‘ದೇಶಗ್ರಹಣ’ ಗಿರಿ ಅವರು ಬರೆದಿರುವ ಐತಿಹಾಸಿಕ ಕಾದಂಬರಿ. ಈ ಕಾದಂಬರಿ ರಚನೆಯ ಕುರಿತು ತಿಳಿಸುತ್ತಾ ‘ಬ್ರಿಟಿಷ್ ಸಾಮ್ರಾಜ್ಯಶಾಹಿಯ ಮೇಲಿನ ಐತಿಹಾಸಿಕ ಪುಸ್ತಕಗಳು ಮತ್ತು ಕಾದಂಬರಿಗಳು 1858ರಲ್ಲಿ ಶುರುವಾದ ಇಂಗ್ಲಿಷ್ ರಾಜರಾಣಿಯರ ಆಡಳಿತವನ್ನು ವೈಭವೀಕರಿಸುತ್ತವೆ. ಆದರೆ ವೈಭವವೆಲ್ಲ ಬಿಳಿ ಬ್ರಿಟಿಷರ ಪಾಲಾಗಿತ್ತು. ಇಂಡಿಯಾದ ಜನರಿಗೆ ದೊರಕಿದ್ದು ಅವರ ದೇಶವನ್ನೇ ಕವಿದ ಗ್ರಹಣ - ಶತಮಾನಗಳ ಬಿಳಿಗ್ರಹಣ. ಈ ಕಾದಂಬರಿ ಹೆಚ್ಚು ಪರಿಚಿತವಲ್ಲದ ಈಸ್ಟ್ ಇಂಡಿಯ ಕಂಪನಿಯ ಹೆಣ್ಣು ಗಂಡುಗಳ ಕತೆ. ಅವರ ದಬ್ಬಾಳಿಕೆಯ ಕತೆ. ಅವರ ದಬ್ಬಾಳಿಕೆಗೆ ಒಳಗಾದವರ ಕತೆ. ಬ್ರಿಟಿಶರು ಇಂಡಿಯಾದಲ್ಲಿ ಬೇರೂರಲು ಅವಕಾಶ ಮಾಡಿಕೊಟ್ಟ ದೇಶದ ಸ್ವಾರ್ಥಿಗಳ ಮತ್ತು ದೇಶದ್ರೋಹಿಗಳ ಕತೆ ಎಂದಿದ್ದಾರೆ ಕಾದಂಬರಿಕಾರ ಗಿರಿ.
ಇದು ಐತಿಹಾಸಿಕ ಸತ್ಯಾಂಶಗಳನ್ನೊಳಗೊಂಡ ಕಾಲ್ಪನಿಕ ಕಾದಂಬರಿ, ಪ್ರಾಸಂಗಿಕವಾಗಿ ಬಂದ ಕೆಲವು ನಿಜ ವ್ಯಕ್ತಿಗಳ ಹೆಸರುಗಳನ್ನು ಬಿಟ್ಟರೆ ಐತಿಹಾಸಿಕವಾಗಿ ನಿಜವಾದ ವ್ಯಕ್ತಿಗಳು ಈ ಕಾದಂಬರಿಯಲ್ಲಿ ಇಲ್ಲ. ಆದರೆ ಅಂತಹ ವ್ಯಕ್ತಿಗಳು, ಅವರು ಮಾಡಿದ ಕೆಲಸಗಳು ಐತಿಹಾಸಿಕವಾಗಿ ಪ್ರಮಾಣಬದ್ಧವಾಗಿವೆ. ಆದ್ದರಿಂದ ಇದು ಐತಿಹಾಸಿಕ-ಸಾಮಾಜಿಕ- ರಾಜಕೀಯ ಕಾದಂಬರಿ ಎಂದಿದ್ದಾರೆ.
‘ಗಿರಿ ಹೆಗ್ಡೆ ಅವರು ಮೂಲತಃ ಮಲೆನಾಡಿನ ಸಾಗರ ತಾಲೂಕಿನ ಗೋಟಗಾರು ಹಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ.ಎ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಿ.ಎಂ.ಎಸ್.ಪಿ. ಪೂರೈಸಿದ್ದಾರೆ. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಮನೋವಿಜ್ಞಾನದ ಅಧ್ಯಾಪಕರಾಗಿದ್ದರು. 1970 ರಲ್ಲಿ ಅಮೇರಿಕಕ್ಕೆ ಹೋಗಿ ಸದರ್ನ್ ಇಲನಾಯ್ ಯೂನಿವರ್ಸಿಟಿಯಲ್ಲಿ ವಾಕ್ ಶ್ರವಣ ವಿಜ್ಞಾನದಲ್ಲಿ ಪಿ. ಹೆಚ್.ಡಿ ಪದವಿ ಪಡೆದರು. ಕ್ಯಾಲಿಪೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ, outstanding professor ಎಂಬ ಮನ್ನಣೆಗೆ ಪಾತ್ರರಾಗಿ, 30 ವರ್ಷ ಸೇವೆ ಸಲ್ಲಿಸಿ, ಸದ್ಯ ನಿವೃತ್ತರು. 25ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳನ್ನು ಬರೆದಿದ್ದು, ಪ್ರಸ್ತುತ ಕ್ಯಾಲಿಪೋರ್ನಿಯಾದ ಕ್ಲೋವಿಸ್ ಎಂಬ ಪಟ್ಟಣದಲ್ಲಿ ವಾಸವಿದ್ಧಾರೆ. ...
READ MORE