ಅಕ್ಷರ ದಾಹ

Author : ಗೀತಾ ವಸಂತ

Pages 156

₹ 120.00




Year of Publication: 2020
Published by: ಸ್ಟೂಡೆಂಟ್ ಬುಕ್ ಕಂಪನಿ
Address: 1ನೇ ಅಡ್ಡರಸ್ತೆ, ಶೃಂಗೇರಿ  ಶಂಕರ ಮಠದ ಹತ್ತಿರ, ಕೆ.ಆರ್.ಬಡಾವಣೆ, ತುಮಕೂರು
Phone: 9449307011

Synopsys

ಲೇಖಕಿ ಡಾ. ಗೀತಾ ವಸಂತ ಅವರ ಕೃತಿ-ಅಕ್ಷರ ದಾಹ. ಸಾಹಿತಿ ಹಾಗೂ ಕರ್ನಾಟಕ ಕೇಂದ್ರೀ ವಿ.ವಿ. ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಲೇಖನಗಳು ಗೀತಾ ವಸಂತ ಅವರ ವಿಶಾಲ ಓದಿಗೆ ಮತ್ತು ವಿಭಿನ್ನತೆಗೆ ಸಾಕ್ಷಿಯಾಗಿವೆ. ಪ್ರಾಚೀನ ಪಠ್ಯಗಳು, ಕೀರ್ತನೆ, ಜನಪದ ಕತೆ, ತತ್ವಪದ, ಬೇಂದ್ರೆ ಕಾವ್ಯ, ಶಿವಪ್ರಕಾರ ಕವಿತೆ, ಬರಗೂರರ ಕಾದಂಬರಿ, ದಲಿತ ಸಂಸ್ಕೃತಿ, ಸವದತ್ತಿ ಎಲ್ಲಮ್ಮ, ಅವಧೂತ ಪರಂಪರೆ ಹೀಗೆ ಕನ್ನಡ ಸಾಹಿತ್ಯ ಸಂಸ್ಕೃತಿಯ ಹಲವು ಮೂಲೆಗಳಿಗೆ ಲಗ್ಗೆ ಇಟ್ಟಿವೆ. ಗೀತಾ ಅವರು ತಮ್ಮ ವೈಯಕ್ತಿಕ ಓದಿನ ತುರ್ತಿನಲ್ಲಿ ಕಂಡದ್ದನ್ನು ಆಪ್ತವಾಗಿಸುವ ಸೃಜನಶೀಲ ಶೈಲಿ, ಕನ್ನಡ ಸಾಹಿತ್ಯದ ಎಲ್ಲ ಬಗೆಯ ತಾತ್ವಿಕತೆಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡು ಯಾವುದನ್ನೂ ಭಾರವಾಗಿಸಿಕೊಳ್ಳದೇ ಮಿಡಿದಿದೆ. ತೀರ್ಮಾನ ಕೊಡುವ ಅವಸರಕ್ಕೆ ಬೀಳದೇ ಹುಡುಕಾಟದಲ್ಲಿ ದಕ್ಕಿದ ಸ್ಪಂದನೆ, ಚಿಂತನೆಗಳಿಂದ ಅರಳಿಕೊಂಡಿವೆ. ಅವಧೂತ ಪರಂಪರೆಯ ಸೂಕ್ತ ಅವಲೋಕನ, ಬೇಂದ್ರೆ ಕಾವ್ಯ ಕುರಿತ ಒಳನೋಟಗಳು, ಕನ್ನಡ ವಿಮರ್ಶೆಗೆ ಹೊಸ ನೋಟ ಕೊಡಬಲ್ಲಷ್ಟು ಶಕ್ತವಾಗಿವೆ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಗೀತಾ ವಸಂತ
(20 April 1976)

ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು  . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು , ಪರಿಮಳದ ಬೀಜ’ ಗೀತಾ ವಸಂತ ಅವರ ಕವನಸಂಕಲನಗಳು. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಇವರ ...

READ MORE

Reviews

ವಿಶಾಲ ಹರವಿನ ʼಅಕ್ಷರ ದಾಹʼ

ಡಾ. ಗೀತಾ ವಸಂತ ಅವರ ʼಅಕ್ಷರ ದಾಹʼ ಎಂಬ ವಿಮರ್ಶಾ ಸಂಕಲನದಲ್ಲಿ ಒಟ್ಟು ೧೬ ಲೇಖನಗಳಿವೆ. ಹಳೆಗನ್ನಡ, ಹೊಸಗನ್ನಡ ಸಾಹಿತ್ಯದ ಕೆಲವು ಕೃತಿಗಳನ್ನು ಇಲ್ಲಿ ಸಮೀಕ್ಷೆ ಮಾಡಲಾಗಿದೆ. ಜೊತೆಗೆ ಕರ್ನಾಟಕದ ʼಅವಧೂತ ಪರಂಪರೆʼ, ʼಬುದ್ಧ: ನೈತಿಕ ವಿಕಾಸದ ಮಾರ್ಗʼ, ಕೈವಾರ ತಾತಯ್ಯ: ಆಧ್ಯಾತ್ಮಿಕ- ಸಾಂಸ್ಕೃತಿಕ ನೆಲೆʼ ಎಂಬ ಗಮನ ಸೆಳೆಯುವ ಲೇಖನಗಳು ಇವೆ.

ʼ ಹಳೆಹಗನ್ನಡ ಕಾವ್ಯದ ಮರುಸೃಷ್ಟಿಯ ಸವಾಲುಗಳು: ನಾಗಚಂದ್ರʼ ಎಂಬ ಲೇಖನದಲ್ಲಿ ಜೈನಪುರಾಣಗಳ ಸ್ವರೂಪ, ವಿನ್ಯಾಸ, ರಾಮಾಯಣ ಪರಂಪರೆ, ನಾಗಚಂದ್ರ ಉದಾತ್ತ ರಾವಣ, ಎಂಬ ಉಪಶೀರ್ಷಿಕೆಗಳಡಿಯಲ್ಲಿ ಕೆಲವು ಮಾಹಿತಿ ಸ್ವರೂಪದ ಒಳನೋಟಗಳನ್ನು ಲೇಖಕಿ ಕೊಟ್ಟಿದ್ದಾರೆ. ʼಜನ್ನನ ಕಾವ್ಯ: ಚಿತ್ತವೃತ್ತಿಗಳ ನಿಬಿಡಲೋಕʼ ಈ ಸಂಕಲನದ ಬಹುಮುಖ್ಯ ಲೇಖನವಾಗಿದ್ದು ಯಶೋಧರ ಚರಿತೆಯ ತಾತ್ವಿಕ ನೆಲೆಗಳ ಚರ್ಚೆ ಅಮೃತಮತಿಯ ಪಾತ್ರದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಕುವೆಂಪು ಅವರಿಂದ ಮೊದಲುಗೊಂಡು ಜಿ. ರಾಜಶೇಖರ್‌, ಗಿರಡ್ಡಿ ಗೋವಿಂದರಾಜು ಒಳಗೊಂಡಂತೆ ಹಿರಿಯ ಕಿರಿಯ ವಿಮರ್ಶಕರು ಈ ಕೃತಿಯ ಕುರಿತು ಚರ್ಚಿಸಿದ್ದಾರೆ. ಅವುಗಳಲ್ಲಿರುವ ಚರ್ಚೆ, ವಾದಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಲೇಖನದ ಚರ್ಚೆಯನ್ನು ಮುಂದುವರಿಸಿದ್ದರೆ ಇನ್ನೂ ಹೆಚ್ಚಿನ ಒಳನೋಟಗಳನ್ನು ಕೊಡಲು ಸಾಧ್ಯವಾಗುತ್ತಿತ್ತು.

ʼ ಕನ್ನಡ ಕೀರ್ತನಸಾಹಿತ್ಯ ಸಂಪಾದನೆಯ ತಾತ್ವಿಕತೆ, ʼಸತ್ಯವಂತರ ಸಂಗವಿರಲುʼ ಲೇಖನಗಳು ಕೀರ್ತನ ಸಾಹಿತ್ಯದ ಸಾಂಸ್ಕೃತಿಕ ಮಹತ್ವ, ತಾತ್ವಿಕ ಒಳನೋಟಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವ ಕ್ರಮದಲ್ಲಿ ಯಶಸ್ವಿಯಾಗಿವೆ.  ʼಗ್ರಾಮಾಯಣ ಕಾದಂಬರಿಯಲ್ಲಿ ಕುಟುಂಬ ಮತ್ತು ಮಹಿಳೆʼ, ಜ್ಯೋತಿ ಸ್ಪರ್ಶಿಸಿದ ಜ್ಯೋತಿ: ಕೆಳದಿʼ, ʼಹೋರಾಟದ ಮೌನ ಝರಿ ಸಾಹಿತ್ಯದ: ಬಹುಮುಖಿ ನೆಲೆಗಳುʼ ಈ ಲೇಖನಗಳು  ಸ್ತ್ರೀವಾದಿ ಅಧ್ಯಯನದ ನೆಲೆಗಳನ್ನೊಳಗೊಂಡಿವೆ.

ʼ ಕನ್ನಡ ಕಾವ್ಯಪರಂಪರೆಯ ಆರಂಭವು ಜೈನ ಕವಿಗಳಿಂದ ಆಯಿತುʼ ಎನ್ನುತ್ತದೆ ಈ ಕೃತಿಯ ಮೊದಲ ಲೇಖನದ ಮೊದಲ ಸಾಲು. ಕೃತಿಕಾರರ ಧರ್ಮ, ಜಾತಿಯನ್ನು  ಗುರುತಿಸಿ ಅಧ್ಯಯನ ಮಾಡಿರುವುದು ಕೃತಿಯ ಉದ್ದಕ್ಕೂ ಕಂಡುಬರುತ್ತದೆ. ಇಂದು ಈ ಬಗೆಯಲ್ಲಿಯೇ ಸಾಹಿತ್ಯ ಕೃತಿಗಳನ್ನು ಪರಿಶೀಲಿಸುವ ಕ್ರಮವೊಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕನ್ನಡ ಭಾಷೆಯಲ್ಲಿ ಬರೆಯುವ ಕೃತಿಕಾರ ಕನ್ನಡ ಲೇಖಕನಲ್ಲವೇ, ಕನ್ನಡ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ ಅವನನ್ನು ಅಧ್ಯಯನ ಮಾಡಬೇಕಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. 

( ಪ್ರಜಾವಾಣಿ ಬರಹ - ಗೀತಾವಸಂತ)

Related Books