ಸದಾ ವೇದಿಕೆ ಕಲ್ಪಿಸಲಿ ತನ್ಮೂಲಕ ಕನ್ನಡ ಸಾಹಿತ್ಯದ 'ಯುವಪಡೆ'ಯೊಂದನ್ನು ಕಟ್ಟುವಲ್ಲಿ ಮುಂದಾಗಲಿ.

ಮೊಹಮ್ಮದ್ ಅಜರುದ್ದೀನ್ ಅವರು ವಿಶ್ವಮಾನವ ಕುವೆಂಪು ಅವರನ್ನು ಪರಿಚಯಿಸುವ ಲೇಖನಕ್ಕೆ ತಮ್ಮೀ ಕೃತಿಯಲ್ಲಿ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ. ಕುವೆಂಪು ಅವರ ಪರಿಚಯವನ್ನು ಆಪ್ರಾಶಯಮಾನವಾಗಿ ಚಿತ್ರಿಸಿದ್ದಾರೆ. ಮುಂದಿನ ಹಂತದಲ್ಲಿ ಲೇಖಕರು ತಾವು ಕವಿಶೈಲದಲ್ಲಿ ಭಾಗವಹಿಸಿದ್ದ ಕುವೆಂಪು ಅಧ್ಯಯನ ಶಿಬಿರದ ರಸಾನುಭವಗಳ ವೈಯಕ್ತಿಕ ಅನುಭವದ ಚಿತ್ರಣವನ್ನು ನೀಡಿದ್ದಾರೆ. ಬರಹ ಇನ್ನೂ ಎಳಸು ಎಳಸಾಗಿದೆ. ಆದರೆ ಬರೆವಣಿಗೆ ಮುಂದುವರಿಸಿಂತೆ ಪ್ರಬುದ್ದತೆಯನ್ನು ಮೈಗೊಡಿಸಿಕೊಳ್ಳವ ಲಕ್ಷಣಗಳೆಲ್ಲವೂ ಗೋಚರವಾಗಿದೆ. 'ಬರಿ-ಹರಿ, ಬರಿ- ಹರಿ' ಎಂಬ ಸೂತ್ರವನ್ನು ಅಳವಡಿಸಿಕೊಳ್ಳಬೇಕಾದ ಅನಿವರ‍್ಯತೆಯಂತೂ ಎದ್ದು ಕಾಣುತ್ತಿದೆ. ರಸಋಷಿ ಕುವೆಂಪುರವರು ಲೇಖಕರನ್ನು ಹರಸಲೆನ್ನುವ ಆಸೆ ನನ್ನದು.

ಕೊರೊನಾ ಸುಮಾರು ಎರಡು ವರ್ಷಗಳ ಕಾಲ ವಿಶ್ವವನ್ನೇ ತಲ್ಲಣಿಸುವಂತೆ ಮಾಡಿದೆ. ನಮಗಿನ್ನೂ ಆ ಗುಂಗಿನಿಂದ ಹೊರಬರಲು ಕಷ್ಟವಾಗುತ್ತಿದೆ. 'ಕೊರೊನಾವನ್ನು ಮುಟ್ಟಿದರೆ ತಟ್ಟುವ ರೋಗ' ಎಂದು ಪರಿಣಮಕಾರಿಯಾಗಿ ದಾಖಲಿಸಿದ್ದಾರೆ. 'ಕೊರೊನಾ'ವು ರಾಮಲಕ್ಷ್ಮಣರ ವಿರುದ್ದ ತಾಟಕಿಯು ನಡೆಸಿದ ಮಾಯಾಯುದ್ದ' ಎನ್ನುವ ಲೇಖಕರು 'ಕೊರೊನಾ'ದ ಹಿನ್ನೆಲೆಯಲ್ಲಿ ಸರ್ವವ್ಯಾಪಿಯಾದ ಆನ್‌ಲೈನ್ ಶಿಕ್ಷಣದ ತೊಂದರೆ, ಅನುಕೂಲಗಳನ್ನೆಲ್ಲ ವಿವರಿಸಿದ್ದಾರೆ. ಮಾಸ್ಕ್ ಧರಿಸಲೇ ಬೇಕಾಗಿರುವ ಅನಿವರ‍್ಯತೆಯನ್ನು ಮನಗಾಣಿಸಿದ್ದಾರೆ. ಸಾಮಾಜಿಕ ಜವಾಬ್ದಾರಿಗಳ ಅರಿವನ್ನೂ ಮಾಡಿಸಿದ್ದಾರೆ.

ಪರಿಸರಕ್ಕೆ ಸಂಬಂಧಿಸಿದಂತೆ ವಿಶೇಷ ಕಾಳಜಿಯುಳ್ಳ ಲೇಖಕರು ಎಳೆಯ ಹರಯದಲ್ಲಿ ಬೆಳೆದ ನಾಗರಿಕರಿಗೆ ಪರಿಸರ ಪಾಠವನ್ನು ಹೇಳಿದ್ದಾರೆ. ಮರಗಳ ನಾಶದಿಂದ ಜೀವ ವೈವಿಧ್ಯತೆ ನಾಶವಾಗಿ ಮಾನವನ ಬದುಕು ಅಳಿಯುವ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ತಿಳಿಸಿ, 'ಮನೆಯಲ್ಲಿ ಹುಟ್ಟಿದ ಕೂಸಿನ ಬಗ್ಗೆ ಇರುವ ಕಾಳಜಿ ಕನಸುಗಳು ಪರಿಸರದ ಮೇಲೂ ಇದ್ದಾಗ ಮಾತ್ರ ನಮ್ಮ ನಾಳೆಗಳು ನಳನಳಿಸುತ್ತದೆ ಎಂದು ಹಿರಿಯರಿಗೆ, ಕಿರಿಯ ಗುರುವಾಗಿ ಉಪದೇಶಿಸಿದ್ದಾರೆ. ಪರಿಸರವನ್ನು ರಕ್ಷಿಸುವ ಹಲವಾರು ವಿಧಾನಗಳನ್ನು ತಿಳಿಸಿದ್ದಾರೆ. ಭೂಮಿ ಒಂದೇ, ಪರಿಸರ ಒಂದೇ, ಎಂದು ಎಲ್ಲರನ್ನು ಎಚ್ಚರಿಸಿದ್ದಾರೆ. ಚಿಲಿ-ಪಿಲಿ ಹಕ್ಕಿಗಳು ಕಣ್ಮರೆಯಾಗುವ ಅಪಾಯವನ್ನು ಮನಗಾಣಿಸಿ 'ಹಕ್ಕಿಪ್ರೀತಿ' ತೋರಿಸಿದ್ದಾರೆ. 'ಮರಗಿಡಗಳನ್ನು ಬೆಳೆಸಿ ಪರಿಸರವನ್ನು ಉಳಿಸಿ' ಎಂದು ವಿನಂತಿಸಿದ್ದಾರೆ. ಸುಂದರವಾದ ಮನನೀಯ ಲೇಖನವಿದೆ. ಲೇಖಕರ ಬರಹ ಶಕ್ತಿಯನ್ನೂ ಅನನ್ಯವಾಗಿ ಪರಿಚಯಿಸಿದೆ.

ಸಮಕಾಲಿನ ಹಾಗೂ ಭವಿಷ್ಯದ ಶಕ್ತಿಗೆ ಅನಿವರ‍್ಯವಾಗಿರುವ ತಂತ್ರಜ್ಞಾನದ ಕುರಿತು ಲೇಖನ ಸೊಗಸಾಗಿದೆ. ತಂತ್ರಜ್ಞಾದುಪಯೋಗ ಹಾಗೂ ಅಪಾಯಗಳೆರಡನ್ನೂವಿವರಿಸಿದ್ದಾರೆ. 'ಬುದ್ಧಿಗೆ ನೀಡುವ ಪ್ರಾಧಾನ್ಯತೆ', ದೈಹಿಕ ದುಡಿಮೆಯನ್ನು ಆಪೋಶನ ತೆಗೆದುಕೊಳ್ಳುವ ಭೀತಿಯೂ ಇಲ್ಲಿ ವ್ಯಕ್ತವಾಗಿದೆ. ತಂತ್ರಜ್ಞಾನದಿಂದ ಪರಿಸರ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ, ಎಲೆಕ್ಟಿಕ್ ವಾಹನಗಳು, ಜೈವಿಕ ಗೊಬ್ಬರ, ಕೃಷಿ ವನ್ಯಜೀವಿ ಸಂರಕ್ಷಣೆ, ರೋಬೋ ಬಳಕೆ, ಸ್ಯಾಟಲೈಟ್, ಮೊಬೈಲ್, ಭಾಷೆ, ಆನ್‌ಲೈನ್, ಗೂಗಲ್, ಬೆಳೆಗಳ ಮಾಹಿತಿ ಶಿಕ್ಷಣ, ವೈ-ಫೈ ಹೀಗೆ ಅನೇಕ ವಿಷಯಗಳನ್ನು ತಿಳಿಸುವಲ್ಲಿ ಪ್ರಯತ್ನಿಸಿದ್ದಾರೆ. ಲೇಖಕರ ಅರಿವಿನ ದರ್ಶನ ಲೇಖನವಿದು.

ಕನ್ನಡ ಮತ್ತು ಕನ್ನಡಿಗರಿಗೆ ಸಂಬಂಧಿಸಿದಂತೆ ಮೂರು ಲೇಖನಗಳಿವೆ. 'ಕನ್ನಡ ಭಾಷೆಯು ದಿನೇ-ದಿನೇ ಅಳಿವಿನಂಚಿಗೆ ಹೋಗುತ್ತಿದೆ. ಯುವ ಪೀಳಿಗೆ ಕನ್ನಡವನ್ನು ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಿಸಿ ಕೊಂಡಂತಿದೆಯೆಂದು ವಿಷಾದಿಸುವ ಲೆಖಕರು ನಮ್ಮ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಿ, ಕನ್ನಡ ಸಾಹಿತ್ಯವನ್ನು ಪರಿಚಯಿಸಿದರೆ. ನಮ್ಮ ಕನ್ನಡ ಭಾಷೆಯೆಂದಿಗೂ ಅಳಿವಿನಂಚಿಗೆ ಹೋಗದೆನ್ನುವ ಸಾರ್ವಕಾಲಿಕ ಸತ್ಯವನ್ನು ಮನಗಣಿಸುವಲ್ಲಿ ಮುಂದಾಗಿದ್ದಾರೆ. ಲೇಖಕರಲ್ಲಿರುವ ಅಚಲ ಕನ್ನಡಾಭಿಮಾನ ಕನ್ನಡಿಗರೆಲ್ಲರಲ್ಲೂ ಮೂಡಿದರೆ 'ಅದೇ ಏರಿಸು ಹಾರಿಸು ಕನ್ನಡ ಬಾವುಟ' ಎಂಬುದನ್ನು ಸಾಬೀತುಗೊಳಿಸಿದಂತಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ತೇರನ್ನೆಳೆಯುವ ಸಾರಥಿಯೆನ್ನುತ್ತ ಈ ಸಾರಥಿ ಹುಟ್ಟು, ಬೆಳವಣಿಗೆಯನ್ನು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲೇ ಆಧ್ಯಯನ ಮಾಡಿರುವ ಲೇಖಕರು 'ಸರ್ಕಾರಿ ಶಾಲೆಗಳನ್ನು ಬೆಳಸಿ-ಉಳಿಸಬೇಕಾದ' ಅನಿವರ‍್ಯತೆರಯನ್ನು ಸ್ಪಷ್ಟವಾಗಿ ಮನಗಾಣಿಸಿದ್ದಾರೆ. 'ಹಣವಿಲ್ಲದೆ ಉತ್ತಮ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ಮರೆತು ಪೋಷಕರು ತಮ್ಮ ಮಕ್ಕಳಿಗಾಗಿ ಖಾಸಗಿ ಶಾಲೆಗಳ ಮೊರೆ ಹೊಗುತ್ತಿದ್ದಾರೆಂದು ಖೇದಿಸಿ ಅಳಿಯುವ ಅಂಚಿನಲ್ಲಿರುವ ನಮ್ಮ ಸರ್ಕಾರಿ ಶಾಲೆಗಳನ್ನು ಎಲ್ಲರೂ ಉಳಿಸಬೇಂದು ಕರೆ ನೀಡಿ, ಅದಕ್ಕೆ ಸಂಬಂಧಿಸಿದಂತೆ ಹಲವಾರು ದಾರಿಗಳನ್ನು ತೋರಿದ್ದಾರೆ.

ಲೇಖಕರು ತಮ್ಮ ಎಳೆಯ ಹರಯದಲ್ಲೇ ನಾಡಿನ ಸರ್ವಾಂಗೀಣ ಪ್ರಗತಿಗಾಗಿ ಮಿಡಿಯುವ ಮನವನ್ನು ಹೊಂದಿ ಯುವಜನತೆಗೆ ಮಾದರಿಯಾಗಿದ್ದಾರೆಂದು ಖಚಿತವಾಗಿ ಅಭಿಮಾನಿಸಬಹುದು. ನಾಳೆಗಳ ಭವಿಷ್ಯವಾಗಿರುವ ಇಂತಂಹ ಯುವಕರ ಸಂಖ್ಯೆ ಹೆಚ್ಚಲಿ ಭವಿಷ್ಯದ ಬಗ್ಗೆ ಆಶಾಭಾವನೆ ಹೊಂದುವಂತಾಗಲಿ.

'ಯೋಧ ಮತ್ತು ರೈತ' ರಾಷ್ಟçದ ಎರಡು ಕಣ್ಣುಗಳು ಇವರಿಂದಲೇ ದೇಶ ಹಾಗೂ ಬದುಕಿನ ರಕ್ಷಣೆ 'ಬೆಳಗಾಗ ನಾವೆದ್ದು ಯಾರಾರ ನೆನೆಯಲಿ' ಎಂಬ ಜನಪದ ಮಾತಿಗೆ, 'ಯೋಧ ಮತ್ತು ರೈತ' ಎಂದು ಅಧಿಕಾರವಾಣೆಯಿಂದ ನುಡಿಯಬಹುದು. ಲೇಖಕರ ಯೋಧಾಭಿಮಾನ ಹಾಗೂ ರೈತಾಭಿಮಾನ ಪ್ರಶಂಸಾರ್ಹ.

ಹಿಂದೂ ಧರ್ಮದ ಹಲವಾರು ಹಬ್ಬಗಳನ್ನು ಸಂತಸ-ಸಂಭ್ರದಿಂದ ಆಚರಿಸುವ ಪದ್ದತಿ ಕಾಲಕಾಲದಿಂದಲೂ ಇದೆ. ಲೇಖಕರು 'ಸಂಕ್ರಾಂತಿ', 'ಯುಗಾದಿ' ‘ಶಿವರಾತ್ರಿ’ ಹಬ್ಬಗಳ ರೀತಿ ರಿವಾಜುಗಳನ್ನು ಸುಂದವಾಗಿ ತಿಳಿಸಿದ್ದಾರೆ. ಈ ಹಬ್ಬಗಳನ್ನು ಆಚರಿಸುವ ಎಲ್ಲರೂ ಓದಲೇ ಬೇಕಾಗಿರುವ ಲೇಖನವಿದು.

'ಗಣರಾಜ್ಯೋತ್ಸವ' ಹಬ್ಬವನ್ನು ಅತ್ಯಂತ ದೇಶಭಕ್ತಿ ಹಾಗೂ ಉತ್ಸಾಹದಿಂದ ಆಚರಿಸುವ ನಾವು, ಈ ಆರಚಣೆಯಿಂದ ಭಾರತಕ್ಕೆ ಸಾತಂತ್ರ್ಯ ಸಿಕ್ಕ ಹಾದಿ ಹಾಗೂ ಅದಕ್ಕಾಗಿ ಹೋರಾಡಿದವರ ಹಾಗೂ ಮಡಿದವರನ್ನು ನೆನೆಯುತ್ತ ನಮ್ಮ ಮುಂದಿನ ಪೀಳಿಗೆಗೆ ಈ ಅವಿಸ್ಮರಣೀಯ ನೆನಪುಗಳನ್ನು ಅಮರವಾಗಿಸುತ್ತೇವೆಂದು ಅಭಿಮಾನಿಸಿದ್ದಾರೆ. 'ಮೈಸೂರು ದಸರಾ'ದ ಹಿನ್ನಲೆಯಲ್ಲಿ ನವರಾತ್ರಿ ಹಬ್ಬದ ವಿಶೇಷತೆಗಳನ್ನು ದಾಖಲಿಸಿದ್ದಾರೆ.

'ಯೋಗಶಾಸ್ತ'ದ ಮೂಲ ಪುರುಷ ಬ್ರಹ್ಮನೆಂದು ಪ್ರತಿಪಾದಿಸಿದ ಲೇಖಕರು ಮಹಾತ್ಮ ಗಾಂಧಿಯವರ, 'ಶರೀರದ, ಮನಸ್ಸಿನ ಮತ್ತು ಆತ್ಮದ' ಸರ್ವಶಕ್ತಿಗಳನ್ನೂ ಸಂಯೋಜಿಸುವುದೇ ಯೋಗ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ಯೋಗದ ಕ್ರಮ, ಹಿರಿಮೆ, ಗರಿಮೆ, ಮಹಿಮ, ಅನಿವಾರ್ಯತೆಯನ್ನುರುಡುತ್ತ ಯೋಗವು ಮನಸ್ಸು ಮತ್ತು ದೇಹವನ್ನು ಹಿತಾತ್ಮನ ಜೊತೆಯಲ್ಲಿ ಒಂದು ಗೂಡಿಸುವ ಸಾಮರ್ಥ್ಯ ಹೊಂದಿದೆ. ಪ್ರಕೃತಿ ಮತ್ತು ಮನುಷ್ಯನಿಗೆ ಸಂಬಂಧಿಸಿದ ವಿಶೇಷಗಳನ್ನು ಹೊಂದಿರುವ 'ಯೋಗ'ವು ಮನ್ನುಷ್ಯನು ತನ್ನಲ್ಲಿಯೇ ಇರುವ ಪ್ರಬಲವಾದ ಸಾಮರ್ಥ್ಯವನ್ನು ಪ್ರಚುರ ಪಡಿಸಲು ನೆರವಾಗುತ್ತದೆ. ಆತನು ತನ್ನ ಶಕ್ತಿಯನ್ನು ಅರಿಯಲು ಇದೊಂದು ಮಾಧ್ಯಮ. ಪ್ರತಿನಿತ್ಯ ಯೋಗದ ಅಳವಡಿಕೆ ಜೀವನದಲ್ಲಿ ಉತ್ತಮ ಬದಲಾವಣೆಗೆ ಪೂರಕವೆಂದು ಯಾಗದ ಮಹತ್ವವನ್ನು ಮಸಗಾಣಿಸಿದ್ದಾರೆ. 'ಯೋಗ' ಸೂರ್ಯ ನಮಸ್ಕಾರ, ಪ್ರಾಣಯಾಮ..... ಇತ್ಯಾದಿಗಳನ್ನು ಏಕೆ ಮಾಡಬೇಕೆಂಬ ವಿಕೃತ ಮನಸ್ಸಿನ ವಿತಂಡವಾದಿಗಳಿಗೆ ಈ  ಲೇಖನಯೊಂದು ಮಾರ್ಗದರ್ಶಕ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿದಂತೆ ನಮ್ಮ ಪೂರ್ವಿಕರ ರೀತಿ-ನೀತಿಗಳು ಸದಾ ಆದರ್ಶಮಯ ಎಂದಿರುವ ಲೇಖಕರು ಭಾವೈಕ್ಯತೆಯನ್ನು ಪ್ರತಿಪಾದಿಸಿದ್ದಾರೆ. 

ಈ ಸಂಕಲನದಲ್ಲಿ ಇರುವ ವಿಶೇಷ ಲೇಖನ 'ಇಸ್ಲಾಂ ಧರ್ಮದ ಹಬ್ಬಗಳು' ಶಾಂತಿ ಸೌಹಾರ್ದತೆ ಸಾರುವ ರಂಜಾನ್, ತ್ಯಾಗ-ಬಲಿದಾನ ನೆನೆಯುವ ಮೊಹರಂ, ಬಕ್ರಿದ್, ಪ್ರವಚನ-ದಾನ-ಉಪವಾಸದ ಈದ್‌ಮಿಲಾದ್ ಎಂಬ ಇಸ್ಲಾಂ ಬಂಧುಗಳ ನಾಲ್ಕು ಪ್ರಮುಖ ಹಬ್ಬಗಳನ್ನು ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ಉಪವಾಸಹಬ್ಬದ ಕಾರಣ, 'ಬಡವರ ಹಸಿವು ಶ್ರೀಮಂತರಿಗೆ ತಿಳಿಯಲಿ', 'ಅತ್ಯಾಗ್ರಹಗಳಂಥ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸಲಿ', ವರ್ಷದ ಹನ್ನೊಂದು ತಿಂಗಳು ನಮ್ಮ ದೇಹ ಮತ್ತು ಮನಸ್ಸಿನಲ್ಲಿ ತುಂಬಿದ ಮಾಲಿನ್ಯವನ್ನು ಒಂದು ತಿಂಗಳು ಉಪವಾಸ ಮಾಡಿ ಶುದ್ದೀಕರಿಸಲಿ' ಎಂಬುದಾಗಿದೆ ಎನ್ನು ಲೇಖಕರು, 'ಮನುಷ್ಯನ ಅಂತಃ ಕರಣಶುದ್ಧಿ ಹಾಗೂ ಪಾಪ ಪರಿಹಾರಕ್ಕೆ ಉಪವಾಸ ಉತ್ತಮ ಮಾರ್ಗವಾಗಿದೆ' ಎಂದು ಚಂದದ ಮಾತನ್ನಾಡಿದ್ದಾರೆ.

ಈ ಉಪವಾಸ ಎಂಬುವುದು ದೈಹಿಕ, ಮಾನಸಿಕ, ಲೌಕಿಕ, ಬೌದ್ಧಿಕಾದಿ ವಿಷಯಗಳಿಗೂ ಸಂಬಂಧಿಸಿದಂತೆ ಇದ್ದಿದ್ದರೆ ಖಂಡಿತ ಭಾರತ ವಿಶ್ವಗುವಾಗುತ್ತಿತ್ತು. 

ವಿಷಯ ವೈವಿಧ್ಯತೆಯಿಂದ, ಮಾನವೀಯ ನೆಲೆಗಳಿಂದ ಕಂಗೊಳಿಸುವ ಈ ಸಂಕಲನವು ತನ್ನಲ್ಲಿನ ಲೇಖನಗಳಲ್ಲಿ ಭಿನ್ನ ಭಿನ್ನ ಚೆಲುವನ್ನು ಹೊಂದಿದೆ. ಈ ಸಂಕಲನವನ್ನು ಹೂವಿನ ಮಾತಿಗೆ ಹೋಲಿಸಿದಾಗ, ನೋಡಲು ಸುಂದರವಾಗಿದೆ. ಮುಂದಿನ ಲೇಖನಗಳಲ್ಲ ಅಂತರ್ಗಾಮಿಯಾಗಿ ಹರಿಯುವಂತೆ ವೈಚಾರಿಕತೆ ಇನ್ನಷ್ಟು ಪ್ರಕಾಶಮಾನವಾಗಿ ತುಂಬಿಕೊಳ್ಳುತ್ತದೆಂಬ ಭರವಸೆಯನ್ನಂತೂ ಮೂಡಿಸಿದೆ.

ನಮ್ಮ ಅರಿವಿನ ಪರಿಧಿಯನ್ನು ಹೆಚ್ಚಿಸುವಲ್ಲಿ ಮಾರ್ಗತೋರಿರುವ ಮೊಹಮ್ಮದ್ ಅಜರುದ್ದೀನ್ ಅವರ 'ಸಂಜೆ ವಿಹಾರ' ಖಂಡಿತಕ್ಕೂ ಒಂದು ವಿಶಿಷ್ಟ ಹಾಗೂ ವಿಶೇಷ ಪ್ರಯತ್ನ. ತಮ್ಮ ಬರಹಗಳು ಇನ್ನಷ್ಟು ಸೊಗಸಾಗುವಂತೆ ನಿರೂಪಿಸುವ ಬದ್ಧ ಹೊಣೆಗಾರಿಕೆಯೊಡನೆ ತಮ್ಮ ಪ್ರಯತ್ನವನ್ನು ಮುಂದುವರಿಸಲಿ, ಸಾಹಿತ್ಯಲೋಕದಲ್ಲಿ ಇವರ ಬರಹಗಳು ಉಜ್ವಲಿಸಲಿ, ಸುಗಂಧ ಪಸರಿಸುತ್ತಿರಲಿ, ಓದುಗಾರಿಕೆ ಶಿವರಂಜನೆ ಹಾಗೂ ಮನೋರಂಜನೆಗಳೆರಡೂ ಸಿಗುವಂತಾಗಲೆಂದು ಆಶಿಸುತ್ತ, ಒಂದೊಳ್ಳೆಯ ಪ್ರಯತ್ನಕ್ಕಾಗಿ ಹಾರ್ಧಿಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.

Related Books