ನೆನಪಿನಂಗಳದಲ್ಲಿ ಹರಡಿರುವ ಹೂ ಹಾಸು ಇನ್ನೂ ಸುಗಂಧಮಯವೇ ಆಗಿರುವುದು ಸೋಜಿಗದ ವಿಷಯ. ಒಂದು ಕಾಲದಲ್ಲಿ ಮರೆಯಬೇಕೆಂದುಕೊಂಡರೂ ಮರೆಯಲಾಗದೇ ಉಳಿದುಕೊಂಡವು. ಕಾಲಕಳೆದಂತೆ ಮನಸ್ಸು ಮಾಗಿದಂತೆ, ‘ಓಹೋ ಇದರಿಂದಲೂ ಕಲಿಯಬೇಕಾದದ್ದು ಇದೆ’ ಎನಿಸುತ್ತದೆ. ಪ್ರಿಯ ಎಂದೆನಿಸಿದವು, ಅಷ್ಟೊಂದು ಪ್ರಿಯ ಎನಿಸಬೇಕಿಲ್ಲ ಎಂದಾದದ್ದೂ ಇದೆ. ಬಹುತೇಕ ಎಲ್ಲವೂ ತಾಜಾ, ತಾಜಾ! ಎಪ್ಪತ್ತೈದರ ಹೊಸ್ತಿಲಿನಲ್ಲಿ ಎನಿಸುವುದು ಹೀಗೆ. ನೆನಪುಗಳೇ ಬದುಕಿನ ಸಾರ, ಹಿಂದಿನ ಬದುಕು ‘ಕರ್ಮ ಸಿದ್ಧಾಂತ’ ಎನಿಸಿಕೊಂಡು ಇಂದುಗಳನ್ನು ರೂಪಿಸಿದಂತೆ ಇಂದಿನ ‘ಕರ್ಮ’ಗಳು ಮುಂದಿನ ಬದುಕಿಗೆ ರೂಪ ನೀಡುತ್ತವೆ. ಆದುದರಿಂದ ನೆನಪಿನ ಹೂಹಾಸಿನಲ್ಲಿ ಎಚ್ಚರೆಚ್ಚರದಿಂದ ಕಾಲಿಡುತ್ತ, ಕಲಿಯುತ್ತ ನಡೆಯುವುದೇ ಜೀವನ. ಮಲೆನಾಡಿನ ಮೋಡ ಕವಿದ, ಮಂಜುಮುಸುಕಿದ, ಸದಾ ಅರೆನಿದ್ರೆಯಲ್ಲಿರುವ, ಹಸುರು ಹೊದ್ದ ಪುಟ್ಟ ಊರಿನಿಂದ, ಭೋರ್ಗರೆವ ಕಡಲತಡಿಯ ಕೊಂಚ ಭಿನ್ನ ಅಚಾರ-ವಿಚಾರಗಳ, ಆಧುನಿಕತೆಯತ್ತ ದಾಪುಗಾಲು ಹಾಕುತ್ತಿದ್ದ ಮತ್ತೊಂದು ಪುಟ್ಟ ಊರಿಗೆ ಕಾಲಿಟ್ಟು, ಬದುಕು ಕಟ್ಟುವ ಪ್ರಕ್ರಿಯೆಗೆ ಮೊದಲಾಗಿ ಅರ್ಧ ಶತಮಾನ, ಅದರರ್ಥ ಐವತ್ತು ವರ್ಷಗಳೇ ಕಳೆದುಹೋದವು. ಆದರೂ ಮನಸ್ಸು ತವರಿನ ನೆನಪುಗಳನ್ನು ಹೊತ್ತು ತರುತ್ತಿದೆ. ತವರು ತೊರೆದರೂ, ಅದು ನನ್ನನ್ನು ಬಿಡಲಿಲ್ಲ. ಅದು ಚೆನ್ನ, ಇದು ಚೆನ್ನಲ್ಲ ಎಂದಲ್ಲ. ಅಂದಿಗೆ ಅದು ಚೆನ್ನ, ಇಂದಿಗೆ ಇದೇ ಚೆನ್ನ. ಹಳೇ ಕಾಲದ ಹಳಹಳಿಯಲ್ಲಿ ಜ್ಞಾಪಕತೆಯ ಸಂಚಯವೂ ಅಲ್ಲ. ನಡೆದು ಬಂದ ಬದುಕಿನ ಭವ್ಯತೆಯ, ದಿವ್ಯಾನುಭೂತಿಯನ್ನು ಕಂಡು ವಿಸ್ಮಯಿಸುವ, ಸಂಭ್ರಮಿಸುವ ಕಥಾನಕವಾಯಿತು ‘ಸ್ಮೃತಿ ಗಂಧವತೀ’ ಎಂದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್ ಇದು ಇಸ್ರೇಲ್ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...
READ MORE