ಈಗ ಭಾರತ ಮಾತನಾಡುತ್ತಿದೆ

Author : ದೇವನೂರ ಮಹಾದೇವ

Pages 56

₹ 50.00




Year of Publication: 2020
Published by: ಅಭಿರುಚಿ ಪ್ರಕಾಶನ
Address: #386, 14ನೆಯ ಮುಖ್ಯರಸ್ತೆ ಮೂರನೆಯ ಅಡ್ಡರಸ್ತೆ ಸರಸ್ವತೀಪುರ ಮೈಸೂರು-9
Phone: 9980560013

Synopsys

ದೇವನೂರು ಮಹಾದೇವ ಅವರು ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್ ಕುರಿತು ಈವರೆಗೂ ಅಲ್ಲಿಲ್ಲಿ ಆಡಿದ ಮಾತುಗಳ ತುಣುಕು, ಭಾಷಣ ಹಾಗೂ ಪ್ರಕಟವಾದ ಲೇಖನಗಳ ಗುಚ್ಛ ‘ಈಗ ಭಾರತ ಮಾತನಾಡುತ್ತಿದೆ’.

ಪ್ರಸಕ್ತ ರಾಜಕೀಯ ನಿಲುವುಗಳನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ಪರಿಷ್ಕರಿಸಿ ತಮ್ಮ ಒಳನೋಟವನ್ನು ವಿಸೃತವಾಗಿ ತಿಳಿಸಿದ್ದಾರೆ. ಮುಖಪುಟದಲ್ಲಿ ದೇವನೂರು ಅವರ ಮಾತುಗಳು ಇಂತಿವೆ. “ಗೋಡ್ಸೆ, ಗಾಂಧಿ ಕಾಲಿಗೆ ನಮಸ್ಕರಿಸಿ ಆ ಮೇಲೆ ಗಾಂಧಿ ಹೃದಯಕ್ಕೆ ಗುಂಡು ಹೊಡೆಯುತ್ತಾನೆ. ಮೋದಿಯವರೂ ಪ್ರಧಾನಿಯಾದಾಗ ಸಂವಿಧಾನಕ್ಕೆ ವಿನಮ್ರವಾಗಿ ಬಗ್ಗಿ ನಮಸ್ಕರಿಸುತ್ತಾರೆ. ನಮಸ್ಕರಿಸಿ, ಸಂವಿಧಾನದ ಆಶಯಕ್ಕೆ ಗುಂಡು ಹೊಡೆದು ಬಿಟ್ಟರು”.

About the Author

ದೇವನೂರ ಮಹಾದೇವ
(10 June 1948)

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವ (ಶಾಲಾ ದಾಖಲಾತಿಗಳ ಪ್ರಕಾರ 1948ರ ಜೂನ್ 10) ಅವರ ತಂದೆ ನಂಜಯ್ಯ ಮತ್ತು ತಾಯಿ ನಂಜಮ್ಮ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲಕತೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ  ಸ್ನಾತಕೋತ್ತರ ಪದವಿ (ಎಂ.ಎ 1973-74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ’ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ಕೃತಿಗಳನ್ನು ...

READ MORE

Reviews

ಪೌರತ್ವ ತಿದ್ದುಪಡಿ: ಅನುಮಾನ, ಆಕ್ರೋಶದ ಅಭಿವ್ಯಕ್ತಿ

ಕನ್ನಡದ ಕ್ರಿಯಾಶೀಲ ಲೇಖಕ ದೇವನೂರ ಮಹಾದೇವ ಬರೆದದ್ದು ಕಡಿಮೆ ಎನ್ನುವುದು ಹಳೇ ದೂರು. ಕಳೆದ ಎರಡು ದಶಕಗಳಲ್ಲಿ ಅವರು ಬರೆದದ್ದಕ್ಕಿಂತ ಸಾರ್ವಜನಿಕವಾಗಿ ಮಾತನಾಡಿದ್ದೇ ಹೆಚ್ಚು ಎನ್ನುವುದೂ ನಿಜ. ಹಾಗೆಂದು ಅವರು ಗಂಟೆಗಳ ಕಾಲ ಮಾತನಾಡುವವರಲ್ಲ. ಹೆಚ್ಚೆಂದರೆ 5ರಿಂದ 10 ನಿಮಿಷ. ಇತ್ತೀಚೆಗೆ ದೇಶದಲ್ಲಿ ಸೈದ್ಧಾಂತಿಕ ಸಂಘರ್ಷವನ್ನು ಹುಟ್ಟುಹಾಕಿರುವ ಎನ್‌ಪಿಆರ್‌ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ), ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಮತ್ತು ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ)ಗಳ ಕುರಿತು ಮಹಾದೇವರ ಭಾಷಣ/ ಲೇಖನಗಳ ಸಂಗ್ರಹವಿದು. ರಹಮತ್‌ ತರೀಕೆರೆ ಸಂವಿಧಾನದ ಪೀಠಿಕೆಯ ಕುರಿತು ಬರೆದಿರುವ ಲೇಖನವೊಂದನ್ನು ಆರಂಭದಲ್ಲಿ ಮತ್ತು ಗೌತಮ್‌ ಭಾಟಿಯಾ ‘ಬಾಂಬೆ ಮಿರರ್‌’ನಲ್ಲಿ ಎನ್‌ಪಿಆರ್‌/ ಎನ್‌ಆರ್‌ಸಿ ಕುರಿತು ಬರೆದಿರುವ ಇಂಗ್ಲಿಷ್‌ ಲೇಖನದ ಕನ್ನಡ ಅನುವಾದವನ್ನು ಕೊನೆಯಲ್ಲಿ ಈ ಪುಸ್ತಕಕ್ಕೆ ಜೋಡಿಸಲಾಗಿದೆ. ಇಡೀ ಕೃತಿಯ ಕೇಂದ್ರ ಕಾಳಜಿ ಇವತ್ತು ದೇಶ ಎದುರಿಸುತ್ತಿರುವ ಪೌರತ್ವದ ಸಂಘರ್ಷ ಮತ್ತು ಆರ್ಥಿಕತೆಯ ಬಿಕ್ಕಟ್ಟು.

ಹದ್ದಾಗುವುದು ಬೇಡ, ಹಂಸ ಆಗಲಿ/ ಕಾ ಅಪಶಕುನ, ಎನ್‌ಆರ್‌ಸಿ ಎನ್‌ಪಿಆರ್‌ ಎಂಬ ಸಂಚು/ 99% ಭಾರತೀಯರು, 1 % ಕೋಮುವಾದಿಗಳು/ ನಾವು ಸದ್ಯಕ್ಕೆ ಉಳಿಯುವಂತಾಗಲು../ ಈಗ ಭಾರತ ಮಾತಾಡುತ್ತಿದೆ– ಹೀಗೆ ಐದು ಪುಟ್ಟ ಲೇಖನಗಳ ಸಂಕಲನವಿದು. ಗಂಭೀರವಾದ ವಿಷಯವೊಂದನ್ನು ಹೇಳುವಾಗಲೂ, ತಮ್ಮದೇ ಆದ ವಿಶಿಷ್ಟ ಪ್ರತಿಮೆಗಳನ್ನು ಬದುಕಿನಿಂದ ಎತ್ತಿಕೊಂಡು ಲೇಖನಕ್ಕೆ ಸೃಜನಶೀಲ ಆಯಾಮ ಕೊಡುವ ವಿಶಿಷ್ಟ ‘ದೇವನೂರ ಶೈಲಿ’ ಅಲ್ಲಲ್ಲಿ ಕಾಣಿಸುತ್ತದೆ. ಪೌರತ್ವ ತಿದ್ದುಪಡಿಯನ್ನು ಕಾಯ್ದೆ ಮಾಡಿದ ಬಳಿಕ ಆತಂಕಗೊಂಡ ಜನಸಮುದಾಯಕ್ಕೆ ‘ಆತಂಕಕ್ಕೆ ಒಳಗಾಗಬೇಡಿ, ನನ್ನನ್ನು ನಂಬಿ, ನಾನು ನಿಮ್ಮ ಸೇವಕ’ ಎಂದು ಪ್ರಧಾನಿ ಮೋದಿಯವರು ಮಾಡುವ ಭಾಷಣ, ಮಹಾದೇವ ಅವರಿಗೆ ‘ಸಿಲ್ಲಿ ಲಲ್ಲಿ’ ಟಿವಿ ಸೀರಿಯಲ್‌ನ ಸಮಾಜ ಸೇವಕಿ ಲಲಿತಾಂಬ ಪಾತ್ರವನ್ನು ನೆನಪಿಸುತ್ತದೆ! CAA ಎಂಬ ಕಾಯ್ದೆಯನ್ನು ‘ಕಾ ಎಂಬ ಅಪಶಕುನ’ ಎನ್ನುವಲ್ಲಿನ ವ್ಯಂಗ್ಯ; ಹೈಸ್ಕೂಲಿನಲ್ಲಿ ಮೇಷ್ಟ್ರು ಬೋರ್ಡ್‌ ಮೇಲೆ ‘of the people, by the people, for the people' ಎಂಬುದನ್ನು ಬರೆಯುತ್ತಾ ‘buy the people' ಎಂದು ಒಂದನ್ನು ತಪ್ಪು ಬರೆದು ಮಕ್ಕಳನ್ನು ತಪ್ಪು ಹುಡುಕುವಂತೆ ಹೇಳಿದ್ದು; ‘ನಾನು ಹುಟ್ಟಿದ್ದು ಸೋಮವಾರ ಸಂಜೆ ರೈಲು ದೊಡ್ಡಕವಲಂದೆ ಸ್ಟೇಷನ್‌ನಲ್ಲಿ ನಿಂತು ಹೊರಡುವ ಸಮಯವಂತೆ. ದಿನಾಂಕ ಇರಲಿ, ಇಸವಿಯೂ ಗೊತ್ತಿಲ್ಲ. ನನಗೇ ಹೀಗಿರುವಾಗ ಅಪ್ಪ–ಅಮ್ಮನ ಹುಟ್ಟಿದ ದಿನಾಂಕ ಕೇಳಿದರೆ ಏನನ್ನುವುದು?’ ಮುಂತಾಗಿ ತಮ್ಮ ಗಂಭೀರ ವಾದವನ್ನೂ ಸರಳ ಉದಾಹರಣೆಗಳ ಮೂಲಕ ಮನಮುಟ್ಟುವಂತೆ ಹೇಳುವ ಜಾಣ್ಮೆ ಮಹಾದೇವ ಅವರಿಗೆ ಸಿದ್ಧಿಸಿದೆ. ಪೌರತ್ವ ಕಾಯ್ದೆ ತಿದ್ದುಪಡಿಗಳ ಕುರಿತು ತಮ್ಮ ವಾದಗಳಿಗೆ ಪೂರಕವಾಗಿ ಇತರ ಲೇಖಕರ ಸಮರ್ಥನೆಗಳನ್ನು ಬಳಸಿಕೊಳ್ಳುವ ಮಹಾದೇವ, ದೇಶ ಸದ್ಯ ಎದುರಿಸುತ್ತಿರುವ ಸಂಘರ್ಷದ ಮತ್ತು ತ್ವೇಷಮಯ ಪರಿಸ್ಥಿತಿಗೆ ಇಲ್ಲಿ ಸಮರ್ಥ ಕೈಗನ್ನಡಿ ಹಿಡಿದಿದ್ದಾರೆ.

ಸಂವಿಧಾನದ ಪೀಠಿಕೆಯ ಕುರಿತು ರಹಮತ್‌ ತರೀಕೆರೆ ಬರೆದಿರುವ ಆರಂಭದ ಲೇಖನ ಪೀಠಿಕೆಯ ವಿಸ್ತರಿತ ವ್ಯಾಖ್ಯಾನವೇ ಆಗಿದೆ. ಸಂವಿಧಾನದ ಅಶೋಕಚಕ್ರದ ಲಾಂಛನ ಮತ್ತು ಸತ್ಯಮೇವ ಜಯತೆ ಎಂಬ ಧ್ಯೇಯವಾಕ್ಯಗಳು ಬೌದ್ಧ ಮತ್ತು ಉಪನಿಷತ್‌ ದರ್ಶನದ ಧಾರೆಗಳನ್ನು ಸಮೀಕರಿಸುವುದನ್ನು ಈ ಲೇಖನ ಸೂಕ್ತವಾಗಿ ಗುರುತಿಸಿದೆ. ಸಂವಿಧಾನದ ಪೀಠಿಕೆಯಲ್ಲಿ ನಮೂದಿಸಿರುವ ‘ಸೆಕ್ಯುಲರ್‌’ ಪದವನ್ನು ರಹಮತ್‌ ‘ಧರ್ಮನಿರಪೇಕ್ಷ’ ಎಂದು ಗ್ರಹಿಸಿದ್ದಾರೆ. ಕೃತಿಯ ಆರಂಭದಲ್ಲೇ ಸಂವಿಧಾನದ ಪ್ರಸ್ತಾವನೆಯನ್ನು ಕನ್ನಡದಲ್ಲಿ ಅನುವಾದಿಸಿ ಯಥಾವತ್ತಾಗಿ ಮುದ್ರಿಸಲಾಗಿದೆ. ಈ ಅನುವಾದದಲ್ಲಿ ‘ಸೆಕ್ಯುಲರ್‌’ ಶಬ್ದದ ಅರ್ಥವನ್ನು ಮಹಾದೇವ ಅವರು ‘ಜಾತಿಮತಾತೀತ’ ಎಂದು ಅನುವಾದಿಸಿದ್ದಾರೆ. ‘ಸೆಕ್ಯುಲರಿಸಂ’ ಕುರಿತು ಹಿಂದೂ ಬಲಪಂಥೀಯವಾದಿಗಳ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ‘ಸಂವಿಧಾನವಾದಿ’ಗಳ ಶಬ್ದ ವ್ಯಾಖ್ಯಾನ ನಿಖರವಾಗಿದ್ದಷ್ಟೂ ಒಳ್ಳೆಯದು. ಸಂವಿಧಾನದ ಪೀಠಿಕೆಯಲ್ಲಿಯೇ ಬದಲಾವಣೆ ಉಂಟು ಮಾಡುವ ಯತ್ನಗಳು ಇತ್ತೀಚೆಗೆ ಸಂಸತ್ತಿನಲ್ಲೇ ನಡೆಯುತ್ತಿವೆ. ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ರಾಕೇಶ್‌ ಸಿನ್ಹಾ, ‘ಸಂವಿಧಾನದ ಪೀಠಿಕೆಯಲ್ಲಿರುವ ಸೋಶಿಯಲಿಸ್ಟಿಕ್‌ ಎನ್ನುವ ಶಬ್ದವನ್ನು ಕಿತ್ತುಹಾಕಬೇಕೆಂದು’ ಖಾಸಗಿ ಮಸೂದೆ ಮಂಡನೆಗೆ ನೋಟಿಸ್‌ ನೀಡಿದ್ದು, ಅದು ಚರ್ಚೆಯ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ‘ಸಂವಿಧಾನವಾದಿ’ಗಳ ಅರ್ಥವ್ಯಾಖ್ಯಾನದಲ್ಲಿ ಗೊಂದಲ ಇದ್ದರೆ ವಾದ ದುರ್ಬಲವಾಗುವ ಸಾಧ್ಯತೆಯೂ ಇದೆ.

ಈ ಕೃತಿಯಲ್ಲಿ, ಇತ್ತೀಚಿನ ಪೌರತ್ವ ತಿದ್ದುಪಡಿಗಳ ಕುರಿತು ತಮ್ಮ ಅನುಮಾನ ಮತ್ತು ಆಕ್ರೋಶಗಳನ್ನು  ಮಹಾದೇವ ತರ್ಕಬದ್ಧವಾಗಿ ಅಭಿವ್ಯಕ್ತಿಸಿದ್ದಾರೆ. ಆದರೆ ಪೌರತ್ವ ತಿದ್ದುಪಡಿಯನ್ನು ಸಮರ್ಥಿಸುತ್ತಿರುವ ಬಣವು ಇಲ್ಲಿ ಎತ್ತಿರುವ ಪ್ರಶ್ನೆಗಳಿಗೆ ನೀಡುತ್ತಿರುವ ಉತ್ತರಗಳನ್ನೂ ನಿಕಷಕ್ಕೆ ಒಡ್ಡಿದ್ದರೆ ಕೃತಿಯ ಮಹತ್ವ ಇನ್ನಷ್ಟು ಹೆಚ್ಚುತ್ತಿತ್ತು. ‘ಈ ಪುಸ್ತಕಕ್ಕೆ ಕಾಪಿರೈಟ್‌ ಇಲ್ಲ. ಯಾರು ಬೇಕಿದ್ದರೂ ಇಲ್ಲಿನ ಲೇಖನಗಳನ್ನು ಬದಲಾವಣೆ ಇಲ್ಲದೆ ಮರುಮುದ್ರಿಸಿ ಹಂಚಬಹುದು’ ಎಂದು ಪ್ರಕಾಶಕರು ಆರಂಭದಲ್ಲೇ ಸೂಚಿಸಿರುವುದು ಗಮನಾರ್ಹ. ಇಲ್ಲಿರುವ ಲೇಖನಗಳು ಹಿಂದೆ ಎಲ್ಲಿ ಪ್ರಕಟಗೊಂಡಿವೆ ಎನ್ನುವುದನ್ನೂ ಅವರು ನಮೂದಿಸಬೇಕಿತ್ತು. v

ಬಿ.ಎಂ. ಹನೀಫ್‌

ಕೃಪೆ : ಪ್ರಜಾವಾಣಿ (2020 ಮಾರ್ಚಿ 22)

 

ಎಲ್ಲರ ಜೇಬುಗಳಲ್ಲಿರಬೇಕಾದ ಪುಸ್ತಕ

ಇತ್ತೀಚೆಗೆ ಭಾರತೀಯ ಸಂವಿಧಾನವನ್ನು ನಂಬಿಕೊಂಡಿರುವವರು ಮತ್ತು ಸರಕಾರದ ಪೌರತ್ವನೀತಿಗಳಿಂದ ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಜನಾಂಗಗಳು ದೊಡ್ಡ ಪ್ರಮಾಣದಲ್ಲಿ ಭಾರತದ ಉದ್ದಕ್ಕೂ ಪ್ರತಿಭಟನೆ ಮಾಡುತ್ತಿದ್ದಾರೆ. ಅಧಿಕಾರದಲ್ಲಿರುವ ಸರಕಾರವು ತನ್ನ ಪಕ್ಷ ಹಾಗೂ ಸ೦ಘ ಟನೆಗಳ ಬೆಂಬಲದೊಂದಿಗೆ ಪ್ರತಿಭಟಿಸುತ್ತಿರುವವರನ್ನು ಅತ್ಯಂತ ಬರ್ಬರವಾಗಿ ಹತ್ತಿಕ್ಕುತ್ತಿದೆ. ಸಂವಿಧಾನ ಹಾಗೂ ವ್ಯಕ್ತಿ ಸ್ವಾತಂತ್ರ್ಯಗಳಿಗಾಗಿ ಹೋರಾಟ ಮಾಡಬೇಕಾದವರು ಮೌನವಾಗಿದ್ದಾರೆ. ಅಷ್ಟು ಮಾತ್ರವಲ್ಲ ಅನೇಕರು ಪ್ರಭುತ್ವದ ಬೆಂಬಲಕ್ಕೆ ನಿಂತಿದ್ದಾರೆ. ಇಂಥ ಸನ್ನಿವೇಶದಲ್ಲಿ ನಮ್ಮ ಮಧ್ಯೆ ಅವಶ್ಯಕತೆಯಿದ್ದಾಗ ಮಾತ್ರ ಮಾತನಾಡಿ ತಮ್ಮ ಮಾತುಗಳ ಮೌಲ್ಯವನ್ನು ಉಳಿಸಿಕೊಂಡಿರುವ ದೇವನೂರ ಮಹಾದೇವರು ಈ ಬಗ್ಗೆ ನಿರಂತರವಾಗಿ ಮಾತನಾಡುತ್ತಾ, ಬರೆಯುತ್ತಾ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಾ ಕ್ರಿಯಾಶೀಲರಾಗಿದ್ದಾರೆ. 'ಈಗ ಭಾರತ ಮಾತಾಡುತ್ತಿದೆ' ಎನ್ನುವ ಈ ಸಣ್ಣ ಹೊತ್ತಿಗೆಯಲ್ಲಿ ಪೌರತ್ವ ಕಾಯಿದೆಗಳ ಕುರಿತು ಬರೆದಿರುವ ಟಿಪ್ಪಣಿಗಳು, ಲೇಖನಗಳು ಸಂಕಲಿತವಾಗಿವೆ. ಹೊತ್ತಿಗೆಗೆ ಪೀಠಿಕೆಯಾಗಿ ರಹಮತ್ ತರೀಕೆರೆ ಅವರು ಸಂವಿಧಾನದ ಪೀಠಿಕೆಯ ಬಗ್ಗೆ ಬರೆದ ಮೆಲುದನಿಯ ಲೇಖನದಲ್ಲಿ, ಅದರಲ್ಲಿ ಅಡಕವಾದ ಮೌಲ್ಯಗಳನ್ನು ಇಂದು ಅಧಿಕಾರದಲ್ಲಿರುವ ಶಕ್ತಿಗಳು ದುರ್ಬಲಗೊಳಿಸುತ್ತಿರುವುದರ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ. 

ಎಂದಿನಂತೆ ಮಹಾದೇವ ಅವರು ಧ್ವನಿಪೂರ್ಣವಾದ ರೂಪಕಗಳನ್ನು, ನಾಣ್ಣುಡಿಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಾ ಸಂವಿಧಾನ ವಿರೋಧಿ ಶಕ್ತಿಗಳ ಬಗ್ಗೆ ಕಟುವಾಗಿಯೇ ವಿಮರ್ಶೆ ಮಾಡಿದ್ದಾರೆ. ಮೋದಿಯವರನ್ನು 'ಸಿಲ್ಲಿ ಲಲ್ಲಿ'ಗೆ ಹೋಲಿಸಿ ಅವರು ಜನರ ನಂಬುಗೆಗೆ ಮಾಡಿರುವ ಮೋಸವನ್ನು ವಿವರಿಸುತ್ತಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಇತ್ಯಾದಿಗಳಿಂದ ಮತ್ತಷ್ಟು ಆರ್ಥಿಕ ಕುಸಿತ, ಮತ್ತಷ್ಟು ಉದ್ಯೋಗ ನಾಶ, ಮತ್ತಷ್ಟು ಬೆಲೆ ಏರಿಕೆ..... ಗುಂಪು ಥಳಿತ ಇತ್ಯಾದಿ, ಇತ್ಯಾದಿ ನರಕಕ್ಕೆ ನಮ್ಮನ್ನು ಕರೆದೊಯ್ಯುತ್ತವೆ”, ಇದು ಆಗಬಾರದೆಂದರೆ ಮೋದಿಯವರು ಹದ್ದಾಗುವ ಬದಲು ಹಂಸವಾಗಬೇಕೆಂದು ಮಹಾದೇವ ಸಲಹೆ ಕೊಡುತ್ತಾರೆ. ಈ ಲೇಖನಗಳಲ್ಲಿ ಬಹುತೇಕ ವಾದಗಳು, ಅಂಕಿ ಸಂಖ್ಯೆಗಳು ಈಗಾಗಲೇ ಸುಪರಿಚಿತವಾಗಿಬಿಟ್ಟಿವೆ. ಮಹಾದೇವರ ವಿಶಿಷ್ಟತೆಯೆಂದರೆ ನಮ್ಮೆದುರಿಗಿರುವ ಸಂವಿಧಾನಾತ್ಮಕ, ಸಾಂಸ್ಕೃತಿಕ, ರಾಜಕೀಯ ಅಪಾಯಗಳ ಬಗ್ಗೆ ಎಚ್ಚರವಾಗಿದ್ದುಕೊಂಡೇ ಈ ಕಾಯಿದೆಗಳ ವಿರುದ್ಧದ ಪ್ರತಿಭಟನೆಗಳು ಹುಟ್ಟುಹಾಕಿರುವ ಕ್ರಿಯಾಶೀಲತೆ, ಸಾಮುದಾಯಿಕ ಪ್ರಜ್ಞೆ ಮಹಿಳೆಯರ ಅಪಾರ ತಿಳುವಳಿಕೆ ಹಾಗೂ ಧೈರ್ಯಗಳ ಬಗ್ಗೆ ತುಂಬಾ ಆಶಾವಾದಿಯಾಗಿದ್ದಾರೆ. ಹೀಗಾಗಿ '೯೯% ಭಾರತೀಯರು V/s ೧% ಕೋಮುವಾದಿಗಳು' ಎಂಬ ಲೇಖನದಲ್ಲಿ ಈ % ಲೆಕ್ಕವನ್ನು ಒಪ್ಪಿಕೊಂಡಂತಿದೆ. ಆದರೆ ಇದೇ ಲೇಖನದಲ್ಲಿ ಅಂಬೇಡ್ಕರ್ ಅವರು ಅಭಿವ್ಯಕ್ತಿಸಿದ “ಭಾರತೀಯರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ?” ಎಂಬ ಪ್ರಶ್ನೆ ಕೇಳುತ್ತಾ, ಹೀಗಾಗಿ ಬಿಟ್ಟರೆ “ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ” ಎಂದು ಆತಂಕವು ಈ ಆಶಾವಾದವನ್ನು ಪ್ರಶ್ನಿಸುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಹಾಗೂ ಮಹಿಳೆಯರಲ್ಲಿ ಉಕ್ಕಿ ಬಂದಿರುವ ಯುಗದ ಉತ್ಸಾಹ ಮತ್ತು ಕ್ರಮೇಣವಾಗಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳನ್ನು ಕಳೆದುಕೊಳ್ಳುತ್ತಿರುವ ವಿಷಾದಗಳ ಮಧ್ಯ ಭಾರತವು ಈಗ ತೂಗುತ್ತಿದೆ. ವೈಯಕ್ತಿಕವಾಗಿ ನನಗೆ ಈ ೯೯% ಭಾರತೀಯರು” ಲೆಕ್ಕಾಚಾರದಲ್ಲಿ ನಂಬಿಕೆ ಇಲ್ಲ.

ಈ ಲೇಖನಗಳಲ್ಲಿ ಬ್ಯಾಂಕ್‌ಗಳ ಕುಸಿತ, ಹಿಂಸೆ ಇವುಗಳ ಬಗ್ಗೆಯೂ ಮಹಾದೇವ ಅವರ ಟಿಪ್ಪಣಿಗಳಿವೆ. ಸ್ಕೂಲವಾಗಿ ಹೇಳುವುದಾದರೆ ನಮ್ಮ ಸಾಮಾಜಿಕ ನೈತಿಕ ಪ್ರಜ್ಞೆಯಾಗಿರುವ ಬಹು ಮುಖ್ಯ ಲೇಖಕರು ನಮ್ಮ ದಿನನಿತ್ಯದ ಸರಳ ಆದರೆ ಅಪಾಯಕಾರಿಯಾದ ವಿದ್ಯಮಾನಗಳ ಬಗ್ಗೆ ಆಪ್ತವಾಗಿ ಬರೆದಿರುವ ಪುಸ್ತಕವಿದಾಗಿದ್ದು ಇದು ನಮ್ಮೆಲ್ಲರ ಜೇಬುಗಳಲ್ಲಿ ಜಾಗ ಪಡೆದು ಒಬ್ಬರೇ ಸಮಾಧಾನವಾಗಿ, ಸಹಮನಸ್ಕರು ಸಿಕ್ಕರೆ ಜೊತೆಯಾಗಿ ಓದುವುದು ನಮ್ಮೆಲ್ಲರ ಆರೋಗ್ಯಕ್ಕೆ ಒಳ್ಳೆಯದು.

-ರಾಜೇಂದ್ರ ಚೆನ್ನಿ

(ಹೊಸ ಮನುಷ್ಯ: ಏಪ್ರಿಲ್‌ 2020ರ ಸಂಚಿಕೆ)

Related Books