’ಸಪ್ತಧ್ವನಿ’ಯಲ್ಲಿ ಮಹಿಳೆ, ವ್ಯಕ್ತಿ ಮತ್ತು ಸಂದರ್ಶನ, ಪ್ರವಾಸ, ಜನಪದ, ಹಾಸ್ಯ, ಶಿಕ್ಷಣ ಹಾಗೂ ಸಂಕೀರ್ಣ ಎಂಬ ಏಳು ಭಾಗಗಳಲ್ಲಿ ಲೇಖನಗಳು ಹರಿದು ಬಂದಿವೆ. ಈ ಎಲ್ಲಾ ಲೇಖನಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಸುಧಾ, ಮಯೂರ, ತರಂಗ, ಕರ್ಮವೀರ, ಮುಂತಾದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವ್ಯಕ್ತಿ ಪರಿಚಯ, ಸ್ಥಳ ಮಹಿಮೆ, ನೀತಿ ನಿರೂಪಣೆ, ಕುಟುಂಬ ನಿರ್ವಹಣೆ, ನೇಕಾರಿಕೆ, ಕೃಷಿ, ಶಿಕ್ಷಣ ಹಾಗೂ ಜಾನುವಾರುಗಳ ಕುರಿತ ಲೇಖನಗಳನ್ನು ಈ ಕೃತಿಯೂ ಒಳಗೊಂಡಿದೆ. ಹಿರಿಯ ಗೋವು ಶಾಲೆಯಿಂದ ಶಿವಯೋಗ ಮಂದಿರದ ಗೋಶಾಲೆಗೆ ಕಳಿಸಲ್ಪಡುವುದು, ಹೆಣ್ಣುಮಗಳೊಬ್ಬಳನ್ನು ತವರಿನಿಂದ ಗಂಡನ ಮನೆಗೆ ಕಳುಹಿಸುವಂತೆ ಎಂದು ಬಣ್ಣಿಸುವ ದೃಶ್ಯ ಓದುಗರನ್ನು ಭಾವಪರವಶರನ್ನಾಗಿಸುತ್ತವೆ. ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ ಎಂಬ ಡಿ.ವಿ.ಜಿ ಯವರ ಮಾತಿನಂತೆ ಇಲ್ಲಿ ತಿಳಿಹಾಸ್ಯದ ಹೊನಲನ್ನು ಇಲ್ಲಿ ಹರಿಸಿದ್ದಾರೆ. ಶಿಕ್ಷಣದ ಬಗೆಗಿನ ಬರಹಗಳು, ಮಗುವಿನ ಸರ್ವತೋಮುಖ ಬೆಳವಣಿಗೆ, ವಿದ್ಯೆಯ ಮೂಲ ಉದ್ದೇಶ ಎಂಬುದನ್ನು ಇಲ್ಲಿ ಸಾಬೀತು ಪಡಿಸಿವೆ. ಮಹಾತ್ಮಾಗಾಂಧಿ, ವಿವೇಕಾನಂದರು ವ್ಯಾಖ್ಯಾನಿಸಿರುವ ಶಿಕ್ಷಣ ಕ್ಷೇತ್ರದ ಚಿತ್ರಣ ಇಲ್ಲಿ ಅಂತರ್ಗತವಾಗಿದೆ. ಲೇಖಕಿಯ ಸಾಮಾಜಿಕ ಕಾಳಜಿ ಕಳಕಳಿ ಈ ಕೃತಿಯಲ್ಲಿ ಅಭಿವ್ಯಕ್ತಗೊಂಡಿದೆ.
ಬೆಳಗಾವಿ ತಾಲ್ಲೂಕು ಸುಳೇಭಾವಿಯಯವರಾದ ಪಾರ್ವತಿ ಅವರು ಗ್ರಾಮ ಪಂಚಾಯಿತಿ ಆಡಳಿತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಶಾಂಗ್ರೀ- ಲಾ ಅಕಾಡೆಮಿ ನಿರ್ದೇಶಕಿಯಾಗಿ ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕು ಬವಣೆಯನ್ನು 'ಮಿಲನ' ಕಾದಂಬರಿಯಲ್ಲಿ ನೈಜವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟ ಪಾರ್ವತಿ ಪಿಟಗಿ ಐದು ಕಾದಂಬರಿ, ಒಂದು ಕಥಾ ಸಂಕಲನ, ಲೇಖನ ಸಂಕಲನ ಪ್ರಕಟಿಸಿದ್ದಾರೆ. ಅವರ ಹಲವು ಕಥೆ, ಕಾದಂಬರಿ, ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಮಿಲನ' ಕಾದಂಬರಿಗೆ ದೇವರ ದಾಸಿಮಯ್ಯ ಸಾಹಿತ್ಯ ಶ್ರೀ ಪ್ರಶಸ್ತಿ ಸಂದಿದೆ. ಅವರ ಬಹುತೇಕ ಕಥೆ, ಕಾದಂಬರಿಗೆ ಪ್ರಶಸ್ತಿಗಳು ಸಂದಿವೆ. ಬೆಳಗಾವಿ ಜಿಲ್ಲೆಯ ಆಡುಭಾಷೆಯಲ್ಲಿ ...
READ MORE