ಸಾಧಕ ಮಹಿಳೆಯರ ಹೋರಾಟಗಳು, ಸಂಕಟಗಳು ಮತ್ತು ಬಿಕ್ಕಟ್ಟುಗಳ ಕುರಿತಂತೆ ಇಲ್ಲಿರುವ ಬರಹಗಳು ಮಾತನಾಡುತ್ತವೆ. ಅವರ ಬದುಕಿನ ಅನುಭವದ ಸಾರವೇ ಇಲ್ಲಿನ ಲೇಖನಗಳ ಆತ್ಮವಾಗಿದೆ. ಅಕಾಡೆಮಿಕ್ ಆದ ಅಧ್ಯಯನಗಳಿಗಿಂತ ಜೀವನಾನುಭವವೇ ಇಲ್ಲಿನ ಬರಹಗಳನ್ನು ಬರೆಸಿದೆ. ಸ್ತ್ರೀ ಸಾಧನೆಯ ಹೆಜ್ಜೆ ಗುರುತುಗಳನ್ನು ಎಣಿಸುವ ಸಾವಿರ ತೊರೆಗಳ ಸ್ವಾತಂತ್ರ ಸಾಗರ, ಹೆಣ್ಣು ಭ್ರೂಣ ಹತ್ಯೆಯ ಕ್ರೌರ್ಯವನ್ನು ತೆರೆದಿಡುವ “ಮಾನವರ ಕಣ್ಣಾಗ ನಾವು ಉರಿದ್ಯಾವ', ಮಾರಾಟದ ಸರಕಾಗುತ್ತಿರುವ ಹೆಣ್ಣಿನ ವಾಸ್ತವ ನೆಲೆಗಳನ್ನು ಶೋಧಿಸುವ 'ಜಾಹಿರಾತು ಜಾಲ', ಕಾನೂನುಗಳಿದ್ದರೂ ಅದರ ಪ್ರಯೋಜನ ಪಡೆಯಲು ಅಸಹಾಯಕಳಾಗಿರುವ ಹೆಣ್ಣಿನ ಬಗ್ಗೆ ತಿಳಿಸುವ ಮಹಿಳೆಯರಿಗೆ ಕಾನೂನು ರಕ್ಷಣೆ', ಕನ್ನಡ ಕಟ್ಟಿ ಬೆಳೆಸಿದವರ ಕಡೆಗೆ ಬೆಳಕು ಚೆಲ್ಲುವ “ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು' ಇಲ್ಲಿರುವ ಪ್ರಮುಖ ಬರಹಗಳಾಗಿವೆ. ಸರಳ, ನೇರ ಭಾಷೆ ಈ ಬರಹಗಳ ವಿಶೇಷತೆ.
(ಹೊಸತು, ಡಿಸೆಂಬರ್ 2014, ಪುಸ್ತಕದ ಪರಿಚಯ)
ನಮ್ಮ ರಾಜ್ಯದ ಪ್ರಮುಖ ಹೋರಾಟಗಾರ್ತಿಯರಲ್ಲಿ ಒಬ್ಬರಾದ ಇಂದಿರಾ ಕೃಷ್ಣಪ್ಪ ಅವರು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಕಲನ 'ಅವಳ ಹೆಜ್ಜೆಯ ಹಾದಿ ಹಿಡಿದು ಕೃತಿ. ಮಹಿಳಾ ಸಮಸ್ಯೆ, ಮಹಿಳೆಯರ ಹೋರಾಟಗಳನ್ನು ದಾಖಲಿಸಿದ ಇಲ್ಲಿನ ಲೇಖನಗಳು ಸ್ತ್ರೀವಾದಿಯೊಬ್ಬರ ಹುಟುಕಾಟವಾಗಿದ್ದರೂ ಒಟ್ಟು ಸಾಮಾಜಿಕ ವ್ಯವಸ್ಥೆಯ ಬದಲಾವಣೆಗೆ ತಹತಹಿಸುವ ಆಶಯವನ್ನು ಹೊಂದಿದೆ. ಮಹಿಳೆಯರು ನಮ್ಮ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ, ಪರಿಸರ ಹಾಗೂ ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಂಡರೂ ನಿರ್ಲಕ್ಷ್ಯಕ್ಕೆ ಒಳಗಾದ ಪರಿಯನ್ನು ಖಂಡಿಸುತ್ತಲೇ ದಾಖಲೆ ಸಮೇತ ಅಂಥವರ ವಿವರಗಳನ್ನು ಕೊಡುತ್ತಾರೆ. ಝಾನ್ಸಿ ರಾಣಿಯ ದಾಸಿ, ಕೋರಿ ಜನಾಂಗದ ಮಹಿಳೆ 'ಝಲ್ಕಾರಿ ದೇವಿ' ಎಂಬವಳು ತನ್ನ ಜನಾಂಗದ ದುರ್ಗಾದಳ' ಎಂಬ ಪಡೆಯನ್ನೇ ಕಟ್ಟಿದ್ದಳು. ತೆಲಂಗಾಣ ಹೋರಾಟದಲ್ಲಿ ಮಹಿಳೆಯರು, ಡೂನ್ ಕಣಿವೆ ಹೋರಾಟದ ಮಹಿಳೆಯರ ಸಾಹಸ, ದಾಶೋಲಿ ಗ್ರಾಮ ಸ್ವರಾಜ್ಯ ಸಂಘಟನೆ ಹೀಗೆ ಮಹಿಳೆಯರು ಮಹತ್ವದ ಪಾತ್ರ ವಹಿಸಿದ ಹಲವಾರು ಸಂಗತಿಗಳನ್ನು ಇಂದಿರಾ ಅವರು ದಾಖಲಿಸಿದ್ದಾರೆ. ಮಹಿಳೆಯರ ಆರೋಗ್ಯ, ಭ್ರೂಣಹತ್ಯೆ, ಲಿಂಗಾನುಪಾತ, ಮಹಿಳಾ ಶಿಕ್ಷಣ, ಮಹಿಳೆಯರ ಮೇಲಿನ ದೌರ್ಜನ್ಯ, ದಲಿತ ಹಾಗೂ ದುಡಿವ ಮಹಿಳೆಯರ ಸ್ಥಿತಿಗತಿ. ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಇಂದಿರಾ ಕೃಷ್ಣಪ್ಪ ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಹಾಗೂ ಸ್ತ್ರೀವಾದಿ ಹೋರಾಟಗಾರರಿಗೆ ಅಮೂಲ್ಯ ಮಾಹಿತಿಗಳನ್ನು ಒದಗಿಸುವ ಕೃತಿ ಇದು.