ಸೂರ್ಯಪ್ರಕಾಶ್ ಪಂಡಿತ್ ಅವರ ‘ಭಾರತೀಯ ಪ್ರಜ್ಞಾವಾಹಿನಿ ಆನಂದ ಕುಮಾರಸ್ವಾಮಿ’ ಕೃತಿಯು ಭಾರತೀಯ ಸಾಂಪ್ರದಾಯಿಕ ಕಲೆ ಜ್ಞಾನದ ಒಂದು ಸ್ರೋತವೇ ಆಗಿತ್ತು ಎಂಬುದನ್ನು ತಿಳಿಸುತ್ತದೆ. ವ್ಯಕ್ತಿಯನ್ನು ಪರಿವರ್ತಿಸುವಷ್ಟು ಶಕ್ತವಾಗಿದೆ ಎಂದರಿತ ಆನಂದ ಕುಮಾರಸ್ವಾಮಿ ಸ್ವತಃ ಅದರ ಬಹುಮುಖ್ಯ ವಕ್ತಾರರಾದರು. ಅವರು ಭಾರತೀಯ ಕಲೆಯನ್ನು ಗ್ರಹಿಸಿದ್ದು ‘ಫಿಲಸಾಫಿಯಾ ಪೆರೆನ್ನಿಸ್’ ಎಂಬ ಪರಿಕಲ್ಪನೆಯ ಬೆಳಕಿನಲ್ಲಿ. ‘ಫಿಲಸಾಫಿಯಾ ಪೆರೆನ್ನಿಸ್’ ಪ್ರಕಾರ ಒಂದು ಸಾಂಪ್ರದಾಯಿಕ ಕಲೆ ಸೌಂದರ್ಯಾನುಭೂತಿಗೆ ಕಾರಣವಾಗುವ ಕೃತಿಯಷ್ಟೇ ಅಲ್ಲ, ಅದೊಂದು ಮರೆವಿಗೆ ಸಂದ ಜನ್ಮಭೂಮಿಯನ್ನು ನೆನಪಿಗೆ ತಂದುಕೊಡಬಲ್ಲ ಸ್ಫೂರ್ತಿಮೂಲವಾಗಿದೆ. ‘ನಾನು ಯಾವುದೇ ನೂತನ ತತ್ತ್ವವನ್ನಾಗಲೀ, ನನ್ನದೆ ಸಿದ್ಧಾಂತವನ್ನಾಗಲೀ ಮಂಡಿಸುತ್ತಿಲ್ಲ. ನಿರ್ವಿಕಾರಸತ್ಯವೆಂದು ನಾನು ತಿಳಿದುಕೊಂಡಿರುವುದನ್ನು ಅರ್ಥಮಾಡಿಕೊಳ್ಳಲು ಜೀವನದುದ್ದಕ್ಕೂ ಪ್ರಯತ್ನಿಸುವುದಷ್ಟೆ ನನ್ನ ಕೆಲಸ. ಇದರಲ್ಲೂ, ಮೊದಲನೆಯ ಆದ್ಯತೆಯೆಂದರೆ ನನ್ನ ಆತ್ಮೋನ್ನತಿಯೇ; ಅನಂತರದಲ್ಲಿ ಈ ನನ್ನ ಫಲಿತಾಂಶಗಳನ್ನು ಬೇರೆಯವರೂ ಬಳಸಿಕೊಳ್ಳಬಹುದಷ್ಟೆ. ನನ್ನ ದೃಷ್ಟಿಯಲ್ಲಿ ಕೆಲವು ಸೂತ್ರಗಳು, ಸಿದ್ಧಾಂತಗಳು, ಮೌಲ್ಯಗಳು ಪ್ರಶ್ನಾತೀತವಾದಂಥವು. ನನ್ನ ಆಸಕ್ತಿಯಿರುವುದು ಹೊಸ ಹೊಸದಾದ ಸಿದ್ಧಾಂತಗಳನ್ನು ಕುರಿತು ಚಿಂತಿಸುವುದರಲ್ಲಿ ಅಲ್ಲ, ನಿದಿಧ್ಯಾಸನದಲ್ಲಿ’ ಎಂಬ ಮಾತುಗಳು ಅವರ ವಿಶಿಷ್ಟ ಚಿಂತನಕ್ರಮದ ಮೇಲೆ ಬೆಳಕು ಚೆಲ್ಲುತ್ತವೆ. ಸೂರ್ಯಪ್ರಕಾಶ ಪಂಡಿತ್ ಬರೆದಿರುವ ‘ಭಾರತೀಯ ಪ್ರಜ್ಞಾವಾಹಿನಿ ಆನಂದ ಕುಮಾರಸ್ವಾಮಿ’ ಎಂಬ ಈ ಪುಸ್ತಕ ಅವರ ಕೆಲವು ಅಪೂರ್ವ ವಿಚಾರಗಳ ವ್ಯಾಖ್ಯಾನವಾಗಿರುವುದರಿಂದ ಓದುಗರಿಗೊಂದು ಉತ್ತಮ ಪ್ರವೇಶಿಕೆಯಾಗಿದೆ.
ಎಸ್. ಸೂರ್ಯಪ್ರಕಾಶ್ ಪಂಡಿತ್ ಅವರು ಪತ್ರಕರ್ತ ಹಾಗೂ ಅಭಿಜ್ಞಾನ ಸಂಪಾದಕರು. ಪ್ರಸ್ತುತ ಪ್ರಜಾವಾಣಿಯ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಜೀವನವದೊಂದು ಕಲೆ, ನಮ್ಮಲ್ಲಿಯೇ ಇರುವ ದೈವತ್ವ ರಾಕ್ಷಸತ್ವ. ...
READ MORE