‘ಗತಿ ಸ್ಥಿತಿ ಮತ್ತೆಲ್ಲ’ ಕೃತಿಯು ಗಿರಿ(ಎಂ. ಎನ್. ಹೆಗ್ಡೆ) ಅವರ ಸಂಪಾದಿತ ಸೃಜನಶೀಲ ಬರಹಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ಕೆ. ಸತ್ಯನಾರಾಯಣ ಅವರು, `ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಸಂಗತಿಗಳು ಯಾವುವು ಎಂಬ ಜಿಜ್ಞಾಸೆ ಸಾಹಿತ್ಯ ಮತ್ತು ತತ್ವಶಾಸ್ತ್ರಗಳಿಗಿಂತಲೂ ಹಳೆಯದು. ನಾವು ಕಂಡದ್ದು ಮತ್ತು ಅನುಭವಿಸಿದ್ದರ ಮೇಲೆ ನಮ್ಮ ಸಾಮಾಜಿಕ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂಬುದು ಈವಾಗ ಗ್ರಹಿತ. ಕಾಣುವುದು ಬೇರೆಯೇ, ಅನುಭವ ಕಾಣುವುದರಿಂದ ಭಿನ್ನವಾದದ್ದೆ, ಹಾಗಿದ್ದರೆ ಹೇಗೆ ಭಿನ್ನ? ಇರುವುದನ್ನು ಕೂಡ ನಾವು ಯಾಕೆ ಇಡಿಯಾಗಿ ಕಾಣುವುದಿಲ್ಲ? ಭಯವೇ, ಕುರುಡೇ, ಕಿವುಡೇ?.. ಗಿರಿಯವರ 'ಕಂಡದ್ದು ಕಾಣದ್ದು' ಕಾದಂಬರಿ ಓದುವಾಗ ಮೇಲಿನ ಪ್ರಶ್ನೆಗಳು ಹುಟ್ಟುತ್ತವೆ. ಕಾದಂಬರಿ, ತನ್ನ ಅನುಭವದ್ರವ್ಯ, ನಿರೂಪಣಾ ಕ್ರಮ ಮತ್ತು ವಿನ್ಯಾಸದಲ್ಲಿ ಈ ಪ್ರಶ್ನೆಗಳನ್ನು ಎದುರಿಸುವ ನೈತಿಕತೆ ತೋರುತ್ತದೆ. ಈ ತಾತ್ವಿಕ ಛಾತಿಯ ಹಿಂದೆ ಗಾಢವಾದ ಸೃಜನಶೀಲ ಭಿತ್ತಿ ಮತ್ತು ಮನುಷ್ಯ ಸ್ವಭಾವದ ಬಗ್ಗೆ ಇರುವ ಗೌರವ ಕುತೂಹಲ ಕಂಡದ್ದು ಕಾಣದ್ದು' ಕಾದಂಬರಿಯನ್ನು ಈಚಿನ ಮುಖ್ಯ ಸಾಹಿತ್ಯ ಕೃತಿಗಳ ಸಾಲಿನಲ್ಲಿ ನಿಲ್ಲಿಸುತ್ತದೆ. ಎರಡು ಮೂರು ತಲೆಮಾರುಗಳ ಕತೆಯನ್ನು ಹೇಳಲು ಮರಳಿಮಣ್ಣಿಗೆ, ಮದುಮಗಳಿಗಿಂತ ಸಂಕ್ಷಿಪ್ತವಾದ, ಭಿನ್ನವಾದ, ಕೆಲವೊಮ್ಮೆ ಆ ರೀತಿಯ ವಿನ್ಯಾಸವನ್ನು ಹೊಂದಿದ ಕೃತಿಗಳಿಗಿಂತಲೂ ಹೆಚ್ಚಿನ ಧ್ವನಿಪೂರ್ಣತೆಯನ್ನು ಸಾಧಿಸುವ ವಿನ್ಯಾಸವೊಂದನ್ನು ಹುಡುಕುವ ಪ್ರಯತ್ನವಾಗಿ ಕೂಡ ಈ ಕಾದಂಬರಿಯನ್ನು ಗಮನಿಸಬಹುದು. ಕಾದಂಬರಿ ತನ್ನ ಓಟದಲ್ಲಿ ನಾನಾ ರೀತಿಯ ಭಾಷಿಕ ಪ್ರಯೋಗ ಮತ್ತು ನಿರೂಪಣಿಯ ಧಾಟಿಯನ್ನು ಒಳಗೊಂಡಿದೆ. ಸಾಧಾರಣವಾಗಿ ಕತೆ ಕಾದಂಬರಿಗಳಲ್ಲಿ ಎದುರಾಗುವ ವಾಕ್ಯರಚನಾಕ್ರಮವನ್ನು ಇಲ್ಲ ಬೇರೆ ಬೇರೆ ರೀತಿಯಲ್ಲಿ ಮುರಿಯಲಾಗಿದೆ. ಅಂತಹ ವಾಕ್ಯ ರಚನೆಯ ಕ್ರಮ ಕಥೆಯ ಸದಂರ್ಭಕ್ಕೆ ಔಚಿತ್ಯಕ್ಕೆ ಹೊಂದುತ್ತದೆ ಅನ್ನುವುದು ಅಷ್ಟೇ ಮುಖ್ಯ. ಕಂಡದ್ದು ಕಾಣದ್ದರ ನಡುವಿನ ಬದುಕು, ಸಂದಿಗ್ಧತೆ, ಹಿಂಸೆಯ ಬೇರೆಬೇರೆ ಮುಖಗಳನ್ನು ಶೋಧಿಸುವುದು ಕಾದಂಬರಿಯ ಹಿಂದಿನ ದರ್ಶನವೆನ್ನಬಹುದು. ಗತಿ-ಸ್ಥಿತಿ (condition and situation) ಎರಡೂ ಬೇರೆಬೇರೆಯಲ್ಲ. ಕಂಡದ್ದು ಕಾಣದ್ದು ಕೂಡ ಬೇರೆಬೇರೆಯಲ್ಲ, ಒಂದಕ್ಕಿಂತ ಇನ್ನೊಂದು ಮುಖ್ಯವಲ್ಲ ಎಂದಿದ್ದಾರೆ.
‘ಗಿರಿ ಹೆಗ್ಡೆ ಅವರು ಮೂಲತಃ ಮಲೆನಾಡಿನ ಸಾಗರ ತಾಲೂಕಿನ ಗೋಟಗಾರು ಹಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ.ಎ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಿ.ಎಂ.ಎಸ್.ಪಿ. ಪೂರೈಸಿದ್ದಾರೆ. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಮನೋವಿಜ್ಞಾನದ ಅಧ್ಯಾಪಕರಾಗಿದ್ದರು. 1970 ರಲ್ಲಿ ಅಮೇರಿಕಕ್ಕೆ ಹೋಗಿ ಸದರ್ನ್ ಇಲನಾಯ್ ಯೂನಿವರ್ಸಿಟಿಯಲ್ಲಿ ವಾಕ್ ಶ್ರವಣ ವಿಜ್ಞಾನದಲ್ಲಿ ಪಿ. ಹೆಚ್.ಡಿ ಪದವಿ ಪಡೆದರು. ಕ್ಯಾಲಿಪೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ, outstanding professor ಎಂಬ ಮನ್ನಣೆಗೆ ಪಾತ್ರರಾಗಿ, 30 ವರ್ಷ ಸೇವೆ ಸಲ್ಲಿಸಿ, ಸದ್ಯ ನಿವೃತ್ತರು. 25ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳನ್ನು ಬರೆದಿದ್ದು, ಪ್ರಸ್ತುತ ಕ್ಯಾಲಿಪೋರ್ನಿಯಾದ ಕ್ಲೋವಿಸ್ ಎಂಬ ಪಟ್ಟಣದಲ್ಲಿ ವಾಸವಿದ್ಧಾರೆ. ...
READ MORE