"ನನ್ನ ತಂಗಿ ಈಡಾ ಕಾರೋಲಿನ ವಾಲ್" ಕೃತಿಯು ಹರ್ಷ ರಘುರಾಮ್ ಅವರ ನೇರ ಜರ್ಮನ್ ನಿಂದ ಕನ್ನಡಕ್ಕೆ ಅನುವಾದಿಸಿರುವ ಸಮಕಾಲೀನ ಜರ್ಮನ್ ಕಾದಂಬರಿಯಾಗಿದೆ. ಇಲ್ಲಿ ಟಿಲ್ಡಾ ಅನ್ನುವ ಹುಡುಗಿಯೊಬ್ಬಳು ತಂಗಿ ಹಾಗೂ ತಾಯಿಯನ್ನು ನೋಡಿಕೊಳ್ಳುತ್ತಾ ತನ್ನ ಕನಸ್ಸಿನ ಜೀವನವನ್ನು ಕಟ್ಟಿಕೊಳ್ಳುವ ತುಡಿತವನ್ನು ವಿವರಿಸಲಾಗಿದೆ. ಆಕೆಯ ಬವಣೆಗಳನ್ನು ವಿವರಿಸುವ ಲೇಖಕರು, ಜರ್ಮನಿಯ ಸಣ್ಣದೊಂದು ಊರಿನ ’ಖುಷಿಯ ರಸ್ತೆಯಲ್ಲಿ ವಾಸವಿರುವ ಟಿಲ್ಡಾಳಿಗೆ ಆ ಊರಿನ ಜೀವನ ಹೇಗೆ ರೇಜಿಗೆ ಹುಟ್ಟಿಸುತ್ತಿದೆ ಎನ್ನುವುದನ್ನು ಕೂಡ ತಿಳಿಸಿದ್ದಾರೆ. ಅವಳ ಗೆಳೆಯ ಗೆಳತಿಯರು ಊರು ಬಿಟ್ಟು ಆಮ್‍ಸ್ಟರ್‌ಡಾಮ್ ಮತ್ತು ಬರ್ಲಿನ್‍ನಂತಹ ದೊಡ್ಡ ಊರುಗಳನ್ನು ಸೇರಿಕೊಂಡುಬಿಟ್ಟಿದ್ದಾರೆ. ಈಡಾಳಿಗೆ ಆಸರೆಯಾಗಲೆಂದು ಟಿಲ್ಡಾ ಆ ಸಣ್ಣ ಊರಿನಲ್ಲೇ ಉಳಿದು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಳೆ. ಹೀಗಿರುವಾಗ ಒಂದುದಿನ ಬರ್ಲಿನ್‍ನ ದೊಡ್ಡ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಮಾಡುವ ಅವಕಾಶವೊಂದು ಟಿಲ್ಡಾಳನ್ನು ಅರಸಿ ಬರುತ್ತದೆ. ಅವಳು ತನ್ನ ಸಣ್ಣ ಊರಿನ ಜೀವನದಿಂದ ಬಿಡುಗಡೆ ಹೊಂದುವ ಕನಸನ್ನು ಕಾಣತೊಡಗುತ್ತಾಳೆ. ಹೀಗೆ ಟಿಲ್ಡಾಳ ಕನಸು ಆಕೆಯ ಮನೆಯ ಪರಿಸ್ಥಿತಿಗಳನ್ನು ಇಲ್ಲಿ ಲೇಖಕರು ಭಿನ್ನವಾಗಿ ಚಿತ್ರಿಸಿದ್ದಾರೆ. ಒಟ್ಟಾರೆಯಾಗಿ ‘ನನ್ನ ತಂಗಿ ಈಡಾ’ ಕಾದಂಬರಿಯಲ್ಲಿ ಜರ್ಮನಿಯ ಸಣ್ಣ ಊರಿನ ಕೌಟುಂಬಿಕ ತಲ್ಲಣಗಳ ಗಾಢ ಚಿತ್ರಣವಿದ್ದು, ಜವಾಬ್ದಾರಿ ಮತ್ತು ಸ್ವಾತಂತ್ರ್ಯಗಳ ನಡುವೆ ಖುಷಿಯನ್ನು ಕಂಡುಕೊಳ್ಳುವ ತುಡಿತವಿದೆ.
ಲೇಖಕ ಹರ್ಷ ರಘುರಾಮ್ ಅವರು ಮೂಲತಃ ಬೆಂಗಳೂರಿನವರು. ಸದ್ಯ ಆಸ್ಟ್ರಿಯದ ವಿಯೆನ್ನದಲ್ಲಿ ವಾಸ್ತವ್ಯ. ಬಾಲ್ಯದ ದಿನಗಳಿಂದಲೂ ಸಾಹಿತ್ಯಾಸಕ್ತಿಯನ್ನು ಮೈಗೂಡಿಸಿಕೊಂಡ ಇವರು ನುರಿತ ಕರ್ನಾಟಕ ಸಂಗೀತಗಾರರೂ ಹೌದು. ಭಾಷಾ ಕಲಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವ ಅವರು ಹಲವಾರು ಭಾರತೀಯ ಮತ್ತು ಐರೋಪ್ಯ ಭಾಷೆಗಳನ್ನು ಬಲ್ಲವರಾಗಿದ್ದಾರೆ. ...
READ MORE