‘ಕಾವ್ಯಕಾಶದ ಸಂಕ್ರಾಂತಿ ಸೂರ್ಯ’ ಅಡಿಗರ ಕುರಿತು ವಿ.ಗಣೇಶ್ ಅವರು ಸಂಪಾದಿತ ಲೇಖನಗಳಾಗಿವೆ. ಒಳ್ಳೆಯ ಕವಿತೆಯೊಂದು ಸರಳೀಕೃತ ವ್ಯಾಖ್ಯೆಗೆ ಒಗ್ಗುವಂತಹುದಲ್ಲ ಎಂಬುದನ್ನು ಒಪ್ಪಿಕೊಂಡರೂ, ಪುರುಷೋತ್ತಮನ ಆ ಅಂಥ ರೂಪುರೇಖೆಯನ್ನು ಕೆತ್ತ ಹೊರಟ ಕವಿ ಅಡಿಗರು ಪರಂಪರೆಯಲ್ಲಿ ಸ್ಥಿತರಾದವರು ಎಂಬುದನ್ನು ಒಪ್ಪಬೇಕು. ಅಡಿಗರ ಪ್ರತಿಮಾಲೋಕವು ವರ್ತಮಾನದಲ್ಲಿ ನಿಂತು, ಭೂತ ಭವಿಷ್ಯತ್ತುಗಳನ್ನುಕೊಡುವ ಪರಿ ಅತ್ಯಂತ ವೈಶಿಷ್ಟ್ಯಪೂರ್ಣ, ಸಂಸ್ಕೃತ ಭೂಯಿಷ್ಠವಾದ ಭಾಷೆ ಯಕ್ಷಗಾನದ ಮಾತುಗಾರಿಕೆಯ ಅಪೂರ್ವವಾದೊಂದು ಶೈಲಿ, ಅಡಕವಾದ ಬಂಧ, ನೆಲಮುಗಿಲುಗಳಿಗೆ ಒಮ್ಮೆಲೇ ಕೈಚಾಚುವ ವಾಮನಾವತಾರೀ ವಸ್ತುಲೋಕ, ನವ್ಯಕ್ಕೆ ವಿಶಿಷ್ಟವಾಗಿ ಹುರಿಗೊಂಡ ವ್ಯಂಗ್ಯತುಂಬಿದ ಅಭಿವ್ಯಕ್ತಿ, ಸಾಗರೋಲ್ಲಂಘನ ಮಾಡುವ ಹನುಮಂತನ ಹಾಗೆ ಚಿತ್ರಿಕೆಯಿಂದ ಚಿತ್ರಿಕೆಗೆ ಲಂಘಿಸುತ್ತ-ಅರ್ಥ ಅರ್ಥಾಂತರಗಳನ್ನು ಹೊಮ್ಮಿಸುವ ಪರಿ, ಇಡೀ ಕಾವ್ಯವಸ್ತುವನ್ನು ಒಂದು ಕೇಂದ್ರೀಯ ಘಟಕದಲ್ಲಿ ಇಡಿಕಿರಿದು ತುಂಬಿಸುವ ಕ್ರಮ, ಗಾಳಿ ಕಿಂಡಿಗಳಂತೆ ಅಲ್ಲಲ್ಲಿ ಒಳಹೋಗಲು ಪುರಾಣ ಪ್ರತಿಮೆಗಳ ಕಿಟಕಿ ಬಾಗಿಲುಗಳನ್ನಿರಿಸುವ ಕಾವ್ಯಕಟ್ಟೋಣದ ವಾಸ್ತು-ಶಾಸ್ತ್ರೀಯತೆ-ಇವೆಲ್ಲವೂ ಅಡಿಗರ ಕಾವ್ಯದಲ್ಲಿ ಕಂಡುಬರುವ ಅಂಶ, ಆಧುನಿಕ ಕಾಲದಲ್ಲಿ ಭೂತ ಹಾಗೂ ಭವಿಷ್ಯತ್ತನ್ನು ನಮ್ಮ ಮುಂದಿರಿಸಿದ ಅತ್ಯಪೂರ್ವ ಕವಿ ಎಂದು ಅಡಿಗರನ್ನು ಮುಕ್ತವಾಗಿ ಪ್ರಶಂಸಿಸಲೇ ಬೇಕು ಎಂಬುದನ್ನು ಈ ಕೃತಿ ತಿಳಿಸಿಕೊಡುತ್ತದೆ.
ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE