ಲೇಖಕ ಜೋಗಿ ಅವರ ‘ಅಶ್ವತ್ಥಾಮನ್’ ಕೃತಿಯಲ್ಲಿ ಅನನ್ಯ ವ್ಯಕ್ತಿತ್ವದ ಕಥಾ ನಾಯಕನು ಪ್ರಸ್ತುತಕ್ಕೆ ಹೊಂದಲಾರದೆ ಮತ್ತೇನನ್ನೋ ಹುಡುಕ ಹೊರಟ ಅವನ ಮನಸ್ಸಿನಲ್ಲಾಗುವ ತಾಕಲಾಟವನ್ನು ಸರಳವಾಗಿ ನಿರೂಪಿಸಲಾಗಿದೆ.
ಆತ್ಮಚರಿತ್ರಾತ್ಮಕ ಧಾಟಿಯಲ್ಲಿ ಕಾದಂಬರಿ ಇದ್ದರೂ ಅದು ಅಶ್ವತ್ಥಾಮನ ಚಲನಶೀಲವಾದ, ಸೃಜನಾತ್ಮಕತೆ ಓದುಗನಿಗೆ ಆಪ್ತಗೊಳಿಸುತ್ತದೆ. ವ್ಯಕ್ತಿತ್ವದ ಅಭಿವ್ಯಕ್ತಿಯೇ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳಬೇಕು. ಆದರೆ, ವ್ಯಕ್ತಿಯೇ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಮನುಷ್ಯನ ಒಳ ಜಗತ್ತನ್ನು ಅನಾವರಣಗೊಳಿಸುವ ಭಾವ ಭಿತ್ತಿ ಇದಾಗಿದೆ.
ಒಂದು ವ್ಯಕ್ತಿತ್ವಕ್ಕಿರುವ ಎರಡು ಮುಖಗಳನ್ನು ಕುರಿತು ಅನೇಕ ಕಾದಂಬರಿಗಳಿವೆ. ನನಗೆ ತಕ್ಷಣ ನೆನಪಿಗೆ ಬರುವ ಮೂರು ಮುಖ್ಯ ಕೃತಿಗಳೆಂದರೆ ಆಸ್ಕರ್ ವೈಲ್ಡ್ನ ‘ದಿ ಪಿಕ್ಷರ್ ಆಫ್ ಡೊರಿಯನ್ ಗ್ರೇ’, ಥಾಮಸ್ ಮಾನ್‌ನ ‘ಡಾಕ್ಟರ್ ಫೌಸ್ಟಸ್’ ಮತ್ತು ಹೇನ್‌ರಿಶ್ ಬ್ಯೋಲ್‌ನ ‘ದಿ ಕ್ಲೌನ್’. ಓದುಗರಿಗೆ ನೆಮ್ಮದಿಯುಂಟುಮಾಡುವುದಕ್ಕೆ ಬದಲಾಗಿ ಅವರ ನೆಮ್ಮದಿಯನ್ನು ಕೆಡಿಸುವುದರಲ್ಲೇ ಈ ಮೂರೂ ಕಾದಂಬರಿಗಳ ಯಶಸ್ಸಿದೆ. ಜೋಗಿಯವರ ‘ಅಶ್ವತ್ಥಾಮನ್’ ಕೂಡ ಸ್ವಲ್ಪಮಟ್ಟಿಗೆ ಇದೇ ಮಾದರಿಯದು. ಪ್ರತಿಯೊಂದು ಅಧ್ಯಾಯದಲ್ಲಿ, ಪ್ರತಿಯೊಂದು ವಿವರದಲ್ಲಿ ಮಾನವ ಸಂವೇದನೆಯನ್ನು ಪ್ರಚೋದಿಸುವ, ಕಾರುಣ್ಯದಾಚೆಯ ಸೌಂದರ್ಯವನ್ನು ಮಿಂಚಿಸುವ ಈ ಕೃತಿಯನ್ನು ಓದಿ ನಾವು ಇಲ್ಲಿನ ಕಥಾನಾಯಕನಿಗಾಗಿ ಅಲ್ಲ, ಅವನಿರುವ ಸಮಾಜವ್ಯವಸ್ಥೆಗಾಗಿ ಮರುಗುವಂತಾಗುತ್ತದೆ.
- ಎಸ್. ದಿವಾಕರ್, ವಿಮರ್ಶಕರು ಹಾಗೂ ಕತೆಗಾರರು
ಪ್ರಿಯ ಜೋಗಿ,
ನಿಮ್ಮ 'ಅಶ್ವತ್ಥಾಮನ್' ಓದಿದೆ. ತುಂಬಾ ಇಷ್ಟವಾಯಿತು. ಇಷ್ಟವಾದದ್ದಕ್ಕೆ ಕಾರಣ ನೀವು ಹಿಡಿದಿರುವ ಕಷ್ಟದ ದಾರಿ. ಇದು ಹೊರಬಾಳಿನ ಕಥೆಯಲ್ಲ, ಸಂಪೂರ್ಣ ಒಳಬಾಳಿನ ಕಥೆ. Mindscape ಅಂತಾರಲ್ಲ ಅದು. Stream of consciousness ನೆನಪಿಸುವಂಥದು. ಈ ನಿಟ್ಟಿನಲ್ಲಿ ಇದು ನಿಮ್ಮ L ಗಿಂತಲೂ ತುಂಬಾ ಮುಂದೆ ಹೋಗಿದೆ. Eccentric and perverted people ಬಗ್ಗೆ ನಿಮಗೆ ವಿಶೇಷ ಆಸಕ್ತಿ ಇದ್ದಂತಿದೆ. ಲಂಕೇಶ್ ಅವರಿಗೂ ಇತ್ತು. ಸ್ವತಃ ಅವರೂ ಸಹ (ನಾನು ಕಂಡ ಏಕೈಕ )ವಿಕ್ಷಿಪ್ತ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. 'ಅಶ್ವತ್ಥಾಮನ್' ಓದುವಾಗ ನನಗೆ ಮತ್ತೆ ಮತ್ತೆ ಅವರ ನೆನಪಾಗುತ್ತಿತ್ತು. ಅವರೂ ಸಹ ಅಷ್ಟೇ unpredictable and unmanageable person ಆಗಿದ್ದರು. 'ಅಶ್ವತ್ಥಾಮನ್' ನೀವೇ ಹೇಳಿಕೊಂಡಂತೆ ಯಾವುದೇ ಸಿದ್ಧ ಚೌಕಟ್ಟಿಗೆ ಸಿಕ್ಕದಂತಹ ಬರವಣಿಗೆ. ಪ್ರಾಮಾಣಿಕ ವಸ್ತುನಿಷ್ಠ ನಿಷ್ಠುರ ಬರವಣಿಗೆ. ನಿಮ್ಮ ಪ್ರಯೋಗಶೀಲತೆ, ಹೊಸತನದ ಬಗೆಗಿನ ತಹತಹ ಹಾಗೂ ಸೆಲೆ ಬತ್ತದ ಜೀವಂತಿಕೆ ನಿಮ್ಮ ಬರಹಗಳನ್ನು ನನಗೆ ಆಪ್ತವಾಗಿಸಿವೆ. 'ಅಶ್ವತ್ಥಾಮನ್' ಈ ಸಾಲಿಗೆ ಹೊಸ ಸೇರ್ಪಡೆ. ಅಭಿನಂದನೆ ಹಾಗೂ ಧನ್ಯವಾದ.
- ಬಿ.ಆರ್.ಲಕ್ಷ್ಮಣ ರಾವ್, ಕವಿ
Albert Camusವಿನ The fall ಎನ್ನುವ ನೀಳ್ಗತೆ ಹಲವು ವರ್ಷಗಳ ಕಾಲ ನನ್ನನ್ನು ತೀವ್ರವಾಗಿ ಆವರಿಸಿಕೊಂಡಿತ್ತು. ಅದೊಂದು ರೀತಿಯ ಆತ್ಮಕಥನವಲ್ಲದ ಆತ್ಮಕಥೆಯ ಪ್ರಾಕಾರದ್ದು.It was very intense ಎನಿಸುತ್ತಿತ್ತು ಆ ಕಾಲದಲ್ಲಿ. ಎಪ್ಪತ್ತರ ದಶಕದಲ್ಲಿ ನಾನು ಅದನ್ನು ಓದಿದ್ದು. ಆ ಪ್ರಾಕಾರದ ಆತ್ಮಶೋಧದ ಕಾದಂಬರಿಯೊಂದು ನನ್ನನ್ನು ಮತ್ತೆ ತೀವ್ರವಾಗಿ ಆವರಿಸಿಕೊಂಡಿದ್ದು ಅಶ್ವತ್ಥಾಮನ್ ಓದಿದ ಈ ಎರಡು ದಿನಗಳಲ್ಲಿ. ಇದರ ಕಥೆಯನ್ನು ಹೇಳುವುದು ಸಾಧ್ಯವಿಲ್ಲ. ಅಷ್ಟು ತೀವ್ರ ಮತ್ತು ಸಂಕೀರ್ಣ ಇದು. ನನ್ನ ಕ್ಷಣ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಅದನ್ನು ಕೆಳಗಿಡದಂತೆ, ಬೆಳಗಿನಿಂದ ಸಂಜೆಯೊಳಗಾಗಿ ಓದಿ ಮುಗಿಸುವಷ್ಟು ರೋಚಕ ಅಧ್ಯಾತ್ಮಿಕ ಕಥೆ ಇದು. ಇದನ್ನು ಓದಿಲ್ಲದಿದ್ದರೆ ಖಂಡಿತಾ ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು ನನ್ನ ಭಾವನೆ.
- ಟಿ.ಎನ್.ಸೀತಾರಾಮ್, ನಿರ್ದೇಶಕರು
ಅಶ್ವತ್ಥಾಮನ್ ಒಂದು ಸಲ ಅವನ ಕತೆ ಶುರುಮಾಡಿದನೆಂದರೆ ಅವನು ನಿಲ್ಲಿಸುವವರೆಗೂ ನಾವು ಎದ್ದುಹೋಗದಂತೆ ಹಿಡಿದಿಡುತ್ತಾನೆ. ಅದಕ್ಕೆ ಕಾರಣ, ಅದು ಅವನ ಕತೆಯಲ್ಲ. ನಮ್ಮದೇ ಕತೆ. ಅವನೊಬ್ಬ ನಟ, ಕಹಿಬಾಲ್ಯದವನು. ಒಂದು ಸರಿಯಾದ ದಾಂಪತ್ಯಕ್ಕೆ ಹುಟ್ಟದವನು.ತಾನು ಅತ್ಯಂತ ನೇರ ಮತ್ತು ಸ್ಪಷ್ಟ ಅನ್ನುತ್ತಲೇ ದಿನಕ್ಕೊಂದು ಪಾತ್ರವಾಗುತ್ತಾ ತನ್ನನ್ನು ತಾನು ನಿಜಕ್ಕೂ ಯಾರೆಂದು ಹುಡುಕುವವನು. ಈ ಅವಸ್ಥೆಗಳೆಲ್ಲ ನಟನಾಗದೆಯೂ ನಮ್ಮದಾಗವೇ? ನಾವೆಲ್ಲರೂ ವಿಧಿಯ ಕತೆಯೊಳಗೆ ಒಂಥರಾ ಪೋಷಕ ನಟರೇ ತಾನೇ? ತಂದೆಯ ಕಣ್ಣಲ್ಲಿ ಭಯ ಹುಟ್ಟಿಸುವ ಹಠಕ್ಕೆ ಬೀಳುವ ಅಶ್ವತ್ಥಾಮನ್ ಕೂಡ ಸರಿ ಅನಿಸುತ್ತಾನೆ. ಆ ದೃಶ್ಯ ಮತ್ತೆ ಮೂಡುವುದಾದರೆ ತಾನು ಇನ್ನಷ್ಟು ಸಹನೆಯಿಂದ ವರ್ತಿಸಬಹುದಿತ್ತಾ ಅಂತ ಯೋಚಿಸುವ ಅಶ್ವತ್ಥಾಮನ್ ಕೂಡ ಸರಿ ಅನಿಸುತ್ತಾನೆ. ಭಾರತದ ಅಶ್ವತ್ಥಾಮನ ಕತೆಯ ಹಾಗೆ ಹಾಲಲ್ಲದ್ದನ್ನು ಹಾಲೆಂದು ನಂಬಿದ ಕಹಿ ಕೊನೆವರೆಗೂ ಕಾಡುತ್ತದೆ. ಬೇಕೋ ಬೇಡವೋ ಒಂದು ವಿಕ್ಷಿಪ್ತತೆಯನ್ನು ಒಳಗೆ ಸಾಕುತ್ತಿರುತ್ತದೆ. ಯೌವನ ಹಳೆಯ ನೋವುಗಳನ್ನು ಮೆಟ್ಟುವ ಹಠದಲ್ಲಿ ಸಾಗಿಸುತ್ತಾ ತುಸು ಹೆಚ್ಚೇ ಅಹಂಕಾರ ಹುಟ್ಟಿಸುತ್ತದೆ. ವಯಸು ಮಾಗುತ್ತ ಇದರ ತೀವ್ರತೆ ಎಲ್ಲ ತಂತಾನೇ ನಶೆ ಇಳಿದಂತೆ ಇಳಿಯುತ್ತಾ ಹೋಗುತ್ತದೆ. ಅಶ್ವತ್ಥಾಮನ್ ಕತೆಯ ಈ ಹಂತಗಳು ನಮ್ಮವೂ ಹೌದಲ್ಲವಾ?
- ಕುಸುಮ ಬಾಲೆ, ಕತೆಗಾರ್ತಿ
ಅಶ್ವತ್ಥಾಮನ್ ಕಾದಂಬರಿ ಓದಿದ ಬಳಿಕ ರುದ್ರನಾಟಕವೊಂದನ್ನು ಓದಿ ಮುಗಿಸಿದ ನಂತರದ ಭಾವನೆ ಮೂಡಿ ಉಳಿಯಿತು. ಮಹಾಭಾರತದ ಅಶ್ವತ್ಥಾಮ ರುದ್ರನಾಟಕಕ್ಕೆ ಸೂಕ್ತ ವಸ್ತು. ನಿರಂತರವಾಗಿ, ತಡೆಯಿಲ್ಲದೆ ಪತನದತ್ತ ಜಾರುತ್ತಲೇ ಹೋಗುವ ಈ ಅಶ್ವತ್ಥಾಮ ಯಾಕೆ ಹೀಗೆ ಮಾಡುತ್ತಿದ್ದಾನೆ ಎಂಬ ವಿಷಾದವನ್ನು ನಮ್ಮಲ್ಲಿ ಉಳಿಸಿ ನಿರ್ಗಮಿಸುತ್ತಾನಲ್ಲವೇ. ಹಾಗಿದೆ ಇದು.
- ಹರೀಶ್ ಕೇರ, ಪತ್ರಕರ್ತರು
©2024 Book Brahma Private Limited.