ಪತ್ರಕರ್ತ-ಲೇಖಕ ಪಿ.ಲಂಕೇಶ್ ಅವರು 1970ರಲ್ಲಿ ಸಂಪಾದಿಸಿದ ಕನ್ನಡದ ಆಯ್ದ ಕವಿತೆಗಳ ಸಂಗ್ರಹ. ಈ ಸಂಕಲನದಲ್ಲಿ ನವೋದಯ ಸಂವೇದನೆಗಿಂತ ಭಿನ್ನವಾದ ಕವಿತೆಗಳನ್ನು ಸೇರಿಸಲಾಗಿದೆ. ಇದಕ್ಕೆ ಪ್ರೇರಣೆಯಾಗಿದ್ದು ಇಂಗ್ಲಿಷಿನಲ್ಲಿ ಪ್ರಕಟವಾದ ಫೇಬರ್ ಬುಕ್ ಆಫ್ ಮಾಡ್ರನ್ ವರ್ಸ್ ಗ್ರಂಥಕ್ಕೆ ಮಾದರಿ. ಅಕ್ಷರ ಹೊಸ ಕಾವ್ಯದಲ್ಲಿ ಸುಮಾರು 34 ಜನ ಕನ್ನಡದ ಪ್ರತಿಭಾವಂತ ಕವಿಗಳ ಕವಿತೆಗಳಿವೆ. ಲಂಕೇಶ್ ಅವರು 4000 ಪದ್ಯಗಳನ್ನು ಓದಿ ಆಯಾ ಕವಿಯ ಒಟ್ಟು ಜೀವನ ದೃಷ್ಟಿ, ಧೋರಣೆಗಳನ್ನು ಪ್ರತಿಬಿಂಬಿಸುವಂತೆ ಕವನಗಳನ್ನು ಆಯ್ಕೆ ಮಾಡಿದ್ದರು. ನವ್ಯಕಾವ್ಯದ ಪ್ರಮುಖ ಕವಿಗಳಾದ ಎಂ.ಗೋಪಾಲಕೃಷ್ಣ ಅಡಿಗರಿಂದ ಹಿಡಿದು ಬಿ.ಆರ್.ಲಕ್ಷ್ಮಣರಾವ್, ಶ್ರೀಕೃಷ್ಣ ಆಲನಹಳ್ಳಿ, ಕೆ.ವಿ.ತಿರುಮಲೇಶ್, ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ ಮೊದಲಾದ ಕವಿಗಳ ಕವನಗಳು ಈ ಸಂಕಲನದಲ್ಲಿ ಸೇರಿವೆ. ಕವಿಗಳ ಮತ್ತು ಕವಿತೆಗಳ ಆಯ್ಕೆಯು ಪ್ರಕಟವಾದ ಸಂದರ್ಭದಲ್ಲಿ ತೀವ್ರವಾದ ವಿವಾದ-ಚರ್ಚೆಗೆ ಕಾರಣವಾಗಿತ್ತು. ಹೈದರಾಬಾದ್ ಕರ್ನಾಟಕದ ಕವಿಗಳನ್ನು ಕಡೆಗಣಿಸಿದ್ದರಿಂದ ಶಾಂತರಸ ಅವರು ಅದಕ್ಕೆ ಪ್ರತಿಕ್ರಿಯೆಯಾಗಿ ’ಬೆನ್ನ ಹಿಂದಿನ ಬೆಳಕು’ ಸಂಕಲನ ಸಂಪಾದಿಸಿದ್ದರು.
ಬುದ್ಧಣ್ಣ ಹಿಂಗಮಿರೆ ಅವರು ’ಹೊಸ ಜನಾಂಗದ ಕವಿತೆಗಳು’ ಸಂಕಲನವನ್ನು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE