‘ಯಾವುದೀ ಹೊಸ ಒಗಟು?’ ಕೃತಿಯು ಸಸಿಹಿತ್ಲು ಪಿ. ಸುಬ್ರಮಣ್ಯ ಅವರ ಮೊದಲ ಕಾದಂಬರಿಯಾಗಿದೆ. ಈ ಕೃತಿ ಕುರಿತು ಶ್ರೀ ಸಂತೋಷಕುಮಾರ ಮೆಹೆಂದಳೆಯವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ,… “ಇದು ಮೊದಲ ಕಾದಂಬರಿ ಎನ್ನಿಸದಷ್ಟು ಲೀಲಾಜಾಲವಾಗಿ ಕನ್ನಡವನ್ನು ಬಳಸಿಕೊಳ್ಲುತ್ತಾ, ಕನ್ನಡ ಭಾಷೆಯ ಮೇಲಿನ ಅದಮ್ಯ ಹಿಡಿತದಿಂದಾಗಿ, ಸುಲಲಿತವಾಗಿ ಓದಿಸಿಕೊಂಡು ಹೋಗುವಂತೆ ಬರೆದು ಸೈ ಎನಿಸಿಕೊಂಡಿರುವ ಲೇಖಕರು, ಬರಲಿರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಬರಹಗಳಿಗೆ ಕೈ ಹಾಕಿದರೂ ಅಚ್ಚರಿ ಇಲ್ಲ. ಮೂಲತಃ ಸಹಜ ವಾಸ್ತವಾಂಶದ ಕಥಾನಕದ ಎಳೆ ಇರಿಸಿಕೊಂಡು ಹೆಣೆಯಲಾದ “ಯಾವುದೀ ಹೊಸ ಒಗಟು?” ಓದುತ್ತಾ ಹೋದಂತೆ ನಿಧಾನಕ್ಕೆ ಆವರಿಸಿಕೊಳ್ಲುವ ಸಾದಾಸೀದಾ ಕಾದಂಬರಿ. ವಿಶೇಷ ಗಿಮಿಕ್ಕುಗಳ ಹಂಗಿಲ್ಲದ, ಕಮರ್ಶಿಯಲ್ ವಿಷಯ ವಸ್ತುವನ್ನೂ ಆಪ್ತವಾಗಿ ಹೇಳಬಹುದೆಂಬ ಸಾಧ್ಯತೆಯತ್ತ ಬೆರಳುಮಾಡುವ ಪುಸ್ತಕ, ಈ ಹೊಸ ಒಗಟು ಕಾದಂಬರಿ. ಅಗತ್ಯದ ಪಾತ್ರಗಳನ್ನು ದುಡಿಸಿಕೊಳ್ಲುವ, ಅಲ್ಲಲ್ಲಿ ಅಗತ್ಯಕ್ಕೆ ತಕ್ಕಂತೆ ಸ್ಥಳೀಯತೆ ಮತ್ತು ಪರಕೀಯ ಭಾವಗಳ ತಾಕಲಾಟವನ್ನು ಬಿಡಿಸಿಡುತ್ತಾ, ಕ್ರಮೇಣ ಓದುಗನ ಮೇಲೆ ಹಿಡಿತ ಸಾಧಿಸುವ ತಂತ್ರಗಾರಿಕೆ ಕನ್ನಡದಮಟ್ಟಿಗೆ ಕೆಲವೇ ಬರಹಗಾರರು ಬಳಸುವ ನೈಪುಣ್ಯತೆ, ಅದೇ ಪ್ರಯತ್ನ ಮತ್ತು ವಿಶೇಷತೆ ಇಲ್ಲೂ ಎದ್ದು ಕಾಣುತ್ತದೆ. ಪಾತ್ರ ಮತ್ತು ಅಕ್ಷರಗಳ ಜೊತೆ ಆಟವಾಡಿಸುತ್ತಾ ಕತೆಯನ್ನು ಒಯ್ಯವಪರಿ ಗಮನೀಯ ವಿಧಾನ ಕೂಡಾ. ಮೂಲತಃ ಅಪ್ಪಟ ಮಲೆನಾಡ ಚಿಕ್ಕಮಗಳೂರಿನ ಲೇಖಕರಿಗೆ ಕನ್ನಡದ ಬರಹ ನೀರು ಕುಡಿದಷ್ಟೇ ಸಲೀಸು ಎನ್ನುವುದು, ಅವರು ಬಳಸಿಕೊಂಡ ವರಸೆಯಿಂದಲೇ ಅರಿವಾಗುತ್ತದೆ. ಸರಳ ಸುಂದರ ಕಥಾನಕವನ್ನು ಸುಲಭಕ್ಕೆ ದಕ್ಕುವಂತೆ ಮಾಡುವಲ್ಲಿ ಸಾಹಿತ್ಯಿಕ ಕಸರತ್ತು ಮಾಡುತ್ತಲೇ ಚೆಂದವಾಗಿ ಬರೆಯುವ ಕಲೆ ಸಿದ್ಧಿಸಿದ್ದು ಎದ್ದು ಕಾಣುತ್ತದೆ. … …” ಎಂದಿದ್ದಾರೆ.
ಸಸಿಹಿತ್ಲು ಪಿ. ಸುಬ್ರಮಣ್ಯ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಸಿಹಿತ್ಲುವಿನವರು. 1962 ರಲ್ಲಿ ಜನನ. ವೃತ್ತಿಯಲ್ಲಿ ಬಿಎಸ್ಸೆನ್ನೆಲ್ ಡಿವಿಜನಲ್ ಎಂಜನಿಯರ್ ಆಗಿ, ಹಲವಾರು ಊರುಗಳಲ್ಲಿ ಸೇವೆ ಸಲ್ಲಿಸಿ, ಕೊನೆಗೆ ಮೈಸೂರಿನಲ್ಲಿರುವ “ದೂರಸಂಪರ್ಕ ತರಬೇತಿ ಕೇಂದ್ರ” ದಲ್ಲಿ ಪ್ರಾಧ್ಯಾಪಕರಾಗಿ ಹತ್ತು ವರ್ಷಗಳಿಗೂ ಮೇಲ್ಪಟ್ಟು ಕಾರ್ಯನಿರ್ವಹಿಸಿದ್ದಾರೆ. ಕವನ, ಅಂಕಣ ಹಾಗೂ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿರುತ್ತಾರೆ. ...
READ MORE