’ಲೈಂಗಿಕ ಜಾತಕ’ ಕೆ. ಸತ್ಯನಾರಾಯಣ ಅವರ ಹೊಸ ಕಾದಂಬರಿ. ಈ ಕಾದಂಬರಿ ಹಲವು ಕಾರಣಗಳಿಗಾಗಿ ತುಂಬಾ ವಿಶಿಷ್ಟ. ಸಲಿಂಗಿಗಳ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಾರಂಭವಾಗುವ ಕಾದಂಬರಿ ನಮ್ಮ ಮುಂದೆ ನಮ್ಮದೇ ಆದ, ಆದರೂ ಒಪ್ಪಿಕೊಳ್ಳಲು ಹಿಂಜರಿಯುವ ಲೋಕವೊಂದನ್ನು ಅನಾವರಣಗೊಳಿಸುತ್ತದೆ. ಸಾವಿನ ದಶಾವತಾರದಂತಹ ಕಾಂಟ್ರೇರಿಯನ್ ಕಾದಂಬರಿ ಬರೆದ ಸತ್ಯನಾರಾಯಣ ಅವರು ತಮ್ಮ ಆಲೋಚನೆಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಗಂಡು ಹೆಣ್ಣಿನ ಪರಧಿಯನ್ನು ಅಳಿಸಿಹಾಕಿ ವ್ಯಕ್ತಿ ವ್ಯಕ್ತಿಗಳ ಆಂತರಿಕ ವಹಿವಾಟು, ತುಮುಲಗಳು ಕಾದಂಬರಿಯ ಕೇಂದ್ರವಸ್ತು ಆಗಿ ಬಿಡುತ್ತವೆ. ಸಾಮಾಜಿಕವಾಗಿ ಲಿಂಗಭೇದವನ್ನು ಸಾಕಷ್ಟು ಅಳಿಸಿ ಗಂಡು-ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಸಮಾನಮನಸ್ಕರಾಗಿರುವುದನ್ನು ಸಮಾಜ ಒಪ್ಪಿಕೊಂಡಿರುವಾಗ ತೀರ ವೈಯಕ್ತಿಕ ನೆಲೆಯಲ್ಲಿಯೂ ಈ ಭೇದವನ್ನು ಅಳಿಸುವ ಪ್ರಕ್ರಿಯೆ ಒಂದು ನಿರ್ಣಾಯಕ ಹಂತವನ್ನು ತಲುಪುವ ಸಾಧ್ಯತೆಯನ್ನು ಕಾದಂಬರಿ ಸೂಚಿಸುತ್ತದೆ ಎನ್ನುತ್ತಾರೆ ಪ್ರೊಫೆಸರ್ ಪ್ರಮೋದ್ ಮುತಾಲಿಕ್.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ ದೊರೆತಿದೆ.
ಆ ಸತ್ಯನಾರಾಯಣ ಅವರ 'ಲೈ೦ಗಿಕ ಜಾತಕ' ಕಾದಂಬರಿ ವಸ್ತು ಮತ್ತು ಪ್ರಸ್ತುತಿಯ ದೃಷ್ಟಿಯಿಂದ ಗಮನ ಸೆಳೆದಿದೆ. ಸಲಿಂಗಿಗಳ ಬಂಧದಲ್ಲಿ ಲೈಂಗಿಕತೆಯೊಂದೇ ಇದೆಯೇ? ಇದು ಅಸಹಜ ಅನ್ನುವುದಾದರೆ, ಯಾವುದು ಸಹಜ? ಅಸಹಜ ಎಂದು ಗುರ್ತಿಸುವವರು ಯಾರು? ಅವರಿಗೆ ಆ ಅಧಿಕಾರವನ್ನು ಯಾರಾದರೂ ಕೊಟ್ಟರೋ, ಅವರಾಗಿಯೇ ಚಲಾಯಿಸುತ್ತಿದ್ದಾರೆಯೋ ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡು ಈ ಕಾದಂಬರಿಯಲ್ಲಿನ ಪಾತ್ರಗಳು ತಾವು ಹೇಳಬೇಕಾದದ್ದನ್ನು ಹೇಳಬೇಕಾದ ರೀತಿಯಲ್ಲಿ ಹೇಳಿ ಮುಗಿಸುತ್ತವೆ.
15 ಡಿಸೆಂಬರ್ 2019
ಕೃಪೆ : ವಿಜಯ ಕರ್ನಾಟಕ
ಕೆ ಸತ್ಯನಾರಾಯಣರ ಹೊಸ ಹಂದರದ ‘ಜಾತಕ’- ಅವಧಿ
................................................................................................................................................
ಸಲಿಂಗ ಕಾಮ ಕುರಿತ ಸ್ವಾರಸ್ಯಕರ ಜಿಜ್ಞಾಸೆ
ಸಲಿಂಗ ರತಿ ನಮ್ಮ ಪ್ರಾಚೀನ ಶಿಲ್ಪಗಳೇ ಸೂಚಿಸುವಂತೆ ನಮ್ಮ ಸಮಾಜಕ್ಕೆ ಹೊಸದೇನಲ್ಲ. ಆದರೆ ಈ ಹಿಂದೆ ಅಲ್ಲೊಂದು ಇಲ್ಲೊಂದು-ಅದೂ ಕದ್ದು ಈ ಜಾತಕ ಮುಚ್ಚಿ-ನಡೆಯುತ್ತಿದ್ದ ಈ ಸಂಬಂಧ ಈಗ ಮುಕ್ತ. ಮಾರುಕಟ್ಟೆ ಆರ್ಥಿಕತೆಯ ದಿನಗಳಲ್ಲಿ ರಾಜಾರೋಷವಾಗಿಯೇ ಪ್ರಕಟವಾಗುತ್ತಿದೆ. ಅದಕ್ಕೆ ಈಗ ಕಾನೂನಿನ ಮಾನ್ಯತೆ ಸಿಕ್ಕಿ ಅದರ ಸಂಘಟನೆಯನ್ನೂ ಕಟ್ಟಿಕೊಂಡು ಅದಕ್ಕೊಂದು ಸಾಮಾಜಿಕ ಮಾನ್ಯತೆಯನ್ನೂ ಒದಗಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಈ ಕೃತಿಯ ಕರ್ತೃ ನಮ್ಮ ಸಮಾಜದಲ್ಲಿ ಇತ್ತೀಚೆಗೆ ಏಕೆ ಶೃಂಗಾರ ರಸ ಕಡಿಮೆಯಾಗಿ ಗಂಡು-ಹೆಣ್ಣಿನ ನಡುವಣ ನೈಸರ್ಗಿಕ ಆಕರ್ಷಣೆ ಕಡಿಮೆಯಾಗುತ್ತಿದೆ? ಎಂಬ ಪ್ರಶ್ನೆಯನ್ನು ಹಾಕಿಕೊಂಡು ಸಲಿಂಗ ರತಿಯ ವಿದ್ಯಮಾನದಲ್ಲಿ ಅದಕ್ಕೊಂದು ಉತ್ತರ ಹುಡುಕಲೆಳಸುವ ಕಿರು 'ಕಾದಂಬರಿ' ಇದು.
ಸಲಿಂಗ ಕಾಮಾಚರಣೆಗೆ ಸಂಬಂಧಪಟ್ಟಂತೆ-ಸ್ತ್ರೀ ಸಲಿಂಗ ಕಾಮವೂ ಸೇರಿದಂತೆ ಕನ್ನಡದಲ್ಲಿ ಈಗಾಗಲೇ ಎರಡು ಮೂರು ಗಮನಾರ್ಹ ಕಥೆ - ಕಾದಂಬರಿಗಳು ಬಂದಿವೆ. ಆದರೆ ಈ ಕೃತಿ ಇಂತಹ ಕಥನಗಳ ಹಿಂದಿನ ನಾಟಕೀಯತೆ ಮತ್ತು ಸ್ವಾರಸ್ಯಗಳನ್ನು ಮೀರಿ ಈ ವಿದ್ಯಮಾನ ಈಗ ಸಾಮಾಜಿಕ ಮಾನ್ಯತೆ ಗಳಿಸಿಕೊಳ್ಳಲು ನಡೆಸಿರುವ ಪ್ರಯತ್ನಗಳ ಚಲನಶೀಲತೆಯನ್ನು ಗುರುತಿಸುವ ಪ್ರಯತ್ನ ಮಾಡುತ್ತದೆ. ಇದಕ್ಕಾಗಿ ಅದು ಮಂಡ್ಯ ಎಂದು ಸ್ಪಷ್ಟವಾಗಿ ಗೊತ್ತಾಗುವ ಗ್ರಾಮೀಣ ಪ್ರದೇಶವೊಂದರ ಮುಖ್ಯ ನಗರವೊಂದರಲ್ಲಿ ಸಲಿಂಗ ಕಾಮಿಗಳ ಸಮ್ಮೇಳನವೊಂದರ ಚಿತ್ರವೊಂದನ್ನು ಕಟ್ಟಿಕೊಡುವ ಲೇಖಕ ಅದರ ಕಾರ್ಯಕಲಾಪಗಳ ವೀಕ್ಷಕನಾಗಿ ಅವುಗಳ ಮೂಲಕ ಈ ವಿದ್ಯಮಾನದ ವಿವಿಧ ಆಯಾಮಗಳ ನಿರೂಪಣೆ ಮಾಡುತ್ತಾನೆ. ಇಲ್ಲಿ ಈ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಇದೇ ಗ್ರಾಮೀಣ ಪ್ರದೇಶದ ಶ್ರೀನಿವಾಸ ಮತ್ತು ಆತನ ಪತ್ನಿ 'ನೀಲಂ ಬರುವಾ ಅವರೇ ಈ ಕೃತಿಯಲ್ಲಿರುವ ಜಿಜ್ಞಾಸೆ ಅಥವಾ ಪರಿಶೀಲನೆಯನ್ನು ಅವರಿಸಿರುವ ಎರಡು ಪ್ರಮುಖ ಪಾತ್ರಗಳು. ಮಿಕ್ಕವು ಉದಾ: ಗೋಡೆ ನಾಗಮ್ಮ ಮರಿಲಿಂಗಯ್ಯ, ಅರುಳ್ ಸ್ವಾಮಿ, ಲಾರೆನ್ಸ್ ಸೋಮಶೇಖರ್, ಬಾಲರಾಜನ್, ಚಿಕ್ಕಮ್ಮ ತನ್ಮಯಿ, ಶಿವಕಾಮಿ ಇತ್ಯಾದಿಗಳು ಈ ಜಿಜ್ಞಾಸೆಗೆ ದೂರವಾಗಿ ಬಂದು ಹೋಗುವವಾದರೂ ಗೂಡೆ ನಾಗಮ್ಮ ಮತ್ತು ಅರುಳ್ ಸ್ವಾಮಿಗಳ ಪಾತ್ರಗಳ ಹೊರತಾಗಿ ಮಿಕ್ಕವಾವೂ ಕಥನದ ಆಳವನ್ನು ಹೆಚ್ಚಿಸದೆ ಕೃತಿಯ ಉದ್ದಗಲಗಳನ್ನು ಮಾತ್ರ ಹೆಚ್ಚಿಸುತ್ತಾ, ಕೃತಿಯನ್ನು ಅಂತಿಮವಾಗಿ ಬರಡು ಸಲಿಂಗ ಕಾಮ ಪುರಾಣವೊಂದನ್ನಾಗಿ ಮಾತ್ರ ಮಾಡುವಲ್ಲಿ ಯಶಸ್ವಿಯಾಗಿವೆ. ಏಕೆಂದರೆ ಈ ಪಾತ್ರಗಳ ನಡಾವಳಿ ಮತ್ತು ಮಾತುಗಳು ಕೃತಿಕಾರ ಕೆ.ಸತ್ಯನಾರಾಯಣರ ಬರವಣಿಗೆಯ ಛಾಪಾದ ಮಂಡ್ಯದ ಕಡೆಯ ಮಧ್ಯಮವರ್ಗದ ಬ್ರಾಹ್ಮಣರ ರುಚಿಕಟ್ಟಾದ ವಾಗೈಖರಿಯಲ್ಲಿ ಮಿಂಚುವವಾದರೂ, ಇವುಗಳು ಕೃತಿಯ ತಾತ್ವಿಕ ಕೇಂದ್ರದೊಂದಿಗೆ ಜೋಡಣೆಗೊಳ್ಳದೆ ಸುಮ್ಮನೆ ಚೆಲ್ಲಿ ಹೋಗುತ್ತವೆ.
ಇದೇ ಮಾತನ್ನು ಶ್ರೀನಿವಾಸ ಮತ್ತು ನೀಲಂ ಬರುವಾ ಅವರ ಕರಡು ಕಾದಂಬರಿಗಳೆಂದು ಇಲ್ಲಿ ನಿರೂಪಿತವಾಗಿರುವ ಒಣ ಬೌದ್ಧಿಕ ಜಿಜ್ಞಾಸೆಗಳ ಬಗ್ಗೆಯೂ ಹೇಳಬಹುದು. ಹಾಗೆ ನೋಡಿದರೆ ಮೇಲೆ ಉಲ್ಲೇಖಿಸಿದ ಎರಡು ಪಾತ್ರಗಳ ಹೊರತಾಗಿ ಮಿಕ್ಕವೆಲ್ಲವೂ ಚಪ್ಪಟೆ ಪಾತ್ರಗಳೇ. ಇದಕ್ಕೆ ಮುಖ್ಯ ಕಾರಣಗಳು ಎರಡು. ಒಂದು ಕೃತಿ ತನ್ನನ್ನು ಕಟ್ಟಿಕೊಳ್ಳಲು ರೂಪಿಸಿಕೊಂಡಿರುವ (ಸಮ್ಮೇಳನದ ಆವರಣ ಸಾಮಾಜಿಕವಾಗಿ ವಿಶ್ವಾಸಾರ್ಹವೆನಿಸದೆ, ಕಥನ ಸ್ವಾರಸ್ಯಕರ-ಕೆಲವೊಮ್ಮೆ 'ದಿಟ್ಟ'ವೆನಿಸುವಪ್ರಸಂಗಗಳು ಮತ್ತು ವರ್ಣನೆಗಳ ಹೊರತಾಗಿಯೂ ಸಾರತಃ ಬೌದ್ಧಿಕವಾಗಿಯೇ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳಲೆಳಸುವುದು. ಇನ್ನೊಂದು ಸಲಿಂಗ ಕಾಮವನ್ನು ಮೂಲತಃ ದೈಹಿಕ ನೆಲೆಯಲ್ಲಿ ಮಾತ್ರ ಅರ್ಥ ಮಾಡಿಕೊಳ್ಳಲೆಳಸಿರುವುದು, ಹೊಸ ಆರ್ಥಿಕತೆ ಕಟ್ಟಿರುವ ಹೊಸ ರಾಜಕಾರಣಕ್ಕೂ ಇದು ಕೆರಳಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದರ ಸೂಕ್ಷ್ಮ ಅನ್ವೇಷಣೆಯ-ಅದರ ಪರೋಕ್ಷ ಸೂಚನೆಗಳ ಹೊರತಾಗಿ-ಛಾತಿಯ (ರಿಸ್ಕ್'?) ಗೈರುಹಾಜರಿಯೇ ಕೃತಿ ಆರಂಭದಲ್ಲಿ ಹುಟ್ಟಿಸುವ ಕುತೂಹಲ ನಿರಾಶೆಯಲ್ಲಿ ಕೊನೆಗೊಳ್ಳಲು ಕಾರಣವಾಗುತ್ತದೆ.
- ಡಿ. ಎಸ್. ನಾಗಭೂಷಣ
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ನವೆಂಬರ್ 2019)
©2024 Book Brahma Private Limited.