‘ಸಂನ್ಯಾಸಿ ಆಂದೋಲನ’ -ಲೇಖಕ ಬಿ.ಪಿ. ಪ್ರೇಮಕುಮಾರ್ ಅವರ ಕೃತಿ. ವ್ಯಾಪಾರದ ಸೋಗಿನಲ್ಲಿ ಬಂದ ಬ್ರಿಟಿಷರನ್ನು ಈ ದೇಶ, ಸಂಸ್ಕೃತಿಯ ವೈರಿಗಳು ಎಂದು ಮೊದಲಿಗೆ ಗುರುತಿಸಿದವರು ಯೋಗಿಗಳು ಅರ್ಥಾತ್ ಸಂನ್ಯಾಸಿಗಳು ಎನ್ನಲಾಗುತ್ತೆ. ಕೂಟನೀತಿಗಳಿಂದ ಬಂಗಾಳವನ್ನು ವಶಪಡಿಸಿಕೊಂಡ ಬ್ರಿಟಿಷರ ವಿರುದ್ಧ ಅರ್ಧಶತಮಾನಗಳ ಕಾಲ ಲಕ್ಷಾಂತರ ಸಂನ್ಯಾಸಿಗಳು ಸತತವಾಗಿ ಸೆಣೆಸಿದರು, ಬ್ರಿಟಿಷರಿಗೆ ಭಾರತ ಸುಲಭದ ತುತ್ತಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಕಲ್ಲು-ದೊಣ್ಣೆಗಳನ್ನೂ ಈಟಿ- ಭರ್ಜಿಗಳನ್ನು ಆಯುಧಗಳನ್ನಾಗಿ ಮಾಡಿಕೊಂಡು ಬಂಗಾಳದಾದ್ಯಂತ (ಈಗಿನ ಬಿಹಾರ- ಒರಿಸ್ಸಾದ ಕೆಲವು ಭಾಗಗಳು, ಪಶ್ಚಿಮಬಂಗಾಳ, ಬಾಂಗ್ಲಾದೇಶ) ಸಂಚರಿಸುತ್ತ ವ್ಯಾಪಕ ಜನಾಂದೋಲನ ನಡೆಸಿದ ಸಂನ್ಯಾಸಿಗಳು ಬ್ರಿಟೀಷರ ನಿದ್ದೆಗೆಡಿಸಿದರು. ಭಾರತವನ್ನು ಕಬಳಿಸಲೆಂದು ಬಂಗಾಳದ ಮೂಲಕ ಹೆಜ್ಜೆಯಿಟ್ಟ ಬ್ರಿಟಿಷರಿಗೆ ಭಾರತೀಯ ಸಮಾಜದ ಅದಮ್ಯ ಪ್ರತಿರೋಧಶಕ್ತಿಯನ್ನು ಪರಿಚಯಿಸಿರುವ ಈ ಅಪೂರ್ವ ಹೋರಾಟವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.