`ಮುದ್ದಣ್ಣ ಎಂಬ ಸಾಹಿತ್ಯ ಸೌರಭ’ ಕೃತಿಯನ್ನು ಲೇಖಕ ರವಿಶಂಕರ ಎ.ಕೆ. (ಅಂಕುರ) ಸಂಪಾದಿಸಿದ್ದಾರೆ. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ) 2021ರ ಜನವರಿ 25 ರಂದು ‘ಮುದ್ದಣ ಸಾಹಿತ್ಯ ಸೌರಭ’ ಹೆಸರಿನಲ್ಲಿ ‘ರಾಷ್ಟ್ರೀಯ ವಿಚಾರ ಸಂಕಿರಣ’ ಹಮ್ಮಿಕೊಂಡಿತ್ತು. ಮುದ್ದಣ ಕವಿಯ ಸಾಹಿತ್ಯ ಕುರಿತು ಕನ್ನಡ ಪ್ರಾಧ್ಯಾಪಕರು ಒಂದು ವೇದಿಕೆಯಲ್ಲಿ ಚಿಂತನೆ ನಡೆಸಬೇಕೆಂದು ಮುದ್ದಣ ಪ್ರಕಾಶನದ ನಂದಳಿಕೆ ಬಾಲಚಂದ್ರರಾವ್ ಅವರು ಪ್ರಸ್ತಾಪ ಮಾಡಿದರು. ಇವರ ವಿಚಾರಕ್ಕೆ ಸಮ್ಮತಿ ನೀಡಿತ್ತು. ಕರ್ನಾಟಕದ ಎಲ್ಲಾ ಅಧ್ಯಯನಕಾರರಿಗೂ ಮುಕ್ತ ವೇದಿಕೆ ನೀಡಲಾಯಿತು. ಡಾ. ಪಾದೇಕಲ್ಲು ವಿಷ್ಣುಭಟ್ಟರು, ಡಾ. ತಮಿಳ್ ಸೆಲ್ವಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಜಾಲತಾಣದ ಮೂಲಕ ಆಗಮಿಸಿ, ತಮ್ಮ ವಿಚಾರಗಳನ್ನು ಮಂಡಿಸಿದರು. ವಿವಿಧ ಕ್ಷೇತ್ರದ ಅಧ್ಯಯನಕಾರರು ಮುದ್ದಣ ಕವಿಯ ಸಮಗ್ರ ಸಾಹಿತ್ಯ ಕುರಿತು ವಿವಿಧ ದೃಷ್ಠಿಕೋನಗಳ ಮೂಲಕ ಅಧ್ಯಯನ ನಡೆಸಿ ತಮ್ಮ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದರು. ಇಲ್ಲಿ ಮಂಡನೆಯಾದ ಪತ್ರಿಕೆಗಳನ್ನು ಪರಿಶೀಲಿಸಿ, ಅಗತ್ಯವಾದ ಬದಲಾವಣೆಗಳನ್ನು ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತಿದೆ.
ಮುದ್ದಣ ಎಂಬ ಕಾವ್ಯನಾಮದ ಲಕ್ಷ್ಮೀ ನಾರಣಪ್ಪ ಹೆಸರಿನ ಚಿಂತನೆ, ಜೀವನ, ಸಾಹಿತ್ಯ, ಸಾಹಿತ್ಯದ ವಸ್ತು, ಆಶಯ ಮತ್ತು ಶೈಲಿಯ ಕುರಿತಾಗಿ ಅಧ್ಯಯನ ನಡೆಸಿದ ಭಿನ್ನ ಭಿನ್ನ ವಿಚಾರಗಳು ಇಲ್ಲಿವೆ. ಒಂದು ಕೃತಿಯ ಇತಿಹಾಸವು ಪ್ರಾಚೀನ ಸಾಹಿತ್ಯದೊಂದಿಗೆ ಹೊಂದಿರುವ ತೌಲನಿಕ ತಾತ್ವಿಕತೆಯನ್ನು ಮೊದಲ ಭಾಗದ ಲೇಖನಗಳು ಮಂಡಿಸುತ್ತವೆ. ನಂತರದ ಲೇಖನಗಳು ಮುದ್ದಣನು ಆರಂಭದಲ್ಲಿ ರಚಿಸಿದ ಯಕ್ಷಗಾನ ಕೃತಿಗಳಾದ ರತ್ನಾವತೀ ಕಲ್ಯಾಣ ಮತ್ತು ಕುಮಾರವಿಜಯ ಕೃತಿಗಳನ್ನು ಆಧುನಿಕ ಯಕ್ಷಗಾನದ ಸಂದರ್ಭಗಳಿಗೆ ಪೂರಕವಾಗಿ ಚರ್ಚೆ ಮಾಡಿ ಯಕ್ಷಗಾನ ಸಾಹಿತ್ಯಕ್ಕೆ ಮುದ್ದಣನ ಕೊಡುಗೆಯನ್ನು ವಿಚಾರ ಮಾಡಲಾಗಿದೆ. ಭಾಷೆ ಮತ್ತು ಶೈಲಿಯ ದೃಷ್ಠಿಯಿಂದ ರಾಮಾಶ್ವಮೇಧವು ಕಾವ್ಯಧರ್ಮ ಮತ್ತು ಜೀವನಧರ್ಮಗಳ ನಡುವೆ ರಸಸೇತುವೆಯನ್ನು ನಿರ್ಮಿಸಿ, ಹಳತು ಹೊಸತುಗಳನ್ನು ವರ್ತಮಾನದಲ್ಲಿ ಮಿಳಿತಗೊಳಿಸಿ ನೋಡುವ ಸಂದರ್ಭ ಓದುಗರನ್ನು ಹೊಸದೊಂದು ಭಾವ ಸಂಚಾರಕ್ಕೆ ಅಣಿಗೊಳಿಸಿದಂತಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಮುದ್ದಣ ಕವಿಯ ರಾಮಾಶ್ವಮೇಧದ ಕುರಿತಾಗಿ ಆದ ಪರ-ವಿರೋಧ ಚರ್ಚೆಗಳು, ವಿಮರ್ಶೆಗಳ ಸ್ಥೂಲ ನೋಟದ ಜತೆಗೆ ಮುದ್ದಣ-ಮನೋರಮೆ ಸಲ್ಲಾಪದ ಕುರಿತಾಗಿ ಭಿನ್ನ ರೂಪದ ಆಯಾಮವು ಇಲ್ಲಿ ಗಮನಾರ್ಹವಾಗಿದೆ. ಹೊಸಗನ್ನಡ ಸಾಹಿತ್ಯದ ಪರಿವರ್ತನೆ, ವಿಮರ್ಶೆಯ ಸೂಕ್ಷ್ಮತೆ ಹಾಗೂ ಬರವಣಿಗೆಯಲ್ಲಿ ಅಳವಡಿಸಿಕೊಳ್ಳಬೇಕಾದ ರೂಪಾಂತರ ಪ್ರಕ್ರಿಯೆಯನ್ನು ಮುದ್ದಣ ಕವಿಯ ಸಾಹಿತ್ಯದಲ್ಲಿ ಗಮನಿಸಿದ್ದಾರೆ. ಹೀಗೆ ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ಹಾಡಿ ಹೊಗಳಿ, ಮುರಿದುಕಟ್ಟಿ, ಬದುಕಾಗಿಸಿಕೊಂಡು ಸಾಹಿತ್ಯ ಸೇವೆ ಮಾಡಿರುವ ಮಹತ್ವದ ವ್ಯಕ್ತಿತ್ವಗಳನ್ನು ನಾವು ಸಾಹಿತ್ಯ ಕ್ಷೇತ್ರದಲ್ಲಿ ಕಂಡಿದ್ದೇವೆ. ಸಾಹಿತ್ಯದ ಪ್ರಾಚೀನತೆಯ ನೆರಳಲ್ಲಿ ಚರ್ಚಿತವಾದ ವಿಷಯಗಳು, ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಹೊಸ ರೂಪ ಪಡೆದುಕೊಂಡ ಸಾಹಿತ್ಯ ಪ್ರಕಾರಗಳು ನಮ್ಮ ಮುಂದಿವೆ. ಈ ನಿಟ್ಟಿನಲಿ ಆಧುನಿಕ ಕನ್ನಡ ಸಾಹಿತ್ಯದ ಪ್ರಾರಂಭಿಕ ಚಿಂತಕರಾಗಿ ಹೊಸ ನೆಲೆಗೆ ತುಡಿದ ಸಾಹಿತಿಯಾಗಿ ಮುದ್ದಣ ಕವಿ ನಮಗೆ ಕಾಣಿಸುತ್ತಾರೆ. ಅವರ ವಸ್ತು ಚಿಂತನೆ ಹಾಗೂ ನಿರೂಪಣಾ ಶೈಲಿ ಇಂದಿಗೂ ಕನ್ನಡಿಗರ ಮನಸಲ್ಲಿ ಅಚ್ಚಳಿಯದೇ ಉಳಿಯಲು ಕಾರಣವಾಗಿವೆ. ಕ್ರಿಸ್ತು ಜಯಂತಿ ಕಾಲೇಜು ಈ ವರ್ಷ ಮುದ್ದಣ್ಣನ ಸಾಹಿತ್ಯ ಚಿಂತನೆ ಮಾಡಿದುದ್ದಕ್ಕೆ ಸಂತಸ ವ್ಯಕ್ತಪಡಿಸುತ್ತದೆ. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ನಾಡಿನಾದ್ಯಂತ ಸಾಹಿತ್ಯಾಸಕ್ತರನ್ನು ಮುದ್ದಣನವರ ಸಾಹಿತ್ಯ ಚಿಂತನೆಯ ಚಪ್ಪರದಡಿಗೆ ಸೇರಿಸಿ ಅವರ ಕೃತಿಗಳನ್ನು ಚರ್ಚಿಸುವಂತಹ ಮಹತ್ತರ ಕೆಲಸವನ್ನು ಮಾಡಿದೆ. ಅಲ್ಲಿ ಚಿಂತನೆ ಒಳಗಾದ ವಿಚಾರಗಳನ್ನು ಲೇಖನಗಳ ರೂಪದಲ್ಲಿ ಹೊರತರುತ್ತಿರುವುದು ಅತ್ಯಂತ ಸಂಭ್ರಮದ ಸಂಗತಿ. ಈ ಸಂಪಾದನಾ ಕೃತಿಯ ವಿವಿಧ ಲೇಖಕರು ಹಾಗೂ ವಿಷಯಗಳು 1. ಮುದ್ದಣ ಎಂಬ ಲಕ್ಷ್ಮೀ ನಾರಾಯಣಯ್ಯ - ಡಾ. ಪಾದೇಕಲ್ಲು ವಿಷ್ಣುಭಟ್ಟ 2. ಮುದ್ದಣನ ಸಾಹಿತ್ಯದ ವಸ್ತು ಮತ್ತು ತಂತ್ರ - ಸೈಯದ್ ಮುಯಿನ್ 3. ಮುದ್ದಣ ಮತ್ತು ಐತಿಹಾಸಿಕತೆ – ಡಾ. ಸೀತಾರಾಮ್ ಪಿ. 4. ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದ ರಸಸೇತುವೆ – ಮುದ್ದಣ - ಡಾ. ಸುಮ ಆರ್. 5. ಕನ್ನಡ ನವೋದಯದ ಮುಂಜಾನೆ ಕೋಳಿ : ಮುದ್ದಣ - ಮಹೇಶ್ ಎಂ. 6. ಮುದ್ದಣನ ಸಂಕ್ಷಿಪ್ತ ಸಾಹಿತ್ಯ - ಡಾ. ಸಿ. ಎಸ್ ಪ್ರಕಾಶ 7. ಮುದ್ದಣನ ಕಾವ್ಯ ಮೀಮಾಂಸೆ - ಡಾ. ಬಿ.ಎ. ಅನ್ನದಾನೇಶ್ 8. ಹೊಸಗನ್ನಡ ಸಾಹಿತ್ಯದ ಮುಂಗೋಳಿ – ಮುದ್ದಣ - ಮೀನಾಕ್ಷಿ 9. ಮುದ್ದಣನ ಯಕ್ಷಗಾನ ಸಾಹಿತ್ಯ ಸೌರಭ ಹೃದಯವಂತಿಕೆ ಹಾಗೂ ಭಾವಪೂರ್ಣತೆ - ಡಾ. ಶೀಲಾದೇವಿ ಎಸ್. ಮಳೀಮಠ 10. ಮುದ್ದಣನ ಯಕ್ಷಗಾನ ಪ್ರಸಂಗಗಳು: ಒಂದು ವಿಶ್ಲೇಷಣೆ - ಡಾ. ನೂರಂದಪ್ಪ 11. ಮುದ್ದಣ ಕವಿಯ ಯಕ್ಷಗಾನ ಪ್ರಸಂಗಗಳು - ಶ್ರೀಶ ಕುಮಾರ ಪಂಜಿತ್ತಡ್ಕ 12. ರಾಮಕಥಾಧಾರಿತ ಮುದ್ದಣನ ಕೃತಿಗಳು - ಡಾ. ನಾಗರಾಜ ಹೊಸೂರಕರ್ 13. ರಾಮಾಶ್ವಮೇಧದ ವಸ್ತು ಮತ್ತು ವರ್ಣನೆ - ಪ್ರೊ. ಚಂದ್ರಶೇಖರ್. ಎನ್. 14. ಹೊಸಗನ್ನಡ ಸಾಹಿತ್ಯ : ರಾಮಾಶ್ವಮೇಧ - ಉಷಾ ಜಿ. ಎನ್ 15. ಮುದ್ದಣನ ರಾಮಾಶ್ವಮೇಧದ ಒಂದು ನೋಟ - ಡಾ. ಮಮತ ಎಲ್. ಆಲಮೇಲ 16. ಮನೋರಮೆಯೆಂಬ ಸಹೃದಯ ಚಿಂತನೆ – ಡಾ. ರವಿಶಂಕರ್ ಎ.ಕೆ. 17. ಮುದ್ದಣ – ಮನೋರಮೆಯರ ಸಂವಾದದಲ್ಲಿ ಹೊಸಗನ್ನಡ ಸಾಹಿತ್ಯದ ರೂಪುರೇಷೆಗಳು - ಮಮತ ಸಿ ಎಚ್ 18. ನಂದಳಿಕೆ ಲಕ್ಷ್ಮೀ ನಾರಾಯಣಪ್ಪ ಮತ್ತು ಶ್ರೀರಾಮಾಶ್ವಮೇಧಂ - ಪ್ರೊ. ರೇಣುಕಮ್ಮ ಜೆ. 19. ಮುದ್ದಣನ ಸಪ್ತಾಕ್ಷರಿ ಮಂತ್ರ - ಡಾ. ಪ್ರೀತಿ ಎ. ಎಂ. 20. ಮುದ್ದಣನ ರಾಮಾಶ್ವಮೇಧದಲ್ಲಿ ಸೀತೆ - ಶ್ರೀಮತಿ ವೀಣಾ ಆರ್.
©2024 Book Brahma Private Limited.