‘ಅನ್ವೇಷಣೆ’ ಕೃತಿಯು ರಾಜುಕುಮಾರ ವಿ. ಕುಲಕರ್ಣಿ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿ ವಿಚಾರಗಳನ್ನು ಹೀಗೆ ವಿವರಿಸಲಾಗಿದೆ : ತೇಜಸ್ವಿ ಕಾಲವಾಗಿ ಆಗಲೇ ಕೆಲವು ವರ್ಷಗಳು ಕಳೆದು ಹೋಗಿವೆ. ತನ್ನ ನಂತರದ ಪೀಳಿಗೆಯನ್ನು ಬರವಣಿಗೆಯ ಮೂಲಕ ನಿರಂತರವಾಗಿ ಕಾಡಿದ ಮತ್ತು ಪ್ರಭಾವಿಸಿದ ಕೆಲವೇ ಕೆಲವು ಬರಹಗಾರರಲ್ಲಿ ತೇಜಸ್ವಿ ಒಬ್ಬರು. ತೇಜಸ್ವಿ ಅವರ ಬರವಣಿಗೆಯಷ್ಟೇ ಅವರ ವೈಯುಕ್ತಿಕ ಬದುಕು ಕೂಡ ಅತ್ಯಂತ ಕುತೂಹಲದ ವಿಷಯವಾಗಿತ್ತು. ತೇಜಸ್ವಿ ಬದುಕಿದ್ದಾಗಲೇ ಅವರ ವ್ಯಕ್ತಿತ್ವ ಮತ್ತು ಬದುಕಿನ ಕುರಿತು ಅನೇಕ ವರ್ಣರಂಜಿತ ಕತೆಗಳು ಚಾಲ್ತಿಯಲಿದ್ದವು. ತೇಜಸ್ವಿ ಮಹಾ ಮುಂಗೋಪಿಯಂತೆ, ಅವರ ಸ್ಕೂಟರ್ ಗೆ ಒಂದೇ ಸೀಟಂತೆ. ಕಾಡಿನಲ್ಲೇ ಮನೆ ಮಾಡಿಕೊಂಡು ಇರುವವರಂತೆ, ಸಾಹಿತ್ಯ ಸಮ್ಮೇಳನ ಮತ್ತು ಪ್ರಶಸ್ತಿಗಳೆಂದರೆ ಅವರಿಗೆ ಅಲರ್ಜಿ ಹೀಗೆ ಅನೇಕಾನೇಕ ಕಥೆಗಳು ಯುವ ಓದುಗರ ಸಮೂಹದಲ್ಲಿ ಆಗಾಗ ಚರ್ಚೆಗೆ ಗ್ರಾಸವಾಗುತ್ತಿದ್ದದ್ದುಂಟು. ತೇಜಸ್ವಿ ಅವರು ಆಯ್ದುಕೊಂಡ ಬದುಕು ಮತ್ತು ಅವರು ಬಾಳಿದ ರೀತಿ ಅದು, ಅವರ ಬರವಣಿಗೆಯಾಚೆಯೂ ಅನೇಕ ಕುತೂಹಲಗಳಿಗೆ ದಾರಿಮಾಡಿಕೊಟ್ಟಿತು. ಎರಡನೇ ಪಿ.ಯು.ಸಿಯಲ್ಲಿ ಅವರ ಕರ್ವಾಲೋ ಕಾದಂಬರಿ ಪಠ್ಯವಾಗಿ ಓದುವಾಗಲೇ ನಮಗೆಲ್ಲ ತೇಜಸ್ವಿ ಅವರ ಕುರಿತು ಸಣ್ಣದೊಂದು ಕುತೂಹಲ ಮೊಳಕೆಯೊಡೆಯಿತು. ನಂತರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ವಿಜ್ಞಾನ ಮತ್ತು ಪ್ರಕೃತಿ ವಿಸ್ಮಯದ ಲೇಖನಗಳು ಸಹಜವಾಗಿಯೇ ನನ್ನ ವಯೋಮಾನದ ಓದುಗರನ್ನು ಅವರ ಚಿದಂಬರ ರಹಸ್ಯ ಮತ್ತು ಜುಗಾರಿ ಕ್ರಾಸ್ ಕಾದಂಬರಿಗಳನ್ನು ಓದಿದ್ದಾಯಿತು. ಹೀಗೆ ಒಂದು ವಯೋಮಾನದ ಓದುಗರು ತೇಜಸ್ವಿ ಅವರ ಪುಸ್ತಕಗಳನ್ನು ಹಠಕ್ಕೆ ಬಿದ್ದಂತೆ ಓದುತ್ತಿರುವಾಗಲೇ ಸಾವಿನ ರೂಪದಲ್ಲಿ ಬಂದ ವಿಧಿ, ತೇಜಸ್ವಿ ಅವರನ್ನು ಓದುಗರಿಂದ ದೂರವಾಗಿಸಿತು. ತೇಜಸ್ವಿ ಕಾಲವಾದ ನಂತರ ಅವರ ಪರಂಪರೆಯನ್ನು ಮುಂದುವರೆಸುವ ವಾರಸುದರರಿಲ್ಲದೇ ಓದುಗರ ಸಮೂಹ ಅನಾಥ ಪ್ರಜ್ಞೆಯಿಂದ ಒಂದಿಷ್ಟು ಕಾಲ ಬಳಲಿದ್ದುಂಟು. ಇದು ತೇಜಸ್ವಿ ಅವರ ಬರವಣಿಗೆಯ ಹಾಗೂ ಅವರ ವ್ಯಕ್ತಿತ್ವದ ತಾಕತ್ತಿಗೊಂದು ನಿದರ್ಶನವಾಗಿದೆ’ ಎಂದಿದೆ.
ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ) ...
READ MORE