ಬಾಳಾಸಾಹೇಬ ಲೋಕಾಪುರ ನವ್ಯೋತ್ತರ ಕನ್ನಡ ಸಾಹಿತ್ಯದ ಅತ್ಯಂತ ಪ್ರಮುಖ ಲೇಖಕರಲ್ಲಿ ಒಬ್ಬರು. ಸಣ್ಣಕಥೆ, ಕಾದಂಬರಿ ಮತ್ತು ವಿಮರ್ಶೆ-ಈ ಮೂರು ಕ್ಷೇತ್ರಗಳಲ್ಲಿ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ‘ಪುರುಷಾವತಾರ’ ಬಾಳಾಸಾಹೇಬ ಲೋಕಾಪುರರ ಎಂಟನೆಯ ಕಾದಂಬರಿ.ಇದು ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ, ಐವತ್ತು ವರ್ಷ ದಾಟಿರುವ, ಪ್ರೊ. ಹನಮಂತ ಒಂಟಿಮನಿಯ ಆತ್ಮನಿವೇದನೆಯ ರೂಪದಲ್ಲಿದೆ. ಮರ್ಮಾಂಗದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರೊ. ಹನಮಂತ ಒಂಟಿಮನಿ ತಾನು ಕಳೆದ ಜೀವನವನ್ನು ನೆನಪು ಮಾಡಿಕೊಳ್ಳುವುದೆ ಕಾದಂಬರಿಯ ನಿರೂಪಣೆಯಾಗಿದೆ. ಹನಮಂತ ಒಂಟಿಮನಿ ಚಂಚಲ ಸ್ವಭಾವದ, ಅನಿಶ್ಚಿತ ನೆಲೆಯ ವ್ಯಕ್ತಿ. ಅವನು ಸಾಂಪ್ರದಾಯಕ ಕಾದಂಬರಿಗಳ ಹಿರೋಗಳಿಂಗಿಂತ ತೀರ ಭಿನ್ನ ಎಂಬುದನ್ನು ಒತ್ತಿ ಹೇಳುವ ಅಗತ್ಯವಿಲ್ಲ. ಹನಮಂತ ಹೆಚ್ಚು ಭಾವುಕ, ಅವನಿಗೆ ತಾನು ಮಾಡುವ ಕೃತ್ಯಗಳ ಬಗ್ಗೆ ಅರಿವಿದೆ. ಯಾರ ಜೊತೆಗೂ ನೈತಿಕ, ಕೌಟುಂಬಿಕ ಮತ್ತು ಮಾನವೀಯ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವುದು ಅವನಿಗೆ ಸಾಧ್ಯವಾಗುವುದಿಲ್ಲ. ಈ ಅಸ್ವಸ್ಥ ಮನಃಸ್ಥಿತಿಯಲ್ಲಿ ಹನಮಂತ ಒಂಟಿಮನಿ ನಗರದಿಂದ ಮತ್ತೊಂದು ನಗರಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ, ಅನುಭವದಿಂದ ಅನುಭವಕ್ಕೆ ಸಮಾಧಾನವಿಲ್ಲದೆ ಓಡಾಡುತ್ತಾನೆ. ಕಾದಂಬರಿ ಹನಮಂತನ ಬಾಲ್ಯದ ಜೀವನ, ಶಿಕ್ಷಣ, ಉದ್ಯೋಗ, ಲೈಂಗಿಕ ಬಯಕೆ, ಪ್ರೇಮ, ಅತ್ಯಾಚಾರ, ಅನಾರೋಗ್ಯ, ಸಾವು, ದೇವರು, ಧರ್ಮ ಮತ್ತು ಆಧ್ಯಾತ್ಮಿಕತೆಗಳ ನಿಗೂಢತೆಯಾಗಿ ಬೇರೆ ಬೇರೆ ನೆಲೆಗಳನ್ನು ಪಡೆದುಕೊಳ್ಳುತ್ತಾ ಓದುಗರಿಗೆ ಒಂದು ದಟ್ಟವಾದ ಅನುಭವವನ್ನು ಕಟ್ಟಿಕೊಡುತ್ತದೆ. ಈ ನಿಗೂಢತೆಯ ಅನ್ವೇಷಣೆಯೇ ಬಾಳಾಸಾಹೇಬ ಲೋಕಾಪುರರ ಬರವಣಿಗೆಗೆ ಪತ್ತೇದಾರಿಕೆಯ ಸ್ಪರ್ಶವನ್ನು ನೀಡಿರುವಂಥದ್ದು.
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು. ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...
READ MORE