‘ಗಿಣಿ ಬಿಸ್ಕತ್ತು’ ಲೇಖಕ ಆಲೂರು ದೊಡ್ಡನಿಂಗಪ್ಪ ಅವರ ಕಾದಂಬರಿ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಾಲು ಸಾಲು ಸಾವು ನೋವುಗಳಿಂದ ಕಂಗಾಲಾಗಿರುವ ಸಾಹಿತ್ಯ ಲೋಕ ಸುತ್ತಲಿನ ನೋವುಗಳಿಗೆ ಮಿಡಿಯುತ್ತಿದೆ. ಸಾಹಿತ್ಯ ಮಾಡಬಹುದಾದ ಸಾಮಾಜಿಕ ಕಾರ್ಯ ಸಹ ಇದೇ ಇರಬಹುದು. ಆಲೂರು ದೊಡ್ಡನಿಂಗಪ್ಪ ಅವರ ಸಾಮಾಜಿಕ ಕಾದಂಬರಿಯಾದ ಗಿಣಿ ಬಿಸ್ಕತ್ತು ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಡುತ್ತದೆ. ಬಡತನ, ನೋವು, ಅಪಮಾನಗಳ ನಡುವೆಯೂ ಬೆನ್ನಿಗೆ ನಿಲ್ಲುವ ಸಂಬಂಧಗಳೇ ಇಲ್ಲಿನ ಪಾತ್ರಗಳು. ‘ಈಚಲು ಮರದ ಚಿಂದಿ ತೊಲೆಗಳಿಂದ ಹೊದಿಸಲ್ಪಟ್ಟ ಮಣ್ಣಿನ ಮನೆ ನಮ್ಮದು. ಮಳೆ ಬಂದಾಗ ಗೋಡೆ ಮೇಲೆ ನೀರು ಇಳಿದು ಇಳಿದು ಗೋಡೆಯ ಮಣ್ಣು ಕಳಚಿ ಕಳಚಿ ಬೀಳುವಾಗ ತೊಲೆಗಳು ಮೆಲ್ಲಗೆ ಜರುಗುತ್ತಿರುವ ದೃಶ್ಯ ಕಂಡು ಅವ್ವ ದಿಗಿಲುಪಡುತ್ತಿದ್ದಳು. ಅಪ್ಪ ಅಟ್ಟದ ಮೇಲೆ ಅಲ್ಲಿ ಇಲ್ಲಿ ಮೂಲೆ ಮುಡಿಕುಗಳಲ್ಲಿ ಇಟ್ಟ ದಡಿಗಳನ್ನು ಕಂಡು ಅದನ ಎಳ್ಕೋ, ಇದನ್ನು ಇಡ್ಕೊ ಎಂದಾಗ ನನ್ನ ಕೈಗಳಲ್ಲಿ ಎಳೆಯಲಾಗುತ್ತಿರಲಿಲ್ಲ, ಆದರೂ ಮನೆ ಬೀಳಬಹುದೇನೋ ಎನ್ನುವ ಆತಂಕಕ್ಕೆ ದಬಾಯಿಸಿ ಎಳೆದು ಹೊರತೆಗೆಯುತ್ತಾ ಇರುವಾಗ ಅಪ್ಪನ ಮೇಲೆ ನನ್ನ ಭಾರ ಬೀಳದಂತೆ ಎಚ್ಚರ ವಹಿಸಿ ಎಳೆಯುತ್ತಿದ್ದೆ’ ಹೀಗೆ ಆರಂಭಗೊಳ್ಳುವ ಕಾದಂಬರಿ ಗ್ರಾಮೀಣ ಬದುಕುಗಳನ್ನು ಕಣ್ಣಿಗೆ ಕಟ್ಟಿಕೊಡುತ್ತದೆ.
’ಗಿಣಿ ಬಿಸ್ಕತ್ತು’ ಕೃತಿಯ ವಿಮರ್ಶೆ
ಇದು ಈಗಾಗಲೇ ಮೂರು ಕವನ ಸಂಕಲನಗಳನ್ನು ಪ್ರಕಟಿಸಿ ಕವಿಯಾಗಿ ಗುರುತಿಸಲ್ಪಟ್ಟಿರುವ ಆಲೂರು ದೊಡ್ಡ ನಿಂಗಪ್ಪನವರ ಬಾಲಲೀಲಾ ಪ್ರಸಂಗಗಳ ಸಂಗ್ರಹ, ಕೊನೆಯಲ್ಲಿ ಕುಡಿಮೀಸೆಯ ಯುವಕನ ಒಂದು ಪ್ರೇಮ ಪ್ರಸಂಗ ದಾಖಲಾಗಿರುವುದಾದರೂ ಈ ಸಂಗ್ರಹ ಮುಖವಾಗಿ ಬಾಲ್ಯದ ನೆನಪುಗಳ ಸಂಗ್ರಹವೇ ಆಗಿದೆ, ತುಮಕೂರು ಜಿಲ್ಲೆಯ ಪಟೂರಿನ ಬಳಿಯ ಆಲೂರಿನ ಸುತ್ತಮುತ್ತಲ ಹಳೇಪಾಳ್ಯ, ಅಣ್ಣಾಪುರ, ಸಾರ್ಥವಳ್ಳಿ ಇತ್ಯಾದಿ ಊರುಗಳ ವ್ಯಾಪ್ತಿಯಲ್ಲಿನ ತಮ್ಮ ವಿವಿಧ ಬಾಲ ಚಟುವಟಿಕೆಗಳ ನಿರೂಪಣೆಯ ಮೂಲಕ ಲೇಖಕರು ಕಟ್ಟಿಕೊಡುವ ಈ ಪ್ರಸಂಗಗಳು ಕುಗ್ರಾಮವೊಂದರ ಒಂದು ಬಡ ಬಿಂಬದ ಕಷ್ಟ ಸುಖಗಳು, ಆ ಕುಟುಂಬದ ಬಾಲಕನೊಬ್ಬ ತನ್ನ ಬಾಳು ಕಟ್ಟಿಕೊಳ್ಳಲು
ಪಡುವ ಪಡಿಪಾಟಲುಗಳನ್ನು ಒಳಗೊಂಡಿದ್ದು, ಒಂದು ಕಾಲದ ಒಂದು ಗ್ರಾಮಜೀವನದ ಹಲವು ಮಗ್ಗಲುಗಳನ್ನೂ ನಮಗೆ ಪರಿಚಯಿಸುತ್ತದೆ. ಇದೇನೂ ಬಹು ಹಿಂದಿನ ಕಾಲಕ್ಕೆ ಸೇರಿದ ಗ್ರಾಮಜೀವನದ ನೆನಪುಗಳಲ್ಲ. ಎಪ್ಪತ್ತು ಎಂಭತ್ತರ ದಶಕದವು. ಆದರೂ ಎಷ್ಟು ದೂರದವು ಅನ್ನಿಸಿ ಕಳೆದ ಮುವ್ವತ್ತು ವರ್ಷಗಳಲ್ಲಿ ಬದುಕು ಎಷ್ಟು ವೇಗವಾಗಿ ಮತ್ತು ತೀವ್ರವಾಗಿ ಬದಲಾಗಿದೆ ಎಂದು ಆಶ್ಚರ್ಯವಾಗುತ್ತದೆ.
ತಮ್ಮ ತಂದೆ-ತಾಯಿಯನ್ನು ತಮ್ಮ ತಾತ ಮನೆಯಿಂದ ಹೊರಹಾಕಿದಾಗ ಈ ಮಡಿವಾಳ ದಂಪತಿಗಳಿಗೆ ಕುಂಬಾರ ಕುಟುಂಬವೊಂದು ವಸತಿ ಕಲ್ಪಿಸಿಕೊಡುವ ಮತ್ತು ತಮ್ಮ ತಾಯಿಗೆ ದಿನಗಟ್ಟಲೆ ಹೆರಿಗೆ ನೋವನ್ನನುಭವಿಸಿದರೂ ಹೆರಿಗೆಯಾಗದೆ ಕೊನೆಗೆ ಗಾಡಿ ಕಟ್ಟಿಕೊಂಡು ತಿಪಟೂರಿನ ಆಸ್ಪತ್ರೆಗೆ ಹೋದಾಗ ಅಲ್ಲಿ ತಾವು ಹುಟ್ಟಿದ ಘಟನೆಯ ವಿವರದೊಂದಿಗೆ ಆರಂಭವಾಗುವ ಈ ಕೃತಿ ನಂತರದಲ್ಲೇ ತನ್ನ ಕತ್ತೆ ಸವಾರಿ ಮತ್ತು ತನ್ನ ಕುಟುಂಬದ ಕತ್ತೆ ಮೇಯಿಸುವ ಕಸುಬಿನ ವಿವರಗಳಿಗೆ ಜಿಗಿದು ಕುತೂಹಲ ಹುಟ್ಟಿಸುತ್ತದಾದರೂ, ಮುಂದೆ ಈ ಕೃತಿಯಲ್ಲಿ ಎಲ್ಲಿಯೂ ಒಂದು ಕತೆಯಾಗಲೀ ಅಥವಾ ಕತ್ತೆ ಮೇಯಿಸಿದ ನೆನಪಾಗಲೀ ಅಥವಾ ಆ ನಿರೂಪಣೆಯಲ್ಲಿದ್ದ ಹಲವು ನೆಂಟರಿಷ್ಟರ ಪಾತಗಳಾಗಲೀ, ಕಾಣದೆ ಈ ಕೃತಿಯ ಸ್ವರೂಪದ ಬಗ್ಗೆ ಗೊಂದಲ ಉಂಟಾಗುತ್ತದೆ. ಇದನ್ನು ಲೇಖಕರು ಕಾದಂಬರಿ ಎಂದು ಕರೆದಿರುವರಾದರೂ, ಇದರ ರಚನೆಯ ಯಾವ ಸ್ತರದಲ್ಲೂ ಇದು ಕಾದಂಬರಿಯಾಗಿರದೆ ಕೆಲ ಬಿಡಿ ನೆನಪುಗಳನ್ನು ಸೇರಿಸಿ ಹೊಲೆದ ಹರಕಲು ಹಚ್ಚಡ ಮಾತ್ರವೆನಿಸುತ್ತದೆ. ಬಹುಶಃ ತಮ್ಮ ಬಾಲ್ಯ ಸಹಜ ಕುತೂಹಲ ಹುಟ್ಟಿಸಿ ಮನಸ್ಸಿನಲ್ಲಿ ಚಿತ್ರಗಳಾಗಿ ಅಚೊತ್ತಿದ ನೆನಪುಗಳನ್ನು-ಉದಾ: ಹುಡುಗಿಯೊಬ್ಬಳು ಋತುಮತಿಯಾದಾಗ ನೆರೆಹೊರೆಯ ಹೆಂಗಸರ ತಾರಾಟ, ನಂತರ ನಡಸುವ ಔಪಚಾರಿಕತೆಗಳು- ಇಲ್ಲಿ ದಾಖಲಿಸಿದ್ದಾರೆ. ಹಾಗಾಗಿಯೇ ಇಲ್ಲಿನ ನೆನಪುಗಳು ಮುಖ್ಯ ಅಮುಖ್ಯಗಳ ಭೇದವಿಲ್ಲ, ವಿವರಗಳೊಂದಿಗೆ ಚಿತ್ರವತ್ತಾಗಿವೆ. ಆದರೆ ಇವೆಲ್ಲ ಸೇರಿ ಇಲ್ಲಿ ನಿರೂಪಿತವಾಗಿರುವ ಬದುಕು ಇಲ್ಲಿ ಮುಖ್ಯವಾಗಿ ಬರುವ ಲೇಖಕರ ತಂದೆ ತಾಯಿಯನ್ನೂ ಸೇರಿ ಯಾವ ಪಾತ್ರವೂ ಸ್ಪುಟವಾಗಿ ಮೂಡಿ ಬರದಷ್ಟು ಬಹು ಸ್ಕೂಲವಾಗಿದ್ದು, ಅದರಿಂದ ಓದುಗರ ಮನಸ್ಸಿಗೆ ತಾಕಬಹುದಾದ ಮಹತ್ವವೆನಿಸುವ ಯಾವುದೇ 'ಧ್ವನಿ' ಹೊರಡದೆ ನಿರಾಶೆಯಾಗುತ್ತದೆ.
ಹಾಗೆಂದ ಮಾತ್ರಕ್ಕೆ ಈ ಹರಕಲು ಹಚ್ಚಡದ ತುಂಡು ಬಟ್ಟೆಗಳ ಬಣ್ಣಗಳು ನಮ್ಮನ್ನು ಸೆಳೆಯದೆ ಇರವು. ಧೋ ಎಂದು ಮಳೆ ಸುರಿದಾಗ ಮನೆಯೆಲ್ಲ ಸೇರಿ ಆ ಮಣ್ಣಿನ ಗೋಡೆ ಸೀಗೆ ಛಾವಣಿಯ ಮನೆ ಬಿದ್ದೇ ಹೋಗುವ ಆತಂಕದಲ್ಲಿ ಇಡೀ ಕುಟುಂಬ ಪಡುವ ಪಾಡು, ಬಾಲಕ ತನ್ನ ಮುಗ್ಧತೆಯಲ್ಲಿ ಊರ ಹಿರಿಯರಿಗೆ ತನ್ನಪ್ಪ ತೋಟಗಳಿಂದ ಕಾಯಿ ಕದ್ದು ಮನೆಯಲ್ಲಿ ಮುಚ್ಚಿಟ್ಟಿದ್ದನ್ನು ಹೇಳುವ ಪ್ರಸಂಗ, ಸಣ್ಣಪುಟ್ಟ ಆಸೆ ಈಡೇರಿಸಿಕೊಳ್ಳಲು ತಾನೂ ಹೀಗೆ ಕಾಯಿ ಕದಿಯಲು ಹಾಕುವ ಹೊಂಚುಗಳು, ಊಟಕ್ಕಾಗಿ ವಿವಿಧೆಡೆ ಮೀನು ಹಿಡಿಯಲು ಪಡುವ ಭಂಗ, ತಂದೆ ತಾಯಿಗಳೊಂದಿಗೆ ಕೂಲಿಗಾಗಿ ಪರೂರಿಗೆ ಬಂದು ಮಳೆಗಾಲದ ರಾತ್ರಿಗಳಲ್ಲಿ ತಲೆ ಮೇಲೆ ಸೂರಿಲ್ಲದೆ ಅಲೆಯುವ ಅನುಭವ, ಲೇಖಕನ ಬಾಡೂಟದ ಪ್ರೀತಿ, ಶಾಲೆಗೆ ಹೋಗಲು ಇಷ್ಟಪಡದೆ ಅನುಭವಿಸುವ ಶಿಕ್ಷೆಗಳ ವೈವಿಧ್ಯ ಇತ್ಯಾದಿಗಳು ಸಾಕಷ್ಟು ಸ್ವಾರಸ್ಯಕರವಾಗಿಯೇ ಮೂಡಿವೆ. ಅದರಲ್ಲೂ ಊರ ಜಾತ್ರೆಯ ದಿನ ಕೊಬ್ಬಿದ ಹಂದಿಯೊಂದನ್ನು ಮಾಂಸಕ್ಕಾಗಿ ಕೊಲ್ಲುವ ವಿಧಾನದ ಸವಿವರವಾದ ನಿರೂಪಣೆ ಮತ್ತು ಅದರಲ್ಲಿನ ಪಾಲಿಗಾಗಿ ತನ್ನ ತಂಗಿಯೊಂದಿಗೆ ಬಂದು ಕಾಯುವಲ್ಲಿನ ತಹತಹ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ, ಪಾಲನ್ನು ಮನೆಗೆ ತರುತ್ತಿರುವಾಗಲೇ ಆ ಹಸಿ ಮಾಂಸದ ತುಂಡನ್ನು ತಿನ್ನುವ ಘಾತುಕ ಅವಸರ, ನಂತರ ಜ್ವರವೇರಿ ಪಡುವ ಪಾಡು ಅವುಗಳ ಜೀವಂತ ವರ್ಣನೆಗಾಗಿ ನೆನಪಿನಲ್ಲಿ ಉಳಿಯುತ್ತವೆ, ಆದರೆ ಕೆಲಸ ಹುಡುಕಿಕೊಂಡು ಮತ್ತು ಸಿನಿಮಾ ಸೇರುವ ಹುಚ್ಚಿನಿಂದ ನಡೆಸುವ ತಿಪಟೂರು ಮತ್ತು ಬೆಂಗಳೂರು ಪ್ರವಾಸಗಳ ಹಾಗೂ ಮೊದಲ ಬಾರಿಗೆ ಮಗ್ಗ ಕಲಿಯಲು ಹೋದ ಮೊದಲ ಸಂದರ್ಭಕ್ಕೆ ಹೋಲಿಸಿದಂತೆ ಎರಡನೆಯ ಸಂದರ್ಭದ ವಿವರಗಳು ಒಣ ಒಣವೆನಿಸಿ ಬೇಸರ ಹುಟ್ಟಿಸುತ್ತವೆ, ಆದರೆ ಲೇಖಕರಲ್ಲಿ ತಡವಾಗಿ ಹುಟ್ಟಿದ ಅಕರ ಪ್ರೀತಿಯ ಪ್ರತಿಫಲವಾಗಿ ಹುಡುಗಿಯೊಬ್ಬಳ 'ಸ್ನೇಹ'ಕ್ಕೆ ಸಿಲುಕುವ' ಪ್ರಸಂಗ ಸಾಕಷ್ಟು ನವಿರಾಗಿ ನಿರೂಪಿತವಾಗಿ ಕೃತಿಗೆ ಒಂದು ಭಾವುಕ ಅಂತ್ಯ ಒದಗಿಸಿದೆ. ಈ ಎಲ್ಲ ನೆನಪುಗಳ ಒಂದು ವಿಶಿಷ್ಟತೆ ಎಂದರೆ ಎಲ್ಲೂ ಇವು ಬಡತನವನ್ನು ವೈಭವೀಕರಿಸಿ. ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡದೆ ಬರವಣಿಗೆ ಘನತೆಯನ್ನು ಕಾಪಾಡಿಕೊಂಡಿರುವುದು. ಅದಕ್ಕೆ ತಕ್ಕಂತೆಯೇ ಬಾಲ್ಯದ ಕಷ್ಟ-ಪಡಿಪಾಟಲುಗಳ ನೆನಪುಗಳ ಮಧ್ಯೆ ನಾಲಿಗೆ ಮೇಲೆ ಒಂದು ಸಿಹಿ ರುಚಿಯಾಗಿ ಉಳಿದಿರುವ ಗಿಣಿ ಬಿಸತ್ತು ಈ ಮಸ್ತಕದ ಶೀರ್ಷಿಕೆಯ ಗೌರವ ಪಡೆದಿದೆ.
ಒಟ್ಟಾರೆ ಈ ಕೃತಿಯನ್ನು ಓದಿದಾಗ ದೊಡ್ಡ ನಿಂಗಪ್ಪನವರು ತಮ್ಮ ಗದ್ಯ ಬರವಣಿಗಾಗಿ ಇನ್ನಷ್ಟು ಕಾಯಬೇಕಿದೆ ಎನ್ನಿಸದಿರದು.
(ಕೃಪೆ: ಹೊಸಮನುಷ್ಯ, ಬರಹ: ಡಿ.ಎಸ್. ನಾಗಭೂಷಣ)
©2024 Book Brahma Private Limited.