ಲೇಖಕಿ ವಿಜಯಲಕ್ಷ್ಮಿ ಕೌಟಗೆ ಅವರ ಕಾದಂಬರಿ ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ. ಹಿರಿಯ ಸಾಹಿತಿ ಕಮಲಾ ಹಂಪನಾ ಕೃತಿಗೆ ಬೆನ್ನುಡಿಗಳನ್ನು ಬರೆದಿದ್ದು, ಕಿತ್ತೂರು ರಾಣಿ ಚೆನ್ನಮ್ಮಳ ಉನ್ನತೋನ್ನತ ಬಹುಮುಖಿ ವ್ಯಕ್ತಿತ್ವದ ಆಯಾಮವನ್ನು ಬಿಂಬಿಸುವ ಕಥೆ, ಕಾದಂಬರಿ, ಕವನ, ಲೇಖನ, ಸಂಶೋಧನ ಗ್ರಂಥ ಸಾಕಷ್ಟು ಬಂದಿವೆ. ಅವುಗಳಿಗೆ ಮುಡಿಯ ಮಾಣಿಕ್ಯವಾಗಿ 'ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ' ಎಂಬ ಬೃಹತ್ ಚಾರಿತ್ರಿಕ ಕಾದಂಬರಿಯನ್ನು ತಂಗಿ ವಿಜಯಲಕ್ಷ್ಮಿ ಶಿವಕುಮಾರ ಕೌಟಿಗೆ ರಚಿಸಿದ್ದಾರೆ.ದಾನಚಿಂತಾಮಣಿ ಅತ್ತಿಮಬ್ಬೆ, ಪಟ್ಟಮಹಿಷಿ ಶಾಂತಲದೇವಿ, ತಪಸ್ವಿನಿ ಅಕ್ಕಮಹಾದೇವಿ, ತೇಜಸ್ವಿನಿ ಕೆಳದಿ ಚೆನ್ನಮ್ಮ ಮೊದಲಾದವರ ಉದಾತ್ತ ಚರಿತೆಯನ್ನು ಮೈಗೂಡಿಸಿಕೊಂಡು ಬೆಳೆದು ಬಾಳಿದ ಕಿತ್ತೂರು ರಾಣಿ ಚೆನ್ನಮ್ಮಳ ಸಾಹಸಗಾಥೆಯ ಯಶೋಗೀತೆ ಈ ಕೃತಿಯಲ್ಲಿ ಮಾರ್ಮೊಳಗಿದೆ.ಅತ್ತ ಪ್ರಬಲ ಪೋರ್ಚಗೀಸರ ದಾಳಿ ದಬ್ಬಾಳಿಕೆಗೆ ಮಣಿಯದೆ, ಕಪ್ಪಕಾಣಿಕೆ ಕೊಡದೆ ಹಗೆಗಳನ್ನು ಸೋಲಿಸಿ ಹಿಮ್ಮೆಟ್ಟಿಸಿದ ಪುಟ್ಟ ಉಲ್ಲಾಳದ ರಾಣಿ ಅಬ್ಬಕ್ಕಳ ಪರಾಕ್ರಮ ದಶದಿಕ್ಕುಗಳಲ್ಲಿ ಅನುರಣಿಸಿತು. ಇತ್ತ ಪುಟ್ಟ ಕಿತ್ತೂರು ರಾಣಿ ಚೆನ್ನಮ್ಮಳು ಬಲಿಷ್ಟ ಬ್ರಿಟಿಷರನ್ನು ಬಗ್ಗುಬಡಿದು ರಾಜ್ಯದ ಕೀರ್ತಿಯನ್ನು ಅಜರಾಮರಗೊಳಿಸಿದಳು. ತಾನು ಆಳುವ ರಾಜ್ಯದ ವಿಸ್ತಾರಕ್ಕಿಂತಲೂ ಆಳುವವರ ದಕ್ಷತೆ, ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಸೆಟೆದು ನಿಲ್ಲಬಲ್ಲ ಸಾಮರ್ಥ್ಯ ಮುಖ್ಯ ಎಂಬುದನ್ನು ಲೋಕಕ್ಕೆ ಬಿತ್ತರಿಸಿದ ಧೀಮಂತೆ ಚೆನ್ನಮ್ಮ ರಾಣಿ, ಆಕೆಯ ಹೃದಯ ಹೂವಿನಂತೆ ಮೃದುವಿದ್ದರೂ ನಯವಂಚಕರನ್ನು ನಿಗ್ರಹಿಸುವಾಗ ವಜ್ರದಂತೆ ಕಠಿಣವೂ ಆಗಬಲ್ಲುದು. ಆದರೆ ವೈರಿಗಳನ್ನು ಶಿಕ್ಷಿಸುವಾಗಲೂ ಅಮಾಯಕರನ್ನು ಕಾಪಾಡುವ ರಾಣಿಯ ಅಂತಃಕರಣ ದಯಾರ್ದವಾಗಿರುತ್ತದೆ ಎಂಬುದನ್ನು ಕಾದಂಬರಿಯಲ್ಲಿ ಸಮಂಜಸವಾಗಿ ಚಿತ್ರಿಸಲಾಗಿದೆ. ವಿಜಯಲಕ್ಷ್ಮಿಯವರು ಚೆನ್ನಮ್ಮರಾಣಿಯ ಬಹುಮುಖ ವ್ಯಕ್ತಿತ್ವವನ್ನು, ಸಮಾಜಮುಖಿ ಕಾಳಜಿಯನ್ನು ಓದುಗರಲ್ಲಿ ಅಚ್ಚೊತ್ತಿ ನಿಲ್ಲುವಂತೆ ನಿರರ್ಗಳ ಶೈಲಿಯಲ್ಲಿ ಪ್ರಭಾವಶಾಲಿಯಾಗಿ ಪಡಿಮೂಡಿಸಿದ್ದಾರೆ. ಬೀದರಿನ ಹಿರಿಯ ಲೇಖಕಿಯಾಗಿ ಬೆಳಗುತ್ತಿರುವ ವಿಜಯಲಕ್ಷ್ಮಿಯವರಿಗೆ ಅಭಿನಂದನೆಯೊಂದಿಗೆ ಶುಭಾಶಯವನ್ನೂ ತಿಳಿಸಲು ಖುಷಿ ಆಗುತ್ತದೆ ಎಂದಿದ್ದಾರೆ
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಜನಿಸಿದ ವಿಜಯಲಕ್ಷ್ಮೀ ಶಿವಕುಮಾರ ಕೌಟಗೆ ಅವರು ಬಹುಮುಖ ಪ್ರತಿಭೆಯ ಲೇಖಕಿ. ಕರ್ನಾಟಕದ ಆಚೆಗೆ ಶಿಕ್ಷಣ ಪೂರೈಸಿ ಈಗ ಬೀದರ್ನಲ್ಲಿ ವಾಸವಾಗಿದ್ದಾರೆ. ಬಸವ ತತ್ವ ಚಿಂತನೆಗಳ ಆಧಾರದ ಮೇಲೆ ನಂಬಿಕೆ ಇಟ್ಟ ಅವರು ಭಾಲ್ಕಿಯ ಚನ್ನಬಸವಪಟ್ಟದ್ದೇವರು, ಅಕ್ಕ ಅನ್ನಪೂರ್ಣರೊಂದಿಗೆ ಈ ಭಾಗದ ಆಧ್ಯಾತ್ಮ ಪುಣ್ಯ ಪುರುಷರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ, ಆಧುನಿಕ ವಚನ, ಕಾವ್ಯ, ಲೇಖನ, ಕತೆ, ಹಾಗೂ ಶರಣ ಸಾಹಿತ್ಯ ಕುರಿತು ಸಾಹಿತ್ಯ ರಚಿಸುತ್ತಿದ್ದಾರೆ. ಕಲ್ಯಾಣ ಕದಳಿ ಅವರ ಜನಪ್ರಿಯ ಕಾದಂಬರಿ ಈ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ, ಭಾಲ್ಕಿ ಹಿರೇಮಠ ಪ್ರಶಸ್ತಿ ಸೇರಿದಂತೆ ಐದು ...
READ MORE