‘ಭಾರತೀಯ ಮಹಿಳೆ ಮತ್ತು ವಿರಾಮ ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಕೃತಿಯು ವಿನತೆ ಶರ್ಮ ಅವರ ಅನುಭವ ಮತ್ತು ಚರ್ಚೆಯೊಳಗಿನ ಲೇಖನಗಳಾಗಿವೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಈ ಸಂಕಲನದಲ್ಲಿ 14 ಲೇಖನಗಳನ್ನು ಬರೆದಂತಹ 15 ಜನ ಮಹಿಳೆಯರು ಬೇರೆ ಬೇರೆ ವೃತ್ತಿಯವರು, ಬೇರೆ ಬೇರೆ ಊರಿನಲ್ಲಿ, ದೇಶಗಳಲ್ಲಿ ವಾಸಿಸುವವರು. ಬಿಡುವಿನ ಬಗ್ಗೆ ಸವಿಸ್ತಾರವಾಗಿ ತಮ್ಮ ಅನುಭವಗಳನ್ನು ಮತ್ತು ವಿರಾಮದ ಕುರಿತ ಗ್ರಹಿಕೆಯನ್ನು, ಅದರ ಬಗ್ಗೆ ನಡೆಸಿದ ಅಧ್ಯಯನವನ್ನು, ಆ ಕುರಿತು ತಮಗಿರುವ ಪ್ರಶ್ನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಸಾಮಾಜಿಕ ಕಾರ್ಯಕರ್ತೆಯರು, ಉಪನ್ಯಾಸಕಿಯರು, ವೈದ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಅಧ್ಯಯನಶೀಲರು, ಬರಹಗಾರರು, ಗೃಹಿಣಿಯರು ಮತ್ತು ಕಲಾವಿದರು, ಹೀಗೆ ವಿವಿಧ ವೃತ್ತಿಗಳಲ್ಲಿ ಕೆಲಸ ಮಾಡುವವರ ವಿವಿಧ ಅನುಭವಗಳು ದಾಖಲಾಗಿರುವುದು ವಿಶೇಷ. ಕೆಲವು ಪದಗಳು ಅನೇಕ ಪಕಳೆಗಳಿರುವ ಹೂವಿನಂತೆ. ಆಘ್ರಾಣಿಸಿದಷ್ಟೂ ಆಹ್ಲಾದಕರ, ಹೊಸ ಸಂವೇದನೆಗಳಿಗೆ ದಾರಿ. ʻವಿರಾಮʼ ಅಂತಹದೊಂದು ಪದ. ಅದಕ್ಕೆ ʻಮಹಿಳೆʼ ಅದರಲ್ಲೂ ʻಭಾರತೀಯ ಮಹಿಳೆʼ ಎಂಬ ಮೊಗ್ಗುಗಳನ್ನು ಜೋಡಿಸಿದರೆ, ಅದು ಹೊಸದೊಂದು ಅಪರೂಪದ ಮಾಲೆಯೇ ಸರಿ. ಈ ಸಂಕಲನದ ಲೇಖಕರು ಈ ಮಾಲೆಯನ್ನು ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಿಸುತ್ತಾ, ಅದರ ಹತ್ತುಹಲವು ಮುಖಗಳ ಪರಿಚಯ ಮಾಡಿಕೊಡುವ ವಿಧಾನಗಳು ಮನಸೆಳೆಯುತ್ತವೆ. ಬೇರೆಬೇರೆ ವಯಸ್ಸಿನ, ಕಾಲಮಾನಗಳ, ಸಾಮಾಜಿಕ/ಆರ್ಥಿಕ ಸ್ತರಗಳ ಅನುಭವಗಳು ಇಲ್ಲಿ ಕಥಾನಕಗಳಾಗಿ ಬಿಚ್ಚಿಕೊಳ್ಳುತ್ತವೆ. ಅವುಗಳೊಂದಿಗೆ ಲೇಖಕರ ಸ್ವಗತ, ಅತ್ಮಾವಲೋಕನ, ಅವರು ಸ್ವತಃ ಜೀವನದ ತಿರುವುಗಳಲ್ಲಿ ʻವಿರಾಮʼವನ್ನು ಅರ್ಥೈಸಿಕೊಂಡ ಪರಿ, ಇವೆಲ್ಲವೂ ಪದರಪದರವಾಗಿ ಕಣ್ಣ ಮುಂದೆ ಬರುತ್ತವೆ. ಇಲ್ಲಿ ವ್ಯಕ್ತಿಗತವಾದ/ವೈಯಕ್ತಿಕ ನಿರ್ಣಯದ ಹಕ್ಕು, ಬದುಕಿನಲ್ಲಿ ಸ್ಥಳ-ಅವಕಾಶಗಳನ್ನು ಗಳಿಸುವ ಶಕ್ತಿ, ಸೃಜನತೆಯ ಹೊಸ ಸಾಧ್ಯತೆಗಳ ಪರಿಚಯ, ಜೀವನೋತ್ಸಾಹ, ಇವೆಲ್ಲಕ್ಕೂ, ʻವಿರಾಮʼಕ್ಕೂ ನಿಕಟ ಸಂಬಂಧವಿದೆ. ಭಾರತದಲ್ಲಿನ ಮಹಿಳೆಯರನೇಕರಿಗೆ ಮೇಲಿನದೆಲ್ಲಕ್ಕೂ ಅಂಕುಶ/ಲಗಾಮು ಇರುವುದು ಅವರ ವಿರಾಮದ ಮೇಲೆ ಗಾಢ ಪರಿಣಾಮ ಬೀರುವ ಬಗ್ಗೆ ವಿಶ್ಲೇಷಣೆಗಳಿವೆ.
ಲೇಖಕಿ ವಿನತೆ ಶರ್ಮ ಅವರು ಅನಿವಾಸಿ ಬಳಗದ ಬರಹಗಾರರು. ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಪತ್ರಿಕೋದ್ಯಮ, ಸೈಕಾಲಜಿ ಹಾಗೂ ಇಂಗ್ಲಿಷ್ ಸಾಹಿತ್ಯ ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಲ್ಲಿ ಮನಶ್ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುತ್ತಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವಿನತೆಯವರು ವೃತ್ತಿಯಲ್ಲಿ ಶಿಕ್ಷಣ, ಮನಶ್ಶಾಸ್ತ್ರ ಹಾಗೂ ಪರಿಸರ ತಜ್ಞೆ.ಏಕ್ಷನೇಬಲ್ ಲಿವಿಂಗ್ ಟ್ರಸ್ಟ್ ನ ಸ್ಥಾಪಕ ನಿರ್ದೇಶಕಿಯಾಗಿರುವ ಅವರು ಆರ್ಥಿಕ ಸ್ವಾವಲಂಬನೆ, ನಾಗರಿಕ ಹಕ್ಕುಗಳು ಹಾಗೂ ಸಾಮಾಜಿಕ ಸುಧಾರಣೆ, ಶಿಕ್ಷಣ, ಪರಿಸರ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಭಾರತೀಯ ಮಹಿಳೆ ಮತ್ತು ವಿರಾಮ ಕೆಲವು ಮುಖಗಳು ...
READ MORE