ಗೋವಿಂದ ಪೈ ಅವರ ಪತ್ರ ವ್ಯವಹಾರಗಳ ಮೇಲೆ ಬೆಳಕು ಚೆಲ್ಲುವ ಕೃತಿ ‘ಪತ್ರಗಳು ಚಿತ್ರಿಸಿದ ಗೋವಿಂದ ಪೈ’ ಲೇಖಕ ಶ್ರೀನಿವಾಸ ಹಾವನೂರರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಪತ್ರ ಸಾಹಿತ್ಯದಲ್ಲಿ ನನಗೆ ಮೊದಲಿನಿಂದಲೂ ಆಸ್ಥೆ-ಅದೊಂದು ಸಾಹಿತ್ಯಾಭ್ಯಾಸದ ಅಮೂಲ್ಯ ಸಾಧನವೆಂದು. ಆಂಗ್ಲ ಕವಿ-ಲೇಖಕರನೇಕರ ಪತ್ರ- ಸಂಗ್ರಹಾ ವೃತ್ತಿಗಳನ್ನು ನೋಡಿದ್ದೆ. ಕನ್ನಡದಲ್ಲಿ ಒಂದಾದರೂ ಇಲ್ಲ ಎಂದುಕೊಳ್ಳುತ್ತಿದ್ದಾಗ ನಮ್ಮ ಕು.ಶಿ. ಹರಿದಾಸ ಭಟ್ಟರು 1963ರಲ್ಲಿ ಪೈ ಪತ್ರ ಸಂಗ್ರಹಕ್ಕೆ ಉದ್ಯುಕ್ತರಾದದ್ದೂ ದೀವಿಗೆ-1 ರಲ್ಲಿ ಪೈಗಳ ಐವತ್ತು ಪತ್ರಗಳನ್ನು ಪ್ರಕಟಿಸಿದ್ದುದೂ ನನಗೆ ಸಂತೋಷವನ್ನುಂಟುಮಾಡಿದ್ದಿತು. ಆದರೂ ಅವರಿಗೆ ನಾನು ಇಷ್ಟೇನೆ ಎಂದು ಕೇಳಿದ್ದುಂಟು. ಮುಂದೆ ಇಪ್ಪತ್ತು ವರ್ಷಗಳ ಆನಂತರ ಪೈಗಳ ಜನ್ಮಶತಾಬ್ದಿಯ ಕಾಲಕ್ಕೆ ಮಂಗಳೂರು ವಿಶ್ವವಿದ್ಯಾಲನಿಲಯದ ಕನ್ನಡ ಅಧ್ಯಯನ ವಿಭಾಗದ ಪರವಾಗಿಯೂ ರಾಷ್ಟ್ರಕವಿ ಗೋವಿಂದ ಪೈಗಳ ಸಂಶೋಧನ ಕೇಂದ್ರದ ಪರವಾಗಿಯೂ ಇನ್ನಷ್ಟು ಪತ್ರಗಳನ್ನು ಸಂಗ್ರಹಿಸಲಾಯಿತು’ ಈ ಮಧ್ಯೆ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರದ ಸಂಸ್ಥೆಯವರು ಗೋವಿಂದ ಪೈಗಳ ಕುರಿತು ಭಾಷಣ ಮಾಡಲು ನನಗೆ ಕೇಳಿದಾಗ ನಾನು ಅವರ ಪತ್ರಗಳ ವಿಷಯವನ್ನೇ ಆಯ್ದುಕೊಂಡೆ. ಅದನ್ನು ಜಿ.ಪಿ. ರಾಜರತ್ನಂ ಸ್ಮಾರಕ ಉಪನ್ಯಾಸ ಮಾಲೆಯ ಅಂಗವಾಗಿ ಏರ್ಪಡಿಸಿದ್ದುದು ಅರ್ಥಪೂರ್ಣವಾಗಿದ್ದಿತು. ಏಕೆಂದರೆ ಪೈ ಅವರ ಪತ್ರಸಾಹಿತ್ಯಕ್ಕೂ ರಾಜರತ್ನಂ ಅವರಿಗೂ ಒಂದು ಬಗೆಯ ಅವಿನಾಭಾವಿಯಾದ ಸಂಬಂಧ. ಅವರು ಪೈಗಳೊಡನೆ ಅಖಂಡ ಮೂವತ್ತು ವರ್ಷಗಳ ಕಾಲ ಪತ್ರವ್ಯವಹಾರ ಮಾಡಿದವರು. ಮಾತ್ರವಲ್ಲದೆ ಅವನ್ನು 1971ರಲ್ಲಿ ಪ್ರಕಟಿಸಿದ್ದಾರೆ. (ಮಂಜೇಶ್ವರದ ಶ್ರೀಎಂ.ಗೋವಿಂದ ಪೈ ಅವರ ಕೆಲವು ಪತ್ರಗಳು) ಇನ್ನು ಕೆಲವರು ಬಿಡಿಯಾಗಿ ತಮ್ಮಲ್ಲಿದ್ದ ಪೈ ಪತ್ರಗಳನ್ನು ಪ್ರಕಟಿಸಿದ್ದೂ ಇದೆ. ಆದರೆ ಈಚಿನ ಎರಡು ವರ್ಷಗಳಲ್ಲಿ ನಾವು ಸಂಗ್ರಹಿಸಿದ ಪತ್ರಗಳು ಅಪ್ರಕಟಿಸವಿವೆ. ಆದ್ದರಿಂದ ಪೈ ಅವರ ಎಲ್ಲ ಪತ್ರಗಳು (ರಾಜರತ್ನಂ ಪ್ರಕಟಿಸಿದುವನ್ನು ಬಿಟ್ಟು) ಏಕತ್ರ ದೊರೆಯುವಂತಾಗಬೇಕೆಂದು ಯೋಚಿಸಿ. ಅವನ್ನೆಲ್ಲಾ ಇಲ್ಲಿ ಸಂಕಲಿಸಿ ಹೊರತರುತ್ತಲಿದ್ದೇವೆ ಎಂದಿದ್ದಾರೆ ಶ್ರೀನಿವಾಸ ಹಾವನೂರು.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE