ಜಾತ್ರೆಗಳಲ್ಲಿ `ನಗಿಸುವ ಕನ್ನಡಿ’ ಎಂದು ನಿಮ್ನಪೀನಾದಿ ಕನ್ನಡಿಗಳನ್ನಿಟ್ಟು ನಮ್ಮನ್ನೇ ನಾವು ಹೊಸ ರೂಪದಲ್ಲಿ ನೋಡಿಕೊಳ್ಳುವಂತೆ ಮಾಡುತ್ತಾರಲ್ಲವೇ, ಹಾಗೆಯೇ ಈ ಪುಸ್ತಕದಲ್ಲಿನ ಬರಹಗಳು ಜಗತ್ತನ್ನು ನಮಗೆ ಹಲಬಗೆಯ ಕಿಟಕಿ, ಕನ್ನಡಿ, ಮಸೂರಗಳ ಮುಖಾಂತರ ಕಾಣಿಸುತ್ತವೆ. ಇಲ್ಲಿರುವ ದೀರ್ಘ ಲೇಖನಗಳಲ್ಲಿ ರಸಾಯನ ಶಾಸ್ತ್ರದಿಂದ ರಸಸಿದ್ಧಾಂತದವರೆಗೆ, ರಾಜಕೀಯದಿಂದ ದರ್ಶನದವರೆಗೆ ಹಲವು ಕನ್ನಡಿಗಳಿದ್ದರೆ ಸಣ್ಣ ಲೇಖನಗಳಲ್ಲಿ ಒಂದೋ ಎರಡೋ ಕನ್ನಡಿಗಳು ಮಾತ್ರ ಕಾಣುತ್ತವೆ. ದೀರ್ಘ-ಹೃಸ್ವ ಲೇಖನಗಳ ನಡುವೆ ಇರುವ ವ್ಯತ್ಯಾಸ ವ್ಯಾಪ್ತಿಯಲ್ಲಿಯೇ ಹೊರತು ಗುಣದಲ್ಲಲ್ಲ. ಆಧುನಿಕೋತ್ತರವಾದದ ಅಂಚಿಗೆ ಕರೆದೊಯ್ದು ಕೆಲಕಾಲ ನಿಲ್ಲಿಸಿ ಅಲ್ಲಿಂದ ಅದಲ್ಲದ ಮತ್ತಾವುದೋ ದಾರಿಯಲ್ಲಿ ಹಿಂತಿರುಗಿ ಕರೆತರುವ ಅಕ್ಷರ ಅವರು ತಮ್ಮದೇ ಆದ ದರ್ಪಣವೊಂದರ ಮುಖಾಂತರ ಜಗತ್ತನ್ನು ನೋಡುತ್ತಿದ್ದಾರೆ ಅನ್ನಿಸುವ ಹೊತ್ತಿಗೇ ನಮ್ಮ ನಮ್ಮ ದರ್ಪಣಗಳ ಕುರಿತು ಓದುಗರಾದ ನಾವೂ ಎಚ್ಚರವಾಗಿರುವಂತೆ ಮಾಡುತ್ತದೆ ಎಂದು ಮಾಧವ ಚಿಪ್ಪಳಿ ಅವರು ಪುಸ್ತಕದ ಬಗ್ಗೆ ತಿಳಿಸಿದ್ದಾರೆ.
ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ. ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...
READ MORE