ಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರ ಕಾದಂಬರಿ-ಚೋಮನ ದುಡಿ. ಈ ಕಾದಂಬರಿಯು ಕಾರಂತರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಸ್ನೇಹಿತರೊಬ್ಬರ ಮನೆಯ ಜಗುಲಿಯ ಮೇಲೆ ಕುಳಿತು ಬರೆದಿದ್ದ ಈ ಕಾದಂಬರಿಯ ಹಸ್ತಪ್ರತಿಯನ್ನು ಅಲ್ಲೇ ಬಿಟ್ಟು , ಯಾವುದೋ ಕೆಲಸಕ್ಕಾಗಿ ಮನೆಯೊಳಕ್ಕೆ ತೆರಳಬೇಕಾಗಿ ಬಂದಾಗ, ಬೀದಿಯಲ್ಲಿ ಮೇಯುತ್ತಿದ್ದ ದನವೊಂದರ ಕಣ್ಣಿಗೆ ಚೋಮನದುಡಿ ಕಾದಂಬರಿಯ ಹಸ್ತಪ್ರತಿ ಹುಲ್ಲಿನಂತೆ ಕಂಡಿರಬೇಕು! ಅವರು ಮನೆಯೊಳಗಿಂದ ಹೊರ ಬರುತ್ತಿದ್ದಂತೆ, ಅದು ಹಸುವಿನ ಒಡಲು ಸೇರಿತ್ತು. ಮಾನಸಿಕ ಆಘಾತವಾದರೂ ಅದೇ ಮನಸ್ಥಿತಿಯಲ್ಲೇ ಕಾದಂಬರಿಯನ್ನು ಮತ್ತೆ ಬರೆದರು. ಅದೇ-ಚೋಮನ ದುಡಿ.
ಅಸ್ಪೃಶ್ಯತೆಯ ವಿರುದ್ಧ ಇಪ್ಪತ್ತರ ದಶಕದಿಂದಲೇ ನಾಟಕ, ಕವನ, ಭಾಷಣ, ಚಲನಚಿತ್ರಗಳನ್ನು ರಚಿಸುತ್ತಿದ್ದ ಕಾರಂತರು, ಸಾಮಾಜಿಕ ಅನ್ಯಾಯ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿ, ಭಾರತದ ಜಾತಿವ್ಯವಸ್ಥೆಯನ್ನು ವಿರೋಧಿಸಿದ್ದರು. ಅಸ್ಪೃಶ್ಯರು ಎದುರಿಸುತ್ತಿದ್ದ ಅನ್ಯಾಯಗಳ ವಿರುದ್ಧ ಕಾದಂಬರಿ ಮೂಲಕ ಧ್ವನಿ ಎತ್ತಿದ್ದ ಮೊದಲಿಗರು ಎಂಬ ಖ್ಯಾತಿ ಈ ಕಾರಂತರಿಗೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಆರ್ಥಿಕ ಸಮೀಕ್ಷೆಯಲ್ಲಿ ತೊಡಗಿದ್ದ ಕಾರಂತರು, ಆ ಜಿಲ್ಲೆಯ ಹೊಲೆಯರ ದಾರುಣ ಬದುಕನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ಚೋಮ ಒಬ್ಬ ಅಸ್ಪೃಶ್ಯ. ಐದು ಮಕ್ಕಳೊಂದಿಗೆ ಬದುಕು ಸಾಗಿಸುವ ಆತ ಹೆಂಡದ ಅಮಲಿನಲ್ಲಿ ದುಡಿಯುತ್ತಿದ್ದ. ಈ ವೇಳೆ ‘ದುಡಿ’ ಬಾರಿಸುತ್ತಿದ್ದ. ಬ್ರಾಹ್ಮಣ ಧನಿ ಸಂಕಪ್ಪಯ್ಯನವರ ಹೊಲದಲ್ಲಿ ಕೂಲಿಯೂ ಮಾಡುತ್ತಿದ್ದ. ತನ್ನದೇ ಜಮೀನು ಹೊಂದಿ, ಬೇಸಾಯ ಮಾಡುವದು ಆತನ ಕನಸು. ಹೊಲೆಯರು ಬೇಸಾಯ ಮಾಡುವಂತಿಲ್ಲ. ಆದರೆ, ಈ ಕುರಿತು ಸಂಕಪ್ಪಯ್ಯನವರಿಗೆ ಕೇಳಿ ಅವಮಾನ ಹೊಂದುವುದು ಬೇಡ ಎಂಬುದು ಮಗಳು ಬೆಳ್ಳಿಯ ಸಲಹೆ. ಆದರೂ, ಈ ವಿಷಯ ಹೇಳಿ ಧನಿಯಿಂದ ಬೈಸಿಕೊಳ್ಳುತ್ತಾನೆ. ಪರವೂರಿನಲ್ಲಿದ್ದ ಹಿರಿಯ ಮಗ ಚನಿಯ ಮಲೇರಿಯಾ ಜ್ವರಕ್ಕೆ ತುತ್ತಾಗಿ ಊರಿಗೆ ಬಂದು ಸಾಯುತ್ತಾನೆ. ಕಿರಿಯ ಮಗ ಗುರುವ, ಕ್ರಿಶ್ಚಿಯನ್ ಹುಡುಗಿಗೆ ಮದುವೆಯಾಗಿ ಆ ಧರ್ಮಕ್ಕೆ ಮತಾಂತರಗೊಳ್ಳುತ್ತಾನೆ. ಸಾಲದ ಹೊರೆ ಹೆಚ್ಚುತ್ತದೆ. ತೋಟದಲ್ಲಿ ಮನ್ವೆಲನ ಕಾಮದಾಸೆಗೆ ಮಗಳು ಬೆಳ್ಳಿ ಬಲಿಯಾಗುತ್ತಾಳೆ. ಮಗಳಿಗೆ ಮದುವೆ ಮಾಡಲಾಗದೇ, ತಾನು ಬೇಸಾಯ ಮಾಡಲಾಗದೇ ಚೋಮ ತತ್ತರಿಸುತ್ತಾನೆ. ಒಂದು ದಿನ, ಮಕ್ಕಳಾದ ಕಾಳ ಹಾಗೂ ನೀಲನನ್ನುಸ್ನಾನಕ್ಕಾಗಿ ತೋಡಿಗೆ ಕರೆದೊಯ್ಯುತ್ತಾನೆ. ನೀಲ ನೀರಿನಲ್ಲಿ ಮುಳುಗುತ್ತಿದ್ದಾಗ, ಜಾತಿ ಅಡ್ಡ ಬರುತ್ಬಂತದೆ. ನೀಲ ಸಾಯುತ್ತಾನೆ. .
ನಂತರ, ಚೋಮನ ಬೇಸಾಯದ ಕನಸು ಮರುಕಳಿಸುತ್ತದೆ. ಕ್ರೈಸ್ತ ಮತಕ್ಕೆ ಸೇರಲು ನಿರ್ಧರಿಸುತ್ತಾನೆ. ಆದರೆ, ಬೇಸಾಯದ ಆಸೆ ಕೈಗೂಡುವುದಿಲ್ಲ. ಮಗಳು ಬೆಳ್ಳಿ, ಮನ್ವೇಲನೊಂದಿಗೆ ಇದ್ದಿದ್ದು ತನಗೆ ಮಾಡಿದ ವಂಚನೆ ಎಂದು ತಿಳಿಯುತ್ತಾನೆ. ‘ಮಕ್ಕಳು ಹಾಗಾಗಲಿ...ಹೀಗಾಗಲಿ’ ಎಂದು ‘ಅವರು ಹೇಗಾದರೇನಂತೆ? ತನಗೇನು’ ಎಂದು ವಿಕಟವಾಗಿ ನಗುತ್ತಾ. ನಗುತ್ತಾ ‘ದುಡಿ’ಯನ್ನು ಜೋರು ಜೋರಾಗಿ ಬಾರಿಸುತ್ತಾನೆ. ಬೇಸಾಯಗಾರನಾಗುವ ಆಸೆಯೂ ಕಮರಿದ್ದ ಚೋಮನ ಮನಸ್ಥಿತಿ, ‘ದುಡಿ’ಯನ್ನು ಬಾರಿಸುತ್ತಲೇ ಜೀವ ಕಳೆದುಕೊಳ್ಳುತ್ತದೆ ಎಂಬ ಸಂಕೇತದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. .
ಮಂಗಳೂರಿನ ಶೆಣೈ ಬ್ರದರ್ಸ್ ಮತ್ತು ಕಂಪೆನಿಯು 1933ರಲ್ಲಿ (ಪುಟ: 112) ಮೊದಲ ಬಾರಿಗೆ ಈ ಕಾದಂಬರಿ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORECHOMANA DUDI l BOOK REVIEW l ಚೋಮನ ದುಡಿ |K Shivarama Karanth l