'ಹಯ್ದರಾಬಾದ ಕರ್‍ನಾಟಕ' ಬಸವರಾಜ ಕೋಡಗುಂಟಿ ಅವರ ಕೃತಿ. ಸಮಕಾಲೀನ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳ ಅಧ್ಯಯನದ ವ್ಯಾಪ್ತಿ ವಿಸ್ತೃತಗೊಳ್ಳುತ್ತಾ ಸಾಗುತ್ತಿದೆ. ಆದರೆ ಅಂತಹ ಅಧ್ಯಯನಕ್ಕೆ ಪೂರಕವಾಗುವ ಮಾಹಿತಿ ಒದಗಿಸುವ ಕೃತಿಗಳು ಅಷ್ಟು ಪ್ರಮಾಣದಲ್ಲಿ ರಚನೆಯಾಗುತ್ತಿಲ್ಲ. ಈ ಕಾರಣದಿಂದಾಗಿಯೇ ಸಂಶೋಧನೆಯಲ್ಲಿ ತೊಡಗಿಕೊಂಡವರಿಗೆ ಆಕರಗಳು ಇರುವ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇಂತಹ ಸನ್ನಿವೇಶಗಳನ್ನು ತಪ್ಪಿಸುವುದಕ್ಕಾಗಿ ಆಕರ ಜನಕ ಕೃತಿಗಳು ಹೆಚ್ಚಾಗಿ ರಚನೆಯಾಗಬೇಕಾದ ಸಂದರ್ಭವಿದು.
ಅಂತಹ ಒಂದು ಪ್ರಯತ್ನದ ಹಿನ್ನಲೆಯಲ್ಲಿ ಹಯ್ದರಾಬಾದ ಕರ್‍ನಾಟಕ ಎಂಬ ಕೃತಿ ರಚನೆಯಾಗಿದೆ. ಹೈದರಾಬಾದ್ ಕರ್ನಾಟಕ ಎಂದ ತಕ್ಷಣ ಅದೊಂದು ಹಿಂದುಳಿದ ಪ್ರದೇಶವೆಂಬ ಭಾವನೆ ಎಲ್ಲರಲ್ಲೂ ಉಳಿದುಕೊಂಡಿದೆ, ಅದು ವರ್ತಮಾನಕ್ಕೆ ಸಂಬಂಧಿಸಿದ್ದಿರಬಹುದು. ಆದರೆ ಈ ಪ್ರದೇಶದ ಸ್ಮೃತಿ ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದಾಗಿದೆ. ಆದ್ದರಿಂದ ಈ ಪ್ರದೇಶವನ್ನು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನಕ್ಕೆ ಒಳಪಡಿಸಬಹುದಾದ ಹಲವು ಸಾಧ್ಯತೆಗಳನ್ನು ಈ ಕೃತಿ ತೆರೆದಿಡುತ್ತದೆ.
ಹಯ್ದರಾಬಾದ ಕರ್‍ನಾಟಕದ ಬಗ್ಗೆ ಇತಿಹಾಸದುದ್ದಕ್ಕೂ ಇರುವ ಧಾರ್ಮಿಕ ಇತಿಹಾಸ, ರಾಜಕೀಯ ಇತಿಹಾಸ, ಸಾಹಿತ್ಯಿಕ ಇತಿಹಾಸವನ್ನು ಪರಿಚಯಿಸುವ ಪ್ರಯತ್ನ ಈ ಕೃತಿಯಲ್ಲಿದೆ.ಹಯ್ದರಾಬಾದ ಕರ್‍ನಾಟಕ ಸಾಹಿತ್ಯದ ಕೆಲವು ಸಾಮಾನ್ಯ ಗುಣಗಳನ್ನು ತೆರೆದಿಡುವ ಮಾಹಿತಿಪೂರ್ಣ ವಿವರಗಳನ್ನೂ ಮತ್ತು ರಾಜಕೀಯ ಇತಿಹಾಸ, ಸಾಹಿತ್ಯಿಕ ಇತಿಹಾಸವನ್ನು ಪರಿಚಯಿಸುವ ಪ್ರಯತ್ನ ಈ ಕೃತಿಯಲ್ಲಿದೆ.
ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು. ...
READ MORE