ಉಸಾಬರಿ

Author : ಎನ್.ಎಸ್. ಶಂಕರ್‌

Pages 234

₹ 200.00




Year of Publication: 2019
Published by: ಅಕ್ಷರ ಮಂಟಪ
Address: #1667, 6ನೇ ’ಸಿ’ ರಸ್ತೆ, 6ನೇ ತಿರುವು, ಹಂಪಿ ನಗರ, ಬೆಂಗಳೂರು-79
Phone: 998617684

Synopsys

ಉಸಾಬರಿ -ಕೃತಿಯಲ್ಲಿ ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರಹಗಳಿವೆ. ಪ್ರಮುಖವಾದ ಕೃತಿಗಳ ಬಗ್ಗೆ ಮೊದಲ ಭಾಗದಲ್ಲಿ ಚರ್ಚಿಸಿದ್ದಾರೆ. ನಂತರ ಇಂದಿನ ಕಾಲದ ಸಾಂಸ್ಕೃತಿಕ, ಸಾಮಾಜಿಕ ವಿದ್ಯಮಾನಗಳನ್ನು ಕೇಂದ್ರಿಸಿ ಚರ್ಚಿಸಿದ್ದಾರೆ. ಮೂರನೇ ಭಾಗದಲ್ಲಿ ರಾಜಕೀಯದ ಸನ್ನಿವೇಶಗಳನ್ನು ಕೆಂದ್ರವಾಗಿಟ್ಟುಕೊಂಡು ವಿವಿಧ ದೃಷ್ಟಿಕೋನಗಳಲ್ಲಿ ಚರ್ಚಿಸಿದ್ಧಾರೆ. ಪ್ರಸ್ತುತ ರಾಜಕೀಯ ತಲ್ಲಣಗಳಿಗೆ ಸ್ಪಂದಿಸಿರುವ ಈ ಕೃತಿ ಹಲವು ಸಾಮಾಜಿಕ ಪ್ರಶ್ನೆಗಳಿಗೆ ಉತ್ತರವಾಗಬಲ್ಲದು.

About the Author

ಎನ್.ಎಸ್. ಶಂಕರ್‌

ಲೇಖಕ, ಪತ್ರಕರ್ತ ಎನ್. ಎಸ್‌. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್‌ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...

READ MORE

Reviews

ಉಸಾಬರಿ-ವಿಜಯ ಕರ್ನಾಟಕ-ಸವಿತಾ ಸಾಗಭೂಷಣ

ಮೌನ ಪಾಪವೆಂದು ಆಡಿದ ಮಾತು-ಉಸಾವರಿ-ಪ್ರಜಾವಾಣಿ

ಪತ್ರಕರ್ತನೊಬ್ಬನ ಹಲವು ಉಸಾಬರಿಗಳು

ಮೂಲತಃ ಲೋಹಿಯಾ ವಿಚಾರಗಳಿಂದ ಪ್ರಭಾವಿತರಾಗಿರುವ ಎನ್.ಎಸ್. ಶಂಕರ್ ಸಹಜವಾಗಿಯೇ ಹಲವು ಉಸಾಬರಿಗಳ ಮನುಷ್ಯ. ಇದರ ಫಲವೇ ಈ ಲೇಖನಗಳ ಸಂಗ್ರಹ, ಸಾಮಾಜಿಕ ಕಾಳಜಿಯ ಪತ್ರಕರ್ತರಾಗಿ ತಮ್ಮ ಕಾಲದ ದಲಿತ ಮತ್ತು ರೈತ ಚಳುವಳಿಗಳೊಂದಿಗೆ ಒಡನಾಡಿದವರು. ಚಲನಚಿತ್ರ ಕ್ಷೇತ್ರದಲ್ಲೂ ಕೈಯಾಡಿಸಿ ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿದವರು ಕೂಡ. ಹಾಗಾಗಿ ಈ ‘ಉಸಾಬರಿ' ಎಂಬ ಅವರ ಈ ಲೇಖನಗಳ ಸಂಗ್ರಹದಲ್ಲಿ ಈ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಬರಹಗಳಿವೆ. ಇವು ವಿವಿಧ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳಿಗಾಗಿ ಮತ್ತು ತಮ್ಮ ಫೇಸ್‌ಬುಕ್‌ಗಾಗಿ ಬರೆದ ಬರಹಗಳಾಗಿದ್ದು, ಶಂಕರ್‌ ಮೊದಲೇ ಹೇಳಿದಂತೆ ಮೂಲತಃ ಪತ್ರಕರ್ತರಾಗಿರುವುದರಿಂದ ಅವರ ಬರಹಗಳು ಹೆಚ್ಚಾಗಿ ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ವಿಶ್ಲೇಷಣೆಗಳಿಗೆ ಸಂಬಂಧಿಸಿರುವುದು ಸಹಜವೇ ಆಗಿದೆ.

ಇಲ್ಲಿನ ಲೇಖನಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದ್ದು ಮೊದಲ ಭಾಗದಲ್ಲಿ ಸಾಹಿತ್ಯ ಮತ್ತು ವ್ಯಕ್ತಿ ವಿಮರ್ಶೆಗೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡಿದ್ದು ಇವುಗಳಲ್ಲಿ 'ಶಿಕಾರಿ'ಯ ನೈತಿಕ ನೆಲೆ ಯಾವುದು?' ಎಂಬ ಲೇಖನ ಹೆಚ್ಚು ಕುತೂಹಲ ಹುಟ್ಟಿಸುವಂತಿದೆ. ಪತ್ತೇದಾರಿ ಕಾದಂಬರಿಯಂತೆ ರೋಚಕವಾಗಿ ಆದರೆ ಬೌದ್ದಿಕ ನೆಲೆಯಲ್ಲಿ-ಬೆಳೆಯುತ್ತಾ ಹೋಗುವ ಈ ಕಾದಂಬರಿ ಒಂದು ನೆಲೆಯಲ್ಲಿ ಆಧುನಿಕ ಜೀವನ ಮೌಲ್ಯಗಳು ಹುಟ್ಟಿಸುವ ಕ್ರೌರ್‍ಯವನ್ನು ಅದರ ಹೊರ ರೂಪದಲ್ಲಿ ಹೇಳುತ್ತಿರುವಾಗಲೇ ಅದು ಮನುಷ್ಯನೊಳಗೇ ಸೃಷ್ಟಿಸುತ್ತಿರುವ  ಕ್ರೌರ್‍ಯದ ಒಳ ರೂಪಗಳನ್ನೂ ಚಿತ್ರಿಸುತ್ತದೆ. ಆದರೆ ಶಂಕರ್ ಇಲ್ಲಿ ಕಾದಂಬರಿಯ ನಾಯಕ ನಾಗಪ್ಪನನ್ನು ಹಲವು ಹೊರ ಕಾರಣಗಳಿಗಾಗಿ ಕಾದಂಬರಿಕಾರ ಚಿತ್ತಾಲರೆಂದೇ ನಿರ್ಧರಿಸಿಕೊಂಡಂತೆ ಕೃತಿಯನ್ನು ನೋಡಿರುವುದರಿಂದಲೋ ಏನೋ, ಚಿತ್ತಾಲರು ತಮ್ಮ ಅದ್ಭುತ ಕಸುಬುದಾರಿಕೆಯ ಮೂಲಕ ಹೇಳುತ್ತಿರುವ ಕ್ಷೌರದ ಹೊರ ಮತ್ತು ಒಳರೂಪಗಳ ನಡುವಣ ಸಂಬಂಧವನ್ನು ಗ್ರಹಿಸದೆ ಹೋಗಿದ್ದಾರೆನಿಸುತ್ತದೆ. ಬಹುಶಃ ಹಾಗಾಗಿಯೇ ಅವರು ನಾಗಪನ ವ್ಯಕ್ತಿತ್ವದಲ್ಲಿನ ಬಿರುಕನ್ನು ಕಾದಂಬರಿಯಲ್ಲಿನ (ನೈತಿಕ) ಬಿರುಕು ಎಂದು ತೀರ್ಮಾನಕ್ಕೆ ಬರುತ್ತಾರೆ. ಇನ್ನು ಈ ಹಿಂದೆ ಕಿರು ಪುಸ್ತಕವಾಗಿಯೂ ಪ್ರಕಟವಾಗಿರುವ 'ಲಂಕೇಶ್-ಇಂತಿ ಕೆಲ ಪ್ರಶ್ನೆಗಳು' ಎಂಬ ಲೇಖನದಲ್ಲಿ ನಟರಾಜ್ ಹುಳಿಯಾರ್ ಅವರು ಲಂಕೇಶ್ ಮತ್ತು ಡಿ.ಆರ್. ನಾಗರಾಜ್ ಬಗ್ಗೆ ಬರೆದಿರುವ 'ಇಂತೀ ನಮಸ್ಕಾರಗಳು' ಪುಸ್ತಕವನ್ನು ನೆಪವಾಗಿಟ್ಟುಕೊಂಡು ಲಂಕೇಶರ ವ್ಯಕ್ತಿತ್ವದಲ್ಲಿನ ಬಿರುಕನ್ನು ಗುರುತಿಸುತ್ತಾ ಎತ್ತಿರುವ ಪ್ರಶ್ನೆಗಳು ಮುಖ್ಯವಾಗಿ ನೈತಿಕ ನೆಲೆಗಳದ್ದಾಗಿದೆ. ಆದರೆ ಈ ಸಂಬಂಧವಾಗಿ ಶಂಕರ್‌ ಹೇಳಬೇಕಾದುದನ್ನು ಖಚಿತವಾಗಿ ಹೇಳಲಾಗದ ಸಂಕೋಚದಿಂದಾಗಿ ಈ ಬರಹ ದೇಶಾವರಿ ಎನಿಸಿಬಿಡುತ್ತದೆ. ದೇವನೂರ ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಕೃತಿ ಕುರಿತ' ಬರಹವೂ ಇಂತಹುದೇ ತಾಕಲಾಟಕ್ಕೆ ಸಿಕ್ಕಿ, ಕೃತಿಕಾರನೊಡನೆಯ ಅವರ ವೈಯಕ್ತಿಕ ಸ್ನೇಹ ಸಂಬಂಧದ ನೆನಪುಗಳ ಹಳಹಳಿಕೆಗಳ ಮಧ್ಯೆ ಗಂಟಲಿಗೆ ಬಂದ ಮಾತುಗಳು ಮತ್ತೆ ಹೊಟ್ಟೆಯೊಳಕ್ಕೇ ವಾಪಸು ಹೋದಂತೆನಿಸಿ ಲೇಖನ ‘ದಂ' ಕಳೆದುಕೊಂಡಿದೆ ಎನಿಸದಿರದು.

ಪುಸ್ತಕದ ಎರಡನೆಯ ಭಾಗದಲ್ಲಿ ದಲಿತ ಮತ್ತು ರೈತ ಚಳುವಳಿ, ಅಂಬೇಡ್ಕರ್ ವಿಚಾರ, ಗಾಂಧಿಯ ಅಹಿಂಸೆ, ಗಂಡು-ಹೆಣ್ಣಿನ ಸಂಬಂಧ, ವಿಚಾರವಾದ, ಪತ್ರಿಕಾ ಸ್ವಾತಂತ್ರ್ಯ ಇತ್ಯಾದಿ ಚರ್ವಿತ ಚರ್ವಣ ವಿಷಯ ಕುರಿತ ಲೇಖನಗಳಿವೆ. ಇವುಗಳಲ್ಲಿ ಹೊಚ್ಚ ಹೊಸದೆನಿಸುವುದು ಏನಿಲ್ಲವಾದರೂ, ಇತ್ತೀಚಿನ ವರ್ಷಗಳಲ್ಲಿನ ಸಮಕಾಲೀನ ವಿಷಯಗಳ ಬಗ್ಗೆ ನಡೆದ ಚರ್ಚೆಗಳ ಮುಖ್ಯ ಅಂಶಗಳನ್ನು ನೆನಪಿಸುವಲ್ಲಿ ನೆರವಾಗುತ್ತದೆ ಮತ್ತು ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಉದಾ: ಅಂಬೇಡ್ಕರ್ ನಿಧನರಾದ ನಂತರ ಅವರ ಹಸ್ತಪ್ರತಿಗಳಿಗೆ ಒದಗಿದ ದುರ್ಗತಿ ಕುರಿತ ವಿವರಗಳು ನಮ್ಮನ್ನು ಬೆಚ್ಚಿಬೀಳಿಸುವಂತಿವೆ. ‘ಮಿ ಟೂ' ಸುತ್ತ ಬರೆದ ಬರಹ ನಮ್ಮ ಚಿತ್ರರಂಗದಲ್ಲಿನ ಪಾಪ ಕೂಪದ ಪರಿಚಯ ಮಾಡಿಕೊಡುತ್ತದೆ. ಇನ್ನು ದಲಿತ ಚಳುವಳಿಯ ಅವನತಿಯ ಅದೇ ಹಳೇ ಕಥೆ ಹೇಳುವ ಲೇಖನ ಇವರಿನ್ನೂ ಚರಿತ್ರೆಯ ಹಾಳುಬಾವಿಯಿಂದ ಈಚೆ ಬರಲು ನಿರಾಕರಿಸುತ್ತಿದ್ದಾರೆಂಬುದಷ್ಟನ್ನೇ ಸೂಚಿಸುವಂತಿದೆ. ಆದರೆ ಟಿವಿ ಮಾಧ್ಯಮ ಕುರಿತ ಬರಹದಲ್ಲಿ ಕಳಂಕಿತರಾಗುವುದೇ ಸ್ಟಾರ್‌ಗಿರಿಗೆ ದಾರಿ ಎನ್ನುವುದನ್ನು ಹಲವು ದೃಷ್ಟಾಂತಗಳ ಮೂಲಕ ವಿಷದೀಕರಿಸುತ್ತಾ ಅದನ್ನು ನರೇಂದ್ರ ಮೋದಿಯವರ ಉದಾಹರಣೆಯವರೆಗೂ ವಿಸ್ತರಿಸಿರುವುದು ಲೇಖನಕ್ಕೆ ಒಂದು ಹೊಸ ಆಳ ಒದಗಿಸಿದೆ ಎನ್ನಿಸದಿರದು.

ಇನ್ನು ಪುಸ್ತಕದ ಮೂರನೆಯ ಭಾಗ ಪೂರ್ಣ ಮೋದಿ ಮತ್ತು ಅವರ ಆಡಳಿತ ವೈಖರಿಯನ್ನು ಕುರಿತ ತೀಕ್ಷ ನೋಟಗಳು ಮತ್ತು ವ್ಯಾಖ್ಯಾನಗಳಿಂದ ಕೂಡಿದ್ದು ಈ ಆಡಳಿತದ ಮಾದ್ಯಮ ನೀತಿ, ರೈತ ನೀತಿ, ಭೂಸ್ವಾಧೀನ ನೀತಿ, ಬಹುಸಂಖ್ಯಾತವಾದಿ ನೀತಿ ಇವುಗಳ ನೆಲೆಗಳಲ್ಲಿ ವಿಶ್ಲೇಷಿಸುತ್ತಾ ದೇಶಭಕ್ತಿ ಮತ್ತು ರಾಷ್ಟ್ರೀಯತೆಗಳ ಅರ್ಥಗಳನ್ನೇ ವಿರೂಪಗೊಳಿಸುವ ವಿಕ್ಷಿಪ್ತ ರಾಜಕಾರಣ ಉದಯವಾಗಿರುವುದರತ್ತ ನಮ್ಮ ಗಮನ ಸೆಳೆಯುತ್ತಾರೆ. ಆದರೆ ಇಂತಹ ವಿಶ್ಲೇಷಣೆಗಳು ವಿಪರೀತವಾಗಿ ಜನರನ್ನು ಸುಸ್ತುಗೊಳಿಸಿದ್ದು , ಈಗ ಬೇಕಾಗಿರುವುದು ರಾಜಕಾರಣವು ಈ ಅಪಾಯಕಾರಿ ಘಟ್ಟ ತಲುಪಿರುವುದರ ಹಿಂದಿನ ಚಾರಿತ್ರಿಕ ಸಂದರ್ಭಗಳ ಆತ್ಮವಿಶ್ಲೇಷಣೆಯ ಬರಹಗಳಲ್ಲವೇ ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಶಂಕರ್ ಅವರ ಮುಂದಿನ ಬರಹಗಳ ನೆಲಗಟ್ಟು ಬದಲಾಗಲಿ ಎಂದು ಆಶಿಸೋಣ.

ಶಂಕರ್ ಅವರದ್ದು ಪತ್ರಕರ್ತನ ಶೈಲಿಯ ಅನೌಪಚಾರಿಕ ಬರವಣಿಗೆ. ಇದು ಎಲ್ಲೋ ವಿಷಯಗಳ ಆಳವಾದ, ಅದರ ಬಹು ಆಯಾಮಗಳ ವಿಶ್ಲೇಷಣೆಗೆ ತಡೆಯೊಡ್ಡಿದೆಯೇ, ರೂಪವೇ ನಿರ್ಣಾಯಕವಾಗಿ ವಸ್ತುವನ್ನು ನಿಯಂತ್ರಿಸುತ್ತಿದೆಯೇ ಎಂಬ ಅನುಮಾನವೂ ಇಲ್ಲಿನ ಲೇಖನಗಳನ್ನು ಓದಿದಾಗ ಬರುತ್ತದೆ. ಶಂಕರ್ ಈ ಬಗ್ಗೆಯೂ ಯೋಚಿಸುತ್ತಾರೆಂದು ಹಾರೈಸೋಣ. 

-ಡಿಎಸ್ಸೆನ್

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಫೆಬ್ರುವರಿ 2020)

 

Related Books