“ನೆಲದ ಬೆಳಕು” ಡಾ. ಶ್ರೀಶೈಲ ಗೋಲಗೊಂಡ ಅವರು ಲೇಖನ ಸಂಕಲನವಾಗಿದೆ. ಬಸವ ನಾಡಿನ ಈ ಕನ್ನೆ ನೆಲದಲ್ಲಿ ಹೊನ್ನ ಬಿತ್ತಿ ಬೆಳೆದದ್ದು ಈಗ ಇತಿಹಾಸ. ತಮ್ಮ ಬದುಕನ್ನು ಸಮಾಜಕ್ಕೆ ಸಮರ್ಪಿತಗೊಳಿಸಿಕೊಂಡು ಕಿರು ಹಣತೆಯಂತೆ ಬೆಳಗಿದವರು ಅನೇಕರು. ನಾವೆಲ್ಲ ಆ ನೆಲದ ಬೆಳಕಿನ ಹಾದಿಯಲ್ಲಿ ಸಾಗುತ್ತಿದ್ದೇವೆ. ಈ ನೆಲದಲ್ಲಿ ಶೈಕ್ಷಣಿಕ ಕ್ರಾಂತಿಗೈದ ಗುರುಬಸವಾರ್ಯ ಮಠ ಗುರೂಜಿ ಆದಿಯಾಗಿ ಅನೇಕ ಗಣ್ಯರು ತಮ್ಮ ಬದುಕನ್ನು ಸಮಾಜೋದ್ಧಾರಕ ಕಾರ್ಯಗಳಿಗೆ ಸವೆಸಿದ್ದಾರೆ. ಒಂದು ವೇಳೆ ಈ ಮಹನೀಯರೆಲ್ಲ ಸಮಾಜಮುಖಿಯಾಗಿ ಸಾಗದಿದ್ದರೆ ಈ ಭಾಗ ತಮಂಧದಿಂದ ಮುಚ್ಚಿ ಹೋಗುತ್ತಿತ್ತೇನೋ! ನಮ್ಮ ಬದುಕಿಗೆ ಇತಿಹಾಸ, ಪರಂಪರೆಯ ಬೆಳಕಿರಬೇಕು. ಆ ಹೊಸ ಬೆಳಕಿನಲ್ಲಿ ಆಧುನಿಕತೆಯನ್ನು ಇಟ್ಟು ಬೆಳಗುವಂತೆ ಮಾಡಬೇಕು; ಅದು ಸಮಾಕಾಲೀನ ಪ್ರಾಜ್ಞರ ಕರ್ತವ್ಯ. ನಮ್ಮ ನೆಲದ ಅನೇಕ ಸಾಧಕರ ನುಡಿಚಿತ್ರಗಳ ಒಟ್ಟಂದವೆ ಈ ನೆಲದ ಬೆಳಕು ಕೃತಿ. ಮೂಲತಃ ಆಂಗ್ಲಭಾಷಾ ಪ್ರಾಧ್ಯಾಪಕರಾದ ಡಾ. ಶ್ರೀಶೈಲ ಗೋಲಗೊಂಡ ಅವರು ಇಂತಹ ಬರಹಗಳಲ್ಲಿಯೂ ಉತ್ತಮ ಗತಿಯನ್ನು ಮೆರೆದಿದ್ದಾರೆ. ಕೃತಿಯ ಸೊಗಸಿಗೆ ಅವರ ಆಪ್ತವಾದ ಬರವಣಿಗೆ ಹದ ತಟ್ಟಿದೆ. ಈ ಪುಸ್ತಕ ಓದಿದೊಡನೆ ಒಂದು ಕಾಲಘಟ್ಟದ ಸಮಾಜಮುಖಿ ಚಿಂತನೆ ಮತ್ತು ಕಾರ್ಯಗಳ ಅಪ್ಯಾಯಮಾನವಾದ ಚಿತ್ರ ಕಣ್ಮುಂದೆ ಬಂದು ಹೋಗುತ್ತದೆ. ಇಲ್ಲಿನ ಲೇಖನಗಳು ವ್ಯಕ್ತಿ ಪರಿಚಯದ ಸಿದ್ಧಮಾದರಿಗಳನ್ನು ಮೀರಿ ಆಪ್ತ ನಿರೂಪಣೆಯ ಗತಿಯನ್ನು ರೂಢಿಸಿಕೊಂಡಿವೆ. ಇಂತಹ ನುಡಿಚಿತ್ರಗಳು ಪ್ರಕಟಗೊಳ್ಳುವ ಮೂಲಕ ಸ್ಥಳೀಯ ಸಾಧಕರ ಸಾಧನೆಯನ್ನು ನಾಡಿಗೆಲ್ಲ ಪರಿಚಯಿಸಿದಂತಾಗುತ್ತದೆ.
ಡಾ. ಶ್ರೀಶೈಲ ಗೋಲಗೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳದವರು. 1970 ಜುಲೈ 25ರಂದು ಇವರ ಜನನ. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರೋಣಿಹಾಳದಲ್ಲಿ, ಕೊಲ್ಹಾರದ ಸಂಗಮೇಶ್ವರದಲ್ಲಿ ಪಿ.ಯು, ವಿಜಯಪುರದ ಎಸ್.ಬಿ. ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಮತ್ತು 1993ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕೆಲವು ವರ್ಷ ಇಲಕಲ್ಲ, ಹುನಗುಂದ ಮಹಾ ವಿದ್ಯಾಲಯಗಳು ಮತ್ತು ಸಿ.ವಿ.ಚರಂತಿಮಠ ರೂರಲ್ ಪಾಲಿಟೆಕ್ನಿಕ್‌ದಲ್ಲಿ ತಾತ್ಕಾಲಿಕ ಇಂಗ್ಲಿಷ್ ಉಪನ್ಯಾಸಕರಾಗಿ, 2005ರಲ್ಲಿ ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಕೃಪಾಪೋಷಿತ ಸಂಗನಬಸಯ್ಯ ರಾಚಯ್ಯ ವಸ್ತ್ರದ, ...
READ MORE