'ಕನ್ನಡ ಬಂಡಾಯ ಸಾಹಿತ್ಯ’ ಕೃತಿಯು ಸರಜೂ ಕಾಟ್ಕರ್ ಅವರ ಸಂಪಾದಿತ ಲೇಖನ ಸಂಕಲನವಾಗಿದೆ. ಬದುಕು ಹಸನಾಗಬೇಕು ಎಂಬ ಆಶಯದೊಂದಿಗೆ ಜನ್ಮ ತಾಳಿದ ಸಾಹಿತ್ಯವೇ ಬಂಡಾಯ ಸಾಹಿತ್ಯ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪ್ರವೃತ್ತಿ, ಜನಪರ ವ್ಯವಸ್ಥೆ ಕಟ್ಟಲು ಮುಂದಾಗುವ ಹಂಬಲ ಮನುಷ್ಯನನ್ನು ಸಹಜವಾಗಿಯೇ ಬಂಡಾಯ ಏಳುವಂತೆ ಮಾಡುತ್ತದೆ. ಹೋರಾಟ-ಬದುಕು-ಬರಹಗಳ ಅನ್ಯನತೆ ಹೊಂದಿರುವ ಬಂಡಾಯ ಸಾಹಿತ್ಯ ಕಾಲಕ್ರಮೇಣ ಸಾಂಸ್ಕೃತಿಕ ಚಳವಳಿಯಾಗಿ ರೂಪುಗೊಂಡ ಬಗೆಯನ್ನು ಇಲ್ಲಿ ವಿವರಿಸಲಾಗಿದೆ.
ಒಂದು ಕಾಲದಲ್ಲಿ ಬಂಡಾಯದವರೆಂದರೆ ಪರಂಪರೆಯ ವಿರೋಧಿಗಳೆಂದು ಬಿಂಬಿತರಾಗಿದ್ದರು. ಆದರೆ ಅವರು ನಿಜವಾಗಿ ಸ್ಥಗಿತ ಸಂಪ್ರದಾಯದ ವಿರೋಧಿಗಳು ಎಂಬುದು ಕೃತಿಯಲ್ಲಿ ಸ್ಪಷ್ಟವಾಗುತ್ತದೆ. ಜಾತಿ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆಗಳ ಮಧ್ಯೆ ಕಾಯಕಕ್ಕೆ ಕೊಟ್ಟ ಮಹತ್ವ ನುಡಿರೂಪದಲ್ಲಿ ವ್ಯಕ್ತವಾದುದೇ ಬಂಡಾಯ ಸಾಹಿತ್ಯ ಎಂದು ಕಾಟ್ಕರ್ ಇಲ್ಲಿ ತಿಳಿಸಿದ್ದಾರೆ. ಶೋಷಿತರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಈ ಸಾಹಿತ್ಯ ಹೇಗೆ ಪ್ರೇರಣೆಯಾಯಿತು, ಕನ್ನಡ ಬಂಡಾಯ ಸಾಹಿತ್ಯ ಸಾಮಾಜಿಕ ವ್ಯವಸ್ಥೆಯನ್ನು ಬೆತ್ತಲೆಗೊಳಿಸಿದ ಅಸಾಧಾರಣ ಸಾಧನ ಎಂಬುದಕ್ಕೆ ಇಲ್ಲಿ ಸಾಕಷ್ಟು ನಿದರ್ಶನಗಳನ್ನು ಅವರು ಕೊಟ್ಟಿದ್ದಾರೆ. ಎಡಪಂಥೀಯ ಸಿದ್ಧಾಂತಗಳು ಬಂಡಾಯ ಸಾಹಿತ್ಯದ ಮೇಲೆ ಹೇಗೆ ಪ್ರಭಾವ ಬೀರಿದವು. ಮಾರ್ಕ್ಸ್‌ವಾದ,ಲೋಹಿಯಾ ವಾದ, ಅಂಬೇಡ್ಕರ್ ವಾದ ಹೇಗೆ ಬಂಡಾಯ ದಲಿತ ಸಾಹಿತ್ಯಕ್ಕೆ ಪುಷ್ಟಿ /ಬರಹಗಾರರಿಗೆ ಪ್ರೇರಣೆ ನೀಡಿದವು ಎಂಬುದನ್ನು ಇಲ್ಲಿ ಸಮರ್ಪಕವಾಗಿ ಕಲೆಹಾಕಲಾಗಿದೆ. ಇನ್ನು ಪತ್ರಿಕೆಗಳು ಈ ಸಾಹಿತ್ಯವನ್ನು ಬೆಳೆಸಿದರ ಬಗ್ಗೆಯೂ ಇಲ್ಲಿ ವಿವರವಿದೆ.
ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...
READ MOREವಿಮರ್ಶೆ (ಡಿಸೆಂಬರ್ 2013- ಹೊಸತು)
ಬಂಡಾಯ ಸಾಹಿತ್ಯ ಯಾರಿಗಾಗಿ ಸೃಷ್ಟಿಯಾಗುತ್ತದೆ ? ದಲಿತರ ಸಂಕಟಗಳನ್ನು ಮೇಲ್ವರ್ಗ ಅರ್ಥೈಸಿಕೊಂಡು ಶೋಷಣೆಯನ್ನು ನಿಲ್ಲಿಸಿ ಸಮಾನತೆ ಕಡೆಗೆ ಚಲಿಸಲೆಂದೇ ? ಅಥವಾ ಶೋಷಿತರಾಗಿದ್ದುಕೊಂಡು ಎಲ್ಲವನ್ನೂ ಸಹಿಸುತ್ತ ಹೀನ- ದೀನ ಬಾಳನ್ನು ಬಾಳುವವರು ಎಚ್ಚೆತ್ತುಕೊಳ್ಳಲೆಂದೇ ? ಮೊದಲನೆಯದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲವಾದರೂ ಎರಡನೆಯದನ್ನು ಖಂಡಿತ ಸಾಧ್ಯವಾಗಿಸಬಹುದು. ಬಂಡಾಯ ಸಾಹಿತ್ಯಗಳಿಂದಾಯ್ದ ಕಾವ್ಯ , ಕಥೆ, ಕಾದಂಬರಿ, ನಾಟಕಗಳು ಇಲ್ಲಿ ಸಂಗ್ರಹಗೊಂಡಿವೆ. ಬಂಡಾಯದ ಕಹಳೆ ಊದಿ ಪ್ರತಿಭಟನೆ ತೋರಿದ್ದರಿಂದ ಹಲವು ಬದಲಾವಣೆಗಳಾದ್ದಂತೂ ನಿಜ. ಎಲ್ಲ ಹಂತಗಳಲ್ಲೂ ಸ್ವಲ್ಪಮಟ್ಟಿಗೆ ಶೋಷಣೆ ಹಿಮ್ಮೆಟ್ಟಿ ಉಸಿರಾಡು ವಂತಾಗಿದ್ದು ಸ್ವಾಗತಾರ್ಹ . ಅತ್ಯುತ್ಸಾಹದಿಂದ ಹಲವಾರು ಬದಲಾವಣೆಗಳು ಆಗಿ ಸಮಾನತೆಯ ಕಡೆಗೆ ಹೆಜ್ಜೆ ಹಾಕುವ ಎಲ್ಲ ಪ್ರಯತ್ನ ನಡೆದು ಹೊಸ ಆಂದೋಲನವನ್ನೇ ಹುಟ್ಟುಹಾಕಲಾಗಿತ್ತು. ಅಂದು ಮೂಡಿಬಂದ ಎಲ್ಲ ಬಂಡಾಯ ಸಾಹಿತ್ಯವೂ ದಲಿತಪರ ದನಿಯೆತ್ತಿತ್ತು. ಈ ಹಂತದಲ್ಲಿ ಹೋರಾಟದ ಫಲವಾಗಿ ದಲಿತ ಸಾಹಿತ್ಯಕ್ಕೆ ಮಾನ್ಯತೆ ದೊರೆತು ಪ್ರಶಸ್ತಿ ಪುರಸ್ಕಾರಗಳು ದೊರೆತು ಇದುವರೆಗೆ ಪಟ್ಟ ಶ್ರಮವೆಲ್ಲಾ ಸಾರ್ಥಕವೆಂದು ಭಾವಿಸಲಾಯ್ತು. ಹೀಗೆ ಸುಮಾರು ೩೦ - ೩೫ ವರ್ಷಗಳಿಂದೀಚೆಗೆ ಸೃಷ್ಟಿಯಾದ ಸಾಹಿತ್ಯ ಯಾವುದೋ ಸಂಕಲನದಲ್ಲಿ ಸೇರಿಕೊಂಡಿದ್ದು ಓದುಗನಿಗೆ ಈ ಕೃತಿಯ ಮೂಲಕ ಒಂದು ಕಡೆ ಲಭಿಸುವಂತಾಗಿದೆ. ಬಂಡಾಯ ಸಾಹಿತ್ಯದ ಮೂಲಕ ಮರ್ದಿತ ಜನರ ದುಃಖ , ಬೇಗುದಿಯೆಲ್ಲ ಮನದಂತರಾಳದಿಂದ ಹೊರಬಂದು ಧುಮ್ಮಿಕ್ಕಿ ಹರಿದಿದೆ. ಬಂಡಾಯ ಧ್ವನಿ ಕಳೆದುಕೊಂಡಿದೆ ಎಂಬ ಇಂದಿನ ವ್ಯಾಖ್ಯಾನಕ್ಕೆ ಮತ್ತೆ ಕಾಯಕಲ್ಪ ನೀಡುವಲ್ಲಿ ಒಂದು ಹೆಜ್ಜೆ ಈ ಸಂಕಲನ. ಅಲ್ಲದೆ ಇವು ದಲಿತರು ಇದುವರೆಗೆ ಬಾಳಿದ ಒಂದು ನಿಕೃಷ್ಟ ಬದುಕನ್ನು ಇಂದಿನ - ಮುಂದಿನ ಜನರಿಗೆ ತಿಳಿಸುವ ಕಾರ್ಯವನ್ನೂ ಮಾಡುತ್ತವೆ.
--