ಚಂದ್ರಶೇಖರ ಸಿ.ಆರ್ ಅವರ ಕೃತಿ ಯುವಜನರ ಸಮಸ್ಯಾತ್ಮಕ ಮಾತು - ವರ್ತನೆಗಳಿಗೆ ಪರಿಹಾರವೇನು ?. 15ರಿಂದ 20 ವರ್ಷ ಅವಧಿಯ ವಯಸ್ಸು, ವ್ಯಕ್ತಿತ್ವ ವಿಕಸನದ ಕಡೆಯ ಹಂತ. ವ್ಯಕ್ತಿಯ ಆಸೆ-ಆಕಾಂಕ್ಷೆಗಳು, ಆಲೋಚನೆ ವಿಚಾರಗಳು, ಧೋರಣೆ, ನೀತಿ-ಮೌಲ್ಯಗಳು ಯಾವುದೇ ಸಾಮಾನ್ಯ ವಿಷಯ, ವಸ್ತು, ವ್ಯಕ್ತಿ, ಸಂದರ್ಭಕ್ಕೆ ತೋರಬೇಕಾದಂತಹ ಪ್ರತಿಕ್ರಿಯೆಗಳು ನಿರ್ದಿಷ್ಟ ರೂಪ ಪಡೆದು ಗಟ್ಟಿಗೊಳ್ಳುವ ಅವಧಿ. ಬಾಲ್ಯದ ಮುಗ್ಧತೆ, ಬೆರಗು ಕರಗಿ, ಪ್ರೌಢತೆಯ ಬೆಳಕು, ಶಕ್ತಿ ಚತುರತೆಗಳು ಪಕ್ವಗೊಳ್ಳುವ ಕಾಲ. ಹುಟ್ಟುವಾಗ ಮತ್ತು ಆನಂತರ, ಮಗು ಅಮ್ಮನ ಹಾಗೋ, ಅಪ್ಪನ ಹಾಗೋ, ಅಜ್ಜಿಯ ಹಾಗೋ ತಾತನ ಹಾಗೋ ಎಂದು ಎಲ್ಲರಿಂದ ವಿಮರ್ಶೆಗೊಳ್ಳುತ್ತದೆ. ೨೦ನೇ ವರ್ಷ ಮುಟ್ಟಿದಾಗ ಅದು ಎಲ್ಲರಿಂದ ಅಷ್ಟು ಇಷ್ಟನ್ನು ಪಡೆದು ಶಿಕ್ಷಣ, ಸಮಾಜ ಪರಿಸರದ ಮೂಸೆಯಲ್ಲಿ ಬೆಂದು, ಒಂದು ನಿರ್ದಿಷ್ಟ ರೂಪವನ್ನು ಪಡೆದಾಗ, ಅದಕ್ಕೆ ತನ್ನದೇ ಆದ ವಿಶಿಷ್ಟತೆ ಇರುತ್ತದೆ. ಪ್ರತಿಯೊಂದು ವ್ಯಕ್ತಿಯ ಸಹಿ ಅವನಿಗೇ ವಿಶಿಷ್ಟವಾಗಿರು ವಂತೆ, ವ್ಯಕ್ತಿತ್ವವೂ ವಿಶಿಷ್ಟವಾಗಿರುತ್ತದೆ. ವ್ಯಕ್ತಿತ್ವದಲ್ಲಿ ಪಾಸಿಟಿವ್ ಅಂಶಗಳು ಹೆಚ್ಚೇ, ನೆಗೆಟಿವ್ ಅಂಶಗಳು ಹೆಚ್ಚೇ, ಯಾವುದು ಆನುವಂಶಿಕವಾಗಿ ಬಂದದ್ದು, ಯಾವುದು ತಂದೆ-ತಾಯಿಯ ಲಾಲನೆ ಪಾಲನೆಯಿಂದ ಬಂದದ್ದು, ಯಾವುದು ಶಾಲೆ-ಕಾಲೇಜಿನ ಶಿಕ್ಷಣದಿಂದ ಬಂದದ್ದು, ಯಾವುದು ಈಗ ಅತ್ಯಂತ ಪ್ರಭಾವಶಾಲಿಯಾಗಿರುವ ಮಾಧ್ಯಮಗಳಿಂದ ಬಂದದ್ದು, ಯಾವುದು ಸಮಾಜ-ಸಂಸ್ಕೃತಿ ಸಂಪ್ರದಾಯಗಳಿಂದ ಬಂದದ್ದು ಎಂದು ಹೇಳುವುದು ಬಲುಕಷ್ಟ. ನಿತ್ಯ ಪರಿವರ್ತನೆ, ನಿತ್ಯ ವಿಕಾಸದ ಹಾದಿಯಲ್ಲಿರುವ ಯುವ ಪುರುಷ - ಸ್ತ್ರೀಯ ಮಾತು ವರ್ತನೆಗಳು ಅವರಿಗೆ ಹಿತವೇ ಅಹಿತವೇ, ಕುಟುಂಬದವರಿಗೆ ಹಿತವೇ ಅಹಿತವೇ, ಎಂಬುದನ್ನು ಅನೇಕ ಆಂತರಿಕ ಮತ್ತು ಬಾಹ್ಯ ಪ್ರಚೋದನೆಗಳು ನಿರ್ಧರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹಿಂದೆಂದಿ ಗಿಂತಲೂ ಅಧಿಕವಾಗಿ ಯುವಜನರ ಮಾತುಗಳು ಮತ್ತು ವರ್ತನೆಗಳಲ್ಲಿ ಏರುಪೇರು, ಅಸಹಜತೆ ಅಸಾಮಾನ್ಯ ಗುಣಗಳು ಕಾಣಿಸಿಕೊಳ್ಳುತ್ತಿವೆ. ಯುವಜನರ ಧೋರಣೆ - ವರ್ತನೆಗಳು ಕುಟುಂಬ ಮತ್ತು ಸಮಾಜಕ್ಕೆ ಅಹಿತವನ್ನುಂಟುಮಾಡುತ್ತಿವೆ. ಸವಾಲಾಗುತ್ತಿವೆ. ಕೆಲವರ ನಡೆನುಡಿಗಳು ವಿಕೃತವಾಗಿ, ವಿಚಿತ್ರವಾಗಿ ದಿಗ್ಭ್ರಮೆಯನ್ನುಂಟುಮಾಡುತ್ತಿವೆ. ಸಂಬಂಧಪಟ್ಟವರಿಗೆ ಕ್ಷೋಭೆಯನ್ನುಂಟುಮಾಡುತ್ತಿವೆ. ಒಟ್ಟಿನಲ್ಲಿ ಯುವ ಜನರ ಮನಸ್ಸು ಹೆಚ್ಚೆಚ್ಚು ಕ್ಷೋಭೆಗಳಿಗೆ ಒಳಗಾಗಿ ಅವರ ಮಾತು-ವರ್ತನೆಗಳು ಅಸಹಜ, ಅಹಿತ ಮತ್ತು ತೊಂದರೆದಾಯಕವಾಗುತ್ತಿವೆ. ಈ ಪುಸ್ತಕದಲ್ಲಿ ಈ ಎಲ್ಲ ವಿಚಾರಗಳನ್ನು ಉದಾಹರಣೆ ಸಹಿತ ಚರ್ಚಿಸಲಾಗಿದೆ. ಪರಿಹಾರ ಮಾರ್ಗಗಳನ್ನು ಸೂಚಿಸಲಾಗಿದೆ. ಮನಶ್ಶಾಸ್ತ್ರಜ್ಞರು ಆಪ್ತ ಸಮಾಲೋಚಕರು ಮನೋವೈದ್ಯರು ಈ ದಿಸೆಯಲ್ಲಿ ನೆರವಾಗಬಲ್ಲರು. ಅವರ ನೆರವನ್ನು ಪಡೆಯಿರಿ. ಬಾಲ್ಯದಿಂದಲೇ ಮಕ್ಕಳ ಲಾಲನೆ ಪಾಲನೆಯನ್ನು ಸರಿಯಾಗಿ ಮಾಡಿದರೆ ಶಾಲೆಯಲ್ಲಿ ಶಿಕ್ಷಕರು ಸರಿಯಾದ ಮಾರ್ಗದರ್ಶನ ಮಾಡಿದರೆ, ಮಾಧ್ಯಮದವರು ಸಹಕರಿಸಿದರೆ, ಯುವಜನರ ಮಾತು-ವರ್ತನೆಗಳು ಆರೋಗ್ಯಕರವಾಗಿ, ಹಿತಕರವಾಗಿ ಹಾಗೂ ಸಮಾಜಮುಖಿಯಾಗಿರಲು ಸಾಧ್ಯವಿದೆ. ಈ ಪುಸ್ತಕವು ಪಾಲಕರ, ಶಿಕ್ಷಕರ ಮಾರ್ಗದರ್ಶಕವಾಗಿರಲಿ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE