ಲೇಖಕ ಪ್ರೇಮಶೇಖರ ಅವರ ಲೇಖನ ಕೃತಿ ʻನಾಲ್ಕನೆಯ ತಲೆಮಾರಿನ ಸಮರʼ. ಇವು ರಾಷ್ಟ್ರೀಯ ಬೆಳವಣಿಗೆಗಳ ಕುರಿತಾದ ಲೇಖನಗಳಾಗಿವೆ. ಆದಿಕಾಲದಿಂದ ಇಂದಿನವರೆಗೆ ಬದಲಾಗುತ್ತಾ ಬಂದಿರುವ ಕದನದ ಸ್ವರೂಪವನ್ನು ಪರಿಗಣಿಸಿ ಸಮರಗಳು ಐದು ತಲೆಮಾರುಗಳಲ್ಲಿ ವಿಕಸಿಸುತ್ತಾ ಬಂದಿರುವುದನ್ನು ಇತಿಹಾಸದಲ್ಲಿ ನೋಡಿದ್ದೇವೆ. ರಣಾಂಗಣದಲ್ಲಿ ಮುಖಾಮುಖಿಯಾದ ಪರಸ್ಪರ ವಿರೋಧಿ ಸೈನಿಕರು ಒಬ್ಬರ ಮೇಲೊಬ್ಬರು ಎರಗಿ ಮುಷ್ಟಿ, ಕಲ್ಲು, ದೊಡ್ಡ, ಕತ್ತಿ, ಭರ್ಜಿಗಳನ್ನು ಬಳಸಿ ಸೆಣಸುವುದು ಮೊದಲ ತಲೆಮಾರಿನ ಸಮರ. ನಂತರ ಆಧುನಿಕ ಕಾಲದಲ್ಲಿ ವಿಜ್ಞಾನದ ಸಹಾಯದಿಂದ ಮಾರಕಾಸ್ತ್ರಗಳ ಆವಿಷ್ಕಾರವಾಗತೊಡಗಿದಂತೆ ವಿವಿಧ ಬಗೆಯ ತುಪಾಕಿಗಳು, ಬಂದೂಕುಗಳನ್ನು ಬಳಸತೊಡಗಿದ್ದು ಎರಡನೆಯ ತಲೆಮಾರಿನ ಯುದ್ದ ಎನಿಸಿಕೊಂಡಿತು. ಮತ್ತೂ ಮುಂದುವರೆದು ಇಪ್ಪತ್ತನೆಯ ಶತಮಾನದಲ್ಲಿ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ಯುದ್ದಗಳು ನಡೆಯಲಾರಂಭಿಸಿದಾಗ ಅದು ಮೂರನೆಯ ತಲೆಮಾರಿನ ಯುದ್ಧ ಎನಿಸಿಕೊಂಡಿತು. ಒಟ್ಟಿನಲ್ಲಿ ವಿರೋಧಿ ಸೈನಿಕರು ದೈಹಿಕವಾಗಿ ಪರಸ್ಪರ ದೂರವಾಗುತ್ತಾ ಹೋದದ್ದನ್ನು, ಹಾಗೆಯೇ ಅವರ ಕೊಲ್ಲುವ ಸಾಮರ್ಥ್ಯ ಅಗಾಧವಾಗುತ್ತಾ ಸಾಗಿದ್ದನ್ನು ಮೊದಲ ಮೂರು ತಲೆಮಾರುಗಳ ಸಮರಗಳಲ್ಲಿ ಕಾಣಬಹುದು. ಇವುಗಳಿಗೆ ಹೋಲಿಸಿದರೆ ನಾಲ್ಕನೆಯ ತಲೆಮಾರಿನ ಸಮರ ಸಂಪೂರ್ಣ ಭಿನ್ನವಾದುದು. ಇದರಲ್ಲಿ ಸೈನಿಕರೂ ಇರುವುದಿಲ್ಲ ಮತ್ತು ಬಹುತೇಕ ಸಂದರ್ಭಗಳಲ್ಲಿ ಯಾವುದೇ ಆಯುಧ ಅಸ್ತ್ರಗಳೂ ಇರದೆ ಕುಳಿತಲ್ಲಿಂದಲೇ ಕಂಪ್ಯೂಟರ್, ಇಂಟರ್ನೆಟ್, ಸೈಬರ್ ಮೂಲಕ ಯುದ್ದ ನಡೆಸಲಾಗುತ್ತಿದೆ. ಈ ವಿಚಾರಗಳ ಅಗಾಧತೆ ಹಾಗೂ ಪರಿಣಾಮಗಳ ಬಗ್ಗೆ ಪ್ರೇಮಶೇಖರ ಅವರು ತಮ್ಮ ಪುಸ್ತಕದಲ್ಲಿ ಚರ್ಚಿಸುತ್ತಾರೆ.
ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...
READ MORE