`ಮಿಥ್ಯ ಸುಖ’ ಕಾವ್ಯಾ ಕಡಮೆಯವರ ಕಾದಂಬರಿಯಾಗಿದೆ. ಕೃತಿ ಕುರಿತಂತೆ ಕೆ.ವಿ ನಾರಾಯಣ ಅವರು, ‘ನಮ್ಮೊಡನೆ ಜೈವಿಕವಾಗಿ ಹೆಣೆದುಕೊಂಡಿರದ ಆದರೆ ನಾವು ಅನಿವಾರ್ಯವಾಗಿ ಕಟ್ಟಿಕೊಂಡ ಬದುಕಿನ ದೈನಿಕ ಲಯಗಳಲ್ಲಿ ಏನನ್ನೊ ಹುಡುಕುವುದು; ಅನೂಹ್ಯವಾದ, ಅತೀತವಾದ ಹಾಗೆಯೇ ಅಗಮ್ಯವಾದ ಮತ್ತಾವುದೋ ಸೆಳೆತಕ್ಕೆ ಈ ದೈನಿಕ ಲಯಗಳ ನಡುವೆ ಸಿಲುಕುವುದು; ಈ ಎರಡು ತುಯ್ತಗಳ ನಡುವೆ ಸಾಗುವ ಕಥನವಿದು. ಈ ಸೆಳೆತ ಕಾಣದುದರ ಎಡೆಗಿನ ತುಯ್ತವೋ ಅಥವಾ ಕಳೆದ ಅನುಭವವೊಂದರ ಮರುಕಳಿಕೆಯೋ ಎಂಬ ದ್ವಂದ್ವ ಕಾಣುತ್ತದೆ. ದೈನಿಕ ಲಯಗಳ ನಿರೂಪಣೆಯಲ್ಲಿ ನಿರೂಪಕರು ಹೊರಗೆ ನಿಂತು ನೋಡುವ, ಮತ್ತು ಒಳಹೊಕ್ಕು ವಿವರಿಸುವುದನ್ನು ಎಚ್ಚರದಿಂದ ನಿವಾರಿಸಿಕೊಳ್ಳುವ ನೆಲೆಯನ್ನು ಅನುಸರಿಸುತ್ತಾರೆ. ಆದರೆ ಈ ದೈನಿಕ ಲಯಗಳ ನಡುವೆ ತಲೆಯೆತ್ತುವ ದೂರದ ಕರೆಯು ಪದಗಳಲ್ಲಿ, ಕವಿತೆಗಳಲ್ಲಿ, ನಾದದಲ್ಲಿ ಮೈಮುರಿದೇಳುತ್ತಿರುತ್ತದೆ. ಈ ಸೆಳೆತದ ಉತ್ಕಟತೆಗಳು ಒಂದು ಕಡೆ. ಆ ದೂರದ ಕರೆಯು ವಾಸ್ತವವಾಗಿ ಮೈದಳೆಯುವಾಗಿನ ಅನುಭವದಲ್ಲಿ ದಿಟ ಸಟೆಗಳ ನಡುವಣ ಗಡಿಗೆರೆಗಳು ಅಳಿಸಿ ಹೋಗುವುದು ಇನ್ನೊಂದು ಕಡೆ. ಈ ಎರಡು ತುದಿಗಳ ನಡುವಣ ಶೋಧವೇ ಈ ಕಾದಂಬರಿಯ ಗುರಿ ಎಂದು ತಿಳಿದಿರುವೆ. ಅನುಭವ ಕಥನದ ನುಡಿಗಟ್ಟಿಗೂ ಅನುಭವ ಮಂಥನದ ನುಡಿಗಟ್ಟಿಗೂ ಇಲ್ಲಿ ಅಪಾರ ವ್ಯತ್ಯಾಸವಿದೆ. ಅನುಭವ ಕಥನದಲ್ಲಿ ಲೋಕದ ಬಿಂಬವಾಗಲು ನುಡಿಯು ಹವಣಿಸುತ್ತದೆ. ಆದರೆ ಅನುಭವ ಮಂಥನದಲ್ಲಿ ನುಡಿಯು ಮೈದಳೆಯುವ ಮೂಲಕವೇ ಅನುಭವವು ಆಕಾರ ಪಡೆಯುತ್ತದೆ. ಇದೇ ಕಾರಣದಿಂದ ಈ ಎರಡನೆಯ ನೆಲೆಯ ನಿರೂಪಣೆಯು ತೀವ್ರಗೊಂಡಾಗ ಕವಿತೆಗಳಾಗಿ ಮಾರ್ಪಡುವುದನ್ನು ಕಾಣುತ್ತೇವೆ,’ ಎಂದಿದ್ದಾರೆ.
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. 1988ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. 2013ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಮಾಕೋನ ಏಕಾಂತ’, ‘ತೊಟ್ಟು ಕ್ರಾಂತಿ’ ಕಥಾ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ’ ಮತ್ತು ‘ಡೋರ್ ನಂಬರ್ ಎಂಟು’ ಹಾಗೂ ‘ಸಂಜೀವಿನಿ ಸ್ಟೋರ್ಸ್’ ನಾಟಕ ಸಂಕಲನಗಳು. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ. ಇವರ ಪದ್ಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ...
READ MORE