'ಆಹಾರ ಸಂಜೀವಿನಿ' ಇತ್ತೀಚಿಗೆ ಪ್ರಕಟವಾಗಿರುವ ನೂರಾರು ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಬರೆದಿರುವ ಕೃತಿ. ಕಾಯಿಲೆಗಳಿಗೆ ಕಾರಣವಾಗುವ ಮತ್ತು ಕಾಯಿಲೆಗಳನ್ನು ವಾಸಿ ಮಾಡುವುದಕ್ಕೆ ಬೇಕಾದ ಎಲ್ಲ ಆಹಾರಾಂಶಗಳನ್ನು ಒದಗಿಸುವ ಕುರಿತ ಹೆಚ್ಚಿನ ವಿಚಾರಗಳು ಈ ಕೃತಿಯಲ್ಲಿವೆ.
ಆಹಾರವೇ ಹೇಗೆ ನಮ್ಮ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಹಾಗೆಯೇ ಆಹಾರದಿಂದಲೇ ಹೇಗೆ ನಾವು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬಹುದು. ಸಕ್ಕರೆ ಕಾಯಿಲೆ, ಹೃದಯರೋಗ, ಕ್ಯಾನ್ಸರ್ ಇತ್ಯಾದಿ ಹಾಗೂ ಮರೆವು, ಒತ್ತಡ, ಕಲಿಕಾ ಸಮಸ್ಯೆ ಇತ್ಯಾದಿ ಹೀಗೆ ಮನೋ-ದೈಹಿಕ ಕಾಯಿಲೆಗಳನ್ನು ಔಷಧವಿಲ್ಲದೆ ಹೇಗೆ ನಿವಾರಿಸಬಹುದು, ಆದರ್ಶ ಸಂಪೂರ್ಣ ಆಹಾರ ಮಾರ್ಗ ಎಂಥದ್ದಾಗಿರಬೇಕು ಹೀಗೆ ಹತ್ತು ಹಲವು ಅಂಶಗಳನ್ನು ಲೇಖಕರು ನಿರೂಪಿಸಿದ್ದಾರೆ.
ರೋಗಗಳಿಗೆ ಔಷಧರಹಿತ ಪರಿಹಾರಸೂಚಿ
ಆಹಾರ ಮತ್ತು ಆರೋಗ್ಯ ವಿಷಯದ ಕುರಿತು ವಿಶ್ವಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಪ್ರಕಟವಾಗಿರುವ ವೈಜ್ಞಾನಿಕ ಅಧ್ಯಯನ ಆಧರಿಸಿ ಬರೆದಿರುವ ಪುಸ್ತಕ 'ಆಹಾರ ಸಂಜೀವಿನಿ'. ರೋಗಗಳಿಗೆ ಕಾರಣವಾಗುವ ಮತ್ತು ಅವುಗಳನ್ನು ವಾಸಿ ಮಾಡಲು ಬೇಕಾದ ಎಲ್ಲ ಆಹಾರಾಂಶಗಳನ್ನು ಒದಗಿ ಸುವ ಆಹಾರ ಕುರಿತು ವಿಷಯಗಳು ಈ ಪುಸ್ತಕದಲ್ಲಿವೆ.
ಸಕ್ಕರೆ ಕಾಯಿಲೆ, ಹೃದಯರೋಗ, ಕ್ಯಾನರ್ ಮುಂತಾದ ದೈಹಿಕ ಕಾಯಿಲೆಗಳನ್ನು ಮತ್ತು ಮರೆವು, ಒತ್ತಡ, ಕಲಿಕಾ ಸಮಸ್ಯೆ ಮುಂತಾದ ಮಾನಸಿಕ ಕಾಯಿಲೆಗಳನ್ನು ಔಷಧವಿಲ್ಲದೆ ಹೇಗೆ ನಿವಾರಿಸಬಹುದು, ಆಹಾರ ಸೇವನೆ ಹೇಗಿರಬೇಕು, ಇತರ ವಿಷಯಗಳು ಈ ಕೃತಿಯಲ್ಲಿವೆ. ಉತ್ತಮ ಆಹಾರಶೈಲಿಯನ್ನು ಅಳವಡಿಸಿಕೊಳ್ಳಲು ಈ ಪುಸ್ತಕ ಸಹಾಯಕಾರಿ.
ಕೃಪೆ : ಹೊಸ ದಿಗಂತ (2020 ಫೆಬ್ರವರಿ 23)
ನಮ್ಮ ದಿನನಿತ್ಯದ ಆಹಾರಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಕಾಯಿಲೆಗಳ ಉಪಶಮನ ಮಾಡಿಕೊಳ್ಳಬಹುದು ಹಾಗೂ ಕಾಯಿಲೆಗಳನ್ನು ತಡೆಗಟ್ಟಬಹುದು ಎಂಬುದು ಹೊಸ ಮಾತೇನಲ್ಲ. ಈ ಪುಸ್ತಕದಲ್ಲಿ ಈ ಮಾತಿಗೆ ಅನೇಕ ಸಂಶೋಧನೆಗಳ ಸಾಕ್ಷ ನೀಡುವ ಮೂಲಕ ಸಂಪೂರ್ಣ ಸಸ್ಯಾಹಾರ ಆರೋಗ್ಯಕರ ಜೀವನಕ್ಕೆ ಎಷ್ಟು ಉಪಯುಕ್ತ ಎಂಬುದನ್ನು ವಿವರಿಸಲಾಗಿದೆ. ಪ್ರಾಣಿಮೂಲದ ಹಾಲು, ಮೊಟ್ಟೆಗಳಿಲ್ಲದ ಆಹಾರ ಆದರ್ಶ ಸಸ್ಯಾಹಾರ ಎನ್ನುವ ಈ ಪುಸ್ತಕದ ಲೇಖಕ ಡಾ. ಎ.ಎನ್ ನಾಗರಾಜ್ ಅವರು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿದ್ದವರು.
ಹೃದಯದ ಕಾಯಿಲೆ, ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಆಸ್ಟಿಯೋಪೋರೋಸಿಸ್, ಸ್ಟೋಕ್ ಇತ್ಯಾದಿ ಕಾಯಿಲೆಗಳಿಂದ ನರಳಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ, ಕಡಿಮೆ ಖರ್ಚಿನಲ್ಲಿ ಪರಿಹಾರಗಳನ್ನೊದಗಿಸುವ, ಸಮಗ್ರ ಮಾಹಿತಿಗಳಿರುವ ಪುಸ್ತಕ ಕನ್ನಡದಲ್ಲಿ ಬಂದಿರುವುದು ಸ್ವಾಗತಾರ್ಹ. ಈ ಪುಸ್ತಕದಲ್ಲಿ, ಆಹಾರಗಳಿಂದ ವಾಸಿಮಾಡಬಹುದಾದ ದೈಹಿಕ-ಮಾನಸಿಕ ಕಾಯಿಲೆಗಳು ಮತ್ತು ಆಲರ್ಜಿಗಳ ಕಾಯಿಲೆಗಳು ಎಂಬ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಅಮೇರಿಕಾ ಮತ್ತು ಚೈನಾ ದೇಶದ ಜೀವನಶೈಲಿ ಮತ್ತು ಆಹಾರಪದ್ಧತಿಗಳ ತುಲನಾತ್ಮಕ ಅಧ್ಯಯನ ನಡೆಸಿದ ಡಾ.ಕಾಲಿನ್ ಕ್ಯಾಂಪ್ಬೆಲ್ ಮತ್ತು ಥಾಮಸ್ ಕ್ಯಾಂಪ್ಬೆಲ್ ಅವರ 'ದಿ ಚೈನಾ ಸ್ಟೋರಿ' ಮತ್ತು ಡೀನ್ ಓರ್ನಿಶ್ ಅವರ 'ಡೀನ್ ಓರ್ನಿಶಸ್ ಪ್ರೋಗ್ರಾಂ ಫಾರ್ ರಿವರ್ಸಲ್ ಆಫ್ ಹಾರ್ಟ್ ಡಿಸೀಸಸ್' ಪುಸ್ತಕಗಳನ್ನು ಆಕರಗ್ರಂಥಗಳನ್ನಾಗಿ ಬಳಸಿಕೊಂಡಿದ್ದಾರೆ. ಎರಡನೆಯ ಭಾಗದಲ್ಲಿ ಅಲರ್ಜಿ ಕಾಯಿಲೆಗಳ ಬಗ್ಗೆ ಹೋಲಿಸ್ಟಿಕ್ ವೈದ್ಯರಾದ ಡಾ.ಕೀತ್ ಸ್ಕಾಟ್ ಮಂಬಿ ಅವರ *ಡಯಟ್-ವೈಸ್' ಎಂಬ ಪುಸ್ತಕದ ವಿವರಗಳನ್ನು ಉಲ್ಲೇಖಿಸುತ್ತಾ, ತಮ್ಮ ಅನುಭವಗಳನ್ನು ಹಂಚಿಕೊಂಡು ಸಸ್ಯಾಹಾರದಿಂದಲೇ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರಬಹುದೆಂಬ ನಿಲುವನ್ನು ಪ್ರತಿಪಾದಿಸುತ್ತಾರೆ.
ಶಸ್ತ್ರಚಿಕಿತ್ಸೆ ಅಥವಾ ಆಂಜಿಯೋಪ್ಲಾಸ್ಟಿ ಆದ ಮೇಲೆ ಗುಣಮುಖರಾಗುವ ಹಂತದಲ್ಲೂ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ಮೇಲೆ ಡಾ.ಡೀನ್ ಆರ್ನಿಷ್, ಡಾ.ಕಾಲ್ಡವೆಲ್ ಸೈಲ್ ಸೈನ್ ಜ್ಯೂನಿಯರ್ ಮೊದಲಾದ ವೈದ್ಯರು ನಡೆಸಿದ ಪ್ರಯೋಗಗಳ ಬಗ್ಗೆ. ತಿಳಿಸುತ್ತಾ ಸಸ್ಯಾಹಾರ ಹೇಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಉತ್ತಮ ಆಹಾರದೊಂದಿಗೆ ವ್ಯಾಯಾಮವೂ ಅಗತ್ಯವೆನ್ನುತ್ತಾರೆ. ಸಂಪೂರ್ಣ ಸಸ್ಯಾಹಾರ ಮಾಡುವ ಇಲಿಗಳು ಸಹಜವಾಗಿಯೇ ಹೆಚ್ಚು ವ್ಯಾಯಾಮ ಮಾಡುತ್ತವೆ. ಹಾಗೆಯೇ ಅಂತಹ ಆಹಾರವನ್ನೇ ಬಳಸುವ ಜನರೂ ಸಹಜವಾಗಿಯೇ ಹೆಚ್ಚು ವ್ಯಾಯಾಮ ಮಾಡುತ್ತಾರೆ ಎಂಬುದನ್ನು ಚೈನಾದ ಅಧ್ಯಯನ ರುಜುವಾತು ಮಾಡಿರುವುದನ್ನು ಉಲ್ಲೇಖಿಸುತ್ತಾರೆ. ಲೇಖಕರು ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಧ್ಯಯನಗಳೆಲ್ಲಾ ಅಮೇರಿಕಾ ಮತ್ತು ಚೈನಾ ದೇಶದಲ್ಲಿ ಮಾಡಿರುವಂತಹದು.
ಈ ಪುಸ್ತಕದ ಎರಡನೇ ಭಾಗದಲ್ಲಿ ಅಲರ್ಜಿ ಇರುವ ಆಹಾರಪದಾರ್ಥಗಳನ್ನು ಗುರುತಿಸಿಕೊಳ್ಳುವ ವಿಧಾನಗಳನ್ನು ತಿಳಿಸಿದ್ದಾರೆ. ಅಲರ್ಜಿ ಇರುವ ಹಾಲಿನ ಪದಾರ್ಥಗಳನ್ನು ತ್ಯಜಿಸಿದಾಗ ತಮಗೆ ಚಿಕ್ಕಂದಿನಿಂದಲೂ ಇದ್ದ ಕೆಮ್ಮು-ನೆಗಡಿ ಅಸ್ತಮಾ ವಾಸಿಯಾಗಿರುವುದಾಗಿ ಹೇಳುತ್ತಾರೆ. ಕೆಲವೊಮ್ಮೆ ಮಾನಸಿಕ ಒತ್ತಡವೂ ಅಲರ್ಜಿಗೆ ಕಾರಣವಾಗುವುದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳುವುದೂ ಅಗತ್ಯವೆನ್ನುತ್ತಾರೆ. ಸಂಪೂರ್ಣ ಸಸ್ಯಾಹಾರ ಸೇವನೆ ಮತ್ತು ವ್ಯಾಯಾಮ, ಪ್ರಾಣಾಯಾಮದ ಅಭ್ಯಾಸಗಳಿಂದ ಔಷಧಿಯನ್ನು ತೆಗೆದುಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳನ್ನು ನೀಡಿದ್ದಾರೆ. ಹಾಲು ಅದರಲ್ಲೂ ಹಸುವಿನ ಹಾಲು ಅಮೃತ ಎಂದುಕೊಂಡು ಹಾಲನ್ನು ಪ್ರತಿದಿನ ಬಳಸಿಕೊಂಡು ಬಂದಿರುವ ನಾವು ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಒಪ್ಪುವುದು ಕಷ್ಟ. ಆದರೂ ಆರೋಗ್ಯದ ದೃಷ್ಟಿಯಿಂದ ಈ ಸಲಹೆಗಳಂತೆ ನಮ್ಮ ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಬಹುದು.
-ಕೆ. ಪದ್ಮಾಕ್ಷಿ
ಕೃಪೆ: ಹೊಸ ಮನುಷ್ಯ ಜೂನ್ 2020
©2024 Book Brahma Private Limited.