ಮನ್ವಂತರ

Author : ಲತಾ ಜಿ. ಕುಲಕರ್ಣಿ

Pages 95

₹ 80.00




Year of Publication: 2021
Published by: ನೆಮ್ಮದಿ ಪ್ರಕಾಶನ
Address: ಬನಶಂಕರಿ ನಿಲಯ, 4ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಜಯನಗರ ಪಶ್ಚಿಮ, ತುಮಕೂರು- 2
Phone: 9448250456

Synopsys

ಲೇಖಕಿ ಲತಾ ಜಿ. ಕುಲಕರ್ಣಿ ಅವರ ಆಯ್ದ ಲೇಖನಗಳ ಸಂಗ್ರಹ ಕೃತಿ ʻಮನ್ವಂತರʼ. ಇವರ ಪತಿ ಹಾಗೂ ಕವಿ ಜಿ.ಕೆ. ಕುಲಕರ್ಣಿ ಅವರು ಪತ್ನಿ ಬರೆದ ಭಾವ ಚಿಂತನಗಳನ್ನು ಕೃತಿರೂಪದಲ್ಲಿ ಪ್ರಕಟಿಸಿದ್ದಾರೆ. ಪುಸ್ತಕದ ಮುನ್ನುಡಿಯಲ್ಲಿ ತುಮಕೂರು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಗೀತಾ ವಸಂತ ಅವರು, “ಹೆಣ್ತನದ ಚೈತನ್ಯವು ಎಂದೂ ಬತ್ತದ ತೊರೆ. ಅದು ಹೃದಯದಿಂದ ಹೃದಯಕ್ಕೆ ದಾಟುತ್ತಾ ತನ್ನ ಸಂಪರ್ಕಕ್ಕೆ ಬಂದವರನ್ನೆಲ್ಲ ಚೈತನ್ಯಮಯಗೊಳಿಸುತ್ತದೆ. ಗಂಡಸು ಅವಕಾಶಗಳ ಬೆನ್ನುಹತ್ತಿ ತನ್ನ ಮಹತ್ವಾಕಾಂಕ್ಷೆಯ ಆಕಾಶವನ್ನು ಎಟುಕಿಸಿಕೊಳ್ಳಲು ಯತ್ನಿಸಿದರೆ, ಹೆಣ್ಣು ಇರುವ ಪುಟ್ಟ ಅವಕಾಶವನ್ನೇ ಆರ್ಥಪೂರ್ಣವಾಗಿ ಹಿಗ್ಗಿಸಿಕೊಂಡು ತಾನೂ ಹಿಗ್ಗಬಲ್ಲಳು. ತನ್ನ ಜೊತೆಯಿರುವವರಿಗೂ ಹಿಗ್ಗನ್ನು ಹಂಚಬಲ್ಲಳು. ಅದಕ್ಕೆಂದೇ ಗಂಡು ಆಕಾಶವಾಗಿ ತೋರಿದರೆ ಹೆಣ್ಣು ಭೂಮಿಯಾಗಿ ಕಾಣುತ್ತಾಳೆ. ಸರ್ಕಾರಿ ನೌಕರನಾದ ಗಂಡ ವರ್ಗವಾದಲ್ಲೆಲ್ಲಾ ಅವನ ಹಿಂದೆ ನಡೆಯುತ್ತಾ ಇರುವ ಊರುಗಳಲ್ಲೇ ಗೂಡುಕಟ್ಟುತ್ತಾ, ತುಂಬು ಜೀವನ ಪ್ರೀತಿಯಿಂದ ಬದುಕಿದ ಗೃಹಿಣಿಯೊಬ್ಬಳ ಒಳಗಣ್ಣು ಇಷ್ಟು ವಿಸ್ತಾರವಾಗಿರಬಹುದೆಂದು ತಿಳಿದಿರಲಿಲ್ಲ!. ಯಾಕೆಂದರೆ ಮನೆಯ ನಾಲ್ಕುಗೋಡೆಗಳ ನಡುವೆ ಬದುಕು ಸವೆಸುವ ಗೃಹಿಣಿಯರ ಲೋಕದೃಷ್ಟಿ ಹಿಗ್ಗಲಾರದೆಂದೇ ನಾವು ತಿಳಿದಿರುತ್ತೇವೆ. ಆದರೆ ವ್ಯವಹಾರಿಕ ಬದುಕಿನ ವಿಸ್ತಾರಕ್ಕಿಂತ ಭಾವನಾತ್ಮಕ ನೆಲೆಯ ಸಮೃದ್ಧತೆ ಬದುಕನ್ನು ಹೆಚ್ಚು ಶ್ರೀಮಂತಗೊಳಿಸುತ್ತದೆ. ಬದುಕನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಜಾಣ್ಮೆ ಹೆಣ್ಣಿನ ಸಹಜ ಕೌಶಲ. ಅವಳ ಒಳತಿಳಿವು ಹೊರಗಿನ ಮಾನದಂಡಗಳಿಂದ ಅಳೆಯಲಾಗದ್ದು. ಇಷ್ಟೆಲ್ಲ ಅನಿಸಿದ್ದು ಲತಾ. ಜಿ. ಕುಲಕರ್ಣಿಯವರ ಲೇಖನಗಳ ಸಂಗ್ರಹವನ್ನು ಓದಿದಾಗ. ಲತಾ ಅವರು ಬದುಕಿನ ಭಿನ್ನ ಸಂದರ್ಭಗಳಲ್ಲಿ ಬರೆದ ಚಿಕ್ಕ ಲೇಖನಗಳ ಗುಚ್ಛವಿದು. ಅಪಾರ ಜೀವಪರ ಕಳಕಳಿ, ಸಮತೋಲಿತ ಗ್ರಹಿಕೆ, ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುವ ತಹತಹ, ಜೀವನಪ್ರೀತಿ ಎಲ್ಲವೂ ಇಲ್ಲಿ ಹರಿಯುತ್ತಿವೆ. ಮುಕ್ತ ಮನಸ್ಸಿನ ಸರಳ ಹೆಣ್ಣುಮಗಳೊಬ್ಬಳ ಈ ಗ್ರಹಿಕೆಗಳು, ಸಮಾಜವು ತನ್ನ ಮೌಲ್ಯ ಮೀಮಾಂಸೆಯಾಗಿ, ನೈತಿಕ ಧಾರಣಶಕ್ತಿಯಾಗಿ ಸ್ವೀಕರಿಸಲು ಯೋಗ್ಯವಾಗಿವೆ. ಇಲ್ಲಿ 'ದುಬಾರಿ ದಿನಗಳಲ್ಲಿ ಸಂಸಾರ ನಿರ್ವಹಣೆ' ಎಂಬ ಲೇಖನವಿದೆ. ಸಣ್ಣ ಸಂಬಳದಲ್ಲಿ ಬದುಕುವ ಮಧ್ಯಮವರ್ಗದ ಮಹಿಳೆಯ ಜಾಣ್ಮೆ ಇಲ್ಲಿ ಅಕ್ಷರರೂಪ ತಾಳಿದೆ. ಎರಡು ಬಗೆಯ ಲಗಾಮುಗಳನ್ನು ಅವರು ಸೂಚಿಸುತ್ತಾರೆ. ಒಂದು, ವಸ್ತುಗಳ ಬಳಕೆಯಲ್ಲಿ ನಾವು ಎಲ್ಲೆಲ್ಲಿ ಪೋಲು ಮಾಡುತ್ತಿದ್ದೇವೆಂದು ಆರಿತುಕೊಂಡು ಉಳಿತಾಯ ಮಾಡುವುದು. ಇನ್ನೊಂದು ಮಾನಸಿಕ ಲಗಾಮು. ಇಂದಿನ ಸರಕು ಸಂಸ್ಕೃತಿ ಅಥವಾ ಕೊಳ್ಳುಬಾಕ ಸಂಸ್ಕೃತಿಯ ಲೋಭವನ್ನು ತ್ಯಜಿಸುವುದು, ಅವಶ್ಯವಿದ್ದಷ್ಟೇ ಖರೀದಿಸುವುದು, ಜಾಹೀರಾತುಗಳು ಸೃಷ್ಟಿಸುವ ಕೃತಕ ಅಗತ್ಯಗಳ ಕಲ್ಪನೆಯನ್ನು ನಿರಾಕರಿಸುವುದು. ವಾಹನ ಹಾಗೂ ಯಂತ್ರಗಳ ಕಡಿಮೆ ಬಳಕೆಯಿಂದ ಆರೋಗ್ಯವೂ ಸುಧಾರಿಸುತ್ತದೆ. ಖರ್ಚು ಉಳಿಸಬಹುದಾದ ಸಣ್ಣಸಣ್ಣ ಸೂಚನೆಗಳನ್ನು ಕೊಡುತ್ತಾ ಆರಂಭವಾದ ಲೇಖನವು ಆಧುನಿಕ ಬದುಕಿನ ತಲ್ಲಣಗಳನ್ನು ಸಂಯಮದಿಂದ ಎದುರಿಸುವ ದೃಷ್ಟಿಕೋನವನ್ನೇ ಕಟ್ಟಿಕೊಡುತ್ತದೆ. 'ಸುಖದ ಬೆನ್ನುಹತ್ತಿ' ಎಂಬ ಲೇಖನದಲ್ಲೂ ಇಂದಿನ ಅತೃಪ್ತ ಮನಸ್ಥಿತಿಗೆ ಮನೋಜ್ಞವಾದ ಪರಿಹಾರಗಳನ್ನು ಲೇಖಕಿ ಸೂಚಿಸಿದ್ದಾರೆ. ಪುರಂದರದಾಸರ “ಇಷ್ಟು ದೊರಕಿದರೆ ಇನ್ನಷ್ಟರಾಸೆ, ಇನ್ನಷ್ಟು ಸಿಕ್ಕರೆ ಮತ್ತಷ್ಟರಾಸೆ' ಎಂಬ ಮಾತುಗಳನ್ನು ತಮ್ಮದೇ ತಿಳಿವಿನಲ್ಲಿ ವಿಸ್ತರಿಸಿದ್ದಾರೆ. ವಿಜ್ಞಾನ ತಂತ್ರಜ್ಞಾನಗಳು ಬೆಳೆದಂತೆ ವಸ್ತು ಸೌಲಭ್ಯಗಳು ಹೆಚ್ಚಿದವೇ ಹೊರತೂ ನೆಮ್ಮದಿ ತೃಪ್ತಿಗಳು ಹೆಚ್ಚಲಿಲ್ಲ. ಮನುಷ್ಯನ ದೈಹಿಕ ಮಾನಸಿಕ ಕ್ಷಮತೆಗಳು ಕಡಿಮೆಯಾದವೇ ಹೊರತೂ ಹೆಚ್ಚಾಗಲಿಲ್ಲ. ಸದಾ ತಾನು ಅಸುಖಿಯೆಂಬ ಭಾವ ಹೊತ್ತು ನಡೆವ ಆಧುನಿಕ ಮನುಷ್ಯರ ಮನೋಲೋಕಕ್ಕೆ ಲೇಖನವು ಕನ್ನಡಿ ಹಿಡಿದಿದೆ. ಬೇರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಂಡು ನರಳುವ ನಮಗೆ ನಮ್ಮ ಸಾಕ್ಷಾತ್ಕಾರವಾಗುವುದೇ ಇಲ್ಲ. ಮಾಡುವ ಕೆಲಸದಲ್ಲಿ ನಿಷ್ಟೆ, ಪ್ರೀತಿ ಹಂಚುವ, ನಂಬಿದವರಿಗೆ ಸಹಾಯ ಮಾಡುವ ಮಟ್ಟ ಕ್ರಿಯೆಗಳೂ ನಮ್ಮನ್ನು ಸುಖದಿಂದಿರಿಸಬಲ್ಲವು ಎಂಬ ಸರಳ ತತ್ವಜ್ಞಾನವನ್ನು ಲತಾ ಅವರು ಬದುಕಿನನುಭವಗಳಿಂದಲೇ ಹೊಮ್ಮಿಸುತ್ತಾರೆ” ಎಂದು ಹೇಳಿದ್ದಾರೆ.

About the Author

ಲತಾ ಜಿ. ಕುಲಕರ್ಣಿ
(25 January 1956)

ದಿ. ಲತಾ ಜಿ. ಕುಲಕರ್ಣಿ ಅವರು ಮೂಲತಃ ಬಿಜಾಪುರದವರು. ಕನ್ನಡ ದಿನಪತ್ರಿಕೆಗಳಲ್ಲಿ ಸಾಮಾಜಿಕ ವಿಷಯಗಳ ಕುರಿತು ಓದುಗರ ಅಂಕಣಕ್ಕೆ ಓಲೆ ಬರೆಯುವ ಹಾಗೂ ಮಹಿಳೆಯರ ಸಮಸ್ಯೆಗಳ ಕುರಿತು ಲೇಖನಗಳನ್ನು ಬರೆಯುವ ಹವ್ಯಾಸ ಇವರದ್ದಾಗಿತ್ತು. ಬರವಣಿಗೆಯ ಜೊತೆಗೆ ಓದುವ ಆಸಕ್ತಿಯನ್ನೂ ಬೆಳೆಸಿಕೊಂಡಿದ್ದ ಇವರು, ಕನ್ನಡದ ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತ, ಎಸ್.‌ ಎಲ್.‌ ಭೈರಪ್ಪ, ತ. ರಾ. ಸು,, ದ. ರಾ. ಬೇಂದ್ರೆ ಅವರ ಕೃತಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿದ್ದ ಮತ್ತು ಕವಿಯಾಗಿರುವ ಜಿ. ಕೆ. ಕುಲಕರ್ಣಿಯವರನ್ನು ವಿವಾಹವಾದ ಇವರು, ಪತಿಯ ಕೆಲಸದ ವರ್ಗಾವಣೆಯಿಂದಾಗಿ ಶಿವಮೊಗ್ಗ, ಬಾಗಲಕೋಟೆ, ...

READ MORE

Related Books