ತುಳುವಿನ ಬೊಳ್ಳಿ ಎಂಬ ಪದ ಕನ್ನಡದಲ್ಲಿ ನಕ್ಷತ್ರ ಎಂಬ ಅರ್ಥವನ್ನು ತಿಳಿಸುತ್ತದೆ. ಆಕಾಶದ ನಕ್ಷತ್ರಗಳನ್ನು ಎಣಿಸುತ್ತಾ ಕನಸು ಕಾಣುವ ತುಳುವನೊಬ್ಬನ ಬದುಕಿನ ಕತೆಯಿದು. ತುಳುನಾಡಿನ ಕೋಟಿ ಚೆನ್ನಯರೆಂಬ ಅವಳಿ ವೀರರ ಹುಟ್ಟು ಮತ್ತು ಅವರನುಭವಿಸುವ ತಲ್ಲಣಗಳ ಬಗ್ಗೆ ತಂದೆಯಿಂದ ಕೇಳಿ ತಿಳಿದುಕೊಳ್ಳುತ್ತಾ ಬೆಳೆಯುವ ಹುಡುಗ ಜಾತಿಬೇಧದ ವಿರುದ್ಧ ಧ್ವನಿಯೆತ್ತಿದಾಗ ಅವಳಿ ವೀರರ ಕತೆ ಹೇಳಿದ ಅಪ್ಪನೇ ಸ್ವತ: ಮಗನ ವಿರುದ್ಧ ತಿರುಗಿ ಬೀಳುವುದು ಕಾದಂಬರಿಯ ಪ್ರಥಮಾರ್ಧದಲ್ಲಿದ್ದರೆ, ಅದೇ ಹುಡುಗ ಮುಂದೆ ತುಳು ಮಣ್ಣಿನ ಕಾರ್ಣಿಕ ಪುರುಷರನ್ನು ಮಾದರಿಯಾಗಿಟ್ಟು ಸೈನ್ಯಕ್ಕೆ ಸೇರುವುದು ದ್ವಿತೀಯಾರ್ಧದಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ 'ಬೊಳ್ಳಿ' ಎಂಬ ಹುಡುಗನ ಸುತ್ತ ಕತೆ ಹೆಣೆಯಲಾಗಿದ್ದರೂ ನಾಯಕಿಯಾಗಿ ನಿಲ್ಲುವವಳು ಮಾತ್ರ ಆತನ ಅಕ್ಕ 'ಚೆನ್ನು'. ತಾನು ಪ್ರೀತಿಸಿದವನು ಅನ್ಯ ಧರ್ಮೀಯನೆಂದು ಮನೆಯಿಂದ ಬಹಿಷ್ಕರಿಸಲ್ಪಟ್ಟ ಹೆಣ್ಣಿನ ಒಳ ಬೇಗುದಿಗಳನ್ನೂ ನೋವುಗಳನ್ನೂ ಮರಳಿ ತನ್ನ ಕುಟುಂಬವನ್ನು ಸೇರುವ ಹಪಹಪಿಕೆಯನ್ನೂ ಇಲ್ಲಿ ಕಾಣಬಹುದು. ಬಡತನದಲ್ಲೇ ಹುಟ್ಟಿ ಬೆಳೆದ ಬೊಳ್ಳಿ ಅಪ್ಪ ಹೇಳುತ್ತಿದ್ದ ಪಾಡ್ದನಗಳನ್ನು ಕೇಳುತ್ತ ತಾನೂ ಒಂದು ದಿನ ಜನ ಕೊಂಡಾಡುವ ವ್ಯಕ್ತಿಯಾಗಬೇಕೆಂದು ಹಂಬಲಿಸಿ ಆ ಗುರಿಯತ್ತ ನಡೆದವನು ಜನ ಮೆಚ್ಚುಗೆ ಗಳಿಸುತ್ತಾನೆಯೇ ಅಥವಾ ಆತನ ಕನಸು 'ಬೊಳ್ಳಿ' ಎಂದರೆ 'ನಕ್ಷತ್ರ'ವಾಗಿಯೇ ಉಳಿಯುವುದೇ ಎಂಬುದು ತಿಳಿಯಬೇಕಾದರೆ ಕಾದಂಬರಿ ಪೂರ್ತಿ ಓದಿಮುಗಿಸಬೇಕಷ್ಟೇ. ತುಳು ಪಾಡ್ದನ, ಪಾರಿ, ಮದಿಪುಗಳ ಜೊತೆಗೆ ಸಾಗುವ ಕಾದಂಬರಿಯಾಗಿದ್ದು ಜಾತಿಬೇಧದ ವಿರುದ್ಧದ ಪ್ರತಿಭಟನೆಯನ್ನು ಹೊತ್ತ ಕಾದಂಬರಿ
ಅಕ್ಷತಾರಾಜ್ ಪೆರ್ಲ ಅವರ ಕಾವ್ಯ ನಾಮ ಅಕ್ಷರ. ಇವರ ತಂದೆ ವೆಂಕಟೇಶ್ ಭಾಗ್ವತ್ ಹಾಗೂ ತಾಯಿ ರಾಜೇಶ್ವರಿ.ಹುಟ್ಟೂರು ಮೂಡಬಿದ್ರೆಯಾದರೂ, ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ವಾಸವಾಗಿದ್ದಾರೆ. ಸಾಹಿತ್ಯದಲ್ಲಿ ಪದವಿ ಹಾಗೂ ಹಿಂದಿ ಪ್ರವೀಣ ಪಡೆದಿರುವ ಇವರು ಕತೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನ ಸೇರಿದಮತೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿದವರು. ಕನ್ನಡ, ತುಳು, ಹವ್ಯಕ, ಅರೆಭಾಷೆ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಬಲ್ಲ ಇವರು, ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕಿಯಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಸಂಚಿಯೊಳಗಿನ ಸಂಜೆಗಳು - ಕನ್ನಡ ಕವಿತೆ ಸಂಕಲನ, ಕಂದೀಲು - ಕನ್ನಡ ಕತಾ ಸಂಕಲನ,ಬೊಳ್ಳಿ ...
READ MORE