‘ಉರಿಯ ಗದ್ದುಗೆ’ ಬಿ.ಆರ್. ಪೊಲೀಸ್ ಪಾಟೀಲ ಅವರ ಕಾದಂಬರಿಯಾಗಿದೆ. ಇದಕ್ಕೆ ಶಶಿಕಾಂತ ಪಟ್ಟಣ ಅವರ ಬೆನ್ನುಡಿ ಬರಹವಿದೆ; ವಿರಕ್ತಪೀಠ ಪರಂಪರೆಯ ತಾಯಿಬೇರು ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು. ಅವರ ಬಳಿವಿಡಿದು ಬಂದ ಮಠ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ. ಈ ಮಠದ 19 ನೇ ಪೀಠಾಧಿಕಾರಿಗಳಾಗಿ 1974 ಜುಲೈ 29 ರಂದು ಅಧಿಕಾರ ವಹಿಸಿಕೊಂಡ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಮೊದಲ ದಿನದಿಂದಲೇ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪೀಠಕ್ಕೆ ಬರುವ ಮೊದಲು ಹೊಯ್ದಾಟವಿದ್ದರೂ ಬಂದು ಹೊಣೆಹೊತ್ತ ಮೇಲೆ ದೃಢ ನಿಶ್ಚಯ ತಾಳಿ ಈ ಮಠದ, ಭಕ್ತರ ಶ್ರೇಯೋಭಿವೃದ್ಧಿಗೆ ಅಹರ್ನಿಶಿಯಾಗಿ ಶ್ರಮಿಸಿದ್ದಲ್ಲದೆ ಅಶಕ್ತ, ಅವಕಾಶವಂಚಿತ ಅನೇಕ ಸಮುದಾಯಗಳ ಉನ್ನತಿಗಾಗಿ, ನಾಡು, ನುಡಿ, ಗಡಿ ಸಂವರ್ಧನೆಗಾಗಿ, ಪ್ರಾಣಿ, ಪರಿಸರ, ಜಲ ಸ್ಥಿರತೆಗಾಗಿ ತುಂಬ ಗಟ್ಟಿಯಾದ ಧ್ವನಿ ಎತ್ತಿದರು. ಈ ಜೀವಪರ ಕಾಳಜಿಯನ್ನು ಕಂಡ ನಾಡಜನತೆ ಇವರು ನಮ್ಮವರು ಎಂದು ಹಂಬಲಿಸಿ ಶ್ರೀ ಮಠದತ್ತ ಹರಿದು ಬರತೊಡಗಿದರು. ಜನಮನದ ಶಕ್ತಿಯ ಸ್ವರೂಪಕ್ಕೆ ಶಿವರೂಪವನ್ನಿತ್ತ ಪೂಜ್ಯರು ಸಾಮಾನ್ಯರಲ್ಲಿ ಸಾಮಾನ್ಯರಾದವರಿಂದ ಅಸಾಮಾನ್ಯ ಕಾರ್ಯಗಳು ನೆರವೇರುವಂತೆ ಪ್ರೇರೇಪಿಸಿದರು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡ ಕಟ್ಟಿಕೊಂಡು ಕಳೆದ ನಾಲ್ಕುವರೆ ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿರುವ ಪೊಲೀಸ್ ಪಾಟೀಲ ಅವರ ಹಾಡಿನ ಮೋಡಿಗೆ ತಲೆಬಾಗದವರಿಲ್ಲ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನೂರಿಪ್ಪತ್ತು ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. 93 ನಾಟಕಗಳನ್ನು ಇವರು ರಚಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ...
READ MORE