ಮಾನಸ.ಎಂ ಅವರ ‘ಕಡೆಗೀಲು’ ಲೇಖನಗಳ ಸಂಕಲನವಾಗಿದೆ. ’ಕನಿಷ್ಟ ಒಂದು ನಿಟ್ಟುಸಿರಿನ ಸದ್ದನ್ನು ಸೃಷ್ಟಿ ಮಾಡುವಷ್ಟಾದರೂ ನಾವು ಸಾಧಿಸದೇ ಹೋದರೆ?! 'ಹುಟ್ಟೋದ್ಯಾಕೆ ಸಾಯೋದ್ಯಾಕೆ' ಅನ್ನುವಂಥ ಸಾರ್ಥಕ ಸಾಲಿನಿಂದ ಶುರುವಾಗಿ 'ಕಡೆಗೀಲು' ಎಂಬ ಮೂವತ್ತೊಂದನೇ ಲೇಖನದೊಂದಿಗೆ ಕೊನೆಗೊಳ್ಳುವ ಈ ಸಂಕಲನ, ಲೇಖಕಿಯ ಲೇಖನಿಯ ಅಪಾರ ಶಕ್ತಿಯನ್ನು ತೋರುತ್ತದೆ. ಇದರಲ್ಲಿನ ಬರಹಗಳು ಕಾಲ್ಪನಿಕ ಲೋಕದಲ್ಲಿ ಭ್ರಮನಿರಸನಗೊಳ್ಳುವಂತಹ ಮನಸ್ಥಿತಿ ಉಳ್ಳವರಿಗೆ ಪಾಠಗಳ ರೀತಿಯಲ್ಲಿ ಮೂಡಿಬಂದರೆ, ಕೆಲವು ಬರಹಗಳು ಓದುಗರಿಗೆ ಪ್ರೇರಣಾ ಸ್ವರೂಪವಾಗಿ ಕಾಡಿ ಕನಸುಗಳ ಬೆನ್ಹತ್ತುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. 'ಕಡೆಗೀಲು' ಎಂಬ ಒಂದು ಸಣ್ಣ ವಿಶ್ವಾಸದ ಮೊಳೆ ದೊಡ್ಡ ದೊಡ್ಡ ಬಂಡಿಗಳನ್ನು ಸರಾಗವಾಗಿ ಚಲಿಸುವಂತೆ ಮಾಡಬಲ್ಲುದಾದರೆ ಇಂತಹ ಪ್ರೇರಣಾ ರೂಪದ ಲೇಖನಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಮಾನಸ.ಎಂ. ಮೂಲತಃ ಕಲ್ಪತರು ನಾಡಿನ ತುಮಕೂರಿನವಳು. ವೃತ್ತಿಯಲ್ಲಿ ಸದ್ಯ ಬೆಂಗಳೂರಿನ ವಿಜಯವಿಠ್ಠಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪ್ರಾಧ್ಯಾಪಕಿ. ಬರೆಯುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಇವರು, ತಂತ್ರಜ್ಞಾನ ಕ್ಷೇತ್ರದಲ್ಲಿದ್ದರೂ ಸದಾ ಓದಿನ ಹವ್ಯಾಸದವರು. ಸಾಹಿತ್ಯದ ಸೆಳೆತ ಹಾಗೂ ಭಾಷಾಭಿಮಾನದಿಂದ ಕತೆ, ನೀಳ್ಗತೆ, ಲೇಖನ, ಚುಟುಕುಗಳು, ಕವನ, ಪತ್ರಲೇಖನ, ಕಾದಂಬರಿಯಂತಹ ಸಾಹಿತ್ಯದ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರಯತ್ನದ ಫಲವಾಗಿ 'ಮನ್ವಂತರಂಗ' ಎಂಬ ಕವನ ಸಂಕಲನವನ್ನು ಮತ್ತು "ಕಡೆಗೀಲು-ಲೇಖನಗಳು" ಎಂಬ ಎರಡು ಪುಸ್ಯಕಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಮನಸ್ವಿನಿ, ಸುಮನಸ್ವಿನಿ ಇವರ ಕಾವ್ಯನಾಮ. ...
READ MORE