‘ಸಂಜೀವಿನಿ’ ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರ ಕೃತಿ. ನಾಡಿನ ವಿವಿಧ ಪತ್ರಿಕೆಗಳಲ್ಲಿ ತರಕಾರಿಗಳು, ಹಣ್ಣುಗಳು, ಔಷಧೀಯ ಸಸ್ಯಗಳ ಕುರಿತು ಲೇಖನಗಳನ್ನು ಬರೆದಿದ್ದು, ಅವುಗಳ ಸಂಗ್ರಹ ಕೃತಿ ಇದು. ಕೃತಿಯಲ್ಲಿ ಒಟ್ಟು 67 ಲೇಖನಗಳಿವೆ. ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ಕೃತಿಯ ಕುರಿತು ‘ಈ ಕೃತಿಯು ಆರೋಗ್ಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಸರಳ, ಸುಂದರ, ಉದ್ಬೋಧಕ ಕೃತಿಯಾಗಿದೆ. ಉತ್ತಮ ಅರೋಗ್ಯ ರಕ್ಷಣೆಗೆ ಅನುಸರಿಸಬೇಕಾದ ನಿಯಮಗಳ ಜತೆ ಪ್ರತಿ ಹಣ್ಣು ತರಕಾರಿಗಳ ವೈಜ್ಞಾನಿಕ ಹೆಸರುಗಳು, ಅವುಗಳಲ್ಲಿರುವ ಪೌಷ್ಟಿಕಾಂಶಗಳು, ಅವುಗಳಿಂದ ಅರೋಗ್ಯಕ್ಕೆ ಆಗುವ ಪ್ರಯೋಜನಗಳು, ಬಳಸುವ ರೀತಿ ಮೊದಲಾದ ವಿಷಯಗಳ ಮೇಲೆ ನಿಖರ ಬೆಳಕು ಚೆಲ್ಲಿ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಈ ಕೃತಿಯಲ್ಲಿ ಆಯುರ್ವೇದ ಔಷಧಿಗಳ ಮಾಹಿತಿಗಳಿವೆ. ಅಡಿಗೆಮನೆಯ ಆಹಾರ ಸಾಮಗ್ರಿಗಳಲ್ಲಿರುವ ಆರೋಗ್ಯದ ಖಜಾನೆಯನ್ನೇ ತೆರೆದಿಟ್ಟಿದ್ದಾರೆ. ವರ್ಷಪೂರ್ತಿ ದೊರೆಯುವ ಬಾಳೆ ಹಣ್ಣು, ನಿರ್ದಿಷ್ಟ ಕಾಲದಲ್ಲಿ ದೊರೆಯುವ ಮಾವು, ನೇರಳೆ, ಪಪಾಯಿ, ಕಲ್ಲಂಗಡಿ, ಬೆಂಡೆಕಾಯಿ, ಗೋರೀಕಾಯಿ, ಬೀಟ್ ರೂಟ್, ಗಜ್ಜರಿ, ಧಾನ್ಯಗಳು, ಮನೆಯಲ್ಲಿ ಲಭ್ಯವಿರುವ ಹಾಲು, ಮೊಸರು, ಕಾಯಿ ಹಾಲು, ಎಳೆನೀರು ಮೊದಲಾದ ಹಲವಾರು ಸಸ್ಯಾಹಾರಗಳಿಂದ ಆಗುವ ಪ್ರಯೋಜನಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಓದುಗರ ಮುಂದಿಟ್ಟಿದ್ದಾರೆ. ನಮ್ಮ ದೈನಂದಿನ ಜೀವನದಲ್ಲಿ ಬೇಕಾದ ಅಗತ್ಯಗಳನ್ನೇ ಒಳಗೊಂಡಿವೆ. ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಕೃತಿಯಾಗಿದೆ. ನಿತ್ಯ ಮನೆಯ ಅಡಿಗೆ ಕೋಣೆಯ ನಾಗೊಂದಿಗೆ ಮೇಲೆ ಇಟ್ಟುಕೊಂಡು ಓದುವ ಕೃತಿ. ಹೆಚ್ಚಿನ ಖರ್ಚಿಲ್ಲದೇ ನಿತ್ಯ ಸಿಗುವ ಔಷಧೀಯ ಸಸ್ಯಗಳು, ನಿತ್ಯ ಬಳಸುವ ತರಕಾರಿ, ಹಣ್ಣು ಹಂಪಲ ಧಾನ್ಯಗಳಿಂದಲೇ ನಾವು ರೋಗಗಳನ್ನು ದೂರವಿಡಬಹುದೆಂಬ ನಿಚ್ಚಳ ಸಂದೇಶ ಈ ಗ್ರಂಥದಲ್ಲಿದೆ. ಅರೋಗ್ಯದ ಕುರಿತ ಸಮಗ್ರ ಮಾಹಿತಿಯ ಕೃತಿಯೂ ಹೌದು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.