ಅವಳೆಂಬ ಸುಗಂಧ ಕೃತಿಯು ಲೇಖನಗಳ ಸಂಗ್ರಹವಾಗಿದ್ದು, ಲೇಖಕಿ ಶೋಭಾ ಹೆಗಡೆ ಅವರಿಂದ ರಚಿತವಾಗಿದೆ. ಹಳ್ಳಿ ಬದುಕಿನ ಹೊಳಪಿಗೆ ಕನ್ನಡಿ ಹಿಡಿದ ಈ ಕೃತಿಯಲ್ಲಿ ಪ್ರೊ. ಭುವನೇಶ್ವರಿ ಹೆಗಡೆ ಅವರ ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, "ಪ್ರಾಫಿಟ್ ಪ್ಲಸ್"ನಲ್ಲಿ ಶೋಭಾ ಹೆಗಡೆಯವರ ಬರಹಗಳನ್ನು ಓದುತ್ತಿದ್ದಾಗಲೇ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ತೋಟದ ನಡುವಿನ ಬದುಕನ್ನು ಎಷ್ಟು ಚಂದದಲ್ಲಿ ಅನಾವರಣ ಮಾಡಿದ್ದಾಳೆ ಎನ್ನಿಸುತ್ತಿತ್ತು. ನಾನು ಕಂಡುಂಡು ಮನಸಾ ಅನುಭವಿಸಿದ ಬದುಕನ್ನೇ ಈಕೆ ಕಂಡರಿಸಿದ ಬಗ್ಗೆ ವಿಭಿನ್ನ ಮಾದರಿ ವಿಸ್ಮಯವನ್ನು ಹುಟ್ಟಿಸಿಯೂ ಇತ್ತು. ಈಗ ಈ ಬರಹಗಳ ಕಟ್ಟು ಮುನ್ನುಡಿಗಾಗಿ ನನ್ನ ಬಳಿಯೇ ಬಂದಿದೆ! ಈ ಕೃತಿಯೊಳಗೆ ಹುದುಗಿರುವ ಅನೇಕಾನೇಕ ಹಿರಿಯರು, ಮಹಿಳೆಯರು, ಯುವಕಯುವತಿಯರೆಲ್ಲ ತಮ್ಮ ವೈಶಿಷ್ಟö್ಯಗಳೊಂದಿಗೆ ಸ್ವಾರಸ್ಯಕರ ಸ್ವಭಾವಗಳೊಂದಿಗೆ ನನಗೆ ಮುಖಾಮುಖಿಯಾಗಿದ್ದಾರೆ. ಒಂದು ಅನಿರ್ವಚನೀಯ ಸಂತೋಷದ ಅನುಭವ ಇದು. ಈ ಕಾರಣಕ್ಕಾಗಿ ಶೋಭಾರ ಕೃತಿಗೆ ಮುನ್ನಡಿ ರೂಪದಲ್ಲಿ ನಾಲ್ಕು ಮಾತು ಬರೆಯುವುದು ನನ್ನ ಸಂತೋಷದ ಕರ್ತವ್ಯ ಎಂದೇ ಭಾವಿಸಿದ್ದೇನೆ. ಈ ಕೃತಿಯನ್ನು ಸಾಹಿತ್ಯಿಕ ಮಾನದಂಡಗಳಿಂದ ಅಳೆಯ ಹೊರಟರೆ ತಾಂತ್ರಿಕ ಚಮತ್ಕಾರಗಾಳಗಲಿ, ಅಲಂಕಾರಿಕ ವರ್ಣನೆಗಳಾಗಲಿ, ನೀತಿ ಬೋಧನೆಯ ಭಾರವಾಗಲಿ ಇಲ್ಲದ ಸಾದಾ ಸರಳ ಕೃತಿಯೇನೋ ಅನ್ನಿಸುವ ಸಾಧ್ಯತೆ ಇದೆ. ಆದರೆ ಅದಕ್ಕೆ ಮೊದಲೇ ಈ ಬರಹಗಳು ಕಟ್ಟಿಕೊಡುವ ಮಲೆನಾಡಿನ ಹಳ್ಳಿಗಳ ಪ್ರಾಕೃತಿಕ ಸಮೃದ್ಧಿಯ ನಡುವೆ ಅರಳಿದ ಮನುಷ್ಯ ಸ್ವಭಾವದ ಮುಗ್ಧತೆ, ಧಾರಾಳತೆ ಹಾಗು ಸಂಪನ್ನತೆಗಳು ನಮ್ಮನ್ನು ಮಂತ್ರ ಮುಗ್ಧಗೊಳಿಸಿ ಬಿಡುತ್ತವೆ. ಹೀಗೂ ಒಂದು ಹಸಿರಿನ, ತಂಪಾದ ಸಾರ್ಥಕ ಬದುಕು ಇರಲು ಸಾಧ್ಯವೇ? ಎಂದು ವಿಸ್ಮಯವಾಗದಿರದು ಎಂಬುದಾಗಿ ಹೇಳಿದ್ದಾರೆ.
ಶೋಭಾ ಹೆಗಡೆ ಅವರು ಹುಟ್ಟಿ ಬೆಳೆದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತುಂಬೆಮನೆಯಲ್ಲಿ. ಎಳವೆಯಲ್ಲೇ ಸಾಂಸ್ಕೃತಿಕ ಮತ್ತು ಸಾಹಿತ್ಯ ವಾತಾವರಣದ ಪ್ರಭಾವ ಗಾಢವಾಗಿದ್ದರಿಂದ ಓದು ಮತ್ತು ಬರವಣಿಗೆ ಜೊತೆಯಲ್ಲೇ ಸಾಗುತ್ತ ಈಗ ಅಂಕಣಕಾರ್ತಿ ಹಾಗೂ ಕಾದಂಬರಿಯಾಗಿ ಮೈದಳೆದಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಆಕಾಶವಾಣಿ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರೂಪಣೆ, ನಿರ್ವಹಣೆ ಮತ್ತು ಆಯೋಜನೆಯಲ್ಲಿ ತೊಡಗಿಕೊಂಡು, ನೇರಪ್ರಸಾರದ ಕಾರ್ಯಕ್ರಮ `ಓ ಸಖಿ'ಯನ್ನು ನಿರ್ವಹಿಸಿದ್ದಾರೆ. `ಬೆಳಕಿನಿಂದ ಕತ್ತಲಿನೆಡೆಗೆ' ಮತ್ತು `ಆತಿಥೇಯನಾದ ಅತಿಥಿ' ಎಂಬ ಎರಡು ಕಾದಂಬರಿಗಳು ಪ್ರಕಟವಾಗಿವೆ. `ಆತಿಥೇಯನಾದ ಅತಿಥಿ' ಮಿನಿ ಕಾದಂಬರಿಯು ತರಂಗ ವಾರಪತ್ರಿಕೆಯ ಮೆಚ್ಚುಗೆಯ ಬಹುಮಾನ ...
READ MORE