‘ಆನೆ ಲೋಕದ ವಿಸ್ಮಯ’ ಕೃತಿಯು ಐತಿಚಂಡ ರಮೇಶ ಉತ್ತಪ್ಪ ಅವರ ಲೇಖನಗಳ ಸಂಕಲನ. ಗಜ ಜಗತ್ತಿನ ರೋಚಕ ಮತ್ತು ಸೂಕ್ಷ್ಮ ವಿವರಗಳನ್ನು ತೆರೆದಿಡುವ ಕೃತಿ ಇದು. ಹೃದಯಸ್ಪರ್ಶಿ ಕತೆಗಳ ಜೊತೆಗೆ ನಮಗೆ ಗೊತ್ತಿಲ್ಲದ ಅದೆಷ್ಟೋ ಸ್ವಾರಸ್ಯಕರವಿಚಾರಗಳನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದು, ಈ ಕೃತಿಯ ವೈಶಿಷ್ಟ್ಯ.
‘ಆನೆ ಲೋಕದ ವಿಸ್ಮಯ’ ಕೃತಿಯ ವಿಮರ್ಶೆ
ಈ ಕೃತಿಯಲ್ಲಿ’ರಾಜನ ಸಿಟ್ಟಿಗೆ ಪಟ್ಟದಾನೆಗಳು ಬಲಿ’ ಎಂಬ ಬರಹವಂತೂ ನನ್ನನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟಿತು. ಪಾಕಿಸ್ತಾನದ ಮೃಗಾಲಯವೊಂದರಲ್ಲಿದ್ದ ಆನೆಯನ್ನು ಆನ್ಲೈನ್ ಅಭಿಯಾನ ಮಾಡಿ ಬಿಡಿಸಿದ್ದು, ನಂತರ ಬಿಡುಗಡೆಗೊಂಡ ಕಾವಾನನ್ ಅನ್ನುವ ಆನೆ ಕಾಂಬೋಡಿಯಾದ ಆನೆಗಳ ಜೊತೆಗೆ ಸೊಂಡಿಲು ತಾಗಿಸಿ ಹರ್ಷ ವ್ಯಕ್ತಪಡಿಸಿದ್ದು ಇವೆಲ್ಲವೂ ಭಾವುಕ ಆನೆಗಳ ಮನೋಲೋಕವನ್ನೆ ಪರಿಚಯಿಸುತ್ತವೆ. ಆನೆಗಳೇ ಮನುಷ್ಯರನ್ನು ಹೆಚ್ಚಾಗಿ ಹಚ್ಚಿಕೊಳ್ಳುತ್ತವೆ.ಐತಿಚಂಡ ರಮೇಶ್ ಉತ್ತಪ್ಪರ ‘ಆನೆ ಲೋಕದ ವಿಸ್ಮಯ’ ಕೃತಿಯ ಕುರಿತು ಸುಮಾವೀಣಾ ಬರಹ.
ಯಾಕೋ, ಕೆಲವು ಪ್ರಾಣಿಗಳನ್ನು ಮನುಷ್ಯರು ಕಾರಣವಿಲ್ಲದೇ ಇಷ್ಟಪಡುತ್ತಾರೆ. ಬೆಕ್ಕು ನಾಯಿ, ಹಸು ಕರುಗಳಂತೆಯೇ ಮನುಷ್ಯ ಇಷ್ಟಪಡುವ ಮತ್ತೊಂದು ಪ್ರಾಣಿಯೆಂದರೆ ಆನೆ. ಅದು ಮನುಷ್ಯನ ಪ್ರತಿಷ್ಠೆಯನ್ನೂ ತಕ್ಕಮಟ್ಟಿಗೆ ತಣಿಸುವುದರಿಂದಲೋ ಏನೋ, ಆನೆಗಳು ಮನುಷ್ಯನ ಸಹಜೀವಿಯಾಗಿ ಬದುಕಬೇಕಾದ ಅನಿವಾರ್ಯತೆಯನ್ನೂ ಎದುರಿಸುತ್ತವೆ.
ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಕೃತಿಯ ‘ಕೃಷ್ಣೇಗೌಡರ ಆನೆ’ ಕತೆಯನ್ನು ಓದಿದ ನನಗೆ ಆನೆಗಳೆಂದರೆ ಆಸಕ್ತಿಯೆನಿಸಲು ಶುರುವಾಯಿತು. ದಸರಾ ಸಮಯದಲ್ಲಿ ಅರ್ಜುನ, ಅಭಿಮನ್ಯು, ಸುಭದ್ರ, ಇತ್ಯಾದಿ ಬೆಳೆ ಹಾನಿ ಮಾಡಿದ ಆನೆಗಳ ಬಗ್ಗೆ ವಸ್ತುನಿಷ್ಟವಾಗಿ ಓದಿದ್ದ ನನಗೆ ಆನೆಗಳ ಬಗ್ಗೆ ಸಂಕೀರ್ಣವಾಗಿ ತಿಳಿಯಬೇಕೆಂಬ ಉತ್ಸಾಹ ಮೂಡಿತ್ತು. ಅದೇ ಸಂದರ್ಭದಲ್ಲಿ ದೊರೆತ ಕೃತಿ ಐತಿಚಂಡ ರಮೇಶ್ ಉತ್ತಪ್ಪರ ‘ಆನೆ ಲೋಕದ ವಿಸ್ಮಯ’. ‘ಆನೆ ಲೋಕದ ವಿಸ್ಮಯ’ ಕೃತಿಯನ್ನು ತೆರೆದಾಗ ‘ಅಮೆರಿಕಾದಲ್ಲಿ ದಯಾಮರಣ’ ಎಂಬ ಬರೆಹ ಕಂಡಿತು. ಈ ಆನೆಲೋಕದ ಮೊದಲುಗಳನ್ನು ಲೇಖಕರು ಪ್ರಸ್ತುತ ಬರೆಹದಲ್ಲಿ ವಿವರವಾಗಿ ಚರ್ಚಿಸಿದ್ದಾರೆ.
‘ಆನೆ ಲೋಕದ ವಿಸ್ಮಯ’ ಈ ಕೃತಿಯ ವಿಶೇಷವೆಂದರೆ ಆನೆಯನ್ನು ಪ್ರಾಣಿಯೆಂದು ಪರಿಗಣಿಸಿಲ್ಲ, ಬದಲಾಗಿ ನಮ್ಮ ಮನೆಯ ಹಿರಿಯ ಸದಸ್ಯರೋ ಇಲ್ಲ, ಸ್ನೇಹಿತರೋ ಎಂಬಂತೆ ಪರಿಚಯಿಸಿದ್ದಾರೆ. ಕೊಡಗಿನ ಆನೆ ಅಂಬಿಕಾ, ಅಮೆರಿಕಾಕ್ಕೆ ಉಡುಗೊರೆಯಾಗಿ ಹೋಗಬೇಕಾದ ವಿಚಾರ ಇಲ್ಲಿ ಬರಹವಷ್ಟೇ ಅಲ್ಲ, ಅಂಬಿಕಾ ಆನೆ ಅಮೆರಿಕಾಕ್ಕೆ ಹೊಂದಿಕೊಂಡಿದ್ದೆ ವಿಶೇಷವಾಗಿತ್ತು. ಆದರೆ ಆಕೆ 59ನೆ ವರ್ಷಕ್ಕೆ ಕಾಲಿರಿಸಿದಾಗ ಎದುರಿಸಿದ ಸಮಸ್ಯೆಗಳನ್ನು ಲೇಖಕರು ಓದುಗರ ಮನಸ್ಸು ಆರ್ದ್ರವಾಗುವಂತೆ ವಿವರಿಸಿದ್ದಾರೆ. ಈಕೆ ಧ್ವನಿ ಹೊರಡಿಸುವ ರೀತಿ ಇತ್ಯಾದಿಗಳನ್ನು ಅಧ್ಯಯನ ಮಾಡಲು ಅನೇಕ ಪ್ರಯೋಗಾಲಯಗಳು ರಕ್ತದ ಮಾದರಿಯನ್ನು ಸಂಗ್ರಹಿಸಿದವು. ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ತಡೆಗಟ್ಟಲು ಬಿಡುಗಡೆ ಮಾಡುವ ಜಿಎನ್ಆರ್ ಎಚ್ ಹಾರ್ಮೋನ್ ಲಸಿಕೆ ಪಡೆದ ಮೊದಲ ಆನೆಯೆಂದರೆ ಕೊಡಗಿನ ಅಂಬಿಕಾ. ಆದರೆ ಆಕೆಯ ಅರೋಗ್ಯ ಹದಗೆಟ್ಟಾಗ ಬಹಳಷ್ಟು ಯಾತನೆ ಪಡುತ್ತಾಳೆ. ಆಕೆಯ ನರಳಾಟವನ್ನು ನೋಡಲಾರದೆ ಆಕೆಗೆ ದಯಾಮರಣವನ್ನು ಕಲ್ಪಿಸಲಾಗುತ್ತದೆ. ಅಂಬಿಕಾ ಮರಣಿಸಿದ ದುಃಖವನ್ನು ಅಲ್ಲಿನ ಮಾವುತ ಮೆರಿ ಗಯಾಲೋವೆಯಿಂದ ಮೊದಲ್ಗೊಂಡು ಭಾರತೀಯ ರಾಯಭಾರಿಯವರೆಗೆ ಅನೇಕರು ದುಃಖದಿಂದ ಸ್ಪಂದಿಸಿದ್ದು ಆಕೆಯ ಮೇಲಿನ ಮಮತೆಯ ದ್ಯೋತಕ.
ಪಾಕಿಸ್ತಾನದ ಮೃಗಾಲಯವೊಂದರಲ್ಲಿದ್ದ ಆನೆಯನ್ನು ಆನ್ಲೈನ್ ಅಭಿಯಾನ ಮಾಡಿ ಬಿಡಿಸಿದ್ದು ನಂತರ ಬಿಡುಗಡೆಗೊಂಡ ಕಾವಾನನ್ ಅನ್ನುವ ಆನೆ ಕಾಂಬೋಡಿಯಾದ ಆನೆಗಳ ಜೊತೆಗೆ ಸೊಂಡಿಲು ತಾಗಿಸಿ ಹರ್ಷ ವ್ಯಕ್ತಪಡಿಸಿದ್ದು ಇವೆಲ್ಲವೂ ಭಾವುಕ ಆನೆಗಳ ಮನೋಲೋಕವನ್ನೆ ಪರಿಚಯಿಸುತ್ತವೆ. ಕನ್ನಡಿಗರಾಗಿ ಮುಖ್ಯವಾಗಿ ಹೇಳಬೇಕಾಗಿರುವ ವಿಷಯವೆಂದರೆ ನಮ್ಮ ಆನೆಗಳು ಕನ್ನಡವನ್ನು ಬಿಟ್ಟು ಅನ್ಯ ಭಾಷೆಯ ಭಾಷೆಯ ಸಂಕೇತಗಳಿಗೆ ಸ್ಪಂದಿಸದೆ ಅನಿವಾರ್ಯವಾಗಿ ಮಾವುತರು ಕನ್ನಡ ಭಾಷೆಯನ್ನು ಕಲಿಯುವಂತೆ ಮಾಡಿದವು.
ಬುಲೆಟ್‌ಗೆ ಬಗ್ಗದ ಪ್ರೀತಿಗೆ ಮರುಳಾದ ಆನೆಯ ಬಗೆಯನ್ನು ಹೇಳಿದ ಬರೆಹಕ್ಕೆ ವಿಪರ್ಯಾಸ ಎಂಬಂತೆ ಗರ್ಭಿಣಿ ಆನೆಯ ದಾರುಣ ಸಾವು ಬಹುವಾಗಿ ಕಾಡುತ್ತದೆ. ಅನಾನಸಿನ ಒಳಗೆ ಮದ್ದನ್ನು ಇಟ್ಟು ಸ್ಫೋಟಗೊಳಿಸಿ ಕ್ರೌರ್ಯ ಮೆರೆದ ಘಟನೆ ನಿಜಕ್ಕೂ ಖೇದ ಅನ್ನಿಸಿತು. ವಿಶ್ವದೆಲ್ಲೆಡೆಯ ಪ್ರಾಣಿಪ್ರಿಯರು ಇದನ್ನು ಖಂಡಿಸಿದ್ದರು. ಆನೆಯು 14 ದಿನ ರೌರವ ನರಕ ಅನುಭವಿಸಿದ ಸಂದರ್ಭಗಳನ್ನು ಲೇಖಕರು ದುಃಖಿತರಾಗಿಯೇ ಬರೆದಿದ್ದಾರೆ. ಏನೇ ಆಗಲಿ , ವಿವೇಕ ಇರುವ, ತಿಳಿದು ಬದುಕುವ ಮನುಷ್ಯನಿಂದ ಈ ರೀತಿಯ ಹೀನಕೃತ್ಯ ಆಗಬಾರದಿತ್ತು ಅನ್ನಿಸುತ್ತದೆ. ಮನುಷ್ಯನು ಯಾವುದೋ ಒಂದು ಹಂತದಲ್ಲಿ ತಾನು ಸಾಕಿದ ಸಾಕುಪ್ರಾಣಿಗಳನ್ನು ಮರೆಯಬಹುದು, ಆದರೆ ಪ್ರಾಣಿಗಳು ಏನೆ ಆದರೂ ನೆನಪಿಟ್ಟುಕೊಳ್ಳುತ್ತವೆ ಎಂಬುದಕ್ಕೆ ರಕ್ಷಕನ ಅಂತ್ಯಸಂಸ್ಕಾರಕ್ಕೆ ಬಂದ ಆನೆ ಅಧ್ಯಾಯದಲ್ಲಿ ನೋಡಬಹುದು.
ಕೊಡಗಿನ ಆನೆ ಅಂಬಿಕಾ ಅಮೆರಿಕಾಕ್ಕೆ ಉಡುಗೊರೆಯಾಗಿ ಹೋಗಬೇಕಾದ ವಿಚಾರ ಇಲ್ಲಿ ವಿಚಾರವಷ್ಟೇ ಅಲ್ಲ, ಅಂಬಿಕಾ ಅಮೆರಿಕಾಕ್ಕೆ ಹೊಂದಿಕೊಂಡಿದ್ದೆ ವಿಶೇಷವಾಗಿತ್ತು. ಆದರೆ ಆಕೆ 59ನೆ ವರ್ಷಕ್ಕೆ ಕಾಲಿರಿಸಿದಾಗ ಎದುರಿಸಿದ ಸಮಸ್ಯೆಗಳನ್ನು ಲೇಖಕರು ಓದುಗರ ಮನಸ್ಸು ಆರ್ದ್ರವಾಗುವಂತೆ ವಿವರಿಸಿದ್ದಾರೆ.
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ರಾಜ್ಯದ ಪ್ರಮುಖ ಶಕ್ತಿ ಆನೆಗಳೇ ಆಗಿರುತ್ತಿದ್ದವು. ಅದಕ್ಕೆ ಲೇಖಕರು ಒಡಿಸ್ಸಾದಲ್ಲಿರುವ ಕೋನಾರ್ಕ್‌ನ ಸೂರ್ಯ ದೇವಾಲಯದ ಎದಿರು ರಾಜನನ್ನು ಎತ್ತಿಕೊಂಡು ಬರುತ್ತಿರುವ ಸುದೇಹಿ ಎಂಬ ಆನೆಯ ಮಾಹಿತಿ ಹಾಗು ಅದಕ್ಕೆ ಪೂರಕವಾಗಿ ಚಿತ್ರ ಪುಸ್ತಕವನ್ನು ಓದಲು ಆಸಕ್ತಿ ಹುಟ್ಟುವಂತೆ ಮಾಡುತ್ತದೆ.
‘ರಾಜನ ಸಿಟ್ಟಿಗೆ ಪಟ್ಟದಾನೆಗಳು ಬಲಿ’ ಎಂಬ ಬರಹವಂತೂ ನನ್ನನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು. ಕೋಟೆ ಗಣಪತಿ, ಮ್ಯೂಸಿಯಂ, ಫಿರಂಗಿಗಳು ಕಲ್ಲಿನ ಆನೆಗಳನ್ನು ನೋಡಿ ಬರಬರನೆ ಬರುತ್ತಿದ್ದ ನಮಗೆ ಈಗ ಇನ್ನೊಮ್ಮೆ ಮಡಿಕೇರಿಗೆ ಹೋಗಿ ಆನೆಗಳನ್ನು ನೋಡಿ ಬರಬೇಕೆನಿಸುತ್ತದೆ. ಇತಿಹಾಸ ತಿಳಿಯುವ ಮೊದಲು ನೋಡಿದ್ದು ಬೇರೆ. ಆದರೆ ಇತಿಹಾಸ ತಿಳಿದ ಮೇಲೆ ಅವುಗಳನ್ನು ನೋಡುವುದು ಬೇರೆ. ಆನೆಗಳ ಎದುರು ನಿಂತು ರಾಜನ ಕೋಣೆ ಯಾವುದಿರಬಹುದೆಂದು ಊಹಿಸುವುದರಲ್ಲಿಯೂ ಕುತೂಹಲವಿದೆ. ಇನ್ನೊಮ್ಮೆ ಮಡಿಕೇರಿಗೆ ಹೋಗುವ ಪ್ರವಾಸಿಗರು ರಾಜಾಸೀಟನ್ನು ಮಾತ್ರವಲ್ಲ, ರಾಜಸಿಟ್ಟಿನಿಂದ ಕೊಲ್ಲಿಸಿದ ಆನೆಗಳ ಪ್ರತಿಮೆಗಳನ್ನು ನೋಡಲೇಬೇಕು. ಮುಂಗೋಪ ಎಂದಿಗೂ ಹಾನಿಕಾರಕ ಎಂಬುದನ್ನು ವಿವರಿಸಲು ಈ ಆನೆಗಳ ಉದಾಹರಣೆಯನ್ನು ತೆಗೆದುಕೊಳ್ಳಬಹುದು.
ಕೊಡಗು ಎಂದರೆ ಜನರಲ್ ತಿಮ್ಮಯ್ಯ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರು ತಟ್ಟನೆ ನೆನಪಿಗೆ ಬರುತ್ತದೆ. ದುಬಾರೆ ಆನೆ ಶಿಬಿರದಲ್ಲಿ ಇವೇ ಹೆಸರುಗಳನ್ನು ಇರಿಸಿಕೊಂಡು ತುಂಟಾಟ ಮಾಡಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಆನೆಗಳ ಮಾಹಿತಿಯನ್ನು ಲೇಖಕರು ಇಲ್ಲಿ ನೀಡಿದ್ದಾರೆ. ಕಾಡಾನೆಗಳನ್ನು ಸೆರೆಹಿಡಿಯುವಲ್ಲಿ ಅಭಿಮನ್ಯು ವಹಿಸಿದ ಪಾತ್ರ, ಮುಂದಿನ ಬರೆಹದಲ್ಲಿದೆ. ದಸರಾ ಆನೆಗಳ ವಿಚಾರವನ್ನು ಮುಂದಿನ ಬರೆಹದಲ್ಲಿ ಸವಿವರವಾಗಿ ಲೇಖಕರು ನಿರೂಪಿಸಿದ್ದಾರೆ. “ಗಜಪಡೆಗೆ ಇವಳೆ ನಾಯಕಿ” ಎಂಬ ಅಧ್ಯಾಯದಲ್ಲಿ ‘ಗಂಗೆ’, ‘ಗಾಯತ್ರಿ’, ‘ಇಂದಿರಾ’ ಆನೆಗಳ ವಿವರವಿದೆ. ಕಾಫಿ ಎಂದರೆ ಆಹ್ಲಾದಕರ ಕಾಫಿ ತೋಟಕ್ಕೆ ನುಗ್ಗಿದ ಆನೆಗಳು, ಕಾಫಿಗಿಡ, ಬೀಜಗಳನ್ನು ತಿಂದು ಬೀಳಿಸಿದ ಲದ್ದಿಯಿಂದ ಆರಿಸಿದ ಕಾಫಿ ಬೀಜದ ಕಾಫಿ ದುಬಾರಿ ಮಾರುಕಟ್ಟೆ ಉಳ್ಳದ್ದು ಎಂಬೆಲ್ಲ ವಿಷಯಗಳು ಕುತೂಹಲಕಾರಿ. ಇದೇ ರೀತಿ ಕಾಡು ಬೆಕ್ಕುಗಳು ಕಾಫಿ ಹಣ್ಣು ತಿಂದು ಹಾಕುತ್ತಿದ್ದ ಹಿಕ್ಕೆಯ ಕಾಫಿಗೂ ಬಾರೀ ಬೇಡಿಕೆಯಂತೆ. ಆದರೆ ಕಾಡು ಬೆಕ್ಕುಗಳ ಸಂಖ್ಯೆ ನಿರಂತರ ಕಡಿಮೆಯಾಗುತ್ತಿರುವುದರ ಬಗ್ಗೆಯೂ ಲೇಖಕರು ಉಲ್ಲೇಖಿಸಿದ್ದಾರೆ.
ಖಾಸಗಿ ವ್ಯಕ್ತಿಗಳು ಸಾಕುತ್ತಿದ್ದ ಆನೆಗಳನ್ನು ಕೊಡಗಿನ ಗಡಿಭಾಗಕ್ಕೆ ತಂದು ಬಿಡುತ್ತಿರುವುದಕ್ಕೆ ಲೇಖಕರು ವಿಷಾದ ವ್ಯಕ್ತಪಡಿಸುತ್ತಾರೆ. ಆನೆಗಳ ಮಾಹಿತಿ ಮತ್ತು ಸಾಕುವವರ ಮಾಹಿತಿಯನ್ನು ಮೈಕ್ರೋಚಿಪ್‌ಗಳಲ್ಲಿ ಅಳವಡಿಸಬೇಕೆಂಬ ಅಗತ್ಯ ವಿಚಾರವನ್ನು ಲೇಖಕರು ಕಡೆಯ ಅಧ್ಯಾಯದಲ್ಲಿ ವ್ಯಕ್ತ ಪಡಿಸಿರುವಂತೆ ಕಡ್ಡಾಯವಾಗಿ ಆಗಲೇಬೇಕಾಗಿದೆ. ನನಗೂ ಇದನ್ನು ಆಗ್ರಹಪೂರ್ವಕವಾಗಿ ಹೇಳಬೇಕು ಎನಿಸುತ್ತದೆ.
ಕಾಡನ್ನು ಕಡಿದು ನಾಡಾಗಿ ಪರಿವರ್ತಿಸಿದ ಮನುಷ್ಯ ಪ್ರಾಣಿಗಳ ಉಳಿವಿಗೆ ಸಂಚಕಾರನಾಗಿದ್ದಾನೆ. ಅವುಗಳ ದಾರಿಗೆ ಮನುಷ್ಯ ಅಡ್ಡಲಾದಾಗ ಅವುಗಳು ಸಹಜವಾಗಿ ಪ್ರತಿಭಟಿಸುತ್ತವೆ. ಇದೇ ಕಾರಣದಿಂದ ಆನೆಗಳು ನಾಡಿಗೆ ಪ್ರವೇಶಿಸುತ್ತವೆ ಎಂದು ನನ್ನನಿಸಿಕೆ. ಇತಿಹಾಸ, ವೈದ್ಯಕೀಯ ಹಿನ್ನೆಲೆ, ಅವುಗಳ ಒಡನಾಟ, ಸಾಂಸ್ಕೃತಿಕ ಪರಂಪರೆ ಇತ್ಯಾದಿ ಆಯಾಮಗಳಿಂದ ಅದರಲ್ಲೂ ವಿಶೇಷವಾಗಿ ಕೃತಿಯಲ್ಲಿ ಅಳವಡಿಸಿರುವ ಸಂದರ್ಭೋಚಿತ ಭಾವಚಿತ್ರಗಳ ಮೂಲಕ, ಈ ಕೃತಿ ಓದುಗರ ಗಮನ ಸೆಳೆಯುತ್ತದೆ.
ಪರಿಸರಪ್ರೇಮವಿದ್ದಲ್ಲಿ, ಪ್ರಾಣಿಪ್ರೀತಿ ಇದ್ದೇ ಇರುತ್ತದೆ. ಅವುಗಳು ನೀಡುವ ಪ್ರೀತಿ ಅಮೂಲ್ಯ; ಅದರಲ್ಲೂ ಆನೆಗಳ ಮೇಲಿನ ವಿಶೇಷ ಆಸ್ಥೆ ಮತ್ತು ಕಾಳಜಿಯಿಂದ ರಮೇಶ ಉತ್ತಪ್ಪರ ಈ ಕೃತಿಯನ್ನು ವಯೋಬೇಧವಿಲ್ಲದೆ ದೊಡ್ಡವರೂ, ಎಳೆಯರೂ ಓದಬಹುದು.
(ಕೃಪೆ : ಕೆಂಡಸಂಪಿಗೆ)
©2024 Book Brahma Private Limited.