‘ಜಾರುವ ದಾರಿಯಲ್ಲಿ’ ಶಿವರಾಮ ಕಾರಂತರ ಕಾದಂಬರಿ. ಬದುಕಿನ ಪಯಣ ಸಾಗುತ್ತಿದ್ದಾಗಲೂ, ತನ್ನ ಆದರ್ಶಗಳನ್ನು ಬಲಿಕೊಡದ ನಾಯಕನ ಕತೆ ಇದು. ನಾಯಕ ಕಿಟ್ಟಪ್ಪ ಆದರ್ಶವನ್ನು ತನ್ನ ನಡತೆಯಲ್ಲಿ ರೂಢಿಸಿಕೊಂಡಾತ. ಕೊನೆಯ ತನಕ ಆದರ್ಶಮಯವಾದ ಬದುಕನ್ನು ಬಾಳಿದ್ದ ಕಥಾನಾಯಕನ ಸುತ್ತ ಈ ಕತೆ ಹೆಣೆಯಲಾಗಿದೆ.
ಕಾಳೂರಿನ ಉಪಾಧ್ಯಾಯ- ಶಿವಪ್ಪ, ಈತನ ಮಗ ಕಿಟ್ಟಪ್ಪ. ಐದಾರು ಜನ ಹೆಣ್ಣುಮಕ್ಕಳು. ಬಡತನ ಬೇರೆ. ತಮ್ಮ ಬಿಡುವಿನಲ್ಲಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಲೆಕ್ಕಪತ್ರ ಬರೆಯುತ್ತಿದ್ದ. ಗೆಳೆಯರಿಂದ ಬಂದ ಹಣದ ನೆರವಿನಿಂದಾಗಿ ಕಿಟ್ಟಪ್ಪನಿಗೆ ವೈದ್ಯಕೀಯ ಶಿಕ್ಷಣ ಕೊಡಿಸುತ್ತಾನೆ. ಶಿಕ್ಷಣಕ್ಕೆ ವಿಶೇಷ ನೆರವು ನೀಡಿದ್ದ ಸಣ್ಣಕಲ್ಲು ರಂಗರಾಯರ ಮಗಳು ಇಂದುಮತಿಯನ್ನು ಕಿಟ್ಟಪ್ಪ ಮದುವೆಯಾಗುತ್ತಾನೆ. ಇದರಿಂದ, ತಂದೆ ಶಿವಪ್ಪ ಸಿಟ್ಟಾಗುತ್ತಾನೆ. ಮದುವೆಗೂ ಹೋಗುವುದಿಲ್ಲ. ರಂಗರಾಯರಿಂದ ಹಣ ಪಡೆದಿದ್ದು ಸಾಲವಾಗಿ, ಎಂದಾದರೂ ಒಂದು ದಿನ ತೀರಿಸಲೇ ಬೇಕು ಎಂಬುದು ಶಿವಪ್ಪನ ಈ ನಡೆಗೆ ಕಾರಣವಾಗಿತ್ತು. ಧಾರವಾಡದಲ್ಲೇ ಪ್ರಾಕ್ಟೀಸ್ ಮಾಡುವಂತೆ ಮಾವ ರಂಗರಾಯರಿಂದ ಒತ್ತಾಯವಿದ್ದರೂ ಕಿಟ್ಟಪ್ಪ ತಮ್ಮೂರಲ್ಲೇ ಪ್ರಾಕ್ಟೀಸ್ ಮಾಡುವುದಾಗಿ ಹೇಳುತ್ತಾನೆ. ಬಡಬಗ್ಗರಿಗೆ ಉಚಿತ ಸೇವೆ ನೀಡುತ್ತಾನೆ. ಪತ್ನಿ ಇಂದುಮತಿಗೆ ಹಳ್ಳಿಯಲ್ಲಿರಲು ಇಷ್ಟವಾಗುವುದಿಲ್ಲ. ಜೊತೆಗೆ ಹಣ ಗಳಿಕೆಯ ಆಸೆ ಕಿಟ್ಟಪ್ಪನಿಗೆ ಇಲ್ಲದ್ದರಿಂದ ಇಂದುಮತಿಯ ಕನಸುಗಳು ಬೇಗ ಕಮರಿ ಹೋಗುತ್ತವೆ. ಈ ಮಧ್ಯೆ, ಶಿಕ್ಷಣಕ್ಕಾಗಿ ಪಡೆದಿದ್ದ ಸಾಲದ ಹಣವನ್ನು ಮಾವನಿಗೆ ಹಿಂತಿರುಗಿಸುತ್ತಾನೆ. ಕಿಟ್ಟಪ್ಪನ ತಾಯಿ ಸಾಯುತ್ತಾಳೆ. ತಂದೆ ಶಿವಪ್ಪ, ತನ್ನ ಮಗ ತನ್ನ ಅಂಕೆಯಲ್ಲಿ ಎಂಬ ಕೊರಗುತ್ತಿರುತ್ತಾನೆ. ಸೊಸೆಯ ಬಗ್ಗೆ ಆತನಿಗೆ ಅಸಮಾಧಾನವಿರುತ್ತದೆ. ಗುಲಾಬಿ ಎಂಬ ಹೆಣ್ಣುಮಗಳ ಪರಿಚಯವಾಗಿ ಅವಳೂ ಸಹ ವೈದ್ಯ ಕಿಟ್ಟಪ್ಪನೊಂದಿಗೆ ರೋಗಿಗಳ ಸೇವೆ ನಿಲ್ಲುತ್ತಾಳೆ. ಇಂದುವತಿಗೆ ಎರಡನೇ ಹೆರಿಗೆಯಾಗುತ್ತದೆ. ಕುಕನೂರಿನ ಆಸ್ಪತ್ರೆಯಲ್ಲಿ ವೈದ್ಯ ಹಾಗೂ ಪತಿ ಕಿಟ್ಟಪ್ಪನವೂ ಅವಳೊಂದಿಗೆ ಇರಬೇಕಾಗುತ್ತದೆ. ಆಗ, ಗುಲಾಬಿಯೇ ಈತನ ಕ್ಲಿನಿಕ್ ನೋಡಿಕೊಳ್ಳುತ್ತಾಳೆ. ಇಂದುಮತಿ ಕಾಯಿಲೆಯಿಂದ ನರಳುತ್ತಿದ್ದಾಗಲೂ ಕಿಟ್ಟಪ್ಪ ರೋಗಿಯೊಬ್ದಬನ ಕರೆಗೆ ಓಗೊಟ್ಟು ಚಿಕಿತ್ಸೆ ನೀಡಲು ತೆರಳುತ್ತಾನೆ. ಬರುವಷ್ಟರಲ್ಲಿ ಆಕೆ ಸಾಯುತ್ತಾಳೆ.
ಹೀಗೆ, ಜಾರುವ ದಾರಿಯಲ್ಲಿ ತನ್ನ ಬದುಕಿನ ಪಯಣ ಸಾಗುತ್ತಿದ್ದಾಗಲೂ, ಆದರ್ಶಗಳನ್ನು ಬಲಿಕೊಡದೇ ದೊಡ್ಡ ಮನಸ್ಸಿನಿಂದ ರೋಗಿಗಳ ಸೇವೆಯಲ್ಲಿರುತ್ತಾನೆ. ಬದುಕಿನ ಕೊನೆಯುದ್ದಕ್ಕೂ ದುರಂತ ಸನ್ನಿವೇಶಗಳನ್ನು ಎದುರಿಸುತ್ತಿದ್ದರೂ, ಆದರ್ಶಮಯವಾದ ಬದುಕನ್ನೇ ಜೀವಿಸುತ್ತಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1952ರಲ್ಲಿ (ಪುಟ: 283) ಮೊದಲ ಬಾರಿಗೆ ಈ ಕಾದಂಬರಿಯನ್ನು ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE