‘ಕ್ಷಣದೊಡಲ ಚರಿತ್ರೆ’ ಲೇಖಕ ಡಾ.ಸಿ. ನಾಗಣ್ಣ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಡಾ. ನೀಲಗಿರಿ ಎಂ.ತಳವಾರ ಅವರ ಬೆನ್ನುಡಿ ಬರಹವಿದೆ. ಆಧುನಿಕ ಕನ್ನಡ ಸಾಹಿತ್ಯ ವೈವಿಧ್ಯಮಯವಾಗಿ ಮತ್ತು ಸಮೃದ್ಧವಾಗಿ ಬೆಳೆದಿದೆ. ಈ ವೈವಿಧ್ಯತೆ ಮತ್ತು ಸಮೃದ್ಧಿ ಕೇವಲ ಕನ್ನಡ ಮೂಲದಿಂದ ಸಾಧಿತವಾಗಿಲ್ಲ. ಅನ್ಯ ಶಿಸ್ತುಗಳ ಪೋಷಕಾಂಶದಿಂದಲೂ ಇದು ಬೆಳೆದಿದೆ ಎಂಬುದು ಚಾರಿತ್ರಿಕ ಮಹತ್ವದ ಸಂಗತಿ. ಬಿ.ಎಂ.ಶ್ರೀ, ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ, ಶಂಕರ ಮೊಕಾಶಿ ಪುಣೇಕರ್, ಡಿ.ಎ. ಶಂಕರ್ ಮೊದಲಾದ ಇಂಗ್ಲೀಷ್ ಪ್ರಾಧ್ಯಾಪಕರು ಆಂಗ್ಲಭಾಷೆ ಸಾಹಿತ್ಯವನ್ನು ಬೋಧಿಸುತ್ತಲೇ ಕನ್ನಡ ಸಾಹಿತ್ಯವನ್ನು ಬೆಳೆಸಿದರು ಮತ್ತು ಬೆಳಕಿಗೆ ತಂದರು. ಈ ಪರಂಪರೆಗೆ ಸೇರಿದವರು ಪ್ರೊ.ಸಿ. ನಾಗಣ್ಣ ಎನ್ನುತ್ತಾರೆ ಎಂ. ತಳವಾರ. ಜೊತೆಗೆ ಇಲ್ಲಿಯ ಅಂಕಣ ಬರಹಗಳು ಸಮಕಾಲೀನ ಸಮಸ್ಯೆಗಳನ್ನು, ಘಟನೆ, ಸನ್ನಿವೇಶಗಳನ್ನು ಕೇವಲ ವರದಿ ಮಾಡುವ, ಸಮೀಕ್ಷೆ ನಡೆಸುವ ಕ್ರಮವನ್ನು ಮೀರಿ ಆ ಸಂಬಂಧವಾದ ಜಾಗೃತಿಯನ್ನು ಮೂಡಿಸುವ ತುಡಿತ, ಆಶಯ ಹೊಂದಿವೆ. ಇಲ್ಲಿಯ ಲೇಖನಗಳ ಪುಟ ಪುಟಗಳಲ್ಲಿ ಸಮಗ್ರ ದೃಷ್ಟಿ. ತೌಲನಿಕ ದೃಷ್ಟಿ, ಅಂತರ್ ಶಿಸ್ತೀಯ ದೃಷ್ಟಿಗಳು ನೇಯ್ಗೆಗೊಂಡಿರುವುದು ಲೇಖಕನ ಮಾಗಿದ ಪ್ರಬುದ್ಧ ಸ್ಥಿತಿಯನ್ನು ಸೂಚಿಸುತ್ತವೆ.
ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...
READ MORE