'ನೀರು’ ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭ ವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು ವಿಶೇಷವಾಗುವುದೇ ಈ ಹೊಳವಿನಿಂದ. ಅವರ ಎಲ್ಲ ಸಾಮಾಜಿಕ ಪ್ರಯೋಗಗಳ ಉತ್ಪನ್ನವಾಗಿ ಸೀತಾಪುರ ಕಾಣಿಸಿಕೊಳ್ಳುತ್ತದೆ. ಪುರಾಣ, ಇತಿಹಾಸ ಪೂರ್ವ ಮತ್ತು ಪ್ರಸ್ತುತ ಭಾರತಗಳು ಅವರ ಸೀತಾಪುರವೆಂಬ ಬಿಂದುವಿನಲ್ಲಿ ಅಭಿಗಮಿಸುತ್ತವೆ. ಸೀತಾಪುರವು ತನ್ನ ರಕ್ತದಲ್ಲೇ ವಾಸ್ತವಪುರದ ಎಲ್ಲ ಸಮಸ್ಯೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಹೊತ್ತಿರುತ್ತದೆ. ಇದು ಬರೀ ಒಂದು ಆದರ್ಶ ಪುರದ ದರ್ಶನವಲ್ಲ. ಅಲ್ಲೇ ಅದು ಮಾಲ್ಗುಡಿಯಿಂದ ಬೇರೆಯಾಗುವುದು. ಸೀತಾಪುರಕ್ಕೆ ಬಿಳಿಯೆಷ್ಟಿದೆಯೊ ಕಪ್ಪೂ ಅಷ್ಟೇ ಇದೆ. ರಾಜಕೀಯ ಒತ್ತಡಗಳು, ಆರ್ಥಿಕ ಪ್ರಲೋಭನೆ, ನಗರ ವಲಸೆ ಮುಂತಾದ ಬಾಹ್ಯ ಆಕ್ರಮಣಗಳನ್ನು ಸಹಿಸಿಕೊಂಡೇ ಅದು ತನ್ನೊಳಗಿನ ವಿಕೃತಿಯನ್ನೂ ಸಹಿಸಬೇಕಿದೆ. ಈ ದೃಷ್ಟಿಯಿಂದ ನೋಡಿದಾಗ ‘ಒಂದು ಸಣ್ಣ ಊರಿನ ಸರಳ ಕತೆ’ ಆಧುನಿಕ ಜಗತ್ತಿನ ಅತಿ ಸಂಕೀರ್ಣ ಆಖ್ಯಾಯಿಕೆಯಾಗಿ ಮಾರ್ಪಾಡಾಗುತ್ತದೆ.
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MORE