ಹೂಬಿಟ್ಟ ಕಣ್ಣು

Author : ಹುಲಿಕುಂಟೆ ಮೂರ್ತಿ

Pages 226

₹ 220.00




Year of Publication: 2018
Published by: ಸಿರಿವರ ಪ್ರಕಾಶನ
Address: ನಂ. ಎಂ. 37/ಬಿ, 8ನೇ ತಿರುವು ಲಕ್ಷ್ಮಿನಾರಾಯಣಪುರ, ಬೆಂಗಳೂರು- 560091
Phone: 98441 09706

Synopsys

ಹೂಬಿಟ್ಟ ಕಣ್ಣು ಕವಿ, ಲೇಖಕ ಹುಲಿಕುಂಟೆ ಮೂರ್ತಿ ಅವರ ಲೇಖನಗಳ ಸಂಕಲನ. ಧ್ವನಿಪೂರ್ಣವಾಗಿ ಬರೆಯುವುದು ತುಂಬಾ ಕಷ್ಟದ ಕೆಲಸ, ವಿಶೇಷ ಅರ್ಥಗಳನ್ನು ಹೊರಡಿಸುತ್ತೇವೆಂದು ಅಪಾರ್ಥ / ಅನೃತಗಳನ್ನೇ ಚಿಲುಮೆಯಂತೆ ಉಕ್ಕಿಸುವ ಜನರ ಬಾಯಿಯನ್ನು ಬರವಣಿಗೆಯ ಮೂಲಕ ಮುಚ್ಚಿಸುವುದು ಸುಲಭದ ಮಾತಲ್ಲ. ಇಂದಿನ ಸಂದರ್ಭದಲ್ಲಿ ಕುಕೀಯಗಳನ್ನು ಗುರುತಿಸುವ ಸೂಕ್ಷ್ಮತೆ ಹೇಗಿರಬೇಕೆಂದರೆ; ಬಂಡೆಗಲ್ಲಿಗೆ ಬೀಳುವ ಮೊದಲೇಟಿನ ಶಬ್ದ ಮಾತ್ರದಿಂದಲೇ ಅದು ಯಾವ ಶಿಲ್ಪವನ್ನು ಪಡಿಮೂಡಿಸುತ್ತದೆ ಎನ್ನುವುದನ್ನು ಗ್ರಹಿಸಬೇಕು. ಇಲ್ಲವಾದಲ್ಲಿ ನಾವು ತಿಮ್ಮಪ್ಪ ಮೂಡುತ್ತಾನೆಂದು ಕಾದು ಕುಳಿತಿದ್ದರೆ ಬೊಮ್ಮಪ್ಪ ಮೂಡಿಬಂದು ನಾನೇ ನಿನ್ನ ಸೃಷ್ಟಿಕರ್ತ ಎಂದು ನಂಬಿಸಿಬಿಡುತ್ತಾನೆ.

ಆಮೇಲೆ ಅವನನ್ನು ತಿಮ್ಮಪ್ಪನಾಗಿ ತಿದ್ದುವುದು ಕಡುಕಷ್ಟವೇ ಸರಿ, ಸಮಕಾಲೀನ ಸಂದರ್ಭದ ಆಗುಹೋಗುಗಳು ಉಂಟು ಮಾಡಬಲ್ಲ ಅಡ್ಡಪರಿಣಾಮಗಳನ್ನು ಮೊದಲೇ ಗ್ರಹಿಸಿ, ಅದಕ್ಕೆ ತಕ್ಕ ಅಕ್ಷರ ಮದ್ದನ್ನು ತಯಾರಿಸುತ್ತಿರುವವರಲ್ಲಿ ಹುಲಿಕುಂಟೆ ಮೂರ್ತಿಯೂ ಭರವಸೆ ಮೂಡಿಸುತ್ತಾರೆ. ಅಕ್ಷರ ತಲೆಗೆ ಬಿದ್ದರೆ ವೈದಿಕತೆಯೂ, ಎದೆಗೆ ಬಿದ್ದರೆ ದಲಿತತೆಯೂ ಒಡಮೂಡಿರುವ ಆಯಾ ಸಂದರ್ಭಗಳಲ್ಲಿ ಬುದ್ದಿಬಲವು ಇನ್ನಿಲ್ಲದಂತೆ ಬೆವರ ಪಸೆಯನ್ನು ನೆಕ್ಕಿ ನೆಕ್ಕಿ ಬರಡು ಮಾಡುತ್ತಿರುವಾಗ ಹತಾಶರಾಗದೆ, ಗಾಳಿ ಬಂದೆಡೆಗೆ ತೂರಿಕೊಳ್ಳದೆ ಅಥವಾ ವಿದ್ವತ್ಪೂರ್ಣತೆಯಿಂದ ಇತರರೊಂದಿಗೆ ಪ್ರತ್ಯೇಕಿಸಿಕೊಳ್ಳದೆ ಹುಲಿಕುಂಟೆ ಮೂರ್ತಿ ತಮ್ಮ ಬರಹಗಳಿಂದ ಉಂಟುಮಾಡುವ ಆರೋಗ್ಯಪೂರ್ಣ ಚರ್ಚೆಗಳಿಂದಾಗಿ ಇಷ್ಟವಾಗುತ್ತಾರೆ. ಇಲ್ಲಿನ ಬರಹಗಳು ವಿಮರ್ಶಿಸುವ ನೆಲೆಯಿಂದಲೂ ವಿಮರ್ಶೆಗೆ ಒಡ್ಡಿಕೊಳ್ಳುವ ನೆಲೆಯಿಂದಲೂ ಪ್ರಸ್ತುತವೆನಿಸುತ್ತವೆ.

ಕೋಮುವಾದಿಗಳನ್ನು ಇನ್ನಿಲ್ಲದಂತೆ ಈಡಾಡಿ ಬೈದು ಪ್ರಚುರಪಡಿಸುವ ಕಮ್ಮಿನಿಷ್ಠೆಗಿಂತಲೂ ಅಂಬೇಡ್ಕರ್ ಅವರನ್ನು ಪೂರ್ಣವಾಗಿ ಅರ್ಥಮಾಡಿಕೊಂಡರೆ ಇವತ್ತಿನ ಭಾರತದ ಸಂದರ್ಭದಲ್ಲಿ ನಮ್ಮ ಅಸ್ಮಿತೆಯನ್ನು ಖಂಡಿತ ಉಳಿಸಿಕೊಳ್ಳಬಹುದೆಂದು ನಂಬಿರುವ ಹುಲಿಕುಂಟೆ ಮೂರ್ತಿ ಅವರು 'ಹೂಬಿಟ್ಟ ಕಣ್ಣು' ಕೃತಿಯ ಮೂಲಕ ಹಾಗೆಯೇ ನಂಬಿರುವ ನಮ್ಮ ನಂಬಿಕೆಗೂ ಜೀವತುಂಬಿದ್ದಾರೆ. ಸಮಕಾಲೀನ ವಿದ್ಯಮಾನಗಳಿಗೆ ರೆಫರೆನ್ಸ್ ಬುಕ್ ಆಗಿರುವ ಇಲ್ಲಿನ ಲೇಖನಗಳು ಹೆಚ್ಚೆಚ್ಚು ಚರ್ಚೆ ಸಂವಾದಗಳಿಗೆ ಒಳಪಡಲಿ ಎನ್ನುತ್ತಾರೆ ಕವಿ ಎಸ್. ಮಂಜುನಾಥ್.

About the Author

ಹುಲಿಕುಂಟೆ ಮೂರ್ತಿ
(25 August 1981)

ಕವಿ, ಹೋರಾಟಗಾರ, ಉಪನ್ಯಾಸಕರಾದ ಹುಲಿಕುಂಟೆ ಮೂರ್ತಿಯವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯಲ್ಲಿ. ತಾಯಿ - ಹೊನ್ನಮ್ಮ, ತಂದೆ ನಾಟಕದ ಮೇಷ್ಟ್ರು ವೆಂಕಟರಂಗಯ್ಯ. ವಿದ್ಯಾರ್ಥಿ ದೆಸೆಯಿಂದಲೂ ಚಳವಳಿಗಳಲ್ಲಿ ಭಾಗಿಯಾಗಿ ಹೋರಾಟದ ಹಾಡುಗಳನ್ನ ಕಟ್ಟಿ, ಹಾಡುತ್ತಾ ಬೆಳೆದ ಹುಲಿಕುಂಟೆ ಮೂರ್ತಿ ವಿದ್ಯಾರ್ಥಿಯಾಗಿದ್ದಾಗಲೇ ಕವಿತೆ ಬರೆಯಲು ಆರಂಭಿಸಿದವರು. ಅವರ ಪ್ರಕಟಿತ ಕೃತಿಗಳು ಮಂಟೇಸ್ವಾಮಿ ಪರಂಪರೆ ಕುರಿತ ಪರಂಜ್ಯೋತಿ, ಹಾಗೂ 'ನೀಲಿಗ್ಯಾನ' ಎಂಬ ಕವಿತೆಗಳ ಸಂಕಲನ ಜೊತೆಗೆ 'ಹೂಬಿಟ್ಟ ಕಣ್ಣು' ಎಂಬ ಲೇಖನಗಳ ಸಂಗ್ರಹ. ಅವರ 'ನೀಲಿಗ್ಯಾನ' ಸಂಕಲನಕ್ಕೆ 2013ರ ರಾಜ್ಯ ಸರ್ಕಾರದ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿ ...

READ MORE

Related Books