‘ಸ್ವರ್ಗದ ಹಾದಿಯಲ್ಲಿ’ ಇರ್ಷಾದ್ ಉಪ್ಪಿನಂಗಡಿ ಅವರ ಲೇಖನ ಸಂಕಲನ. ಕನ್ನಡದ ಖ್ಯಾತ ವಿಮರ್ಶಕಿ ಎಂ.ಎಸ್. ಆಶಾದೇವಿ ಅವರು ಈ ಕೃತಿಯ ಕುರಿತು ಬರೆದಿದ್ದಾರೆ. ನಿಂತ ಹೆಜ್ಜೆಯನ್ನರಿಯುವ ಪ್ರಯತ್ನದ ಇರ್ಷಾದ್ ಉಪ್ಪಿನಂಗಡಿಯವರ ಲೇಖನಗಳ ಸಂಕಲನ ‘ಸ್ವರ್ಗದ ಹಾದಿಯಲ್ಲಿ’. ಸಾಹಿತ್ಯದ ಗ್ರಹಿಕೆಯಲ್ಲಿ ಈ ಶೀರ್ಷಿಕೆ ವ್ಯಂಗ್ಯವನ್ನೇ ಧ್ವನಿಸುತ್ತದೆ. ಆದರೆ ಈ ಸಂಕಲನದ ಬರಹಗಳನ್ನು ಓದಿದ ಮೇಲೆ ವ್ಯಂಗ್ಯದ ಸ್ಪರ್ಶವೇ ಇಲ್ಲದ ದಟ್ಟ ವಿಷಾದವೊಂದು ನಮ್ಮನ್ನು ಆವರಿಸುತ್ತದೆ. ಜೊತೆಗೇ ಒಂದಿಷ್ಟು ಸಮಾಧಾನವೂ ಆತ್ಮನಿರೀಕ್ಷಣೆಯ ಒತ್ತಾಯವೂ ನಮ್ಮಲ್ಲಿ ಹುಟ್ಟುತ್ತದೆ ಎಂದಿದ್ದಾರೆ ಆಶಾದೇವಿ.
ವಿಜ್ಞಾನಿ ಐನ್‌ಸ್ಟೈನ್, ತನ್ನ ಕೊನೆಗಾಲದಲ್ಲಿ ನೀಡಿದ ಸಂದರ್ಶನದಲ್ಲಿ (ವಿಜ್ಞಾನಿಯಾದವನ ಸಾಮಾಜಿಕ ಉತ್ತರದಾಯಿತ್ವದ ಬಗ್ಗೆ ಮಾತನಾಡುತ್ತಾ), ‘ಕೊನೆಗೂ ಈ ನಾಗರಿಕ ಸಮಾಜದಲ್ಲಿ ಮನುಷ್ಯತ್ವವನ್ನು ಉಳಿಸಿಕೊಂಡ ಮನುಷ್ಯರಾಗಿ ಉಳಿದುಕೊಳ್ಳುವುದೇ ಬಹಳ ದೊಡ್ಡ ಸವಾಲು ಅನ್ನಿಸುತ್ತೆ’ ಎನ್ನುವ ಅರ್ಥದ ಮಾತುಗಳನ್ನಾಡುತ್ತಾರೆ. ‘ರಕ್ತಮಾಂಸವುಳ್ಳ ಇಂಥ ಮನುಷ್ಯ ಬದುಕಿದ್ದನೆ ಎಂದು ಮುಂದಿನ ಪೀಳಿಗೆಗಳು ಅಚ್ಚರಿಪಡುತ್ತವೆ’ ಎಂದು ಗಾಂಧಿಯ ಬಗ್ಗೆ ಅವರು ಮಾತನಾಡಿದ್ದು ಈ ಸಂದರ್ಭದಲ್ಲೇ. ಸಮಕಾಲೀನ ಸಂದರ್ಭಗಳನ್ನು ನೋಡುತ್ತಿದ್ದರೆ, ಮಾನವೀಯ ಮನುಷ್ಯರಾಗಿ ಉಳಿಯಲೇಬಾರದು ಎಂದು ಪಣತೊಟ್ಟಿದ್ದೇವೆಯೋ ಎನ್ನಿಸುತ್ತದೆ.
‘ಧರ್ಮ ಈ ದೇಶಗಳಿಗೆ ಅಫೀಮು’ ಎಂದು ಅದ್ಯಾವ ಗಳಿಗೆಯಲ್ಲಿ ಆ ಮಾರಾಯ ಮಾರ್ಕ್ಸ್ ಹೇಳಿದನೋ ಅದು ಅಕ್ಷರಶಃ ನಿಜವಾಗಿ ಬಿಟ್ಟಿದೆ. ಮನುಷ್ಯನ ವಿಕಾರಗಳೆಲ್ಲ ನಮ್ಮೆದುರಿಗೆ ಬೆತ್ತಲಾಗುತ್ತಿರುವ ಈ ದುರಂತದ ಹೊತ್ತಿನಲ್ಲಿ, ನಮ್ಮನ್ನು ನಾವು ಸ್ವಪರೀಕ್ಷೆಗೆ ಒಡ್ಡಿಕೊಳ್ಳುವುದು ತೀರಾ ಕಷ್ಟದ ಆದರೆ ಬಹಳ ಮಹತ್ವದ ಮತ್ತು ನಿರ್ಣಾಯಕವಾದ ಸಂಗತಿ. ಅಲ್ಪಸಂಖ್ಯಾತರನ್ನು ಅಭದ್ರತೆಯ ಆತಂಕದ ಒಲೆಯ ಮುಂದೆ ನಿಲ್ಲಿಸುವುದಕ್ಕೆ ನೂರು ದಾರಿಗಳಿವೆ. ಆದರೆ ನಾವೇ ಉರಿಯುವ ಬೆಂಕಿಯ ಮುಂದೆ ನಿಲ್ಲುವ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು? ಮೊದಲಿಗೆ, ನಾವೇ ಆ ಬೆಂಕಿಯನ್ನು ಹಚ್ಚಿಕೊಂಡಿದ್ದೇವೆ ಎನ್ನುವ ಅರಿವೂ ಅಷ್ಟೇ ಅಗತ್ಯ. ಆಗ ಮಾತ್ರ ಒಳಗಿನ ಉರಿ ಯಾವುದು, ಎದುರಿಗಿರುವವರು ಹಚ್ಚಿರುವ ಉರಿ ಯಾವುದು ಎನ್ನುವುದು ತಿಳಿಯುತ್ತದೆ. ಅದು ತಿಳಿಯದೇ ಈ ಒಳ–ಹೊರಗಿನ ಬೆಂಕಿಗಳಿಂದ ಪಾರಾಗುವ ದಾರಿಯೂ ತಿಳಿಯದು ಎನ್ನುವ ಎಚ್ಚರವೊಂದು ಇರ್ಷಾದ್ ಅವರ ಬರವಣಿಗೆಗಳಿಗ ಮಹತ್ತ್ವವನ್ನು ತಂದುಕೊಡುತ್ತದೆ ಎಂದಿದ್ದಾರೆ.
ಇರ್ಷಾದ್ ಉಪ್ಪಿನಂಗಡಿ ಅವರ ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಕನ್ನಡದ ವಿವಿಧ ಟಿವಿ ವಾಹಿನಿಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಜಯ ಕರ್ನಾಟಕ ಡಿಜಿಟಲ್ ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ‘ಸ್ವರ್ಗದ ಹಾದಿಯಲ್ಲಿ’ ಇರ್ಷಾದ್ ಅವರ ಮೊದಲ ಕೃತಿ ಹಾಗೂ ‘ಸ್ವರ್ಗದ ಹಾದಿಯಲ್ಲಿ ಕಮರುತ್ತಿರುವ ಕನಸುಗಳು’ ಮೊದಲ ಸಾಕ್ಷ್ಯಚಿತ್ರ. ರಾಜಕೀಯ ವರದಿಗಾರಿಕೆಯ ಜೊತೆಗೆ ಸಮಾಜದ ಆಗುಹೋಗುಗಳ ಕುರಿತಾಗಿ ಲೇಖನ ರೂಪದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ...
READ MORE