‘ ರಥಬೀದಿ’ ಕೃತಿಯು ಶ್ರೀಧರ ಬಳಗಾರ ಅವರ ಕಾದಂಬರಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಟಿ. ಪಿ ಅಶೋಕ ಅವರು, `ವಿವಿಧ ಕಾರಣಗಳಿಗಾಗಿ ಜೀವನ ಕ್ರಮಗಳು, ಮೌಲ್ಯಗಳು, ಆದ್ಯತೆಗಳು, ಆಶೋತ್ತರಗಳು, ಅನಿವಾರ್ಯವೆಂಬಂತೆ ಬದಲಾಗುತ್ತಿರುವ ಇಂದಿನ ಜೀವನ ಸಂದರ್ಭವನ್ನು ಅದರಲ್ಲಿಯ ಸೂಕ್ಷ್ಮತೆಯಲ್ಲಿ ಮೂರ್ತ ವಿವರಗಳು, ಪಾತ್ರಗಳು ,ಮತ್ತು ಸನ್ನಿವೇಶಗಳಲ್ಲಿ ಕಥನರೂಪದಲ್ಲಿ ನಿವೇದಿಸಿಕೊಳ್ಳುವುದು ಬಳಗಾರರ ಮಾರ್ಗವಾಗಿದೆ. ಹಾಗಾಗಿ, ಕೆಲವೊಮ್ಮೆ ಅವರ ಕಥಾರೂಪಿ ಬರಹಗಳು ಪ್ರಬಂಧಗಳಾಗಿಯೂ, ಪ್ರಬಂಧರೂಪಿ ಬರಹಗಳು ಕತೆಗಳಾಗಿಯೂ ಕಾಣಿಸಿಕೊಳ್ಳುವುದುಂಟು. ಅವರು ಕತೆ-ಕಾದಂಬರಿ-ಪ್ರಬಂಧ-ವಿಮರ್ಶೆ ಹೀಗೆ ಮೇಲುನೋಟಕ್ಕೆ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವರಾದರೂ ಪ್ರಕಾರಗಳ ಬಗ್ಗೆ ಅವರಿಗೆ ಅಂಥ ನಿಷ್ಠೆಯಾಗಲೀ, ಮಡಿವಂತಿಕೆಯಾಗಲೀ ಇದ್ದ ಹಾಗೆ ಕಾಣುವುದಿಲ್ಲ. ತಮ್ಮ ಸುತ್ತಲ ಬದುಕಿನ ಸೂಕ್ಷ್ಮ ನಿರೀಕ್ಷಕರಾದ ಬಳಗಾರರಿಗೆ ಒಣ ‘ಥಿಯರಿ’ಗಳಲ್ಲಿ ಅಷ್ಟೇನೂ ಉತ್ಸುಕತೆ ಇದ್ದ ಹಾಗೆ ಕಾಣುವುದಿಲ್ಲ. ಎಲ್ಲವನ್ನೂ ಮನುಷ್ಯಾನುಭವದ ಮೂರ್ತ ವಿವರಗಳಲ್ಲಿಯೇ ಮಂಡಿಸುವುದು ಅವರಿಗೆ ಪ್ರಿಯ. ಹಾಗೆಂದು ಅವರಿಗೆ ವಿಚಾರಗಳಲ್ಲಿ ಆಸಕ್ತಿ ಇಲ್ಲವೆಂದೂ, ಅವರ ಬರಹಗಳಿಗೆ 'ವೈಚಾರಿಕ ಆಯಾಮವಿಲ್ಲವೆಂದೂ ತಿಳಿಯುವಂತಿಲ್ಲ. ತಮ್ಮ ವಿಚಾರಗಳನ್ನೂ ಅವರು ಕತೆ ಮಾಡಿಯೇ ಕಥಾರೂಪದಲ್ಲೇ ಹೇಳಿಕೊಳ್ಳುತ್ತಾರೆ. 'ಕಥನ'ದಲ್ಲೇ ಎಲ್ಲ ವಾಗ್ವಾದ, ವ್ಯಾಖ್ಯಾನ ವಿಶ್ಲೇಷಣೆ, ಜಾಸ್ತಿ. ಕತೆ ಒಳಗೊಳ್ಳುವಂತೆ ಬರೆಯುವ ಮನಕ್ಕೆ 'ಬುದ್ಧಿವಾದಿ' ಎಂದು ಸರಳವಾಗಿ ಮತ್ತು ಕೃತಕವಾಗಿ ವಿಂಗಡಿಸಿ ನೋಡುವ ಕೆಲಸವನ್ನು ಈಚೆಗೆ ಕೆಲವು ಬುದ್ಧಿವಂತರು ಮಾಡುತ್ತಿದ್ದಾರೆ. ಇದೇ ನುಡಿಗಟ್ಟಿನಲ್ಲಿ ಹೇಳಬೇಕೆಂದರೆ, ಶ್ರೀಧರ ಬಳಗಾರರ ಬರಹಗಳಲ್ಲಿ 'ಬುದ್ಧಿ' ಮತ್ತು 'ಭಾವ’ಗಳ ಹದವಾದ ಮಿಶ್ರಣವಿದೆ’ ಎಂದು ಪ್ರಶಂಸಿಸಿದ್ದಾರೆ..
ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...
READ MORE