‘ನಾವು ನಡೆದ ಹಾದಿ’ ಕೃತಿಯು ಗೊ.ರು. ಚನ್ನಬಸಪ್ಪ ಸಂಪಾದಕತ್ವದ ಲೇಖನಸಂಕಲನವಾಗಿದೆ. ಇಲ್ಲಿನ ಬರಹಗಳಲ್ಲಿ ಯಾವುದು ಹೆಚ್ಚು, ಯಾವುದು ಕಡಿಮೆ, ಯಾವುದು ಉತ್ತಮ, ಯಾವುದು ಸಾಧಾರಣ ಎಂದು ಹೇಳುವಂತಿಲ್ಲ. ಪ್ರತಿಯೊಂದು ಬರಹವೂ ಬೇರೆ ಬೇರೆ ವ್ಯಕ್ತಿಗಳ ಭಿನ್ನ ಭಿನ್ನ ಅನುಭವದ ದಾಖಲೆ. ಈ ಬರಹಗಳನ್ನು ಬಿಡಿಬಿಡಿಯಾಗಿಯೇ ಓದಿ, ಅವುಗಳ ಸೌಂದರ್ಯವನ್ನು ಅನುಭವಿಸಬೇಕು. ನನ್ನ ಹಳ್ಳಿಯ ಈ ಹತ್ತಾರು ಬಂಧುಗಳ ಈ ಬರಹಗಳು ಬಿಡಿ ಬಿಡಿ ಹೂವುಗಳಿದ್ದಂತೆ. ಒಂದೊಂದು ಹೂವೂ ಒಂದೊಂದು ಬಗೆ. ಅವಕ್ಕೆ ತಮ್ಮದೇ ಆದ ಚೆಲುವಿದೆ. ಅವೆಲ್ಲವನ್ನೂ ಸೇರಿಸಿ ಕಟ್ಟಿರುವ ಹಾರವೇ ಈ 'ನಾವು ನಡೆದ ಹಾದಿ' ಗ್ರಂಥ. ಆದರೆ, ಇಲ್ಲಿನ ಬರಹಗಳಲ್ಲೆಲ್ಲಾ ನಾನು ಕಂಡ ಏಕರೂಪದ ಅಂತಸ್ಥ ಲಕ್ಷಣಗಳೆಂದರೆ - ನಮ್ಮ ಹಳ್ಳಿಯಲ್ಲಿ ಹುಟ್ಟಿದ ಈ ಎಲ್ಲರಲ್ಲೂ ಇರುವ ಒಳ್ಳೆಯ ಸಂಸ್ಕೃತಿ, ತಮ್ಮ ಹೆತ್ತವರು ಮತ್ತು ಊರ ಹಿರಿಯರ ಬಗೆಗಿನ ಗೌರವ, ಹುಟ್ಟಿದ ಊರಿಗೆ ಕೆಟ್ಟ ಹೆಸರು ತರಬಾರದೆನ್ನುವ ಎಚ್ಚರ, ತಾನು ಕೈಗೊಂಡ ವೃತ್ತಿ, ಅದು ಖಾಸಗಿ ಅಥವಾ ಸರ್ಕಾರಿ ಹುದ್ದೆಯಿರಲಿ, ಕೈಗಾರಿಕೆ ಅಥವಾ ವಾಣಿಜ್ಯೋದ್ಯಮವಿರಲಿ, ಸ್ವಉದ್ಯೋಗವಿರಲಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂಬ ನಿಷ್ಠೆ, ತಾನು ಅನುಭವಿಸಿದಂತಹ ಕಷ್ಟಗಳಲ್ಲಿರುವವರಿಗೆ ಕೈಲಾದ ನೆರವು ನೀಡುವ ಔದಾರ್ಯ, ಸಾಂಸಾರಿಕ ಜೀವನದ ಸಾಮರಸ್ಯ, ಯಾರ ಮೇಲೂ ದ್ವೇಷವಿಲ್ಲದ ಸದ್ಭಾವ. ಎಲ್ಲಕ್ಕಿಂತ ಮಿಗಿಲಾಗಿ, ತನ್ನ ಹುಟ್ಟಿದೂರಿನ ಋಣ ತೀರಿಸಬೇಕೆಂಬ ಸಂಕಲ್ಪ ಮತ್ತು ನಮ್ಮ ಗ್ರಾಮಾಭಿವೃದ್ಧಿಗಾಗಿ ನಾನು ಸ್ಥಾಪಿಸಿದ 'ಗ್ರಾಮ ವಿಕಾಸ ಪ್ರತಿಷ್ಠಾನ'ಕ್ಕೆ ತನು-ಮನ-ಧನಗಳ ಬೆಂಬಲ; ನಮ್ಮ ಊರು ಒಂದು ಮಾದರಿ ಗ್ರಾಮವಾಗಿರಬೇಕೆಂಬ ಹಂಬಲ! ಒಂದು ವೇಳೆ, ಗೊಂಡೇದಹಳ್ಳಿ ಇಂದು ಹತ್ತು ಜನರ ಕಣ್ಣಿಗೆ ಕಾಣಿಸುವಂತಾಗಿದ್ದರೆ, ಅದಕ್ಕೆ ಅತ್ಯಂತ ಮುಖ್ಯವಾದ ಕಾರಣ : ಪೂರ್ಣ ಬೇಸಾಯವನ್ನೇ ಅವಲಂಬಿಸಿರುವ ನಮ್ಮ ಹಳ್ಳಿಯ ಸುಮಾರು 300 ಜನಸಂಖ್ಯೆಗೆ ತಲಾ ಸರಾಸರಿ ಒಂದು ಎಕರೆಯಷ್ಟು ಭೂಮಿಯೂ ಇಲ್ಲದ ದುರ್ಭರ ಪರಿಸ್ಥಿತಿ. ಆ ಪರಿಸ್ಥಿತಿಯಲ್ಲಿ ಅವರು ಎಷ್ಟು ತಲೆಮಾರುಗಳ ಕಾಲ ದುಡಿದರೂ ಬಡತನದಲ್ಲೇ ಮಡಿಯಬೇಕಾಗಿತ್ತು. ಆದರೆ, ನಮ್ಮೂರ ಹಿರಿಯರು ಇದನ್ನು ಅರಿತುಕೊಂಡು, ತಮ್ಮ ಮಕ್ಕಳನ್ನು ಹೇಗಾದರೂ ಓದಿಸಿ, ಅವರಿಗೆ ಯಾವುದಾದರೂ ನೌಕರಿ ದೊರಕಿಸದೆ ಹೋದರೆ, ತಮಗೆ ಬಡತನದ ಬಂಧನದಿಂದ ಬಿಡುಗಡೆಯಾಗುವುದಿಲ್ಲವೆಂದು, ತಮ್ಮ ಅನ್ನ-ಅರಿವೆಗಳ ಕಡೆಗೂ ಗಮನಕೊಡದೆ, ಮಕ್ಕಳ ಶಿಕ್ಷಣದ ಬಗೆಗೆ ಪೂರ್ಣ ಗಮನ ಕೊಟ್ಟರು.
ಜಾನಪದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗೊ. ರು. ಚನ್ನಬಸಪ್ಪರವರು ಚಿಕ್ಕಮಗಳೂರು ಜಿಲ್ಲೆಯ ಗೊಂಡೇದಹಳ್ಳಿಯಲ್ಲಿ ಜನಿಸಿದರು. ಗ್ರಾಮೀಣ ಬದುಕಿನ ಬಗ್ಗೆ ಮತ್ತು ಜಾನಪದ ಕ್ಷೇತ್ರವು ಅವರ ಆಸಕ್ತಿ ಕ್ಷೇತ್ರ. 1967ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಕೃತಿ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಗ್ರಂಥದ ಸಂಪಾದಕರು. ಕೆ.ಆರ್. ಲಿಂಗಪ್ಪ ಅಭಿನಂದನಾ ಸಮಿತಿ ಪ್ರಕಟಿಸಿದ ‘ಗ್ರಾಮಜ್ಯೋತಿ’ ಇವೆರಡೂ ಕೃತಿಗಳೂ ಗೊ. ರು. ಚನ್ನಬಸಪ್ಪಅವರು ಸಂಪಾದಿಸಿ ವಿಶಿಷ್ಟ ಆಕರಗ್ರಂಥಗಳು. ಜಾನಪದ ವಸ್ತುವನ್ನಾಧರಿಸಿ ಬರೆದ ’ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ‍್ಯಾವೋ’ ರಂಗಭೂಮಿಯ ಮೇಲೆ ಅಪೂರ್ವ ಯಶಸ್ಸು ಕಂಡ ...
READ MORE